ನ್ಯೂಯಾರ್ಕ್: ಶಿಕ್ಷಣ, ಐಟಿ, ಬಿಟಿ, ರಾಜಕಾರಣವನ್ನು ವ್ಯಾಪಿಸಿರುವ ಚಾಟ್‌ಬಾಟ್‌ಗಳು ಇದೀಗ ನ್ಯಾಯಾಲಯದ ಅಂಗಳವನ್ನೂ ಪ್ರವೇಶಿಸಿವೆ. ಇಂಥದ್ದೇ ಒಂದು ಪ್ರಕರಣದಲ್ಲಿ ಓಪನ್‌ಎಐನ ಚಾಟ್‌ಜಿಪಿಟಿ ಬಳಸಿದ್ದ ವಕೀಲರೊಬ್ಬರು, ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿ ಪೇಚಿಗೆ ಸಿಲುಕಿದ ಪ್ರಕರಣವೊಂದು ವರದಿಯಾಗಿದೆ.
ಹಾಗಿದ್ದರೆ ನಡೆದದ್ದೇನು...?
2023ರ ಆರಂಭದಲ್ಲಿ ಕೊಲಂಬಿಯಾ ಮೂಲದ ಅವಿಯಂಕಾ ವಿಮಾನಯಾನ ಸಂಸ್ಥೆಗೆ ಸೇರಿದ ವಿಮಾನದಲ್ಲಿ ಪ್ರಯಾಣಿಸಿದ್ದ ರಾಬರ್ಟೊ ಮೆಟಾ ಅವರು, ವಿಮಾನದೊಳಗೆ ಲೋಹ ಬಡಿತದಿಂದ ಆಗಿದ್ದ ಹಾನಿಗೆ ವೈದ್ಯಕೀಯ ಪರಿಹಾರ ಕೋರಿ ಮೆಟಾ ಎಂಬ ಕಾನೂನು ಸಲಹಾ ಸಂಸ್ಥೆಯ ನೆರವು ಪಡೆದು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.
ವಾದ ಮಂಡಿಸಿದ ಮೆಟಾ ಪರ ವಕೀಲರು, ಹಿಂದೆ ನಡೆದಿದ್ದ ಇಂಥ್ದದೇ ಆರು ಪ್ರಕರಣಗಳನ್ನು ನ್ಯಾಯಾಲಯದಲ್ಲಿ ಉಲ್ಲೇಖಿಸಿದ್ದರು. ವಕೀಲರು ವಾದ ಮಂಡಿಸಿದ ಹಿಂದಿನ ಪ್ರಕರಣಗಳು ಯಾವುವೂ ಇಲ್ಲ ಎಂಬುದನ್ನು ಕೆಲವೇ ಕ್ಷಣಗಳಲ್ಲಿ ನ್ಯಾಯಾಧೀಶರು ಅರಿತು. ಅಸಲಿಗೆ ವಕೀಲರು ಚಾಟ್‌ಜಿಪಿಟಿ ಬಳಸಿದ್ದರಿಂದ ಕೃತಕ ಬುದ್ಧಿಮತ್ತೆಯು ವಾಸ್ತವದಲ್ಲಿ ಇಲ್ಲದ ಪ್ರಕರಣಗಳನ್ನು ನೀಡಿದ್ದನ್ನು ವಕೀಲರು ಅರಿತು ಪೇಚಿಗೆ ಸಿಲುಕಿದರು ಎಂದು ಫೋರ್ಬ್ಸ್ ವರದಿ ಮಾಡಿದೆ.
ಕೃತಕ ಬುದ್ಧಿಮತ್ತೆ ಬಳಸುವ ಚಾಟ್‌ಜಿಪಿಟಿ ಸದ್ಯ ಪ್ರಚಲಿತದಲ್ಲಿರುವ ತಂತ್ರಜ್ಞಾನ. ಈ ತಂತ್ರಾಂಶ ಈಗ ಹಲವರ ಪಾಲಿಗೆ ’ಬ್ರಹ್ಮಾಸ್ತ್ರ‘. ತಕ್ಷಣವೇ ಪ್ರೆಸೆಂಟೇಷನ್ ಸಿದ್ಧಪಡಿಸಬೇಕೆಂದರೆ, ಚಾಟ್‌ಜಿಪಿಟಿಗೆ ಯಾವ ವಿಷಯ ಎಂದಷ್ಟೇ ಹೇಳಿದರೆ ಸಾಕು, ಪ್ರೆಸೆಂಟೇಷನ್ ಸಿದ್ಧ. ಇಷ್ಟೇ ಏಕೆ, ಇತ್ತೀಚೆಗೆ ಪ್ರಕಟಗೊಂಡ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೇ ಫಲಿತಾಂಶದಲ್ಲಿ ಉತ್ತಮ ರ‍್ಯಾಂಕ್ ಪಡೆದವರಲ್ಲಿ ಹಲವರು ಇದೇ ಚಾಟ್‌ಜಿಪಿಟಿ ಎಂಬ ಕೃತಕ ಬುದ್ಧಿಮತ್ತೆಯನ್ನು ಬಳಸಿದ್ದರು ಎಂಬುದೂ ವರದಿಯಾಗಿದೆ.
ಮತ್ತೆ ಈಗ ಈ ಪ್ರಕರಣಕ್ಕೆ ಮರಳೋಣ. ಮೆಟಾ ವಕೀಲರು ನ್ಯಾಯಾಲಯದಲ್ಲಿ ಮಂಡಿಸಿದ ವಾದ ಹಾಗೂ ಪುರಾವೆಯಾಗಿ ನೀಡಿದ ಹಿಂದಿನ ಪ್ರಕರಣಗಳ ಪಟ್ಟಿ, ಎದುರುದಾರರ ಪರ ವಕೀಲರಿಗೆ ಎಷ್ಟು ಹುಡುಕಿದರೂ ಸಿಗಲೇ ಇಲ್ಲ. ಹೀಗಾಗಿ ಈ ಕುರಿತು ಇನ್ನಷ್ಟು ಮಾಹಿತಿಯನ್ನು ನ್ಯಾಯಾಲಯಕ್ಕೆ ನೀಡುವಂತೆ ಅವರು ಮೆಟಾ ಪರ ವಕೀಲರನ್ನು ಕೇಳಿದ್ದರು. ಆಗಲೂ ಅವರು ಚಾಟ್‌ಜಿಪಿಟಿಯನ್ನೇ ಬಳಸಿ ತಾವು ನೀಡಿದ್ದ ಪ್ರಕರಣಗಳ ಮಾಹಿತಿಯನ್ನು ನೀಡಿದ್ದರು.
ಅಸಲಿಯತ್ತು ಅರಿತ ನ್ಯಾಯಾಧೀಶರು, ’ನ್ಯಾಯಾಲಯ ಇಂದು ವಿಚಿತ್ರವಾದ ಸನ್ನಿವೇಶದಲ್ಲಿ ಸಿಲುಕಿದೆ. ಇಂಥದ್ದನ್ನು ಪ್ರತಿಬಂಧಿಸುವ ಅಗತ್ಯವಿದೆ‘ ಎಂದು ಅಭಿಪ್ರಾಯಪಟ್ಟರು. ಜತೆಗೆ ಅಸ್ತಿತ್ವದಲ್ಲೇ ಇಲ್ಲದ ಪ್ರಕರಣವನ್ನ ನಿಜವೆಂದು ನ್ಯಾಯಾಲಯದ ಮುಂದೆ ಮಂಡಿಸಿದ್ದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ. ಜತೆಗೆ ಇದನ್ನು ಮಂಡಿಸಿದವರನ್ನು ಏಕೆ ನಿರ್ಬಂಧಿಸಬಾರದು? ಎಂದೂ ಪ್ರಶ್ನಿಸಿದರು.
ಮೆಟಾ ಪರ ವಕೀಲ ಸ್ಟೀವನ್ ಷಾರ್ಟ್ಜ್, ಪ್ರಕರಣ ಕುರಿತು ಹಿಂದೆ ಬಂದಿರಬಹುದಾದ ಆದೇಶಗಳನ್ನು ಪತ್ತೆ ಮಾಡಲು ಕೃತಕ ಬುದ್ಧಿಮತ್ತೆಯ ಚಾಟ್‌ಬೋಟ್ ಬಳಸಿದ್ದನ್ನು ನ್ಯಾಯಾಲಯದಲ್ಲಿ ಒಪ್ಪಿಕೊಂಡಿದ್ದಾರೆ. ಆದರೆ ನ್ಯಾಯಾಲಯದ ಹಾದಿ ತಪ್ಪಿಸುವ ಯಾವುದೇ ಉದ್ದೇಶ ಇರಲಿಲ್ಲ ಎಂದು ನ್ಯಾಯಾಲಯವನ್ನು ಕೋರಿದ್ದಾರೆ. 'ಪ್ರಕರಣದ ಮಾಹಿತಿ ಹುಡುಕುವಾಗ ಬಳಸಿದ ತಂತ್ರಾಂಶವನ್ನು ಸರ್ಚ್ ಎಂಜಿನ್ ಎಂದೇ ತಿಳಿದುಕೊಂಡಿದ್ದೆ. ಆದರೆ ಅದು ಭಾಷಾ ಸಂಸ್ಕರಣ ಸಾಧನ ಎಂಬುದನ್ನು ನಂತರ ಅರಿತೆ‘ ಎಂದಿದ್ದಾರೆ.
ಸದ್ಯ ಈ ಕುರಿತು ನ್ಯಾಯಾಲಯ ಯಾವುದೇ ಕ್ರಮ ಜರಗಿಸಿಲ್ಲ ಎಂದು ವರದಿಯಾಗಿದೆ.
ಓಪನ್ಎಐ ಅಭಿವೃದ್ಧಿಪಡಿಸಿರುವ ಕೃತಕ ಬುದ್ಧಿಮತ್ತೆ ಆಧಾರದ ಚಾಟ್‌ಜಿಪಿಟಿ ಸದ್ಯ ಜಾಗತಿಕ ಮಾರುಕಟ್ಟೆಯಲ್ಲಿ ಟ್ರೆಂಡ್‌ನಲ್ಲಿದೆ. ಶಾಲೆ, ಕಾಲೇಜುಗಳಲ್ಲಿ ನೀಡುವ ಹೋಮ್‌ವರ್ಕ್‌ಗಳನ್ನು ಪೂರ್ಣಗೊಳಿಸಲು ವಿದ್ಯಾರ್ಥಿಗಳು ಇದನ್ನು ಬಳಸುತ್ತಿದ್ದಾರೆ. ತಮ್ಮ ಪರವಾಗಿ ಪ್ರಚಾರ ಕೈಗೊಳ್ಳಲು ರಾಜಕಾರಣಿಗಳು ಇದರ ಮೊರೆ ಹೋಗಿದ್ದಾರೆ. ಆದರೆ ಸತ್ಯ ಮತ್ತು ಸುಳ್ಳಿನ ಪತ್ತೆಗೆ ಸಹಜ ಬುದ್ಧಿಯ ಎದುರು ಕೃತಕ ಬುದ್ಧಿಮತ್ತೆಯ ಬಳಕೆ ಬಗ್ಗೆ ಈಗ ಪ್ರಶ್ನೆಗಳು ಎದ್ದಿವೆ.
ಚಾಟ್‌ಬಾಟ್‌ಗಳಾದ ಚಾಟ್‌ಜಿಪಿಟಿ ಅಥವಾ ಗೂಗಲ್‌ನ ಬಾರ್ಡ್ ಅಥವಾ ಮೈಕ್ರೊಸಾಫ್ಟ್‌ನ ಬಿಂಗ್ ಮೇಲೆ ಅತಿಯಾದ ಅವಲಂಬನೆ ಕುರಿತು ಹಲವರು ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಲಭ್ಯವಿರುವ ಮಾಹಿತಿ ಆಧರಿಸಿ ಅಭಿವೃದ್ಧಿಪಡಿಸಲಾದ ಅಲ್ಗಾರಿದಮ್‌ಗಳು ಇಂಥ ಚಾಟ್‌ಬೋಟ್‌ಗಳ ಆತ್ಮವಾಗಿವೆ. ಆದರೆ ಇದು ನೀಡುವ ವರದಿಗಳ ಸಾಚಾತನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಉತ್ತರ ಅಮೆರಿಕಾದ ನ್ಯಾಯಾಲಯವೊಂದು, ’ನ್ಯಾಯಾಲಯಕ್ಕೆ ಸಲ್ಲಿಕೆಯಾಗುವ ಯಾವುದೇ ಪ್ರಕರಣಗಳು ಹಾಗೂ ಅವುಗಳ ಕುರಿತ ವರದಿಯಲ್ಲಿ ’ಕೃತಕ ಬುದ್ಧಿಮತ್ತೆ ಮೂಲಕ ಪಡೆಯಲಾದ ಮಾಹಿತಿ ಇಲ್ಲ‘ ಎಂಬುದನ್ನು ದೃಢಪಡಿಸಲು ಸೂಚಿಸಿದೆ. ಮತ್ತೊಂದೆಡೆ ಇಂಥ ಅತ್ಯಾಧುನಿಕ ತಂತ್ರಜ್ಞಾನದಿಂದ ಭವಿಷ್ಯದಲ್ಲಿ ಸಾಕಷ್ಟು ಪ್ರಯೋಜನವಾಗಲಿದೆ. ಆದರೆ ಸದ್ಯಕ್ಕೆ ಅದರ ಬಳಕೆಯಿಂದ ಆಭಾಸವೂ ಆಗುತ್ತಿರುವುದನ್ನು ಗಮನಿಸಬೇಕು ಎಂದೂ ಹೇಳಿರುವುದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.