ಪುಣೆ: ನೂರು ಅಡಿ ಎತ್ತರದ ಕಟ್ಟಡದ ಮೇಲೆ ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ಕೇವಲ ಯುವಕನೊಬ್ಬನ ಕೈಹಿಡಿದು ನೇತಾಡಿದ ಯುವತಿಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಇದೇನು ಹಾಲಿವುಡ್ ಸಿನಿಮಾದ ದೃಶ್ಯವಲ್ಲ. ಇವೆಲ್ಲವೂ ಕೇವಲ ಒಂದು ರೀಲ್‌ಗಾಗಿ ಯುವಕ ಹಾಗೂ ಯುವತಿ ನಡೆಸಿದ ಒಂದು ಅಪಾಯಕರ ಸಾಹಸ.
ಪುಣೆಯ ಸ್ವಾಮಿ ನಾರಾಯಣ ದೇವಾಲಯದ ಬಳಿಯ ಬಹುಮಹಡಿ ಕಟ್ಟಡದ ಮೇಲೇರಿದ ಈ ಜೋಡಿ ಈ ‘ಸಾಹಸ’ ಮಾಡಿದೆ. ಯುವಕನ ಕೈಹಿಡಿದು ಕಟ್ಟಡದ ಮೇಲ್ಛಾವಣಿಯಿಂದ ಇಳಿಯುವ ಯುವತಿ, ನಂತರ ಅದೇ ಬಲದಲ್ಲಿ ನೇತಾಡುತ್ತಾಳೆ. ಇದನ್ನು ಯುವಕರು ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಿರುವುದು ಈ ವಿಡಿಯೊದಲ್ಲಿ ಕಾಣಬಹುದು.
ಯುವಕ ಹಾಗೂ ಯುವತಿಯ ಗುರುತು ಪತ್ತೆಯಾಗಿಲ್ಲ. ಈ ದೃಶ್ಯ ಸೆರೆ ಹಿಡಿಯುವ ಸಲುವಾಗಿಯೇ ಕಟ್ಟಡದ ಹಲವೆಡೆ ಕ್ಯಾಮೆರಾಗಳನ್ನು ಇಡಲಾಗಿತ್ತು. ಒಬ್ಬರು ಮೇಲಿನಿಂದ ದೃಶ್ಯ ಸೆರೆಹಿಡಿಯುತ್ತಿದ್ದರೆ, ಮತ್ತೊಬ್ಬ ಕೆಳಗಿನಿಂದ ಮೊಬೈಲ್‌ನಲ್ಲಿ ಇದನ್ನು ದಾಖಲಿಸುತ್ತಿರುವುದನ್ನು ಈ ವಿಡಿಯೊದಲ್ಲಿ ಕಾಣಬಹುದು. ಆದರೆ, ಯಾವುದೇ ಸುರಕ್ಷತಾ ಸಾಧನಗಳನ್ನು ಬಳಸದೆ ಈ ಸಾಹಸ ದೃಶ್ಯವನ್ನು ಸೆರೆ ಹಿಡಿಯಲಾಗಿದೆ. ಇವರ ಈ ‘ಸಾಹಸ‘ಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಈ ಗುಂಪಿನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನೆಟ್ಟಿಗರು ಆಗ್ರಹಿಸಿದ್ದಾರೆ. ಆದರೆ ಈ ಕುರಿತು ಯಾವುದೇ ದೂರು ದಾಖಲಾದ ಕುರಿತು ವರದಿಯಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.