ADVERTISEMENT

ಕಚೇರಿಗೆ ಪೊಲೀಸರ ಭೇಟಿ; ಭಾರತದ ಸಿಬ್ಬಂದಿ ಸುರಕ್ಷತೆಯ ಬಗ್ಗೆ ಟ್ವಿಟರ್‌ ಕಳವಳ

ಏಜೆನ್ಸೀಸ್
Published 27 ಮೇ 2021, 7:43 IST
Last Updated 27 ಮೇ 2021, 7:43 IST
ಟ್ವಿಟರ್‌–ಪ್ರಾತಿನಿಧಿಕ ಚಿತ್ರ
ಟ್ವಿಟರ್‌–ಪ್ರಾತಿನಿಧಿಕ ಚಿತ್ರ   

ನವದೆಹಲಿ: ಭಾರತದಲ್ಲಿನ ಸಿಬ್ಬಂದಿ ಸುರಕ್ಷತೆಯ ಕುರಿತು ಟ್ವಿಟರ್‌ ಕಳವಳ ವ್ಯಕ್ತಪಡಿಸಿದೆ. ಇತ್ತೀಚೆಗೆ ದೆಹಲಿ ಪೊಲೀಸರ ತಂಡ ಟ್ವಿಟರ್‌ ಕಚೇರಿಗೆ ಭೇಟಿ ನೀಡಿದ್ದನ್ನು 'ಪೊಲೀಸರು ಬೆದರಿಕೆಯೊಡ್ಡುವ ತಂತ್ರ ಬಳಸಿದ್ದಾರೆ' ಎಂದು ಟ್ವಿಟರ್‌ ಹೇಳಿದೆ.

ಭಾರತದ ಜನರಿಗೆ ಮೈಕ್ರೊಬ್ಲಾಗಿಂಗ್‌ ವೇದಿಕೆಯ ಸೇವೆ ಮುಂದುವರಿಸಲು ಬದ್ಧರಿರುವುದಾಗಿ ಹೇಳಿರುವ ಟ್ವಿಟರ್‌, ಭಾರತ ಸರ್ಕಾರದೊಂದಿಗೆ ರಚನಾತ್ಮಕ ಮಾತುಕತೆ ಮುಂದುವರಿಸುವುದಾಗಿ ತಿಳಿಸಿದೆ. 'ಸಾರ್ವಜನಿಕ ಹಿತಾಸಕ್ತಿಯನ್ನು ರಕ್ಷಿಸುವುದು ಸಂಸ್ಥೆಗಳು, ಸಾಮಾಜ ಹಾಗೂ ಚುನಾಯಿತ ಅಧಿಕಾರಸ್ಥರ ಸಾಮೂಹಿಕ ಕರ್ತವ್ಯವಾಗಿದೆ' ಎಂದು ಅಭಿಪ್ರಾಯ ಪಟ್ಟಿದೆ.

ಕೇಂದ್ರ ಸರ್ಕಾರವು ಸೂಚಿಸಿದ ಟ್ವಿಟರ್ ಖಾತೆಗಳನ್ನು ಮತ್ತು ಕಂಟೆಂಟ್‌ಗಳನ್ನು ನಿರ್ಬಂಧಿಸುವ ವಿಚಾರವಾಗಿ ಈ ವರ್ಷ ಜನವರಿ–ಫೆಬ್ರುವರಿಯಿಂದ ಸರ್ಕಾರ ಮತ್ತು ಟ್ವಿಟರ್‌ ನಡುವೆ ತಿಕ್ಕಾಟ ಶುರುವಾಗಿದೆ. ಕಂಟೆಂಟ್‌ ನಿರ್ಬಂಧಿಸಲು ಟ್ವಿಟರ್ ನಿಧಾನಗತಿಯ ಧೋರಣೆ ಅನುಸರಿಸುತ್ತಿದೆ ಎಂದು ಕೇಂದ್ರ ಸರ್ಕಾರ ಆರೋಪಿಸಿತ್ತು. ಆದರೆ, ಟ್ವಿಟರ್‌ 'ವಾಕ್‌ ಸ್ವಾತಂತ್ರ್ಯದ' ಕಾರಣ ನೀಡಿ ಸಮರ್ಥಿಸಿಕೊಂಡಿತ್ತು.

ADVERTISEMENT

ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ಡಿಜಿಟಲ್ ನಿಯಮಾವಳಿಗಳ ಸಂಬಂಧ ಅಧಿಕೃತವಾಗಿ ಟ್ವಿಟರ್‌ ನೀಡಿರುವ ಮೊದಲ ಪ್ರತಿಕ್ರಿಯೆ ಇದಾಗಿದೆ. ಹೊಸ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ನೀತಿ ಸಂಹಿತೆ) ನಿಯಮಗಳು, 2021 ಅನ್ನು ಫೆಬ್ರುವರಿ 25ರಂದು ಸರ್ಕಾರ ಘೋಷಿಸಿತ್ತು. ಮೇ 25ರಿಂದ ಇದು ಕಾರ್ಯರೂಪಕ್ಕೆ ಬರಲಿದೆ ಎಂದು ತಿಳಿಸಿತ್ತು.

ಬಿಜೆಪಿಯ ವಕ್ತಾರರು 'ಟೂಲ್‌ ಕಿಟ್‌' ಎಂದು ಬಣ್ಣಿಸಿದ ದಾಖಲೆಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡು, ವಿರೋಧ ಪಕ್ಷ ಕಾಂಗ್ರೆಸ್‌ನಿಂದ ಈ ದಾಖಲೆಗಳನ್ನು ಸೃಷ್ಟಿಸಲಾಗಿದೆ ಎಂದು ಆರೋಪಿಸಿದ್ದರು. ದಾಖಲೆಗಳು ನಕಲಿ ಎಂದು ಕಾಂಗ್ರೆಸ್‌ ಟ್ವಿಟರ್‌ಗೆ ದೂರು ನೀಡಿತ್ತು. ಅನಂತರ ಕೆಲವು ಪೋಸ್ಟ್‌ಗಳನ್ನು ಟ್ವಿಟರ್‌, ತಿರುಚಲಾದ ದಾಖಲೆಗಳು ಎಂದು ಗುರುತು ಮಾಡಿತ್ತು. ಇದರಿಂದಾಗಿ ಆಡಳಿತಾರೂಢ ಪಕ್ಷದ ಸದಸ್ಯರು ಟ್ವಿಟರ್‌ ವಿರುದ್ಧ ಕಿಡಿಕಾರಿದ್ದರು.

ಸರ್ಕಾರದ ಹೊಸ ಕಾಯ್ದೆಗಳ ಪ್ರಕಾರ ಗೂಢಲಿಪೀಕರಿಸಿದ ಸಂದೇಶಗಳ (ಎನ್‌ಕ್ರಿಪ್ಟೆಡ್) ಮಾಹಿತಿ ಹಂಚಿಕೊಳ್ಳುವುರಿಂದ ಬಳಕೆದಾರರ ಗೌಪ್ಯತೆಯ ಉಲ್ಲಂಘನೆಯಾಗುತ್ತದೆ ಎಂದಿರುವ ವಾಟ್ಸ್‌ಆ್ಯಪ್‌, ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.