ಕೋಟ್ಟಯಂ: ಕೆಲವರಜೀವನದಲ್ಲಿ ನಡೆಯುವ ಘಟನೆಗಳು ಸಿನಿಮಾ ಕತೆಗಳಂತೆ ಇರುತ್ತವೆ. ಇಲ್ಲೊಂದು ಮದುವೆಯೂ ಸಿನಿಮಾ ಕತೆಯಂತೆ ನಡೆದಿದೆ. ಕೇರಳದ ಕೋಟ್ಟಯಂ ಜಿಲ್ಲೆಯತಿರುನಕ್ಕರ ನಿವಾಸಿ ಶಾಜಿ ಅವರ 'ಮಗಳ' ಮದುವೆ ಬಗ್ಗೆ ಸಂಧ್ಯಾ ಪಲ್ಲವಿ ಎಂಬಾಕೆ ಫೇಸ್‌ಬುಕ್‌ನಲ್ಲಿ ಬರೆದ ಬರಹ ವೈರಲ್ ಆಗಿದೆ.
ಸಂಧ್ಯಾ ಪಲ್ಲವಿ ಫೇಸ್‌ಬುಕ್‌ನಲ್ಲಿ ಬರೆದ ಬರಹ ಹೀಗಿದೆ:
ಇಂದು ವಿಶೇಷವಾದಮದುವೆಯೊಂದರಲ್ಲಿ ಭಾಗಿಯಾದೆ. ಮಾಂಗಲ್ಯಧಾರಣೆ ವೇಳೆ ಕಣ್ಣು ಹನಿಗೂಡಿತು.ನಾನು ನನ್ನ ಸ್ನೇಹಿತರೊಂದಿಗೆ ಈ ಮದುವೆಗೆ ಹೋಗಿದ್ದೆ.
ಕೋಟ್ಟಯಂ ತಿರುನಕ್ಕರ ನಿವಾಸಿ ಶಾಜಿ ಮತ್ತು ಅವರ ಪತ್ನಿ ಅತಿಥಿಗಳನ್ನು ಬರಮಾಡಿಕೊಳ್ಳುವ ಕಾರ್ಯದಲ್ಲಿ ಬ್ಯುಸಿಯಾಗಿದ್ದರು.
6 ವರ್ಷಗಳ ಹಿಂದೆ ಶಾಜಿ ಅವರ ಮಗ ಪ್ಲಸ್ ಟು ವಿದ್ಯಾರ್ಥಿಯಾಗಿದ್ದಾಗ ಸಹಪಾಠಿಯೊಬ್ಬಳನ್ನು ಪ್ರೀತಿಸಿ, ಮನೆಬಿಟ್ಟು ಓಡಿ ಹೋಗಿದ್ದ. ಮಗಳು ಕಾಣೆಯಾಗಿದ್ದಾಳೆ ಎಂದು ಆ ಹುಡುಗಿಯ ಮನೆಯವರು ದೂರು ನೀಡಿದರು. ಪೊಲೀಸರು ಈ ಜೋಡಿಗಳನ್ನು ಪತ್ತೆ ಮಾಡಿ ನ್ಯಾಯಾಲಯಕ್ಕೆ ಹಾಜರು ಮಾಡಿದರು.
ಹುಡುಗನ ಜತೆ ಓಡಿ ಹೋದ ಹುಡುಗಿ ನಮ್ಮ ಮನೆಗೆ ಬೇಡ ಅಂದರು ಈ ವಿದ್ಯಾರ್ಥಿನಿಯ ಕುಟುಂಬದವರು. ಹೀಗಿರುವಾಗ ಮಕ್ಕಳಿಗೆ 18 ವಯಸ್ಸು ಆದನಂತರ ಮದುವೆ ಮಾಡಿಕೊಡುತ್ತೇವೆ ಎಂದು ಹುಡುಗನ ಮನೆಯವರು ಹುಡುಗಿಯನ್ನೂ ತಮ್ಮೊಂದಿಗೆ ಮನೆಗೆ ಕರೆತಂದರು.
ಮಗನನ್ನು ಹಾಸ್ಟೆಲ್‌ಗೆ ಸೇರಿಸಿ ಅಲ್ಲಿ ಕಲಿಕೆ ಮುಂದುವರಿಸಿದರು. ಮಗ ಪ್ರೀತಿಸಿ ಕರೆದುಕೊಂಡ ಬಂದ ಹುಡುಗಿಯನ್ನು ಮನೆಯಲ್ಲಿರಿಸಿ ಓದು ಮುಂದುವರಿಯುವಂತೆ ನೋಡಿಕೊಂಡರು.ಈ ಮಧ್ಯೆ ಮಗ ಬೇರೊಂದು ಹುಡುಗಿಯನ್ನು ಪ್ರೀತಿಸುತ್ತಿದ್ದಾನೆ ಎಂದು ಗೊತ್ತಾದ ಕೂಡಲೇ ಶಾಜಿ ಆಮಗನನ್ನು ಗಲ್ಫ್‌ಗೆ ಕರೆದುಕೊಂಡು ಹೋದರು. ಕಳೆದ ವರ್ಷ ಊರಿಗೆ ಮರಳಿದ ಮಗ ಬೇರೊಂದು ಹುಡುಗಿಯನ್ನು ಮದುವೆಯಾದ.
ತನ್ನ ಮಗ ಪ್ರೀತಿಸಿದ ಹುಡುಗಿಯನ್ನು ವಂಚಿಸಿದ್ದಕ್ಕಾಗಿ ಶಾಜಿ ಮಗನನ್ನು ಕುಟುಂಬದಿಂದ ಹೊರಹೋಗುವಂತೆ ಹೇಳಿದರು. ಮಗನಿಗಾಗಿ ಇದ್ದ ತನ್ನ ಕುಟುಂಬದ ಆಸ್ತಿಯನ್ನು ಅವನಿಗಾಗಿ ಕಾದು ಕುಳಿತಿದ್ದ ಹುಡುಗಿಯಹೆಸರಿಗೆ ಬರೆದರು. ಹೀಗೆ ಮಗ ಪ್ರೀತಿಸಿದ್ದ ಹುಡುಗಿ ಮನೆ ಮಗಳಾದಳು. ಈ ಮಗಳನ್ನು ಕರುನಾಗಪಳ್ಳಿ ನಿವಾಸಿ ಅಜಿತ್ ಎಂಬಾತನಿಗೆ ತಿರುನಕ್ಕರ ದೇವಾಲಯದಲ್ಲಿ ಮದುವೆ ಮಾಡಿಕೊಟ್ಟರು.
ಈ ಅಪ್ಪ- ಅಮ್ಮನ ಮನಸ್ಸು ಅರ್ಥ ಮಾಡಿಕೊಳ್ಳಲು ಆ ಮಗನಿಗೆ ಸಾಧ್ಯವಾಗಲಿಲ್ಲ. 8 ವರ್ಷದ ಇನ್ನೊಬ್ಬ ಮಗನೂ ಇವರಿಗಿದ್ದಾನೆ ಎಂದು ಸಂಧ್ಯಾ ಪಲ್ಲವಿ ಬರೆದಿದ್ದಾರೆ.
ಈ ಫೇಸ್‌ಬುಕ್ ಬರಹ ವೈರಲ್ ಆದ ನಂತರ ಫೇಸ್‌ಬುಕ್ ಪೋಸ್ಟ್ ಡಿಲೀಟ್ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.