ಗೂಗಲ್‌ನ ಕಿಟ್ಟಿ ಹಾಕ್
ಗೂಗಲ್‌ನ ಸಹಸಂಸ್ಥಾಪಕ ಲ್ಯಾರಿ ಪೇಜ್ ಅವರ ಬೆಂಬಲದೊಂದಿಗೆ ಕಿಟ್ಟಿ ಹಾಕ್ ಹೆಸರಿನ ಚಾಲಕರಹಿತ ಹಾರುವ ಟ್ಯಾಕ್ಸಿ ನ್ಯೂಜಿಲೆಂಡ್‌ನಲ್ಲಿ ಪರೀಕ್ಷಾರ್ಥ ಹಾರಾಟ ನಡೆಸಿದೆ. ಕೋರಾ(ಅಮೆರಿಕದ ಸ್ಟಾರ್ಟ್ ಅಫ್ ಕಂಪನಿ) ಹೆಸರಿನಿಂದಲೂ ಪ್ರಸಿದ್ಧಿಯಾಗಿರುವ ಈ ಟ್ಯಾಕ್ಸಿ ಕೂಡ ಲಂಬವಾಗಿ ಹಾರಾಟ ಆರಂಭಿಸಿ ಲಂಬವಾಗಿ ಇಳಿಯುತ್ತದೆ. ನಗರ ಪ್ರದೇಶಗಳಲ್ಲಿನ ರೂಫ್ ಟಾಪ್ ಮತ್ತು ಕಾರುಗಳ ನಿಲುಗಡೆ ಪ್ರದೇಶಗಳಲ್ಲೂ ಇದನ್ನು ಇಳಿಸಿ, ಟೇಕ್ ಆಫ್ ಮಾಡುವಂತೆ ವಿನ್ಯಾಸ ಮಾಡಲಾಗಿದೆ. ಎಲೆಕ್ಟ್ರಿಕ್ ಶಕ್ತಿಯಿಂದ ಚಾಲನೆಯಾಗುವ ಹಾಗೂ 12 ಲಿಫ್ಟ್ ಫ್ಯಾನ್‌ಗಳನ್ನು ಬಳಸುವ ಈ ಟ್ಯಾಕ್ಸಿ 2021ರ ಹೊತ್ತಿಗೆ ಪ್ರಾಯೋಗಿಕವಾಗಿ ಬಳಕೆಗೆ ಬರಬಹುದೆಂಬ ನಿರೀಕ್ಷೆ ಇದೆ.
‘ನಾವು ಪರಿಸರ ಸ್ನೇಹಿ ಮತ್ತು ಮಾಲಿನ್ಯ ಹೊರಸೂಸದ ಟ್ಯಾಕ್ಸಿಯನ್ನು ಅಭಿವೃದ್ಧಿಪಡಿಸಿದ್ದೇವೆ. ಮುಂದಿನ ದಿನಗಳಲ್ಲಿ ಇದು ಸಾರಿಗೆ ಉದ್ಯಮ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು ಮಾಡಲಿದೆ’ ಎಂದು ಕಿಟ್ಟಿ ಹಾಕ್‌ನ ನಿರ್ವಹಣಾ ಕಂಪನಿ ಝೈಫರ್ ಏರ್‌ವರ್ಕ್ಸ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಫ್ರೆಡ್ ರೇಯಿಡ್ ಹೇಳಿದ್ದಾರೆ. ಈ ಏರ್ ಟ್ಯಾಕ್ಸಿಯಲ್ಲಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಹಾರುವ ವೇಳೆ ಅವಘಡ ಸಂಭವಿಸಿದರೆ, ಅದರಿಂದ ಪಾರಾಗಲು ಪ್ಯಾರಾಚೂಟ್ ನೆರವು ಕೊಡಲಾಗಿದೆ. ಈಗಾಗಲೇ ನ್ಯೂಜಿಲೆಂಡ್‌ನ ದಕ್ಷಿಣ ದ್ವೀಪದಲ್ಲಿ ಮೂವರು ಪ್ರಯಾಣಿಕರನ್ನು ಕೂರಿಸಿಕೊಂಡು ಪ್ರಯೋಗಾರ್ಥ ಹಾರಾಟ ಮಾಡಲಾಗಿದೆ.
***
ಉಬರ ಏರ್
ಹೆಸರೇ ಸೂಚಿಸುವಂತೆ ಇದು ಉಬರ್ ಕಂಪನಿಯ ಏರ್ ಟ್ಯಾಕ್ಸಿ. ಈಗಾಗಲೇ ಉಬರ್ ಕಂಪನಿಯ ಟ್ಯಾಕ್ಸಿಗಳು ವಿಶ್ವದಾದ್ಯಂತ ರಸ್ತೆಗಳಲ್ಲಿ ಸಂಚರಿಸುತ್ತಿವೆ. ಕೆಲ ವರ್ಷಗಳಲ್ಲೇ ಇದೇ ಕಂಪನಿಯ ಏರ್ ಟ್ಯಾಕ್ಸಿ ಆಗಸದಲ್ಲೂ ಹಾರಾಟ ನಡೆಸಲಿದೆ. 2020ರ ವೇಳೆಗೆ ಲಾಸ್ ಏಂಜಲೀಸ್, ದುಬೈ, ಟೆಕ್ಸಾಸ್ ಸೇರಿದಂತೆ ವಿಶ್ವದ ಕೆಲವು ಪ್ರಮುಖ ನಗರದಲ್ಲಿ ಈ ಏರ್ ಟ್ಯಾಕ್ಸಿ ಸೇವೆ ಲಭ್ಯವಾಗಲಿದೆ. 2023 ರ ಹೊತ್ತಿಗೆ ವಿಶ್ವದ ಹಲವೆಡೆ ಪೂರ್ಣ ಪ್ರಮಾಣದ ಹಾರಾಟ ನಡೆಯಲಿದೆ. ಆನಂತರ ಭಾರತ ಹಾಗೂ ಇತರ ದೇಶಗಳಲ್ಲಿ ಇದರ ಪ್ರಯೋಜನ ಲಭ್ಯವಾಗಲಿದೆ. ಉಬರ್ ಕಂಪನಿ ನಾಸಾ ಸಹಯೋಗದಲ್ಲಿ ಈ ಯೋಜನೆಯನ್ನು ಕಾರ್ಯಗತಗೊಳಿಸುತ್ತಿದೆ.
2028ರಲ್ಲಿ ಲಾಸ್ ಎಂಜಲೀಸ್‌ನಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯುತ್ತಿದೆ. ಇದರಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳಿಗೆ ಹಾಗೂ ನೋಡಲು ಬರುವ ಕ್ರೀಡಾಸಕ್ತಿರಿಗೆ ಈ ಏರ್ ಟ್ಯಾಕ್ಸಿ ಸೌಲಭ್ಯ ದೊರಕಿಸಿಕೊಡುವುದು ಕಂಪನಿಯ ಉದ್ದೇಶವಾಗಿದೆ ಎಂದು ಉಬರ್ ಹೇಳಿಕೊಂಡಿದೆ. ಕಾರಿನಲ್ಲಿ 1 ಗಂಟೆ 20 ನಿಮಿಷದಲ್ಲಿ ಕ್ರಮಿಸಬಹುದಾದ ದೂರವನ್ನು ಉಬರ್ ಏರ್‌ನಲ್ಲಿ ಕೇವಲ 30 ನಿಮಿಷದಲ್ಲಿ ತಲುಪಬಹುದು. ಪ್ರಯಾಣದ ದರದ ಬಗ್ಗೆ ಇನ್ನೂ ಅಂತಿಮವಾಗಿಲ್ಲ.
*
ರೋಲ್ಸ್– ರಾಯ್ಸ್‌ನ ‘ಹಾರುವ ಟ್ಯಾಕ್ಸಿ’
ಬ್ರಿಟನ್‌ನ ರೋಲ್ಸ್– ರಾಯ್ಸ್ ಕಂಪನಿ‘ಹಾರುವ ಟ್ಯಾಕ್ಸಿ’ ಯನ್ನು ಅಭಿವೃದ್ಧಿಪಡಿಸುತ್ತಿದೆ. ಭೂಮಿಯಿಂದ ಲಂಬವಾಗಿ ಹಾರಾಟ ಆರಂಭಿಸಿ ಲಂಬವಾಗಿ(ಇವಿಟಿಒಎಲ್) ಇಳಿಯುತ್ತದೆ. ಇದೇ ಮೊದಲ ಬಾರಿಗೆ ಫರ್ನ್‌ಬರೊದಲ್ಲಿ ನಡೆದ ಏರ್ ಷೊನಲ್ಲಿ ಈ ಕಂಪನಿ ತನ್ನ ಯೋಜನೆಗಳನ್ನು ಪ್ರಕಟಿಸಿದೆ. ಈ ಟ್ಯಾಕ್ಸಿಗಳು 2020ರಲ್ಲಿ ಹಾರಾಟ ಆರಂಭಿಸಲಿವೆ. ಈ ವಾಹನ ಅಭಿವೃದ್ಧಿಪಡಿಸಲು ರೋಲ್ಸ್ ರಾಯ್ಸ್ ಜತೆಗೆ ಕ್ರಾನ್‌ಫೀಲ್ಡ್ ವಿಶ್ವವಿದ್ಯಾಲಯವೂ ಕೈ ಜೋಡಿಸಿದೆ. ಇದನ್ನು ಖಾಸಗಿ ಸಾರಿಗೆ ವ್ಯವಸ್ಥೆ, ಸಾರ್ವಜನಿಕ ಸಾರಿಗೆ ಪದ್ಧತಿ, ಲಾಜಿಸ್ಟಿಕ್ ಹಾಗೂ ಸೇನಾ ಉದ್ದೇಶದ ವಾಹನಗಳಿಗೂ ಬಳಸಿಕೊಳ್ಳಬಹುದೆಂದು ಕಂಪನಿ ಹೇಳಿದೆ. ‘ಹಾರುವ ಟ್ಯಾಕ್ಸಿಗಳಿಗೆ ಸಾಂಪ್ರದಾಯಿಕ ಗ್ಯಾಸ್ ಟರ್ಬೈನ್ ಎಂಜಿನ್‌ಗಳನ್ನು ಬಳಸಲಾಗುವುದು’ ಎಂದು ರೋಲ್ಸ್ ರಾಯ್ಸ್‌ನ ಎಲೆಕ್ಟ್ರಿಕಲ್ ವಿಭಾಗದ ಮುಖ್ಯಸ್ಥ ರಾಬ್ ವಾಟ್ಸನ್ ಹೇಳಿದ್ದಾರೆ. ಇದೇ ಸಂಸ್ಥೆ ಈಗಾಗಲೇ ಎಲೆಕ್ಟ್ರಿಕ್ ವಾಹನವೊಂದರ ಬಗ್ಗೆ ಸಂಶೋಧನೆ ನಡೆಸುತ್ತಿದ್ದು, ಅದು ಇವಿಟಿಒಎಲ್ (A vertical take-off and landing-EVTOL) ನಷ್ಟು ಆತ್ಯಾಧುನಿಕವಾಗಿರಲಾರದು ಎಂದು ಕಂಪನಿ ಹೇಳಿಕೊಂಡಿದೆ.
ವಿಶ್ವದಾದ್ಯಂತ ‘ಏರೊಸ್ಪೇಸ್ ಉದ್ಯಮ ಹೆಚ್ಚು ಪರಿಸರ ಸ್ನೇಹಿಯಾಗಿರಬೇಕು’ ಎಂಬ ಒತ್ತಾಯ ಕೇಳಿಬರುತ್ತಿದೆ. ಇದರಿಂದ ಏರ್ ಟ್ಯಾಕ್ಸಿಗಳಲ್ಲೂ ಎಲೆಕ್ಟ್ರಿಕ್ ಎಂಜಿನ್ ಇರಬೇಕು ಎಂಬುದು ವಾಹನ ಉದ್ಯಮ ವಿಶ್ಲೇಷಕರ ಅಭಿಪ್ರಾಯ ಹಾಗೂ ಸಲಹೆಯಾಗಿದೆ. ಇತ್ತೀಚೆಗಷ್ಟೇ ಕೆಲವು ದೇಶಗಳಲ್ಲಿ ಎಲೆಕ್ಟ್ರಿಕ್ ತಂತ್ರಜ್ಞಾನ ಹೆಚ್ಚು ಪ್ರವರ್ಧಮಾನಕ್ಕೆ ಬರುತ್ತಿದೆ. ಆದರೆ ಇದರ ಪ್ರಾಯೋಗಿಕ ಲಾಭ ಮತ್ತು ಅದಕ್ಕಿರುವ ಗ್ರಾಹಕರ ಬೆಂಬಲ ಏನು ಎಂಬುದನ್ನು ಇನ್ನಷ್ಟೇ ತಿಳಿಯಬೇಕಾಗಿದೆ. ಸದ್ಯ ರೋಲ್ಸ್ ರಾಯ್ಸ್‌ನ ಏರ್ ಟ್ಯಾಕ್ಸಿಯಲ್ಲಿ ಐದು ಮಂದಿ ಕೂರಬಹುದು. ನಂತರದ ದಿನಗಳಲ್ಲಿ ಅದನ್ನು 15 ರವರೆಗೂ ವಿಸ್ತರಿಸುವ ಚಿಂತನೆ ಇದೆ.
*
ವೊಲೊಕಾಪ್ಟರ್
ಜರ್ಮನಿಯ ಸ್ಟಾರ್ಟ್ ಅಫ್ ಮೊದಲ ಬಾರಿಗೆ ಲಾಸ್‌ವೆಗಾಸ್‌ನಲ್ಲಿ ನಡೆದ ಸಿಇಎಸ್‌ನಲ್ಲಿ ವೋಲೊಕಾಪ್ಟರ್ ಪ್ರದರ್ಶನಕ್ಕಿಟ್ಟಿತ್ತು. ಇಬ್ಬರು ಪ್ರಯಾಣಿಸಬಹುದಾದ ಈ ಕಾಪ್ಟರ್ ಈಗಾಗಲೇ ದುಬೈನಲ್ಲಿ ಪರೀಕ್ಷಾರ್ಥ ಹಾರಾಟ ನಡೆಸಿದೆ. ಚಾಲಕರಹಿತ ಮತ್ತು ಚಾಲಕಸಹಿತವಾಗಿ ಇದು ಹಾರಾಡುತ್ತದೆ.
ವಾಹನ
ಏರ್‌ಬಸ್‌ನ ‘ವಾಹನ’ ಪ್ರಯಾಣಿಕರ ಡ್ರೋನ್ ಯೋಜನೆ. ಇದೂ ಎಲೆಕ್ಟ್ರಿಕ್ ಎಂಜಿನ್ ಹೊಂದಿದೆ. 2020 ರ ಹೊತ್ತಿಗೆ ಸಾರ್ವಜನಿಕ ಸೇವೆಗೆ ಲಭ್ಯ.
***
ನಗರದ ಜನಸಂಖ್ಯೆ ಹೆಚ್ಚುತ್ತಾ ಹೋದಂತೆ ವಾಹನಗಳ ಸಂಖ್ಯೆಯೂ ದ್ವಿಗುಣಗೊಳ್ಳುತ್ತಿದೆ. ಇದರಿಂದ ಟ್ರಾಫಿಕ್ ಸಮಸ್ಯೆಯೊಂದಿಗೆ ಪರಿಸರ ಮಾಲಿನ್ಯವೂ ಅಧಿಕವಾಗುತ್ತದೆ. ಇಂತಹ ಸಂದರ್ಭದಲ್ಲಿ ಏರ್‌ಟ್ಯಾಕ್ಸಿ ಹಾಗೂ ಎಲೆಕ್ಟ್ರಿಕ್ ವಾಹನಗಳು ಅಗತ್ಯ
ರೋಲ್ಸ್ ರಾಯ್ಸ್ (ಟ್ವಿಟರ್‌ನಲ್ಲಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.