ADVERTISEMENT

ಬಳಕೆದಾರರ ಕಂಟೆಂಟ್ ಮೇಲಿನ ಕಾನೂನು ರಕ್ಷಣೆ ಕಳೆದುಕೊಂಡ ಟ್ವಿಟರ್: ಕೇಂದ್ರ

ಪಿಟಿಐ
Published 6 ಜುಲೈ 2021, 9:38 IST
Last Updated 6 ಜುಲೈ 2021, 9:38 IST
ಸಾಂದರ್ಭಿಕ ಚಿತ್ರ – ಕೃಪೆ: ಎಎಫ್‌ಪಿ
ಸಾಂದರ್ಭಿಕ ಚಿತ್ರ – ಕೃಪೆ: ಎಎಫ್‌ಪಿ   

ನವದೆಹಲಿ: ಹೊಸ ಮಾಹಿತಿ ತಂತ್ರಜ್ಞಾನ (ಐಟಿ) ನಿಯಮಗಳನ್ನು ಪಾಲಿಸಲು ವಿಫಲವಾಗಿರುವ ಟ್ವಿಟರ್‌, ಬಳಕೆದಾರರ ಕಂಟೆಂಟ್ ಮೇಲಿನ ಕಾನೂನು ರಕ್ಷಣೆಯನ್ನು ಕಳೆದುಕೊಂಡಿದೆ ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.

ಇದರೊಂದಿಗೆ, ಟ್ವಿಟರ್ ವಿರುದ್ಧದ ಕ್ರಮಕ್ಕೆ ಸಂಬಂಧಿಸಿ ಕೇಂದ್ರವು ಮೊದಲ ಬಾರಿ ಅಧಿಕೃತ ಹೇಳಿಕೆ ನೀಡಿದಂತಾಗಿದೆ. ಕಾನೂನು ರಕ್ಷಣೆ ಕಳೆದುಕೊಂಡಿರುವುದರಿಂದ ಭಾರತದಲ್ಲಿ ಸುಗಮವಾಗಿ ಕಾರ್ಯನಿರ್ವಹಿಸುವುದು ಟ್ವಿಟರ್‌ಗೆ ಕಷ್ಟವಾಗಲಿದೆ.

ಹೊಸ ಐಟಿ ನಿಯಮಗಳಿಗೆ ಅಸಹಕಾರ ತೋರಿರುವುದರಿಂದ ಟ್ವಿಟರ್ ಕಾನೂನು ರಕ್ಷಣೆ ಕಳೆದುಕೊಂಡಿದೆ ಎಂದು ಜುಲೈ 5ರಂದು ಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಕೇಂದ್ರ ಉಲ್ಲೇಖಿಸಿದೆ.

ಐಟಿ ನಿಯಮಗಳ ಪ್ರಕಾರ ಅಗತ್ಯವಿರುವ ಹೊಸ ಕುಂದುಕೊರತೆ ಅಧಿಕಾರಿಯ ನೇಮಕಕ್ಕೆ ಟ್ವಿಟರ್ ಮುಂದಾಗುತ್ತಿಲ್ಲ ಎಂದೂ ಸರ್ಕಾರ ಹೇಳಿದೆ.

ಈ ಕುರಿತು ಪ್ರತಿಕ್ರಿಯಿಸಲು ಟ್ವಿಟರ್ ನಿರಾಕರಿಸಿದೆ. ನಿಯಮಗಳನ್ನು ಪಾಲಿಸಲು ಎಲ್ಲ ರೀತಿಯಲ್ಲೂ ಪ್ರಯತ್ನಿಸುತ್ತಿರುವುದಾಗಿ ಕಂಪನಿ ಈ ಹಿಂದೆ ತಿಳಿಸಿತ್ತು.

ಹೊಸ ಐಟಿ ನಿಯಮಗಳನ್ನು ಪಾಲಿಸಲು ವಿಫಲವಾಗಿರುವ ಟ್ವಿಟರ್‌ ಕಾನೂನು ರಕ್ಷಣೆ ಕಳೆದುಕೊಳ್ಳಲಿದೆ ಎಂದು ಕೆಲ ದಿನಗಳ ಹಿಂದೆಯೇ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.