ನವದೆಹಲಿ: ಸಂವಹನಕ್ಕಾಗಿ ಅತಿ ಹೆಚ್ಚು ಜನರಿಂದ ಬಳಕೆಯಾಗುತ್ತಿರುವ ಸಾಮಾಜಿಕ ಮಾಧ್ಯಮ ಎಂದರೆ ಅದು ಮೆಟಾ ಒಡೆತನದ ವಾಟ್ಸ್ಆ್ಯಪ್. ಬಳಕೆದಾರರ ಅನುಕೂಲಕ್ಕೆ ಆಗಾಗ ಹೊಸ ಫೀಚರ್‌ಗಳನ್ನು ಬಿಡುಗಡೆ ಮಾಡುವ ಮೆಟಾ, ಇದೀಗ ವಾಟ್ಸ್ಆ್ಯಪ್‌ನಲ್ಲಿ ಹೈ ರೆಸಲ್ಯೂಷನ್ (HD photo) ಫೋಟೊಗಳನ್ನು ಹಂಚಿಕೊಳ್ಳುವ ಆಯ್ಕೆ ನೀಡಿದೆ.
ಈ ಕುರಿತು ಮಾರ್ಕ್ ಜುಕರ್‌ಬರ್ಗ್ ಅವರು ಫೇಸ್ಬುಕ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಆ್ಯಂಡ್ರಾಯ್ಡ್ ಮತ್ತು iOSಗಳಲ್ಲಿ ಇದನ್ನು ಬಳಸಬಹುದಾಗಿದೆ. ಬಹುಮುಖ್ಯವಾಗಿ ವಾಟ್ಸ್ಆ್ಯಪ್ ವೆಬ್ ಮತ್ತು ಡೆಸ್ಕ್‌ಟಾಪ್‌ಗಳಿಗೂ ಈ ಫೀಚರ್ ಅನ್ವಯವಾಗಲಿದೆ. HD ಫೋಟೊಗಳನ್ನು ಕಳುಹಿಸಬೇಕಾದರೆ HD ಎಂಬ ಐಕಾನ್ ಕಂಡುಬರಲಿದೆ. ಅಲ್ಲದೆ ಪ್ರತಿ ಬಾರಿ ಫೋಟೊಗಳನ್ನು ಹಂಚಿಕೊಳ್ಳುವಾಗ ‘HD ಅಥವಾ ಸ್ಟ್ಯಾಂಡರ್ಡ್‘ ಎನ್ನುವ ಆಯ್ಕೆಯನ್ನು ತೋರಿಸಲಿದೆ.
ಕಳೆದ ಜೂನ್‌ನಲ್ಲಿ ಈ ಫೀಚರ್‌ನ ಪರೀಕ್ಷೆ ನಡೆಸಲಾಗಿತ್ತು. ಫೋಟೊಗಳ ಗುಣಮಟ್ಟವೂ ಉತ್ತಮವಾಗಿರಲಿದೆ. ಆದರೆ ಈ ಫೋಟೊಗಳನ್ನು ಕಳುಹಿಸಲು ಹೆಚ್ಚು ಇಂಟರ್‌ನೆಟ್ ಹಾಗೂ ಫೋನ್‌ಗಳಲ್ಲಿ ಹೆಚ್ಚಿನ ಸ್ಥಳಾವಕಾಶವೂ ಅಗತ್ಯವಿರುತ್ತದೆ.
ವಾಟ್ಸ್ಆ್ಯಪ್ ಅಪ್ಲಿಕೇಶನ್ ತಾನಾಗಿಯೇ ಪೋಟೊಗಳ ರೆಸಲ್ಯೂಷನ್‌ಗಳನ್ನು ಸ್ವಲ್ಪ ಕಡಿಮೆ ಮಾಡಿಕೊಂಡು ಸಾಮಾನ್ಯ ಸ್ಥಿತಿಗೆ ತಂದುಕೊಳ್ಳುತ್ತವೆ. ಆದರೆ ಬಳಕೆದಾರರಿಗೆ ಫೋಟೊ ಗುಣಮಟ್ಟ ಹಾಳಾಗದಂತೆ ಅದು ನೋಡಿಕೊಳ್ಳುತ್ತದೆ ಎಂದು ವಾಟ್ಸ್‌ಆ್ಯಪ್ ಫೀಚರ್ ಟ್ರಾಕರ್ ಹೇಳಿದೆ. ಆದರೆ ಎಷ್ಟು ಪ್ರಮಾಣದಲ್ಲಿ ರೆಸಲ್ಯೂಷನ್ ಕಡಿಮೆಯಾಗಲಿದೆ ಎನ್ನುವ ಬಗ್ಗೆ ಸ್ಪಷ್ಟನೆ ನೀಡಿಲ್ಲ.
ಶೀಘ್ರದಲ್ಲೇ ಹೈ ರೆಸಲ್ಯೂಷನ್‌ಗಳಿರುವ ವಿಡಿಯೊಗಳನ್ನೂ ಹಂಚಿಕೊಳ್ಳುವ ಫೀಚರ್ ಬಿಡುಗಡೆ ಮಾಡುವುದಾಗಿ ಮೆಟಾ ಹೇಳಿದೆ.
ಕೆಲವು ದಿನಗಳ ಹಿಂದೆ ವಾಟ್ಸ್ಆ್ಯಪ್ ವಿಡಿಯೊ ಕಾಲ್ ವೇಳೆ ಸ್ಕ್ರೀನ್ ಶೇರಿಂಗ್ ಆಯ್ಕೆಯನ್ನು ಪರಿಚಯಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.