ನವದೆಹಲಿ: ಹೊಸ ಮಾಹಿತಿ ತಂತ್ರಜ್ಞಾನ (ಐಟಿ) ನಿಯಮಗಳನ್ನು ಪಾಲಿಸಲು ವಿಫಲವಾಗಿರುವ ಟ್ವಿಟರ್ ದೇಶದಲ್ಲಿ ‘ಮಧ್ಯವರ್ತಿ ಮಾಧ್ಯಮ ಸ್ಥಾನಮಾನ’ ಕಳೆದುಕೊಳ್ಳಲಿದೆ ಎಂದು ಸರ್ಕಾರಿ ಮೂಲಗಳು ಹೇಳಿವೆ.
ಅಂದರೆ, ಗಡುವಿನ ಒಳಗೆ ಸರ್ಕಾರದ ನಿಯಮಗಳಿಗೆ ಬದ್ಧತೆ ತೋರದಿದ್ದರೆ ಬಳಕೆದಾರರು ವಿಷಯಗಳನ್ನು ಅಥವಾ ಸಂದೇಶಗಳನ್ನು ಪ್ರಕಟಿಸುವ ಒಂದು ಮಧ್ಯವರ್ತಿಯಾಗಿ ಟ್ವಿಟರ್ ಅನ್ನು ಪರಿಗಣಿಸಲಾಗುವುದಿಲ್ಲ. ಬದಲಿಗೆ, ಯಾವುದೇ ಬಳಕೆದಾರರು ಪ್ರಕಟಿಸುವ ಎಲ್ಲ ಪೋಸ್ಟ್‌ಗಳಿಗೆ ಸ್ವತಃ ಟ್ವಿಟರ್ ಹೊಣೆಗಾರಿಕೆ ವಹಿಸಬೇಕಾಗುತ್ತದೆ.
ಹೊಸ ನಿಯಮಗಳಿಗೆ ಬದ್ಧತೆ ತೋರದ ಮುಖ್ಯವಾಹಿನಿಯ ಏಕೈಕ ಸಾಮಾಜಿಕ ಮಾಧ್ಯಮವಾಗಿದೆ ಟ್ವಿಟರ್ ಎಂದೂ ಮೂಲಗಳು ತಿಳಿಸಿರುವುದಾಗಿ ‘ಎಎನ್‌ಐ’ ವರದಿ ಮಾಡಿದೆ.
ಈ ಮಧ್ಯೆ, ನಿಯಮಗಳ ಪಾಲನೆಗಾಗಿ ಅಧಿಕಾರಿಯೊಬ್ಬರನ್ನು ನೇಮಕ ಮಾಡಲಾಗಿದ್ದು, ಈ ಕುರಿತ ವಿವರವನ್ನು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಜತೆ ಶೀಘ್ರದಲ್ಲೇ ಹಂಚಿಕೊಳ್ಳಲಾಗುವುದು ಎಂದು ಟ್ವಿಟರ್ ತಿಳಿಸಿದೆ.
ಹೊಸ ನಿಯಮಗಳ ಪಾಲನೆಗೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಕುರಿತ ಪ್ರಗತಿಯ ಪ್ರತಿಯೊಂದು ಹಂತವನ್ನು ಸಚಿವಾಲಯ ಗಮನಿಸುತ್ತಿದೆ ಎಂದು ಟ್ವಿಟರ್ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.