‘ಡುಯು ಹ್ಯಾವ್ ಇ–ಮೇಲ್ ಐಡಿ..?’ ಸುಮಾರು ಹದಿನೈದು ವರ್ಷಗಳ ಹಿಂದೆ ಅಲ್ಲಿಲ್ಲಿ ಕೇಳಿ ಬರುತ್ತಿದ್ದ ಇಂಥದ್ದೇ ಪ್ರಶ್ನೆಗೆ ‘ನೋ’ ಎನ್ನಲು ಇರುಸು ಮುರುಸು. ಅದಕ್ಕಾಗಿಯೇ ಸೈಬರ್ ಸೆಂಟರ್‌ಗಳಿಗೆ ಲಗ್ಗೆ ಇಟ್ಟು ‘ಯಾಹೂ, ರೆಡಿಫ್,..’ ಇಮೇಲ್ ಐಡಿಗಳನ್ನು ರೂಪಿಸಿಕೊಂಡರೆ ಬಯೋಡಾಟಾಗೆ ಮೆರುಗು ಸಿಕ್ಕಂತೆ. ಬಹುದೂರದ ಮಾತುಕತೆ, ಚರ್ಚೆಗಳಿಗೂ ವೇದಿಕೆಯಾದ ಇಮೇಲ್ ಜಗತ್ತಿಗೆ ಗೂಗಲ್ ’ಜಿಮೇಲ್’ ಕೂಡ ಇಣುಕಿತು. ಸರಳ ವಿವರ ನೀಡಿ ಸುಲಭವಾಗಿ ಐಡಿ ರೂಪಿಸಿಕೊಳ್ಳುವ ಪ್ರಕ್ರಿಯೆ ಕಾರಣದಿಂದಲೇ ಜಿಮೇಲ್ ಬಹುವಾಗಿ ಬಹುಬೇಗನೇ ಬಳಕೆದಾರರನ್ನು ಸೃಷ್ಟಿಕೊಂಡಿತು. ಅಂದು ಜತೆಯಾದ ಜಿಮೇಲ್‌ಗೆ ಈಗ 15 ವಸಂತಗಳ ಸಂಭ್ರಮ.
2004ರ ಏಪ್ರಿಲ್ 1ರಂದು ಪೌಲ್ ಬಕೈಟ್ ಅಭಿವೃದ್ಧಿ ಪಡಿಸಿದ್ದ ಜಿಮೇಲ್ ಸೇವೆ ಕಾರ್ಯಾರಂಭಿಸಿತ್ತು. ಆರಂಭದಲ್ಲಿ ಪ್ರತಿ ಬಳಕೆದಾರನಿಗೆ 1 ಗಿಗಾಬೈಟ್(ಜಿಬಿ) ಸಂಗ್ರಹ ಸಾಮರ್ಥ್ಯ ನೀಡಲಾಗಿತ್ತು. ಇವತ್ತಿಗೆ ಜಿಮೇಲ್‌ನಲ್ಲಿ 15 ಜಿಬಿ ಗಾತ್ರದಷ್ಟು ಮಾಹಿತಿಯನ್ನು ಉಚಿತವಾಗಿ ಸಂಗ್ರಹಿಸಿಕೊಳ್ಳಲು ಅವಕಾಶ ನೀಡಿದೆ. ಫೋಟೊ, ಟೆಕ್ಸ್ಟ್ ಫೈಲ್, ಪಿಡಿಎಫ್, ವಿಡಿಯೊ..ಯಾವುದೇ ರೂಪದ ಮಾಹಿತಿ ಸಂಗ್ರಹವನ್ನು ಜಿಮೇಲ್‌ನೊಂದಿಗೆ ಲಗತ್ತಿಸಿ ಕಳುಹಿಸಬಹುದಾಗಿದೆ. ಪ್ರಸ್ತುತ ಇದರ ಮಿತಿ 25 ಮೆಗಾಬೈಟ್(ಎಂಬಿ). ಜಗತ್ತಿನಾದ್ಯಂತ ಮಾಸಿಕ ಜಿಮೇಲ್ ಬಳಕೆದಾರರ ಪ್ರಮಾಣ ಸುಮಾರು 150 ಕೋಟಿ.
ಇದನ್ನೂ ಓದಿ:ಗೂಗಲ್ ಗುರುವಿಗೆ 20 ವರ್ಷ!
ಯಾಹೂ ಮೇಲ್ ಬಳಕೆದಾರರ ಸಂಖ್ಯೆ ಮಾಸಿಕ 22.8 ಕೋಟಿ. ಎಒಎಲ್ ಮೇಲ್ ಹಾಗೂ ಹಾಟ್‌ಮೇಲ್‌ನ ಬಳಕೆದಾರರು ಈಗಾಗಲೇ ಜಿಮೇಲ್ ಬಳಕೆಗೆ ಒಗ್ಗಿಕೊಂಡಿದ್ದಾರೆ. ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಹಾಗೂ ಬಹುತೇಕ ವೆಬ್‌ಸೈಟ್‌ಗಳನ್ನು ಪ್ರವೇಶಿಸಲು ಅಥವಾ ಬುಕ್ಕಿಂಗ್ ಮಾಡಲು ಜಿಮೇಲ್ ಐಡಿ ಅನಿವಾರ್ಯ ಎಂಬ ಸ್ಥಿತಿ ನಿರ್ಮಾಣವಾಗಿರುವುದೂ ಸಹ ಬಳಕೆದಾರರು ಹೆಚ್ಚಲು ಕಾರಣಗಳಲ್ಲೊಂದು. ದೊಡ್ಡ ಗಾತ್ರದ ವಿಡಿಯೊ, ಫೋಟೊಗಳನ್ನು ಗೂಗಲ್ ಡ್ರೈವ್‌ನಲ್ಲಿ ಸಂಗ್ರಹಿಸಿ ಇಮೇಲ್ ಮೂಲಕ ಸುಲಭವಾಗಿ ಹಂಚಿಕೊಳ್ಳುವ ವ್ಯವಸ್ಥೆ ನಿತ್ಯದ ಬಳಕೆಯಲ್ಲಿ ಉಪಯುಕ್ತವಾಗಿದೆ.
ನವಯುಗದ ಮಹಾಗುರುವಿನ ಸ್ಥಾನದಲ್ಲಿರುವ ಗೂಗಲ್ ಕಳೆದ ವರ್ಷವೇ 20 ವರ್ಷ ಪೂರೈಸಿಕೊಂಡಿದೆ. ಜಾಲತಾಣಗಳ ಸೃಷ್ಟಿ ಹಾಗೂ ಅಂತರ್ಜಾಲ ಬಳಕೆಗೆ ಮೂಲವಾದ ವರ್ಲ್ಡ್ ವೈಡ್ ವೆಬ್(www) ಇದೇ ವರ್ಷ 30 ವಸಂತಗಳನ್ನು ಆಚರಿಸಿಕೊಂಡಿದೆ. 15 ವರ್ಷದ ಜಿಮೇಲ್ ಸಾಮಾನ್ಯ ಬಳಕೆದಾರರಿಗೆ ಇಂದಿಗೂ ಉಚಿತ ಸೇವೆ ನೀಡುತ್ತಿದೆ. ವಾಣಿಜ್ಯ ಬಳಕೆಗೆ, ಪ್ರೆಸೆಂಟೇಷನ್‌ಗಳು ಹಾಗೂ ವರ್ಡ್ ಪ್ರೊಸೆಸಿಂಗ್ ಸಾಫ್ಟ್‌ವೇರ್ ಸೇವೆಗಳನ್ನು ಹಣ ಪಡೆದು ಒದಗಿಸುತ್ತಿದೆ.
ಜಿಮೇಲ್ ಕಾರ್ಯರೂಪಕ್ಕೆ ಬಂದು ವರ್ಷದ ಬಳಿಕ ಗೂಗಲ್ ಮ್ಯಾಪ್ ಪ್ರಾರಂಭಿಸಲಾಯಿತು. ಪ್ರಸ್ತುತ ಮಾರ್ಗಸೂಚಿ ಸೇವೆಗಳಿಗಾಗಿ ಅತಿ ಹೆಚ್ಚು ಬಳಕೆಯಲ್ಲಿರುವುದು ಗೂಗಲ್ ಮ್ಯಾಪ್ಸ್. ಇದರೊಂದಿಗೆ ಗೂಗಲ್ ಆ್ಯಂಡ್ರಾಯ್ಡ್, ಯುಟ್ಯೂಬ್, ಕ್ರೋಮ್ ಬ್ರೌಸರ್ ಅಭಿವೃದ್ಧಿ ಪಡಿಸಿ ಬಳಕೆಗೆ ತಂದಿದೆ. ಮೈಕ್ರೋಸಾಫ್ಟ್‌ನ ಇಂಟರ್‌ನೆಟ್ ಎಕ್ಸ್‌ಪ್ಲೋರರ್‌ನ್ನು ಗೂಗಲ್ ಕ್ರೋಮ್ ಹಿಂದಿಟ್ಟು ಜನಪ್ರಿಯ ಬ್ರೌಸರ್ ಸ್ಥಾನದಲ್ಲಿದೆ.
ಜಾಗತಿಕವಾಗಿ ರವಾನೆಯಾಗುತ್ತಿರುವ ಪ್ರತಿ 10 ಸ್ಮಾರ್ಟ್‌ಫೋನ್‌ಗಳ ಪೈಕಿ 9 ಸ್ಮಾರ್ಟ್‌ಫೋನ್‌ಗಳಲ್ಲಿ ಆ್ಯಂಡ್ರಾಯ್ಡ್ ಬಳಕೆಯಲ್ಲಿದೆ. 2018ರಲ್ಲಿ ಜಿಮೇಲ್ ತನ್ನ ವಿನ್ಯಾಸ ಬಳಸಿಕೊಂಡಿದ್ದು, ಸ್ಮಾರ್ಟ್‌ರಿಪ್ಲೇ, ಇಮೇಲ್ ಸ್ನೂಜಿಂಗ್, ಇನ್‌ಲೈನ್ ಅಟಾಚ್‌ಮೆಂಟ್ ಸೇರಿ ಹಲವು ಹೊಸ ಆಯ್ಕೆಗಳನ್ನು ಸೇರಿಸಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.