ADVERTISEMENT

Twitter Layoffs | ಟ್ವಿಟರ್‌ನ ಶೇ 50 ರಷ್ಟು ಉದ್ಯೋಗಿಗಳನ್ನು ವಜಾ ಮಾಡಿದ ಮಸ್ಕ್

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2022, 7:17 IST
Last Updated 5 ನವೆಂಬರ್ 2022, 7:17 IST
   

ಸ್ಯಾನ್‌ ಫ್ರಾನ್ಸಿಸ್ಕೋ: ಸಾಮಾಜಿಕ ಜಾಲತಾಣ ದೈತ್ಯ ಟ್ವಿಟರ್‌ ಅನ್ನು ಖರೀದಿ ಮಾಡಿದ ಬಳಿಕ ಅಮೂಲಾಗ್ರ ಬದಲಾವಣೆಗೆ ಮುಂದಾಗಿರುವ ವಿಶ್ವದ ನಂಬರ್‌ 1 ಶ್ರೀಮಂತ ಇಲಾನ್‌‌ ಮಸ್ಕ್‌ ಇದೀಗ, ಶೇ 50 ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿದ್ದಾರೆ.

ವಿಶ್ವದಾದ್ಯಂತ ಟ್ವಿಟರ್‌ನಲ್ಲಿ ಸುಮಾರು 7500 ಉದ್ಯೋಗಿಗಳು ಇದ್ದು, ಈ ಪೈಕಿ ಶೇ 50 ಮಂದಿಯನ್ನು ಮನೆಗೆ ಕಳುಹಿಸಲಾಗಿದೆ. ಉದ್ಯೋಗ ಕಡಿತ ಮಾಡಲಾಗುತ್ತದೆ ಎಂದು ಕಂಪನಿ ಘೋಷಣೆ ಮಾಡಿದ ಮರುದಿನವೇ ಸುಮಾರು 4000 ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ.

ಶೇ.50 ರಷ್ಟು ಉದ್ಯೋಗಿಗಳಿಗೆ ಕಚೇರಿ ಪ್ರವೇಶ ನಿರ್ಬಂಧಿಸಲಾಗಿದ್ದು, ಕಂಪನಿ ಕಂಪ್ಯೂಟರ್‌ ಹಾಗೂ ಇ-ಮೇಲ್‌ ಖಾತೆಗಳನ್ನು ತಡೆ ಹಿಡಿಯಲಾಗಿದೆ ಎಂದು ಎಎಫ್‌ಬಿ ವರದಿ ಮಾಡಿದೆ.

ಕೆಲಸದಿಂದ ವಜಾ ಮಾಡುವ ಬಗ್ಗೆ ಗುರುವಾರವೇ ಟ್ವಿಟರ್‌ ಆಡಳಿತ ಮಂಡಳಿಯು ಉದ್ಯೋಗಿಗಳಿಗೆ ಇ-ಮೇಲ್‌ ರವಾನೆ ಮಾಡಿತ್ತು. ಕೆಲಸದಲ್ಲಿ ಉಳಿಸಿಕೊಳ್ಳುವುದೇ ಬೇಡವೇ ಎಂದು ಶೀಘ್ರವೇ ಮಾಹಿತಿ ನೀಡಲಾಗುವುದು ಎಂದು ಅದರಲ್ಲಿ ತಿಳಿಸಲಾಗಿತ್ತು.

‘ನೀವು ಕಚೇರಿಯಲ್ಲಿ ಇದ್ದರೆ ಅಥವಾ ಕಚೇರಿಗೆ ಬರುವ ದಾರಿಯಲ್ಲಿ ಇದ್ದರೆ ದಯಮಾಡಿ ಮನೆಗೆ ಮರಳಿ’ ಎಂದು ಉದ್ಯೋಗಿಗಳಿಗೆ ಕಳುಹಿಸಿದ ಮೇಲ್‌ನಲ್ಲಿ ಕಂಪನಿ ಹೇಳಿತ್ತು. ಇದರ ಬೆನ್ನಲ್ಲೇ ಇದೀಗ ಶೇ 50 ರಷ್ಟು ಮಂದಿ ಕೆಲಸ ಕಳೆದುಕೊಂಡಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಲಾನ್‌ ಮಸ್ಕ್‌, ‘ಕಂಪನಿಯು ದಿನಕ್ಕೆ ನಾಲು ಮಿಲಿಯನ್‌ ಡಾಲರ್‌ಗಿಂತ ಹೆಚ್ಚು ನಷ್ಟ ಅನುಭವಿಸುತ್ತಿದ್ದು, ಕೆಲಸ ಕಡಿತ ಮಾಡದೇ ಬೇರೆ ಮಾರ್ಗವೇ ಇರಲಿಲ್ಲ’ ಎಂದು ಹೇಳಿದ್ದಾರೆ.

ಮಸ್ಕ್‌ ಅವರ ಈ ನಡೆಗೆ ಟ್ವಿಟರ್‌ ಉದ್ಯೋಗಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ‘ಇದೊಂದು ಅಮಾನವೀಯ ನಡೆ. ಕೂಲಿಗಳಿಗಿಂತ ಕಡೆಯಾಗಿ ನಮ್ಮನ್ನು ನಡೆಸಿಕೊಂಡಿದ್ದಾರೆ. ಹಣ ಉಳಿತಾಯಕ್ಕೆ ಏನೂ ಬೇಕಾದರೂ ಮಾಡುತ್ತೇವೆ ಎನ್ನುವ ಮನಸ್ಥಿತಿ ಕಂಪನಿಯದ್ದು’ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಉದ್ಯೋಗಿಯೊಬ್ಬರು ಹೇಳಿದ್ದಾರೆ.

ಕಂಪನಿಯನ್ನು ಸ್ವಾಧೀನ ಪಡಿಸಿಕೊಂಡ ಬೆನ್ನಲ್ಲೇ ಇಲಾನ್‌‌ ಮಸ್ಕ್‌ ಅವರು ಸಿಇಒ ಪರಾಗ್‌ ಅಗರ್‌ವಾಲ್‌ ಅವರನ್ನು ಕೆಲಸದಿಂದ ಕಿತ್ತು ಹಾಕಿದ್ದರು. ಬಳಿಕ ಆಡಳಿತ ಮಂಡಳಿಯನ್ನು ವಿಸರ್ಜನೆ ಮಾಡಿದ್ದರು. ಇದೀಗ ಬಳಿಕ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.