ಬೆಂಗಳೂರು: 50 ಕೋಟಿ ಬಳಕೆದಾರರ ದತ್ತಾಂಶ ಸೋರಿಕೆಯಾಗಿದೆ ಎನ್ನುವ ಸುದ್ದಿ ಸುಳ್ಳು ಎಂದು ವ್ಯಾಟ್ಸ್‌ಆ್ಯಪ್ ಹೇಳಿದೆ.
ಜನಪ್ರಿಯ ಹ್ಯಾಕಿಂಗ್ ವೇದಿಕೆಯೊಂದು 50 ಕೋಟಿ ವಾಟ್ಸ್‌ಆ್ಯಪ್ ಬಳಕೆದಾರರ ದೂರವಾಣಿ ಸಂಖ್ಯೆ ಮಾರಾಟಕ್ಕಿಟ್ಟಿದೆ ಎಂದು ಸೈಬರ್‌ನ್ಯೂಸ್ ವರದಿ ಮಾಡಿತ್ತು. ಇದರ ಬೆನ್ನಲ್ಲೇ ವ್ಯಾಟ್ಸ್‌ಆ್ಯಪ್‌ನಿಂದ ಸ್ಪಷ್ಟನೆ ಬಂದಿದೆ.
ಸೈಬರ್‌ನ್ಯೂಸ್‌ನ ಈ ವರದಿಯನ್ನು ಸರಾಸಗಟವಾಗಿ ತಳ್ಳಿ ಹಾಕಿರುವ ವ್ಯಾಟ್ಸ್‌ಆ್ಯಪ್, ದತ್ತಾಂಶಗಳನ್ನು ವ್ಯಾಟ್ಸ್‌ಆ್ಯಪ್‌ನಿಂದಲೇ ತೆಗೆದುಕೊಳ್ಳಲಾಗಿದೆ ಎನ್ನುವುದನ್ನು ಸಾಬೀತುಪಡಿಸಲು ಸೈಬರ್‌ನ್ಯೂಸ್ ಬಳಿ ಯಾವುದೇ ಗಟ್ಟಿಯಾದ ಆಧಾರಗಳಿಲ್ಲ ಎಂದು ಹೇಳಿದೆ.
ಹೀಗೆ ಸೋರಿಕೆಯಾಗಿದೆ ಎನ್ನಲಾದ ದತ್ತಾಂಶವನ್ನು ದುರ್ಬಳಕೆ ಮಾಡಿಕೊಂಡಿರುವ ಬಗ್ಗೆಯೂ ಯಾವುದೇ ಮಾಹಿತಿ ಇಲ್ಲ. ಇಮೇಲ್ ಐಡಿ ಹಾಗೂ ಫೋನ್ ನಂಬರ್‌ಗಳ ಮೂಲಕ ಬಳಕೆದಾರರನ್ನು ಹ್ಯಾಕರ್‌ಗಳು ಬಲೆಗೆ ಕೆಡವುತ್ತಾರೆ ಎಂದು ವ್ಯಾಟ್ಸ್‌ಆ್ಯಪ್ ಹೇಳಿದೆ.
‘ಇ–ಮೇಲ್ ಅಥವಾ ಎಸ್‌ಎಂಎಸ್ ಮೂಲಕ ಯಾವುದೇ ಸಂದೇಶ ಬಂದರೆ ಎಚ್ಚರಿಕೆಯಿಂದ ಇರಬೇಕು ಎಂದು ನಾವು ಬಳಕೆದಾರರಿಗೆ ಕೋರುತ್ತೇವೆ‘ ಎಂದು ವ್ಯಾಟ್ಸ್‌ಆ್ಯಪ್ ಹೇಳಿದೆ.
84 ದೇಶಗಳ ಬಳಕೆದಾರರ ಮಾಹಿತಿ ಮಾರಾಟಕ್ಕೆ?
84 ದೇಶಗಳ ವಾಟ್ಸ್‌ಆ್ಯಪ್ ಬಳಕೆದಾರರ ಖಾಸಗಿ ಮಾಹಿತಿ ಮಾರಾಟಕ್ಕೆ ಲಭ್ಯವಿದೆ. ಅಮೆರಿಕದ 3.2 ಕೋಟಿ ಬಳಕೆದಾರರ ಮಾಹಿತಿ ಲಭ್ಯ. ಈಜಿಪ್ಟ್, ಇಟಲಿ, ಫ್ರಾನ್ಸ್, ಯುಕೆ, ರಷ್ಯಾ ಮತ್ತು ಭಾರತದ ಬಳಕೆದಾರರ ಮಾಹಿತಿಯೂ ಲಭ್ಯವಿದೆ ಎಂದು ಜನಪ್ರಿಯ ಹ್ಯಾಕಿಂಗ್ ವೇದಿಕೆಯೊಂದು ಜಾಹೀರಾತು ನೀಡಿತ್ತು.
ಅಮೆರಿಕದ ದಾಖಲೆ ಸೆಟ್ 7,000 ಡಾಲರ್‌ಗೆ ಲಭ್ಯವಿದೆ. ಯುಕೆ ದಾಖಲೆ ಮೌಲ್ಯ 2500 ಡಾಲರ್. ಜಾಹೀರಾತುದಾರರನ್ನು ಸಂಪರ್ಕಿಸಿದಾಗ ಬ್ರಿಟನ್‌ನ 1,097 ಸಂಖ್ಯೆಗಳನ್ನು ಪುರಾವೆಯಾಗಿ ಹಂಚಿಕೊಂಡಿದ್ದರು. ಸೈಬರ್‌ನ್ಯೂಸ್ ಮಾಧ್ಯಮ ಸಂಸ್ಥೆಯಿಂದ ಆ ನಂಬರ್‌ಗಳನ್ನು ಪರೀಕ್ಷಿಸಲಾಗಿದ್ದು ಎಲ್ಲವೂ ವಾಟ್ಸ್‌ಆ್ಯಪ್ ಸಂಖ್ಯೆಗಳೆಂದು ಖಚಿತವಾಗಿದೆ ಎಂಬುದಾಗಿ ಸೈಬರ್‌ನ್ಯೂಸ್ ವರದಿ ಹೇಳಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.