ನವದೆಹಲಿ: ಚಂದಾದಾರಿಕೆ ಶುಲ್ಕ ಪಾವತಿಸಿಲ್ಲ ಎಂಬ ಕಾರಣಕ್ಕೆ ಟ್ವಿಟರ್ ಕಂಪನಿಯು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಾಲಿವುಡ್ ನಟರಾದ ಅಮಿತಾಬ್ ಬಚ್ಚನ್, ಶಾರುಖ್ ಖಾನ್, ಸಲ್ಮಾನ್ ಖಾನ್, ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಅನೇಕ ರಾಜಕೀಯ ನಾಯಕರು, ಸಿನಿಮಾ ಹಾಗೂ ಕ್ರೀಡಾ ತಾರೆಯರ ಅಧಿಕೃತ ಖಾತೆಗಳ ಜೊತೆಗಿನ ‘ಬ್ಲೂ ಟಿಕ್’ ತೆಗೆದು ಹಾಕಿದೆ.
ಕಂಪನಿಯು ಆಂಡ್ರಾಯ್ಡ್ ಬಳಕೆದಾರರಿಗೆ ‘ಬ್ಲೂ ಟಿಕ್’ ಚಂದಾದಾರಿಕೆ ಪಡೆಯಲು ತಿಂಗಳಿಗೆ 11 ಅಮೆರಿಕನ್ ಡಾಲರ್ (₹ 894.96) ಶುಲ್ಕ ನಿಗದಿಮಾಡಿದೆ. ಐಒಎಸ್ ವ್ಯವಸ್ಥೆಯಲ್ಲಿ ಟ್ವಿಟರ್ ಬಳಸುವವರು ಕೂಡ ಇಷ್ಟೇ ಶುಲ್ಕ ಪಾವತಿಸಬೇಕಾಗುತ್ತದೆ. ಹೊಸ ಆದಾಯದ ಮೂಲ ಸೃಷ್ಟಿಸುವ ಉದ್ದೇಶದಿಂದ ಕಳೆದ ವರ್ಷದಿಂದ ಬ್ಲೂ ಟಿಕ್‌ಗೆ ಶುಲ್ಕ ವಿಧಿಸುವುದನ್ನು ಆರಂಭಿಸಿದ್ದ ಕಂಪನಿಯು, ಬಳಕೆದಾರರಿಗಾಗಿ ಕೊಡುಗೆಯನ್ನೂ ಪ್ರಕಟಿಸಿತ್ತು. ಇದರನ್ವಯ ವಾರ್ಷಿಕ ಚಂದಾದಾರಿಕೆಗೆ ₹6,800 ಶುಲ್ಕ ನಿಗದಿಪಡಿಸಿತ್ತು.
ಶುಲ್ಕ ಪಾವತಿಸದಿರುವವರ ಪಟ್ಟಿ ಸಿದ್ಧಪಡಿಸಿಕೊಂಡಿರುವ ಕಂಪನಿಯು ಗುರುವಾರದಿಂದಲೇ ಬ್ಲೂ ಟಿಕ್ ತೆರವು ಕಾರ್ಯ ಶುರುಮಾಡಿತ್ತು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸೇರಿದಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು, ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವು ಕ್ರಿಕೆಟಿಗರು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೀಗೆ ಹಲವು ಗಣ್ಯರ ಖಾತೆಯ ಜೊತೆಗಿದ್ದ ‘ಬ್ಲೂ ಟಿಕ್’ ಶುಕ್ರವಾರ ಕಾಣಲಿಲ್ಲ.
‘ಹೇ ಟ್ವಿಟರ್ ಅಣ್ಣಾ, ನನ್ನ ಮಾತು ಕೇಳಿತ್ತಿರುವೆಯಾ? ನಾನು ಈಗಾಗಲೇ ಹಣ ಪಾವತಿಸಿರುವೆ. ನನ್ನ ಹೆಸರಿನ ಮುಂದಿನ ನೀಲಿ ವರ್ಣದ ಗುರುತನ್ನು ಮರಳಿಸು. ಆಗ ಈ ಖಾತೆ ನನ್ನದೇ ಎಂಬುದು ಜನರಿಗೆ ಗೊತ್ತಾಗಲಿದೆ’ ಎಂದು ಅಮಿತಾಬ್ ಬಚ್ಚನ್ ಅವರು ಹಾಸ್ಯಭರಿತವಾಗಿ ಟ್ವೀಟ್ ಮಾಡಿದ್ದಾರೆ.
ಟ್ವಿಟರ್‌ನಲ್ಲಿ 2.7 ಕೋಟಿ ಹಿಂಬಾಲಕರನ್ನು ಹೊಂದಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಖಾತೆಯೊಂದಿಗಿನ ಬ್ಲೂ ಟಿಕ್ ಕೂಡ ಈಗಿಲ್ಲ.
ರಾಹುಲ್ ಗಾಂಧಿ ಅವರ ಚಿತ್ರವನ್ನು ಹೊಂದಿರುವ ‘ರಾಫಲ್ ಗಾಂಧಿ 2.0’ ಹೆಸರಿನ ಖಾತೆಯ ‘ಬ್ಲೂ ಟಿಕ್’ ತೆಗೆದು ಹಾಕಲಾಗಿಲ್ಲ. ಈ ಖಾತೆಗೆ 8 ಲಕ್ಷ ಹಿಂಬಾಲಕರು ಇದ್ದಾರೆ.
ಈ ಖಾತೆಯ ಮೂಲಕ ಶುಕ್ರವಾರ ರಾಹುಲ್ ಗಾಂಧಿಯವರ ಬ್ಲೂ ಟಿಕ್ ಇಲ್ಲದ ಅಧಿಕೃತ ಖಾತೆಯ ‘ಸ್ಕ್ರೀನ್ ಶಾಟ್’ ಅನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ‘ನೀನು ಇದೆಂತಹ ಜಗತ್ತನ್ನು ಸೃಷ್ಟಿಸುತ್ತಿದ್ದೀಯಾ ಅಣ್ಣಾ (ಎಲಾನ್ ಮಸ್ಕ್)’ ಎಂದು ಟ್ವೀಟ್ ಕೂಡ ಮಾಡಲಾಗಿದೆ.
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮೈಕ್ರೊಸಾಫ್ಟ್ ಸಹ ಸ್ಥಾಪಕ ಬಿಲ್ ಗೇಟ್ಸ್ ಮತ್ತು ಕಿರುತೆರೆ ತಾರೆ ಕಿಮ್ ಕರ್ದಾಶಿಯನ್ ಅವರೂ ಬ್ಲೂ ಟಿಕ್ ಕಳೆದುಕೊಂಡವರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
ನಕಲಿ ಖಾತೆಗಳ ಹಾವಳಿ ತಡೆಯಲು, ಸಿನಿಮಾ ಹಾಗೂ ಕ್ರೀಡಾ ತಾರೆಯರು, ರಾಜಕೀಯ ನಾಯಕರು, ಕಂಪನಿಗಳು ಹಾಗೂ ಸಂಸ್ಥೆಗಳ ಅಧಿಕೃತ ಖಾತೆಗಳನ್ನು ಬಳಕೆದಾರರು ಸುಲಭವಾಗಿ ಗುರುತಿಸಲು ಅನುವು ಮಾಡಿಕೊಡುವ ಉದ್ದೇಶದಿಂದ ಟ್ವಿಟರ್ ಕಂಪನಿಯು 2009ರಲ್ಲಿ ಬ್ಲೂ ಟಿಕ್ ಮಾರ್ಕ್ ವ್ಯವಸ್ಥೆ ಪರಿಚಯಿಸಿತ್ತು.
‘ಗುರುವಾರದಿಂದಲೇ ಬ್ಲೂ ಟಿಕ್ ಮಾರ್ಕ್ ತೆಗೆಯುವ ಕೆಲಸ ಆರಂಭಿಸಲಿದ್ದೇವೆ. ಖಾತೆಗಳ ಜೊತೆಗೆ ಈ ಮಾರ್ಕ್ ಉಳಿಸಿಕೊಳ್ಳಲು ಬಯಸುವವರು ‘ಟ್ವಿಟರ್ ಬ್ಲೂ’ಗೆ ‘ಸೈನ್ ಅಪ್’ ಆಗಬಹುದು’ ಎಂದು ಕಂಪನಿಯು ಟ್ವಿಟರ್‌ನಲ್ಲಿ ಪ್ರಕಟಿಸಿದ್ದ ಪ್ರಕಟಣೆಯಲ್ಲಿ ತಿಳಿಸಿತ್ತು.
‘ಟ್ವಿಟರ್‌ನಿಂದ ಶ್ರೀಮಂತ–ಬಡವ ಎಂಬ ಪದ್ಧತಿಯನ್ನು ತೆಗೆದು ಹಾಕಲಿದ್ದೇನೆ. ಚಂದಾದಾರಿಕೆ ಶುಲ್ಕ ಪಾವತಿಸುವ ಎಲ್ಲರಿಗೂ ‘ಬ್ಲೂ ಟಿಕ್’ ಒದಗಿಸಲಾಗುತ್ತದೆ’ ಎಂದು ಟ್ವಿಟರ್ ಮಾಲೀಕ ಎಲಾನ್ ಮಸ್ಕ್ ಹೇಳಿದ್ದರು.
ಬ್ಲೂ ಟಿಕ್ ಕಳೆದುಕೊಂಡ ಪ್ರಮುಖರು
ಮುಖ್ಯಮಂತ್ರಿಗಳು: ಮಮತಾ ಬ್ಯಾನರ್ಜಿ (ಪಶ್ಚಿಮ ಬಂಗಾಳ), ಏಕನಾಥ ಶಿಂದೆ (ಮಹಾರಾಷ್ಟ್ರ), ಎಂ.ಕೆ.ಸ್ಟಾಲಿನ್ (ತಮಿಳುನಾಡು), ನಿತೀಶ್ ಕುಮಾರ್ (ಬಿಹಾರ). ಬಸವರಾಜ ಬೊಮ್ಮಾಯಿ (ಕರ್ನಾಟಕ).
ಬಾಲಿವುಡ್ ತಾರೆಯರು: ಅಜಯ್ ದೇವಗನ್, ಆಲಿಯಾ ಭಟ್, ಅಕ್ಷಯ್ ಕುಮಾರ್, ಕಾಜೋಲ್, ಮಾಧುರಿ ದೀಕ್ಷಿತ್, ಅನುಷ್ಕಾ ಶರ್ಮಾ, ಅನಿಲ್ ಕಪೂರ್, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್, ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ.
ದಕ್ಷಿಣ ಭಾರತದ ತಾರೆಯರು: ಯಶ್, ದುಲ್ಕರ್ ಸಲ್ಮಾನ್, ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಸಮಂತಾ, ಕೀರ್ತಿ ಸುರೇಶ್, ಧನುಷ್, ರಜನಿಕಾಂತ್.
ಮೋದಿಗಿದೆ ‘ಬ್ಲೂ ಟಿಕ್’
ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಸಂಪುಟದ ಸಚಿವರು, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಟ್ವಿಟರ್ ಖಾತೆಗಳು ಬ್ಲೂ ಟಿಕ್ ಹೊಂದಿವೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಖಾತೆಯ ಜೊತೆ ‘ಗ್ರೇ ಟಿಕ್’ (ಕಡು ಬೂದು ಬಣ್ಣ) ಇದೆ.
ಟ್ವೀಟ್ಸ್
ಬೈ ಬೈ ಬ್ಲೂ ಟಿಕ್. ನಿನ್ನನ್ನು ಹೊಂದಿದ್ದ ಖುಷಿ ಇದೆ. ನನ್ನ ಜನರೊಂದಿಗಿನ ಪಯಣ, ಸಂವಹನ, ವಿಚಾರ ವಿನಿಮಯ ಮುಂದುವರಿಯಲಿದೆ. ನೀನು (ಬ್ಲೂ ಟಿಕ್) ಹುಷಾರಾಗಿರು
–ಪ್ರಕಾಶ್ ರಾಜ್, ಬಹುಭಾಷಾ ನಟ
‘ನನ್ನ ಖಾತೆಯ ಚಂದಾದಾರಿಕೆ 2024ರ ಮಾರ್ಚ್ 17ಕ್ಕೆ ಕೊನೆಯಾಗಲಿದೆ. ಒಂದು ವರ್ಷದ ಶುಲ್ಕ ಪಾವತಿಸಿದ್ದರೂ ಬ್ಲೂ ಟಿಕ್ ಹಿಂಪಡೆದಿರುವುದು ಏಕೆ?
–ಖುಷ್ಬು ಸುಂದರ್, ನಟಿ
ಒಂದಾನೊಂದು ಕಾಲದಲ್ಲಿ ‘ಬ್ಲೂ ಟಿಕ್’ ಎಂಬುದೊಂದಿತ್ತು. ಅದು ಇನ್ನು ಮುಂದೆ ಇರದೆ ಹೋದರೂ ಸಂತೋಷದಿಂದಲೇ ಜೀವಿಸುವೆ -ಅದಿತಿ ರಾವ್ ಹೈದರಿ, ನಟಿ
ಬ್ಯಾಸ್ಕೆಟ್‌ಬಾಲ್ ತಾರೆ ಲೆಬ್ರಾನ್ ಜೇಮ್ಸ್, ಲೇಖಕ ಸ್ಟೀಫನ್ ಕಿಂಗ್ ಸೇರಿ ಕೆಲವರ ಚಂದಾದಾರಿಕೆ ಶುಲ್ಕವನ್ನು ನಾನೇ ಭರಿಸುವೆ.
–ಎಲಾನ್ ಮಸ್ಕ್, ಟ್ವಿಟರ್ ಮಾಲೀಕ
ಬ್ಲೂ ಟಿಕ್ ಕಳೆದುಕೊಂಡ ಫುಟ್‌ಬಾಲ್ ತಾರೆಯರು
ಫುಟ್‌ಬಾಲ್ ತಾರೆಯರಾದ ಕ್ರಿಸ್ಟಿಯಾನೊ ರೊನಾಲ್ಡೊ, ನೇಮರ್, ಕಿಲಿಯನ್ ಎಂಬಾಪೆ ಅವರೂ ಬ್ಲೂ ಟಿಕ್ ಕಳೆದುಕೊಂಡಿದ್ದಾರೆ.
ಪೋರ್ಚುಗಲ್‌ನ ರೊನಾಲ್ಡೊ ಟ್ವಿಟರ್‌ನಲ್ಲಿ 10.83 ಕೋಟಿ ಹಿಂಬಾಲಕರನ್ನು ಹೊಂದಿದ್ದಾರೆ. ನೇಮರ್ ಹಾಗೂ ಎಂಬಾಪೆ ಅವರಿಗೆ ಕ್ರಮವಾಗಿ 6.19 ಕೋಟಿ ಮತ್ತು 1.22 ಕೋಟಿ ಫಾಲೋವರ್ಸ್ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.