ADVERTISEMENT

ಟ್ವಿಟರ್‌ ಇಂಡಿಯಾ ಕುಂದುಕೊರತೆ ಅಧಿಕಾರಿಯಾಗಿ ಕ್ಯಾಲಿಫೋರ್ನಿಯಾದ ಕೆಸೆಲ್‌ ನೇಮಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಜೂನ್ 2021, 10:15 IST
Last Updated 28 ಜೂನ್ 2021, 10:15 IST
ಟ್ವಿಟರ್‌–ಸಾಂದರ್ಭಿಕ ಚಿತ್ರ
ಟ್ವಿಟರ್‌–ಸಾಂದರ್ಭಿಕ ಚಿತ್ರ   

ಬೆಂಗಳೂರು: ಕ್ಯಾಲಿಫೋರ್ನಿಯಾ ಮೂಲದ ಜೆರೆಮಿ ಕೆಸೆಲ್‌ ಅವರನ್ನು ಟ್ವಿಟರ್‌ ಇಂಡಿಯಾ ಸಂಸ್ಥೆಯ ಸ್ಥಾನಿಕ ಕುಂದುಕೊರತೆ ಅಧಿಕಾರಿಯಾಗಿ ನೇಮಕ ಮಾಡಿದೆ. ಧರ್ಮೇಂದ್ರ ಚತುರ್‌ ಅವರು ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಆದರೆ, ಕೆಸೆಲ್‌ ನೇಮಕಾತಿಯು ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳಿಗೆ ಪೂರಕವಾಗಿಲ್ಲ. ಹೊಸ ನಿಯಮಗಳ ಮಾರ್ಗಸೂಚಿಗಳ ಪ್ರಕಾರ, ಸಂಸ್ಥೆ ನೇಮಕ ಮಾಡುವ ಕುಂದುಕೊರತೆ ಅಧಿಕಾರಿ ಸೇರಿದಂತೆ ಎಲ್ಲ ನೋಡಲ್‌ ಅಧಿಕಾರಿಗಳು ಭಾರತ ಮೂಲದವರೇ ಆಗಿರಬೇಕಾಗುತ್ತದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಜೆರೆಮಿ ಕೆಸೆಲ್‌ ಅವರು ಟ್ವಿಟರ್‌ನ ಜಾಗತಿಕ ಕಾನೂನಾತ್ಮಕ ನೀತಿಗಳ ನಿರ್ದೇಶಕರಾಗಿದ್ದಾರೆ. ಟ್ವಿಟರ್‌ ಮೈಕ್ರೊ ಬ್ಲಾಗಿಂಗ್‌ ಸೈಟ್‌ನ ಹೆಲ್ಪ್‌ ಸೆಂಟರ್‌ನಲ್ಲಿ ಭಾರತದ ಕುಂದುಕೊರತೆ ಅಧಿಕಾರಿಯ ಸ್ಥಳದಲ್ಲಿ ಕೆಸೆಲ್‌ ಅವರ ವಿವರ ಪ್ರಕಟಿಸಲಾಗಿದೆ.

ADVERTISEMENT
ಟ್ವಿಟರ್‌ ಇಂಡಿಯಾ ವೆಬ್‌ಸೈಟ್‌ನಲ್ಲಿ ಕುಂದುಕೊರತೆ ಅಧಿಕಾರಿಯ ವಿವರ

ಗ್ರಾಹಕರ ಕುಂದುಕೊರತೆ ಆಲಿಸಿ ಪರಿಹಾರವನ್ನು ಒದಗಿಸಲು ಮಾಹಿತಿ ತಂತ್ರಜ್ಞಾನ (ಆಂತರಿಕ ಮಾರ್ಗಸೂಚಿ ಮತ್ತು ನೀತಿಸಂಹಿತೆ) ಕಾಯ್ದೆಯಂತೆ ಸಂಸ್ಥೆಗಳು ಕುಂದುಕೊರತೆ ಅಧಿಕಾರಿ ನೇಮಿಸುವುದು ಕಡ್ಡಾಯವಾಗಿದೆ. ಇತ್ತೀಚಿನ ಸರ್ಕಾರದ ಮಾಹಿತಿ ಪ್ರಕಾರ, ಭಾರತದಲ್ಲಿ 1.75 ಕೋಟಿ ಟ್ವಿಟರ್‌ ಬಳಕೆದಾರರಿದ್ದಾರೆ.

ಇತ್ತೀಚೆಗೆ ನೇಮಕಗೊಂಡಿದ್ದ ಧರ್ಮೇಂದ್ರ ಚತುರ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಕಂಪನಿಯ ವೆಬ್‌ಸೈಟ್‌ನಲ್ಲಿ ಅವರ ಹೆಸರು ಕಾಣಿಸುತ್ತಿರಲಿಲ್ಲ. ಅವರ ಹುದ್ದೆಯನ್ನು ಬಿಂಬಿಸುವ ಸ್ಥಳದಲ್ಲಿ ಕಂಪನಿಯ ಹೆಸರನ್ನೇ ಪ್ರದರ್ಶಿಸಲಾಗಿತ್ತು.

ಮೂಲಗಳ ಪ್ರಕಾರ, ಧರ್ಮೇಂದ್ರ ಚತುರ್‌ ಅವರು ರಾಜೀನಾಮೆ ನೀಡಿದ್ದಾರೆ. ಆದರೆ, ಈ ಕುರಿತು ಪ್ರತಿಕ್ರಿಯಿಸಲು ಟ್ವಿಟರ್ ನಿರಾಕರಿಸಿದೆ. ಹೊಸ ಐಟಿ ನಿಯಮಗಳಿಗೆ ಸಂಬಂಧಿಸಿದಂತೆ ಟ್ವಿಟರ್‌, ಭಾರತ ಸರ್ಕಾರದೊಂದಿಗೆ ಹಗ್ಗಜಗ್ಗಾಟ ನಡೆಸಿರುವ ಹಂತದಲ್ಲೇ ಈ ಬೆಳವಣಿಗೆ ನಡೆದಿದೆ.

ಮೇ 25ರಂದೇ ಹೊಸ ನಿಯಮಗಳು ಜಾರಿಗೆ ಬಂದಿದ್ದರೂ, ಅವುಗಳ ಪಾಲನೆಯಾಗದಿರುವ ಬಗ್ಗೆ ಸರ್ಕಾರವು ಟ್ವಿಟರ್‌ಗೆ ಪದೇ ಪದೇ ಎಚ್ಚರಿಕೆ ನೀಡಿದೆ. 50 ಲಕ್ಷದಷ್ಟು ಬಳಕೆದಾರರನ್ನು ಒಳಗೊಂಡಿರುವ ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಕುಂದುಕೊರತೆ ಅಧಿಕಾರಿಯನ್ನು ನೇಮಿಸಬೇಕಾಗುತ್ತದೆ ಹಾಗೂ ಆ ಅಧಿಕಾರಿಯ ಹೆಸರು ಮತ್ತು ಸಂಪರ್ಕ ವಿವರಗಳನ್ನು ಹಂಚಿಕೊಳ್ಳಬೇಕಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.