ADVERTISEMENT

ಭಾರತದ 20 ಲಕ್ಷ ವಾಟ್ಸ್‌ಆ್ಯಪ್‌ ಖಾತೆಗಳಿಗೆ ನಿರ್ಬಂಧ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಜುಲೈ 2021, 9:51 IST
Last Updated 16 ಜುಲೈ 2021, 9:51 IST
   

ದೆಹಲಿ: ಮೇ ಮತ್ತು ಜೂನ್ ಅವಧಿಯಲ್ಲಿ ಭಾರತದ 20 ಲಕ್ಷಕ್ಕೂ ಅಧಿಕ ವಾಟ್ಸ್‌ಆ್ಯಪ್‌ ಖಾತೆಗಳನ್ನು ನಿರ್ಬಂಧಿಸಿರುವುದಾಗಿ ಸಂಸ್ಥೆ ತಿಳಿಸಿದೆ. ಈ ನಿರ್ಬಂಧಕ್ಕೆ ನಿಯಮಗಳ ಉಲ್ಲಂಘನೆಯ ಕಾರಣವನ್ನು ವಾಟ್ಸ್‌ಆ್ಯಪ್‌ ನೀಡಿದೆ.

ಈಗ ನಿರ್ಬಂಧಕ್ಕೆ ಒಳಗಾಗಿರುವ ಖಾತೆಗಳ ಪೈಕಿ, ಶೇಕಡಾ 95ರಷ್ಟು ಖಾತೆಗಳು ಭಾರತದಲ್ಲಿ ನಿಗದಿಪಡಿಸಲಾಗಿರುವ ‘ಫಾರ್ವರ್ಡ್‌’ ಮಿತಿಯನ್ನು ಉಲ್ಲಂಘಿಸಿದ್ದವು ಎಂದು ವಾಟ್ಸ್ಆ್ಯಪ್‌ ತಿಳಿಸಿದೆ. ಈ ಕುರಿತು ಅಂತರರಾಷ್ಟ್ರೀಯ ಸುದ್ದಿ ಮಾಧ್ಯಮ ‘ಬಿಬಿಸಿ’ ತನ್ನ ವೆಬ್‌ಸೈಟ್‌ನಲ್ಲಿ ವರದಿ ಮಾಡಿದೆ.

ಮೇ 15 ಮತ್ತು ಜೂನ್ 15ರ ನಡುವಿನ ಅವಧಿಯಲ್ಲಿ ಇಷ್ಟು ಪ್ರಮಾಣದ ಖಾತೆಗಳು ನಿರ್ಬಂಧಕ್ಕೆ ಒಳಗಾಗಿವೆ.

ADVERTISEMENT

ವಾಟ್ಸ್‌ಆ್ಯಪ್‌ಗೆ ಭಾರತ ಬಹುದೊಡ್ಡ ಮಾರುಕಟ್ಟೆಯಾಗಿದ್ದು, ಇಲ್ಲಿ ಸುಮಾರು 40 ಕೋಟಿಗೂ ಅಧಿಕ ಬಳಕೆದಾರರನ್ನು ಹೊಂದಿದೆ.

ಭಾರತದಲ್ಲಿನ ವಾಟ್ಸ್‌ಆ್ಯಪ್‌ ಖಾತೆಗಳಿಂದ ಹಾನಿಕಾರಕ ಅಥವಾ ಅನಗತ್ಯ ಸಂದೇಶಗಳು ಅಧಿಕ ಪ್ರಮಾಣದಲ್ಲಿ ರವಾನೆಯಾಗುವುದನ್ನು ತಡೆಯುವುದು ನಮ್ಮ ಮುಖ್ಯ ಉದ್ದೇಶ ಎಂದು ಫೇಸ್‌ಬುಕ್‌ ಒಡೆತನದ ಮೆಸೆಜಿಂಗ್‌ ಆ್ಯಪ್‌ ತಿಳಿಸಿದೆ.

ಸುಧಾರಿತ ‘ಮೆಷಿನ್‌ ಲರ್ನಿಂಗ್‌’ ತಂತ್ರಜ್ಞಾನದ ಮೂಲಕ ವಾಟ್ಸ್‌ಆ್ಯಪ್‌ ಪ್ರತಿ ತಿಂಗಳು ವಿಶ್ವದಾದ್ಯಂತ ಎಂಟು ದಶಲಕ್ಷ ಖಾತೆಗಳ ಮೇಲೆ ನಿರ್ಬಂಧ ಹೇರುತ್ತದೆ ಎಂಬ ವರದಿಗಳಿವೆ.

ಭಾರತದಲ್ಲಿ ಫೇಕ್‌ ನ್ಯೂಸ್‌ ಹರಡುವಿಕೆಗೆ ಸಂಬಂಧಿಸಿದಂತೆ ವಾಟ್ಸ್‌ಆ್ಯಪ್‌ ಚರ್ಚೆಯ ಕೇಂದ್ರ ಬಿಂದುವಿನಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.