ನವದೆಹಲಿ: ಟ್ವಿಟರ್ ತನ್ನ ಜಾಲತಾಣದಲ್ಲಿ ಭಾರತದ ಭೂಪಟವನ್ನು ತಪ್ಪಾಗಿ ತೋರಿಸಿದೆ. ವಿಶ್ವದ ಭೂಪಟದಲ್ಲಿ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳನ್ನು ಪ್ರತ್ಯೇಕ ದೇಶಗಳು ಎಂದು ತೋರಿಸಲಾಗಿದೆ. ಲಡಾಖ್‌ನ ಕೆಲವು ಭಾಗವನ್ನು ಚೀನಾ ಭೂಪಟದ ಜತೆ ಸೇರಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಟ್ವಿಟರ್ ಜಾಲತಾಣದ ‘ಕೆರಿಯರ್’ ವಿಭಾಗದ ‘ಟ್ವೀಪ್ ಲೈಫ್’ನಲ್ಲಿ ವಿಶ್ವದ ಭೂಪಟವನ್ನು ತೋರಿಸಲಾಗಿದೆ. ಆ ಭೂಪಟದಲ್ಲಿ ಭಾರತದ ಭೂಪಟವು ತಪ್ಪಾಗಿದೆ. ‘ಭಾರತದ ಭೂಪಟವನ್ನು ತಪ್ಪಾಗಿ ತೋರಿಸಿರುವ ಟ್ವಿಟರ್ ವಿರುದ್ಧ ಕಠಿಣ ಕ್ರಮ ತೆಗದುಕೊಳ್ಳಿ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹಿಸಲಾಗಿದೆ. ಟ್ವಿಟರ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಸರ್ಕಾರದ ಮೂಲಗಳು ಹೇಳಿವೆ.
ಈ ಬಗ್ಗೆ ಪ್ರತಿಕ್ರಿಯೆ ಕೇಳಿ ಕಳುಹಿಸಿದ್ದ ಇ-ಮೇಲ್‌ಗೆ ಟ್ವಿಟರ್‌ನಿಂದ ಯಾವುದೇ ಸ್ಪಂದನ ಸಿಕ್ಕಿಲ್ಲ.
ನೂತನ ಮಾಹಿತಿ ತಂತ್ರಜ್ಞಾನ ನಿಯಮಗಳನ್ನು ಪಾಲನೆ ಮಾಡುವುದರ ಸಂಬಂಧ ಕೇಂದ್ರ ಸರ್ಕಾರ ಮತ್ತು ಟ್ವಿಟರ್ ಮಧ್ಯೆ ಜಟಾಪಟಿ ನಡೆದಿತ್ತು. ಸುಳ್ಳು ಮಾಹಿತಿ ಪ್ರಸಾರವಾಗುವುದನ್ನು ತಡೆಯಲು ವಿಫಲವಾದ ಆರೋಪದಲ್ಲಿ ಟ್ವಿಟರ್ ವಿರುದ್ಧ ಉತ್ತರಪ್ರದೇಶದಲ್ಲಿ ಪ್ರಕರಣ ದಾಖಲಾಗಿದೆ. ಈ ಸಂದರ್ಭದಲ್ಲಿಯೇ ಟ್ವಿಟರ್‌ನಿಂದ ಈ ತಪ್ಪಾಗಿದೆ.
ಭಾರತದ ಭೂಪಟಕ್ಕೆ ಸಂಬಂಧಿಸಿದಂತೆ ಟ್ವಿಟರ್ ಈ ರೀತಿ ತಪ್ಪು ಎಸಗುತ್ತಿರುವುದು ಇದು ಮೂರನೇ ಬಾರಿ. ಹೀಗಾಗಿ ಟ್ವಿಟರ್ ವಿರುದ್ಧ ಆಕ್ರೋಶ ತೀವ್ರವಾಗಿದೆ.2020ರಲ್ಲೂ ಲಡಾಖ್‌ನ ಒಂದು ಭಾಗ ಚೀನಾದ್ದು ಎಂದು ಟ್ವಿಟರ್ ತೋರಿಸಿತ್ತು. ಜಿಯೋಟ್ಯಾಗಿಂಗ್ ಮಾಡುವಾಗ ಲಡಾಖ್ ಚೀನಾದ ಒಂದು ಭಾಗ ಎಂದು ತೋರಿಸುತ್ತಿತ್ತು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಕೇಂದ್ರ ಸರ್ಕಾರ ನೋಟಿಸ್ ನೀಡಿದ ಬಳಿಕ ಟ್ವಿಟರ್ ತನ್ನ ಜಿಯೋಟ್ಯಾಗಿಂಗ್ ವ್ಯವಸ್ಥೆಯಲ್ಲಿ ಪರಿಷ್ಕರಣೆ ಮಾಡಿತ್ತು.
2020ರ ನವೆಂಬರ್‌ನಲ್ಲಿ ಲಡಾಖ್ ಕೇಂದ್ರಾಡಳಿತ ಪ್ರದೇಶದ ಪ್ರಮುಖ ಪಟ್ಟಣ ಲೇಹ್ ಅನ್ನು ಜಮ್ಮು-ಕಾಶ್ಮೀರದ ಭಾಗ ಎಂದು ತೋರಿಸಲಾಗಿತ್ತು. ಆಗಲೂ ಕೇಂದ್ರ ಸರ್ಕಾರವು ಟ್ವಿಟರ್‌ಗೆ ನೋಟಿಸ್ ನೀಡಿತ್ತು. ‘ದೇಶದ ಸಾರ್ವಭೌಮತೆಗೆ ಧಕ್ಕೆ ತರುವಂತೆ ಮಾಡಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ’ ಎಂದು ಟ್ವಿಟರ್‌ಗೆ ಎಚ್ಚರಿಕೆ ನೀಡಲಾಗಿತ್ತು.
ಮತ್ತೆ ಮತ್ತೆ ಜಟಾಪಟಿ
* ನೂತನ ಮಾಹಿತಿ ತಂತ್ರಜ್ಞಾನ ನಿಯಮಗಳ ಅನ್ವಯ ಕುಂದುಕೊರತೆ ಅಧಿಕಾರಿಯನ್ನು ಕಾಲಮಿತಿಯಲ್ಲಿ ನೇಮಕ ಮಾಡದ ಕಾರಣ ಭಾರತದಲ್ಲಿ ಟ್ವಿಟರ್ ಕಾನೂನು ರಕ್ಷಣೆ ಕಳೆದುಕೊಂಡಿದೆ. ಗಾಜಿಯಾಬಾದ್ ಸುಳ್ಳುಸುದ್ದಿ ಪ್ರಕರಣದಲ್ಲಿ ಟ್ವಿಟರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ
*ಈಚೆಗೆ, ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರ ಟ್ವಿಟರ್ ಖಾತೆಯನ್ನು ಕೆಲವು ಗಂಟೆಗಳ ಕಾಲ ಟ್ವಿಟರ್ ಸ್ಥಗಿತಗೊಳಿಸಿತ್ತು. ಅಮೆರಿಕ ಬೌದ್ಧಿಕ ಹಕ್ಕುಸ್ವಾಮ್ಯ ನಿಯಮಗಳ ಉಲ್ಲಂಘನೆ ಕಾರಣಕ್ಕೆ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಟ್ವಿಟರ್ ಹೇಳಿತ್ತು. ಈ ಕ್ರಮದ ವಿರುದ್ಧ ರವಿಶಂಕರ್ ಪ್ರಸಾದ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು
ಇದನ್ನೂ ಓದಿ |ಆಳ-ಅಗಲ: ಸಾಮಾಜಿಕ ಮಾಧ್ಯಮಗಳಿಗೆ ಮೂಗುದಾರ
* ನೂತನ ಮಾಹಿತಿ ತಂತ್ರಜ್ಞಾನ ನಿಯಮಗಳ ಅನ್ವಯ ಭಾರತದಲ್ಲೇ ವಾಸವಿರುವ ವ್ಯಕ್ತಿಯು ಟ್ವಿಟರ್‌ನ ಕುಂದುಕೊರತೆ ಆಧಿಕಾರಿಯಾಗಿರಬೇಕು. ಈಗ ಅಮೆರಿಕದಲ್ಲಿರುವ ವ್ಯಕ್ತಿಯನ್ನು ಕುಂದುಕೊರತೆ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಇದು ನಿಯಮಗಳ ಉಲ್ಲಂಘನೆ ಎಂದು ನೇಮಕಾತಿಯನ್ನು ಸರ್ಕಾರ ತಿರಸ್ಕರಿಸಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.