ADVERTISEMENT

5ಜಿಗೆ ಬೇಕಿದೆ ಸಿದ್ಧತೆ

ಕೃಷ್ಣ ಭಟ್ಟ
Published 25 ಅಕ್ಟೋಬರ್ 2022, 20:30 IST
Last Updated 25 ಅಕ್ಟೋಬರ್ 2022, 20:30 IST
   

ಪ್ರಧಾನಿ ನರೇಂದ್ರ ಮೋದಿ ಅಕ್ಟೋಬರ್ 1ರಂದು ಇಂಡಿಯಾ ಮೊಬೈಲ್ ಕಾಂಗ್ರೆಸ್‌ನಲ್ಲಿ 5ಜಿ ಸೇವೆಗಳನ್ನು ಬಿಡುಗಡೆ ಮಾಡಿದಾಗ ಎಲ್ಲರಿಗೂ 5ಜಿ ಸೇವೆ ಸಿಕ್ಕೇ ಬಿಟ್ಟಿತು ಎಂದು ಭಾವಿಸಿದವರಿದ್ದಾರೆ! 5ಜಿ ಸ್ಮಾರ್ಟ್‌ಫೋನ್ ಇದ್ದರೆ ಸೀದಾ 5ಜಿ ಬಳಸಬಹುದು ಎಂದೇ ಅಂದುಕೊಂಡವರೂ ಇದ್ದಾರೆ. ವಾಸ್ತವದಲ್ಲಿ ಸರ್ಕಾರವೇನೋ ತರಂಗಾಂತರಗಳ ಹರಾಜು ಹಾಕಿ, ಅದನ್ನು ಎರಡೇ ದಿನದಲ್ಲಿ ಟೆಲಿಕಾಂ ಕಂಪನಿಗಳಿಗೆ ಪರಭಾರೆಯನ್ನೂ ಮಾಡಿತು. ಟೆಲಿಕಾಂ ಕಂಪನಿಗಳೂ ಕೆಲವು ವಲಯಗಳಲ್ಲಿ 5ಜಿ ತರಂಗಾಂತರಗಳನ್ನು ಹರಿಬಿಟ್ಟವು. ಆದರೆ, ಅದು ಜನರ ಕೈಗೆ ಅಷ್ಟು ಸುಲಭದಲ್ಲಿ ಸಿಗುವುದಿಲ್ಲ. ಇದಕ್ಕೆ ಅಡೆತಡೆ ಹಲವು.

4ಜಿ ಹಾಗೂ 3ಜಿಗಿಂತ 5ಜಿ ತರಂಗಾಂತರಗಳ ಬ್ಯಾಂಡ್‌ಗಳು ಸಂಕೀರ್ಣವಾದ ವ್ಯವಸ್ಥೆ. ಹೀಗಾಗಿ, ಈ ಎಲ್ಲ ಬ್ಯಾಂಡ್‌ಗಳಲ್ಲೂ ಸರಿಯಾಗಿ ಸ್ಮಾರ್ಟ್‌ಫೋನ್‌ಗಳು ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಪರೀಕ್ಷೆಗಳು ನಡೆಯಬೇಕಿದೆ. 5ಜಿ ಬರುವುದಕ್ಕಿಂತಲೂ ಮೊದಲೇ ಮಾರಾಟವಾದ ಬಹುತೇಕ ಸ್ಮಾರ್ಟ್‌ಫೋನ್‌ಗಳ ಹಾರ್ಡ್‌ವೇರ್‌ 5ಜಿ ಬ್ಯಾಂಡ್‌ಗಳನ್ನು ಬೆಂಬಲಿಸುತ್ತವೆಯಾದರೂ, ಅವುಗಳು ಬೆಂಬಲಿಸುವ ಎಲ್ಲ ಬ್ಯಾಂಡ್‌ಗಳಲ್ಲೂ ಸರಿಯಾಗಿ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಖಚಿತಪಡಿಸಿಕೊಳ್ಳಲಿ ಟೆಸ್ಟಿಂಗ್‌ ನಡೆಸಿ ಅದನ್ನು ಬೆಂಬಲಿಸುವಂತೆ ಜನರಿಗೆ ಸಾಫ್ಟ್‌ವೇರ್‌ ಅಪ್‌ಡೇಟ್‌ ಮಾಡುವ ಪ್ರಕ್ರಿಯೆ ಇನ್ನೂ ಚಾಲ್ತಿಯಲ್ಲಿದೆ.

ದುಬಾರಿ ಬೆಲೆಯ ಸ್ಮಾರ್ಟ್‌ಫೋನ್‌ಗಳೂ 5ಜಿ ಹಾರ್ಡ್‌ವೇರ್‌ ಹೊಂದಿದ್ದರೂ ಅವುಗಳ ಸಾಫ್ಟ್‌ವೇರ್‌ ಅಪ್‌ಡೇಟ್ ಆಗದ ಹೊರತು ಜನರು 5ಜಿ ಬಳಸಲು ಸಾಧ್ಯವಿಲ್ಲ. ಇದಕ್ಕಾಗಿ ಇನ್ನೂ ಪರೀಕ್ಷೆ ನಡೆಯುತ್ತಿದೆ.

ADVERTISEMENT

ಯಾಕೆ ಈ ವಿಳಂಬ?

ಇದಕ್ಕೆ ಕಾರಣ ಹಲವು. ಆರಂಭದಲ್ಲೇ ಸ್ಮಾರ್ಟ್‌ಫೋನ್‌ ಕಂಪನಿಗಳು ಮಾರುಕಟ್ಟೆಯಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳಲೋ ಅಥವಾ ಅದಾಗಲೇ ಚೀನಾದಲ್ಲಿ 5ಜಿ ಬಳಕೆಗೆ ಬಂದಿದ್ದರಿಂದ ಅಲ್ಲಿಯ ಮಾರುಕಟ್ಟೆಗಾಗಿಯೋ 5ಜಿ ಹಾರ್ಡ್‌ವೇರ್‌ಗಳನ್ನು ಅಳವಡಿಸಿದವು. ಆದರೆ, ತೀರಾ ಆರೆಂಟು ತಿಂಗಳ ಹಿಂದೆಯೂ 5ಜಿ ಗೆ ಯಾವ ಬ್ಯಾಂಡ್‌ಗಳನ್ನು ಭಾರತದಲ್ಲಿ ಬಳಸಲಾಗುತ್ತದೆ ಎಂಬುದು ಖಚಿತವಿರಲಿಲ್ಲ.

ಇದೇ ಸಮಸ್ಯೆ, 4ಜಿ ಬಂದಾಗಲೂ ಆಗಿತ್ತು. ಆಗ 4ಜಿ ಕೇವಲ ತರಂಗಾಂತರ ಬದಲಾಗಲಿಲ್ಲ. ಬದಲಿಗೆ, ಕರೆಗಳನ್ನೂ ಡೇಟಾ ಮೂಲಕವೇ ಸಾಗಿಸುವ ವ್ಯವಸ್ಥೆ VoLTE ಬಂತು. 3ಜಿ ಯಲ್ಲಿ ಕರೆಗಳು ರೇಡಿಯೋ ಅಲೆಗಳ ಮೂಲಕ ನಮ್ಮ ಸ್ಮಾರ್ಟ್‌ಫೋನ್‌ನಿಂದ ಟವರ್‌ಗೆ ಹೋಗುತ್ತಿದ್ದವು. ಆದರೆ, VoLTE ವ್ಯವಸ್ಥೆಯಲ್ಲಿ ಸ್ಮಾರ್ಟ್‌ಫೋನ್‌ನಲ್ಲೇ ಕರೆಗಳು ಡೇಟಾ ಆಗಿ ಪರಿವರ್ತನೆಯಾಗಿ ಟವರ್‌ಗೆ ಹೋಗುವಂತಾಯಿತು. ಇದರಿಂದ ಕರೆಗಳಲ್ಲಿನ ಧ್ವನಿಯ ಗುಣಮಟ್ಟ ಸುಧಾರಿಸಿತು. ಈ ವ್ಯವಸ್ಥೆ ಅದಾಗಲೇ 4ಜಿ ಬೆಂಬಲಿಸುತ್ತಿದ್ದ ಫೋನ್‌ಗಳಲ್ಲೂ ಇರಲಿಲ್ಲ. ಹಾಗಾಗಿ, ಆ ವ್ಯವಸ್ಥೆಯನ್ನು ಮೊದಲು ಪರಿಚಯಿಸಿದ್ದ ರಿಲಾಯನ್ಸ್‌ ಜಿಯೋ, VoLTE ಬಳಸಲು ಅನುವಾಗಲಿ ಎಂದು ಪ್ರತ್ಯೇಕ ಆ್ಯಪ್‌ ಅನ್ನೇ ಬಿಡುಗಡೆ ಮಾಡಿತ್ತು.

ಇಂಥ ಗೊಂದಲ 5ಜಿಯಲ್ಲೂ ಮುಂದುವರಿದಿದೆ. ಈಗಾಗಲೇ ಮಾರುಕಟ್ಟೆಯಲ್ಲಿರುವ ಬಹುತೇಕ ಸ್ಮಾರ್ಟ್‌ಫೋನ್‌ಗಳು ಮಿಲಿಮೀಟರ್‌ ವೇವ್ಸ್‌ ಅನ್ನು ಬೆಂಬಲಿಸುವುದಿಲ್ಲ. ಆದರೆ, ನಿಜವಾದ 5ಜಿ ಅನುಭವವನ್ನು ನೀಡುವ ಬ್ಯಾಂಡ್‌ಗಳೇ ಇವು. ಈ ಬ್ಯಾಂಡ್‌ನಲ್ಲಿ ಒಂದು ಸೆಕೆಂಡಿಗೆ 3ಜಿಬಿ ಡೇಟಾವನ್ನು ಇಳಿಸಿಕೊಳ್ಳಬಹುದು. ಹೆಚ್ಚು ಬೆಲೆಯ ಸ್ಮಾರ್ಟ್‌ಫೋನ್‌ಗಳಲ್ಲಿ ಕೆಲವು ಈ ಬ್ಯಾಂಡ್‌ ಅನ್ನು ಬೆಂಬಲಿಸುತ್ತಿವೆ. ಹೀಗಾಗಿ, ಈ ಬ್ಯಾಂಡ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು ಸರಿಯಾಗಿ ಕೆಲಸ ಮಾಡುತ್ತವೆಯೇ ಎಂಬುದೂ ಸೇರಿದಂತೆ ಹಲವು ಟೆಸ್ಟಿಂಗ್‌ ನಡೆಯುತ್ತಿದೆ.

ಬ್ಯಾಂಡ್‌ನಲ್ಲಿ ಅಸಲಿ ವೇಗ!

5ಜಿ ಹರಾಜಿನಲ್ಲಿ ಮೂರೂ ಕಂಪನಿಗಳೂ ವಿವಿಧ ಬ್ಯಾಂಡ್‌ಗಳ ತರಂಗಾಂತರಗಳನ್ನು ಖರೀದಿ ಮಾಡಿವೆ. ಏರ್‌ಟೆಲ್‌ 900 ಮೆ.ಹ. (ಎನ್‌8), 1800 ಮೆ.ಹ. (ಎನ್‌3), 2100 ಮೆ.ಹ. (ಎನ್‌1), 3300 ಮೆ.ಹ. (ಎನ್‌78) ಮತ್ತು 26 ಗಿಗಾ ಹರ್ಟ್ಸ್‌ (ಎನ್‌258 ಮಿಲಿಮೀಟರ್‌ ವೇವ್‌) ಖರೀದಿ ಮಾಡಿದ್ದರೆ, ಜಿಯೋ 700 ಮೆ.ಹ. (ಎನ್‌28), ಎನ್‌78, ಎನ್‌258 ಹಾಗೂ ವೋಡಾಫೋನ್‌ ಎನ್‌78 ಮತ್ತು ಎನ್‌258 ಅನ್ನು ಖರೀದಿ ಮಾಡಿವೆ. ಈ ಪೈಕಿ ಯಾವ ಫೋನ್‌ಗಳೂ ಎನ್‌258 ಬ್ಯಾಂಡ್‌ ಅನ್ನು ತನ್ನ ಹಾರ್ಡ್‌ವೇರ್‌ನಲ್ಲೂ ಬೆಂಬಲಿಸುವುದಿಲ್ಲ! ಆಗ, ಒಂದೊಂದು ಟೆಲಿಕಾಂ ಕಂಪನಿಯೂ ಹೊದಿರುವ ಬ್ಯಾಂಡ್‌ಗಳಿಗೆ ಸ್ಮಾರ್ಟ್‌ಫೋನ್‌ಗಳನ್ನು ಸಜ್ಜುಗೊಳಿಸಿ, ಆ ಕಂಪನಿ ಬೆಂಬಲಿಸುವ ಬ್ಯಾಂಡ್‌ಗಳಲ್ಲಿ ಸ್ಮಾರ್ಟ್‌ಫೋನ್‌ನ 5ಜಿ ಬೆಂಬಲಿಸುವುದನ್ನು ಖಚಿತಪಡಿಸಿಕೊಂಡು, ಅದಕ್ಕೆ ಅಗತ್ಯ ಸಾಫ್ಟ್‌ವೇರ್‌ ಅಪ್‌ಡೇಟ್‌ ಮಾಡಬೇಕಿರುವುದು ಸದ್ಯದ ಅಗತ್ಯ. ಇದಕ್ಕಾಗಿ, ಎಲ್ಲ ಸ್ಮಾರ್ಟ್‌ಫೋನ್ ತಯಾರಿಕೆ ಕಂಪನಿಗಳೂ ಆಯಾ ದೇಶದ ಟೆಲಿಕಾಂ ಕಂಪನಿಗಳ ಜೊತೆ ಸೇರಿ ಈ ಪರೀಕ್ಷೆ ನಡೆಸಬೇಕು!

ಕೆಲವು ಸ್ಮಾರ್ಟ್‌ಫೋನ್‌ಗಳು ಮಾತ್ರ ಬೆಂಬಲಿಸುವುದು ಏಕೆ?

ಈಗಾಗಲೇ ಟೆಲಿಕಾಂ ಕಂಪನಿಗಳು 5ಜಿ ನೆಟ್‌ವರ್ಕ್‌ಗಾಗಿ ಹರಾಜಿನಲ್ಲಿ ಪಡೆದಿರುವ ಕೆಲವು ಬ್ಯಾಂಡ್‌ಗಳಲ್ಲಿ ಈಗಾಗಲೇ 4ಜಿ ಸೇವೆ ಚಾಲ್ತಿಯಲ್ಲಿದೆ! ಉದಾಹರಣೆಗೆ, 700 ಮೆ.ಹ. ಮತ್ತು 800 ಮೆ.ಹ. ಬ್ಯಾಂಡ್‌ಗಳಲ್ಲಿ 4ಜಿ ಸೇವೆ ಲಭ್ಯವಿದೆ. ಅನಿಲ್ ಅಂಬಾನಿಯ ರಿಲಾಯನ್ಸ್‌ ಟೆಲಿಕಮ್ಯೂನಿಕೇಶನ್ಸ್‌ನಿಂದ ಜಿಯೋ 700 ಮೆ.ಹ. ತರಂಗಾಂತರಗಳನ್ನು ಖರೀದಿ ಮಾಡಿದ್ದರಿಂದಾಗಿ ಜಿಯೋ ಈಗಾಗಲೇ ಇರುವ ತರಂಗಾಂತರಗಳಲ್ಲೇ 5ಜಿ ಸೇವೆಯನ್ನು ನೀಡಬಲ್ಲ ಸಾಮರ್ಥ್ಯ ಹೊಂದಿದೆ. ಆದರೆ, ಈ ತರಂಗಾಂತರಗಳು ಹೆಚ್ಚೆಂದರೆ ಪ್ರತಿ ಸೆಕೆಂಡಿಗೆ 300 ಎಂಬಿ ಡೇಟಾ ಕೊಡಬಲ್ಲವು. ಆದರೆ, ಇವು ದೂರದವರೆಗೆ ಸಾಗುವ ಸಾಮರ್ಥ್ಯ ಹೊಂದಿವೆ. ಅಂದರೆ, 4ಜಿ ಟವರ್‌ಗಳಲ್ಲೇ ಈ ತರಂಗಾಂತರಗಳನ್ನು ನಿರ್ವಹಿಸಬಹುದು. ಹಾಗಾಗಿ, ಈಗಾಗಲೇ ಇರುವ ಸ್ಮಾರ್ಟ್‌ಫೋನ್‌ಗಳೇ ಈ ಬ್ಯಾಂಡ್‌ಗಳನ್ನು ಸುಲಭವಾಗಿ ಬೆಂಬಲಿಸುತ್ತವೆ. ಅದಕ್ಕೆ ಹೆಚ್ಚು ಟೆಸ್ಟ್‌ ಮಾಡುವ ಅಗತ್ಯ ಇರುವುದಿಲ್ಲ.
ಆದರೆ, ಎನ್‌258 ಹಾಗಲ್ಲ. ಇದು ಹೆಚ್ಚೆಂದರೆ 300-500 ಅಡಿ ದೂರಕ್ಕೆ ಸಂಕೇತಗಳನ್ನು ಹೊತ್ತೊಯ್ಯುತ್ತವೆ. ಅಷ್ಟೇ ಅಲ್ಲ, ಈ ಸಾಗುವ ಹಾದಿಯಲ್ಲಿ ಒಂದು ಮರದ ಎಲೆ ಅಡ್ಡವಾದರೂ ಅದನ್ನು ದಾಟಿ ಹೋಗಲಾರವು. ಇದಕ್ಕಾಗಿ ಸಣ್ಣ ಸೆಲ್‌ಗಳ ಟವರ್‌ಗಳು ಬೇಕಿರುತ್ತವೆ. ಇದನ್ನೆಲ್ಲ ಪರೀಕ್ಷೆ ಮಾಡಲು ಸಮಯ ಬೇಕಿದೆ.

ಸ್ಮಾರ್ಟ್‌ಫೋನ್‌ ತಯಾರಕರ ಮೇಲೆ ಜನರ ದೂರು 5ಜಿ ಸಿಗ್ನಲ್ ಬಂದು ಒಂದು ತಿಂಗಳಾಯಿತು. 5ಜಿ ಬೆಂಬಲಿಸುತ್ತದೆ ಎಂಬ ಕಾರಣಕ್ಕೆ ಸ್ಮಾರ್ಟ್‌ಫೋನ್‌ ತೆಗೆದುಕೊಂಡೆ. ಆದರೆ, ಈಗ ನೋಡಿದರೆ, ಸಾಫ್ಟ್‌ವೇರ್ ಬಂದ ಹೊರತು 5ಜಿ ಬಳಸುವುದಕ್ಕಾಗುವುದಿಲ್ಲ ಎಂದು ಕಂಪನಿ ಹೇಳುತ್ತಿದೆ. ಮೊಬೈಲ್ ಕಂಪನಿಗಳು ಮೋಸ ಮಾಡುತ್ತಿವೆ ಎಂಬ ಅಭಿಪ್ರಾಯ ಜನರಲ್ಲಿ ಈಗ ಮೂಡುತ್ತಿದೆ. ಇದು ಒಂದು ರೀತಿಯಲ್ಲಿ ನಿಜವಾದರೂ, ಅದರ ಹಿಂದಿನ ಹಲವು ಕಸರತ್ತುಗಳ ತಿಳಿವಳಿಕೆ ಇಲ್ಲದವರಿಗೆ ಇದು ಮೋಸ ಎನಿಸೀತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.