ಬೆಂಗಳೂರು: ವಾಟ್ಸ್ ಆ್ಯಪ್ ಹೊಸ ಅಪ್‌ಡೇಟ್ ಬಳಕೆದಾರರ ಖಾಸಗಿತನ ಮತ್ತು ವೈಯಕ್ತಿಕ ಸಂಗತಿಗಳಿಗೆ ಧಕ್ಕೆ ತರಲಿದೆ ಎಂಬ ಸಂಗತಿ ವಿವಾದಕ್ಕೆ ಕಾರಣವಾಗಿರುವ ಬೆನ್ನಲ್ಲೇ ಮತ್ತೊಂದು ಗಂಭೀರ ಪ್ರಮಾದ ಬೆಳಕಿಗೆ ಬಂದಿದೆ. ವಾಟ್ಸ್ ಆ್ಯಪ್ ವೆಬ್ ಆವೃತ್ತಿಯ ಮೆಸೇಜ್ ಮತ್ತು ಬಳಕೆದಾರರ ಕಾಂಟಾಕ್ಟ್ ವಿವರಗಳು ಸೋರಿಕೆಯಾಗಿದ್ದು, ಸುಲಭದಲ್ಲಿ ಆನ್‌ಲೈನ್ ಸರ್ಚ್ ಮೂಲಕ ದೊರೆಯುತ್ತಿದೆ!
ಹೊಸ ಅಪ್‌ಡೇಟ್ ಬಗ್ಗೆ ವಿವಾದ ಸೃಷ್ಟಿಯಾಗುತ್ತಲೇ, ವಾಟ್ಸ್ ಆ್ಯಪ್ ವಿವಿಧ ಮಾಧ್ಯಮಗಳ ಮೂಲಕ ಸ್ಪಷ್ಟನೆ ನೀಡುತ್ತಾ ಬರುತ್ತಿದೆ. ಅಲ್ಲದೆ, ಹೊಸ ಭದ್ರತಾ ಅಪ್‌ಡೇಟ್ ಅನ್ನು ಮುಂದೂಡಿದೆ. ಹೀಗಿದ್ದರೂ, ಮತ್ತೆ ವಿವಾದಕ್ಕೆ ಸಿಲುಕಿರುವ ವಾಟ್ಸ್ ಆ್ಯಪ್, ಚಾಟ್ ಸೋರಿಕೆಯ ಗಂಭೀರ ಆರೋಪಕ್ಕೆ ತುತ್ತಾಗಿದೆ.
ಆನ್‌ಲೈನ್ ಸರ್ಚ್‌ನಲ್ಲಿ ವಾಟ್ಸಪ್ ಚಾಟ್!
ವಾಟ್ಸ್ ಆ್ಯಪ್ ವೆಬ್ ಆವೃತ್ತಿ ಬಳಸುತ್ತಿರುವವರ ಖಾಸಗಿ ಚಾಟ್ ಮತ್ತು ಕಾಂಟಾಕ್ಟ್ ವಿವರ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ ಎಂದು ಸೈಬರ್ ಸೆಕ್ಯುರಿಟಿ ಪರಿಣತ ರಾಜ್‌ಶೇಖರ್ ರಾಜಾರಿಯಾ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಗೂಗಲ‌್‌ನಲ್ಲಿ ವಾಟ್ಸಪ್ ಖಾಸಗಿ ಚಾಟ್ ಸೋರಿಕೆಯಾಗಿದ್ದು, ಸುಲಭದಲ್ಲಿ ಸರ್ಚ್ ಮೂಲಕ ವಾಟ್ಸ್ ಆ್ಯಪ್ ವೆಬ್ ಬಳಕೆದಾರರ ಮಾಹಿತಿ, ಚಾಟ್ ಮತ್ತು ಕಾಂಟಾಕ್ಟ್ ಸೋರಿಕೆಯಾಗಿ ಲಭ್ಯವಾಗಿದೆ. ಅಲ್ಲದೆ, ಸೈಬರ್ ವಂಚಕರು ಈ ವಿವರ ಪಡೆದುಕೊಂಡು ದುಷ್ಕೃತ್ಯ ಎಸಗುವ ಸಾಧ್ಯತೆಯಿದೆ. ವಾಟ್ಸ್ ಆ್ಯಪ್ ವೆಬ್ ಆವೃತ್ತಿಯಲ್ಲಿ ನೋಇಂಡೆಕ್ಸ್ ಸೇರಿಸದಿದ್ದರೆ ಮತ್ತಷ್ಟು ಸಮಸ್ಯೆಯಾಗುವ ಸಾಧ್ಯತೆಯಿದೆ.
ವಾಟ್ಸ್ ಆ್ಯಪ್ ವೆಬ್ ಆವೃತ್ತಿ ಚಾಟ್ ಸೋರಿಕೆ ಕುರಿತು ‘ಡೆಕ್ಕನ್ ಹೆರಾಲ್ಡ್’ ಇ ಮೇಲ್ ಮೂಲಕ ಸಂಪರ್ಕಿಸಲು ಯತ್ನಿಸಿತಾದರೂ, ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.