ನವದೆಹಲಿ: ‘ವಾಟ್ಸ್ ಆ್ಯಪ್ ತನ್ನ ಭಾರತೀಯ ಬಳಕೆದಾರರನ್ನು, ಯೂರೋಪಿಯನ್ ದೇಶಗಳ ಬಳಕೆದಾರರಿಗಿಂತಲೂ ಭಿನ್ನವಾಗಿ ಕಾಣುತ್ತಿದೆ. ಇದು, ಕಳವಳಕ್ಕೆ ಕಾರಣವಾಗಿದೆ. ಈ ಅಂಶವನ್ನು ಗಮನಿಸಲಾಗುತ್ತಿದೆ’ ಎಂದು ಕೇಂದ್ರ ಸರ್ಕಾರ ಸೋಮವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.
ವಾಟ್ಸ್ ಆ್ಯಪ್ ಸೇವಾ ವೇದಿಕೆಯು ಇತ್ತೀಚೆಗೆ ಭಾರತೀಯ ಬಳಕೆದಾರರನ್ನು ತನ್ನ ಖಾಸಗಿ ಗೌಪ್ಯತಾ ನೀತಿಗೆ ಸಂಬಂಧಿಸಿದಂತೆ ಪರಿಶೀಲನೆಗೆ ಒಳಪಡಿಸಿದೆ. ಇದು, ಆತಂಕದ ವಿಷಯವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಫೇಸ್‌ಬುಕ್ ಮಾಲೀಕತ್ವದ ವಾಟ್ಸ್ ಅ್ಯಪ್‌ನ ನೂತನ ಗೌಪ್ಯತಾ ನೀತಿ ಕುರಿತು ವಕೀಲರೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆಯ ವೇಳೆ ಕೇಂದ್ರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ ಅವರು, ನ್ಯಾಯಮೂರ್ತಿ ಸಂಜೀವ್ ಸಚ್‌ದೇವ ಅವರ ಗಮನಕ್ಕೆ ಈ ಅಂಶವನ್ನು ತಂದರು.
ಗೌಪ್ಯತಾ ನೀತಿ ಕುರಿತಂತೆ ವಾಟ್ಸ್ ಆ್ಯಪ್ ತನ್ನ ಭಾರತೀಯ ಗ್ರಾಹಕರಿಗೆ ಆಯ್ಕೆ ಅವಕಾಶವನ್ನು ನೀಡಿಲ್ಲ. ಮೇಲ್ನೋಟಕ್ಕೆ ತನ್ನ ತೀರ್ಮಾನದಂತೆ ನಡೆದುಕೊಳ್ಳುತ್ತಿದೆ. ಕೇಂದ್ರ ಇದನ್ನು ಗಮನಿಸಿದೆ. ವಿವರಣೆ ಕೋರಿ ವಾಟ್ಸ್ ಆ್ಯಪ್ ವೇದಿಕೆಗೂ ಪತ್ರವನ್ನೂ ಬರೆದಿದೆ ಎಂದೂ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.