ರೈತರ ಟ್ರ್ಯಾಕ್ಟರ್ ಪರೇಡ್‌ನ ವೇಳೆ ಹಿಂಸಾಚಾರ ನಡೆಸಿದ್ದು ಯಾರು ಎಂಬ ಪ್ರಶ್ನೆ ಈಗ ಉದ್ಭವವಾಗಿದೆ. ಸಾವಿರಾರು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಈ ಪ್ರಶ್ನೆಯನ್ನು ಕೇಳಿದ್ದಾರೆ.
ರೈತರೇ ಹಿಂಸಾಚಾರ ನಡೆಸಿದ್ದಾರೆ. ಪೊಲೀಸರು ನೀಡಿದ್ದ ಅನುಮತಿಯನ್ನು ಉಲ್ಲಂಘಿಸಿದ್ದಾರೆ. ಕೆಂಪುಕೋಟೆಗೆ ಮುತ್ತಿಗೆ ಹಾಕಿದ್ದಾರೆ. ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜಕೀಯ ಪಕ್ಷಗಳೂ ಟ್ರ್ಯಾಕ್ಟರ್ ಪರೇಡ್ ಶಾಂತಿಯುತವಾಗಿ ನಡೆಯಬೇಕಿತ್ತು ಎಂದು ಹೇಳಿವೆ.
ರೈತರು ಎರಡು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದರೂ, ಒಂದೂ ಹಿಂಸಾಚಾರ ನಡೆದಿರಲಿಲ್ಲ. ಇಂದು ಹೊರಗಿನವರು ರೈತರ ಮಧ್ಯೆ ಸೇರಿಕೊಂಡು ಹಿಂಸಾಚಾರ ನಡೆಸಿದ್ದಾರೆ ಎಂದು ಹಲವರು ಆರೋಪಿಸಿದ್ದಾರೆ. ‘ರೈತರ ಪ್ರತಿಭಟನೆಯನ್ನು ಹತ್ತಿಕ್ಕಲು ಬಿಜೆಪಿಯೇ ಹೀಗೆ ಮಾಡಿಸಿದೆ’ ಎಂದು ಬಿವಾಸ್ ಪ್ರಸಾದ್ ಸಿಂಹಾ ಎಂಬುವವರು ಟ್ವೀಟ್ ಮಾಡಿದ್ದಾರೆ. ಇವರ ಟ್ವೀಟ್ 2,000ಕ್ಕೂ ಹೆಚ್ಚು ಬಾರಿ ರಿಟ್ವೀಟ್ ಆಗಿದೆ.
ರೈತರ ಕೆಂಪುಕೋಟೆಯ ಮುತ್ತಿಗೆಯನ್ನು ಹಲವರು, ಅಮೆರಿಕದ ಕ್ಯಾಪಿಟಲ್ ಹಿಲ್‌ನಲ್ಲಿನ ಹಿಂಸಾಚಾರಕ್ಕೆ ಹೋಲಿಸಿದ್ದಾರೆ. ‘ಇದು ಭಾರತದ ಕ್ಯಾಪಿಟಲ್ ಹಿಲ್ ಘರ್ಷಣೆ’ ಎಂದು ಸುದಾನ್ ಎಂಬುವವರು ಟ್ವೀಟ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಕ್ಯಾಪಿಟಲ್ ಹಿಲ್‌ಗೆ ಪ್ರತಿಭಟನಕಾರರು ಮುತ್ತಿಗೆ ಹಾಕಿದಂತೆಯೇ, ರೈತರು ಕೆಂಪುಕೋಟೆಗೆ ಮುತ್ತಿಗೆ ಹಾಕಿದ್ದಾರೆ. ಅಲ್ಲಿ ಬೇರೆ ಧ್ವಜ ಹಾರಿಸಿದಂತೆ, ಇಲ್ಲಿಯೂ ಬೇರೆ ಧ್ವಜ ಹಾರಿಸಿದ್ದಾರೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಇವರು ರೈತರಲ್ಲ, ಉಗ್ರರು. ಕಸಬ್‌ಗೂ ಈ ಗೂಂಡಾಗಳಿಗೂ ವ್ಯತ್ಯಾಸವಿಲ್ಲ’
ಎಂದು ಅಂಕಿತಾ ಸಿಂಹ ಎಂಬುವವರು ಟ್ವೀಟ್ ಮಾಡಿದ್ದಾರೆ. ಅಲ್ಲದೆ. ಈ ಟ್ವೀಟ್‌ಗಳ ಜತೆ ‘#ಕಿಸಾನ್ ನಹೀ ಗೂಂಡೇ’ ಎಂಬ ಹ್ಯಾಶ್‌ಟ್ಯಾಗ್ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದೆ.
ಇವುಗಳನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.