ADVERTISEMENT

Whatsapp Status: ಖಾಸಗಿತನ ಕುರಿತು ಸ್ಟೇಟಸ್ ಪೋಸ್ಟ್ ಮಾಡಿದ ವಾಟ್ಸ್ ಆ್ಯಪ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಜನವರಿ 2021, 14:20 IST
Last Updated 17 ಜನವರಿ 2021, 14:20 IST
ಸ್ಟೇಟಸ್ ಅಪ್‌ಡೇಟ್‌ನಲ್ಲಿ ಸರಣಿ ಪೋಸ್ಟ್
ಸ್ಟೇಟಸ್ ಅಪ್‌ಡೇಟ್‌ನಲ್ಲಿ ಸರಣಿ ಪೋಸ್ಟ್   

ಬೆಂಗಳೂರು: ಫೇಸ್‌ಬುಕ್ ಜತೆ ಮಾಹಿತಿ ಹಂಚಲಾಗುತ್ತದೆ ಎನ್ನುವ ಉದ್ದೇಶದೊಂದಿಗೆ ಬಿಡುಗಡೆಗೆ ಉದ್ದೇಶಿಸಲಾಗಿದ್ದ ಹೊಸ ಖಾಸಗಿತನದ ಅಪ್‌ಡೇಟ್ ಅನ್ನು ವಾಟ್ಸ್ ಆ್ಯಪ್ ಮುಂದೂಡಿದೆ. ಅಲ್ಲದೆ, ವಿವಿಧ ಮಾಧ್ಯಮಗಳ ಮೂಲಕ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಫೇಸ್‌ಬುಕ್ ಜತೆ ಹಂಚುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ ಅಷ್ಟು ಸಾಲದೆಂಬಂತೆ, ಭಾನುವಾರ ಸ್ಟೇಟಸ್ ಅಪ್‌ಡೇಟ್ ಮೂಲಕ ನಾವು ನಿಮ್ಮ ಖಾಸಗಿತನಕ್ಕೆ ಧಕ್ಕೆ ತರುವುದಿಲ್ಲ ಎಂದು ಹೇಳಿದೆ.

ಸ್ಟೇಟಸ್ ಅಪ್‌ಡೇಟ್

ವಾಟ್ಸ್ ಆ್ಯಪ್ ಭಾನುವಾರ ಎಲ್ಲ ಬಳಕೆದಾರರ ಸ್ಟೇಟಸ್ ಅಪ್‌ಡೇಟ್‌ನಲ್ಲಿ ಸರಣಿ ಪೋಸ್ಟ್ ಮೂಲಕ ಖಾಸಗಿತನವನ್ನು ರಕ್ಷಿಸುವುದಾಗಿ ಪೋಸ್ಟ್ ಮಾಡಿದೆ. ನಾಲ್ಕು ಸ್ಟೇಟಸ್ ಪೋಸ್ಟ್ ಮಾಡಿರುವ ವಾಟ್ಸ್ ಆ್ಯಪ್, ನಾವು ನಿಮ್ಮ ಖಾಸಗಿತನ ರಕ್ಷಿಸಲು ಬದ್ಧರಾಗಿದ್ದೇವೆ, ಬಳಕೆದಾರರ ವೈಯಕ್ತಿಕ ಮಾಹಿತಿ, ಚಾಟ್ ಅನ್ನಾಗಲೀ ಯಾರೂ ಓದಲು ಸಾಧ್ಯವಿಲ್ಲ. ಅವೆಲ್ಲವೂ ಎಂಡ್ ಟು ಎಂಡ್ ಎನ್‌ಕ್ರಿಪ್ಷನ್ ಆಗಿದೆ ಎಂದಿದೆ. ಅಲ್ಲದೆ, ನೀವು ಷೇರ್ ಮಾಡಿಕೊಂಡಿರುವ ಲೊಕೇಶನ್ ಅನ್ನು ವಾಟ್ಸ್ ಆ್ಯಪ್ ನೋಡಲು ಸಾಧ್ಯವಿಲ್ಲ ಎಂದಿದೆ. ಜತೆಗೆ ನಿಮ್ಮ ಕಾಂಟಾಕ್ಟ್ ಅನ್ನು ಫೇಸ್‌ಬುಕ್ ಜತೆ ಹಂಚಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ADVERTISEMENT

ಟೀಕೆಗೆ ಗುರಿಯಾದ ವಾಟ್ಸ್ ಆ್ಯಪ್

ಪ್ರಸ್ತುತ ಫೇಸ್‌ಬುಕ್ ಒಡೆತನದಲ್ಲಿರುವ ವಾಟ್ಸ್ ಆ್ಯಪ್, ಹೊಸ ಪ್ರೈವೆಸಿ ಅಪ್‌ಡೇಟ್ ಅನ್ನು ಎಲ್ಲ ಬಳಕೆದಾರರು ಒಪ್ಪಲೇಬೇಕು ಎಂದು ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು. ಅದಾದ ಬಳಿಕ, ವೈಯಕ್ತಿಕ ಮತ್ತು ಗ್ರೂಪ್ ಚಾಟ್ ಹೊರತುಪಡಿಸಿ. ಬ್ಯುಸಿನೆಸ್ ಸಂವಹವನ್ನು ಮಾತ್ರ ಮಾರುಕಟ್ಟೆ ಉದ್ದೇಶದಿಂದ ಫೇಸ್‌ಬುಕ್ ಜತೆ ಹಂಚಿಕೊಳ್ಳುವುದಾಗಿ ಸ್ಪಷ್ಟಪಡಿಸಿತ್ತು. ಅದಾದ ಬಳಿಕ ವಾಟ್ಸ್ ಆ್ಯಪ್ ಸ್ಟೇಟಸ್ ಅಪ್‌ಡೇಟ್ ಮೂಲಕವೂ ಜನರಿಗೆ ಉಂಟಾಗಿದ್ದ ಗೊಂದಲ ನಿವಾರಿಸಲು ಮುಂದಾಗಿದೆ.

ಹೊಸ ಅಪ್‌ಡೇಟ್ ಮುಂದೂಡಿಕೆ

ನೂತನ ಪ್ರೈವೆಸಿ ಅಪ್‌ಡೇಟ್ ವಿಚಾರ ವಿವಾದಕ್ಕೆ ಕಾರಣವಾಗುತ್ತಲೇ ವಾಟ್ಸ್ ಆ್ಯಪ್ ಹೊಸ ಅಪ್‌ಡೇಟ್ ಅನ್ನು ಮೇ ತಿಂಗಳಿಗೆ ಮುಂದೂಡಿದೆ. ಅಲ್ಲದೆ, ಫೆಬ್ರುವರಿ 8ರಂದು ಯಾರ ವಾಟ್ಸ್ ಆ್ಯಪ್ ಖಾತೆಯೂ ನಿಷ್ಕ್ರಿಯವಾಗುವುದಿಲ್ಲ ಎಂದು ತಿಳಿಸಿದೆ. ಈ ಮಧ್ಯೆ ಹೆಚ್ಚಿನ ಜನರು ವಾಟ್ಸ್ ಆ್ಯಪ್ ತೊರೆದು, ಪ್ರತಿಸ್ಪರ್ಧಿ ಆ್ಯಪ್‌ಗಳಾದ ಟೆಲಿಗ್ರಾಂ ಮತ್ತು ಸಿಗ್ನಲ್ ಡೌನ್‌ಲೋಡ್ ಮಾಡಿಕೊಂಡು ಬಳಸಲಾರಂಭಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.