ADVERTISEMENT

ಹೊಸ ಐಟಿ ನಿಯಮಗಳನ್ನು ಪಾಲಿಸುವಲ್ಲಿ ಟ್ವಿಟರ್ ವಿಫಲವಾಗಿದೆ: ಕೇಂದ್ರ

ಪಿಟಿಐ
Published 5 ಜುಲೈ 2021, 14:30 IST
Last Updated 5 ಜುಲೈ 2021, 14:30 IST
ರಾಯಿಟರ್ಸ್ ಚಿತ್ರ
ರಾಯಿಟರ್ಸ್ ಚಿತ್ರ   

ನವದೆಹಲಿ: ಸಾಮಾಜಿಕ ಮಾಧ್ಯಮ ದೈತ್ಯ ಟ್ವಿಟರ್ ಕಂಪನಿಯು ಭಾರತದ ಹೊಸ ಐಟಿ ನಿಯಮಗಳನ್ನು ಪಾಲಿಸುವಲ್ಲಿ ವಿಫಲವಾಗಿದೆ ಎಂದು ಕೇಂದ್ರ ಸರ್ಕಾರವು ಸೋಮವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ. ಇದು ಈ ನೆಲದ ಕಾನೂನು ಮತ್ತು ಕಡ್ಡಾಯವಾಗಿ ಅದನ್ನು ಪಾಲಿಸಲೇಬೇಕಿದೆ ಎಂದು ಸರ್ಕಾರ ಹೇಳಿದೆ.

ಐಟಿ ನಿಯಮಗಳ ನಿಬಂಧನೆಗಳ ಉಲ್ಲಂಘನೆಯಿಂದಾಗಿ ಟ್ವಿಟರ್‌ ಕಂಪನಿಯು ಐಟಿ ಕಾಯ್ದೆಯಡಿ ನೀಡಲಾಗುವ ವಿನಾಯಿತಿ ಕಳೆದುಕೊಳ್ಳಲಿದೆ ಎಂದು ಕೇಂದ್ರವು ಹೈಕೋರ್ಟ್‌ನಲ್ಲಿ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಿಳಿಸಿದೆ.

ಟ್ವಿಟರ್ ಸಂಸ್ಥೆಯು ಐಟಿ ನಿಯಮಗಳನ್ನು ಪಾಲಿಸದಿರುವ ಬಗ್ಗೆ ವಕೀಲ ಅಮಿತ್ ಆಚಾರ್ಯ ಎಂಬವರು ಸಲ್ಲಿಸಿದ್ದ ಮನವಿಗೆ ಪ್ರತಿಕ್ರಿಯೆಯಾಗಿ ಕೇಂದ್ರ ಸರ್ಕಾರವು ಅಫಿಡವಿಟ್ ಸಲ್ಲಿಸಿದೆ. ಎರಡು ‘ಆಕ್ರಮಣಕಾರಿ ಮತ್ತು ಆಕ್ಷೇಪಾರ್ಹ ಟ್ವೀಟ್’ಗಳ ವಿರುದ್ಧ ಟ್ವಿಟರ್‌ ಕಂಪನಿಯ ಕುಂದುಕೊರತೆ ಅಧಿಕಾರಿಗೆ ದೂರು ನೀಡಲು ಬಯಸಿದ್ದೇನೆ. ಆದರೆ, ಟ್ವಿಟರ್ ವೆಬ್‌ಸೈಟ್‌ನಲ್ಲಿ ಕುಂದುಕೊರತೆ ಅಧಿಕಾರಿಯ ಸಂಪರ್ಕ ವಿವರಗಳು ಸಿಗುತ್ತಿಲ್ಲ ಎಂದು ಅವರು ವಾದಿಸಿದ್ದರು.

ADVERTISEMENT

ಟ್ವಿಟರ್‌ನ ಮಧ್ಯಂತರ ಕುಂದುಕೊರತೆ ಅಧಿಕಾರಿ ಮತ್ತು ಭಾರತದ ನೋಡಲ್ ಸಂಪರ್ಕ ವ್ಯಕ್ತಿ ಜೂನ್‌ನಲ್ಲಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿರುವುದಾಗಿ ಕಳೆದ ವಾರ ಟ್ವಿಟರ್ ಕಂಪನಿ, ಹೈಕೋರ್ಟ್‌ಗೆ ತಿಳಿಸಿತ್ತು. ಅವರ ಸ್ಥಾನಕ್ಕೆ ಬದಲಿ ನೇಮಕ ಮಾಡುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.