ಸ್ಯಾನ್ ಫ್ರ್ಯಾನ್ಸಿಸ್ಕೊ:ನಿತ್ಯ ಬದುಕಿನ ಬಹುಮುಖ್ಯ ಸಂಪರ್ಕ ಕೊಂಡಿಯಾಗಿ ವ್ಯಾಪಿಸಿಕೊಂಡಿರುವ ಫೇಸ್‌ಬುಕ್ ಸ್ವಾಮ್ಯದ ಮೆಸೇಜಿಂಗ್ ಅಪ್ಲಿಕೇಷನ್ 'ವಾಟ್ಸ್‌ಆ್ಯಪ್' 500 ಕೋಟಿ (5 ಬಿಲಿಯನ್) ಬಾರಿ ಡೌನ್‌ಲೋಡ್ ಆಗಿದೆ. ಗೂಗಲ್ ಆ್ಯಪ್ ಹೊರತಾದ ಅತಿ ಹೆಚ್ಚು ಡೌನ್‌ಲೋಡ್ ಕಂಡಿರುವಎರಡನೇ ಅಪ್ಲಿಕೇಷನ್ ಇದಾಗಿದೆ.
ಪ್ಲೇ ಸ್ಟೋರ್‌ನಿಂದ ಆಗಿರುವ ಆಂಡ್ರಾಯ್ಡ್ ಆವೃತ್ತಿಯ ಆ್ಯಪ್ ಡೌನ್‌ಲೋಡ್‌ಗಳ ಜತೆಗೆ ಸ್ಯಾಮ್‌ಸಂಗ್ ಮತ್ತು ಹುವೈ ಕಂಪನಿಗಳ ಸ್ಮಾರ್ಟ್‌ಫೋನ್‌ಗಳಲ್ಲಿ ಮುಂಚಿತವಾಗಿಯೇ ಇನ್‌ಸ್ಟಾಲ್ ಮಾಡಲಾದ ವಾಟ್ಸ್‌ಆ್ಯಪ್ ಒಟ್ಟು ಗೂಡಿಸಿದರೆ 500 ಕೋಟಿ ಡೌನ್‌ಲೋಡ್ ಆಗುತ್ತದೆ ಎಂದು ಆ್ಯಂಡ್ರಾಯ್ಡ್‌ಪೊಲೀಸ್ ವರದಿ ಮಾಡಿದೆ.
ಜಾಗತಿಮಟ್ಟದಲ್ಲಿ ಅತ್ಯಂತ ಜನಪ್ರಿಯ ಮೊಬೈಲ್ ಮೆಸೆಂಜರ್ ಆ್ಯಪ್ ಆಗಿರುವ ವಾಟ್ಸ್‌ಆ್ಯಪ್, 2019ರ ಲೆಕ್ಕಾಚಾರದ ಪ್ರಕಾರ ಜಗತ್ತಿನಾದ್ಯಂತ ತಿಂಗಳಿಗೆ ಅಂದಾಜು 160 ಕೋಟಿ ಬಳಕೆದಾರರನ್ನು ಹೊಂದಿದೆ. ಫೇಸ್‌ಬುಕ್ ಮೆಸೆಂಜರ್ 130 ಕೋಟಿ ಹಾಗೂ ವಿಚಾಟ್ ಆ್ಯಪ್ ಬಳಸುತ್ತಿರುವವರ ಸಂಖ್ಯೆ 110 ಕೋಟಿ.
ಫೇಸ್‌ಬುಕ್ ಮತ್ತು ಯುಟ್ಯೂಬ್ ನಂತರ ಮೂರನೇ ಅತ್ಯಂತ ಜನಪ್ರಿಯ ಸಾಮಾಜಿಕ ಸಂಪರ್ಕ ಮಾಧ್ಯಮವಾಗಿ ವಾಟ್ಸ್‌ಆ್ಯಪ್ ಬಳಕೆಯಾಗುತ್ತಿದೆ. ದಕ್ಷಿಣ ಕೊರಿಯಾದಲ್ಲಿ ವಾಟ್ಸ್‌ಆ್ಯಪ್ ಬಳಕೆ ವಿಸ್ತರಿಸಿಕೊಳ್ಳುತ್ತಿದ್ದು, 2019ರಲ್ಲಿ ಡೌನ್‌ಲೋಡ್ ಪ್ರಮಾಣಶೇ 56ರಷ್ಟು ಹೆಚ್ಚಳವಾಗಿದೆ.
ಕಳೆದ 12 ತಿಂಗಳಲ್ಲಿ ಗೂಗಲ್ ಆ್ಯಪ್‌ಗಳು 230 ಕೋಟಿ ಬಾರಿ ಡೌನ್‌ಲೋಡ್ ಆಗಿದ್ದರೆ, ಫೇಸ್‌ಬುಕ್‌ನ ಆ್ಯಪ್‌ಗಳು 300 ಕೋಟಿ ಡೌನ್‌ಲೋಡ್ ಕಂಡಿವೆ. ಫೇಸ್‌ಬುಕ್ ತೆಕ್ಕೆಯಲ್ಲಿ ವಾಟ್ಸ್‌ಆ್ಯಪ್, ಮೆಸೆಂಜರ್ ಹಾಗೂ ಇನ್‌ಸ್ಟಾಗ್ರಾಂ ಆ್ಯಪ್‌ಗಳಿದ್ದು, ಎಲ್ಲವೂ ಯುವಜನತೆಯನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ.
ಇನ್ನು ಬೈಟ್‌ಡ್ಯಾನ್ಸ್ ಸ್ವಾಮ್ಯದ ವಿಡಿಯೊ ಶೇರಿಂಗ್ ಆ್ಯಪ್ 'ಟಿಕ್‌ಟಾಕ್', 2019ರಲ್ಲಿ ಜಗತ್ತಿನಾದ್ಯಂತ ಅತಿಹೆಚ್ಚು ಡೌನ್‌ಲೋಡ್ ಆಗಿರುವ ಆ್ಯಪ್‌ಗಳ ಪೈಕಿಎರಡನೇ ಸ್ಥಾನದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.