‘ಇಯಂ ಆಕಾಶವಾಣಿ ಸಂಪ್ರತಿ ವಾರ್ತಾಃ ಶ್ರೂಯಂತಾಮ್... ಪ್ರವಾಚಕಃ ಬಲದೇವಾನಂದ ಸಾಗರಃ...’ ನಿಮ್ಮಲ್ಲಿ ಎಷ್ಟು ಮಂದಿಗೆ ಈ ಧ್ವನಿ ನೆನಪಿದೆ? ರೇಡಿಯೊ ಕೇಳುವ ಹವ್ಯಾಸ ಇರುವವರು ಮರೆಯಲು ಹೇಗೆ ಸಾಧ್ಯ ಅಲ್ವಾ?
ಹಳ್ಳಿಗಳಲ್ಲಿ ಬೆಳಿಗ್ಗೆ ಆರು ಗಂಟೆಗೆ ರೇಡಿಯೊ ಚಾಲೂ ಮಾಡಿದರೆ, ಚಿಂತನ, ರೈತರಿಗೆ ಸಲಹೆ, ಸಂಸ್ಕೃತ ವಾರ್ತೆ, ಕಾರ್ಯಕ್ರಮ ವಿವರ, ಪ್ರದೇಶ ಸಮಾಚಾರ, ಚಿತ್ರಗೀತೆ... ಹೀಗೆ ಒಂದಾದಮೇಲೊಂದು ಕಾರ್ಯಕ್ರಮಗಳು ಬಿತ್ತರವಾಗುತ್ತಿದ್ದರೆ, ಕೆಲಸದಲ್ಲಿ ಮಗ್ನರಾಗಿದ್ದವರಿಗೆ ಒಂದು ಕಾರ್ಯಕ್ರಮ ಮುಗಿದು ಇನ್ನೊಂದು ಆರಂಭವಾದರೆ ಸಮಯ ಎಷ್ಟಾಗಿದೆ ಎಂದು ತಿಳಿಯುತ್ತಿತ್ತು. ಕೊನೆಗೆ ರೇಡಿಯೊ ಕಿವಿ ಹಿಂಡುತ್ತಿದ್ದುದು ಮಧ್ಯಾಹ್ನ 2ಕ್ಕೆ ಸರಿಯಾಗಿ ಇದೀಗ ಇಂಗ್ಲಿಷ್‌ನಲ್ಲಿ ವಾರ್ತೆಗಳು ಎನ್ನುತ್ತಿದ್ದಾಗಲೇ. ಮತ್ತೆ ಸಂಜೆ ಹೊತ್ತಿಗೆ ನಾನಾ ಕಾರ್ಯಕ್ರಮಗಳು, ಸುದ್ದಿ, ಪ್ರದೇಶ ಸಮಾಚಾರ, ಹರಟೆ ಎಲ್ಲವೂ ಮನರಂಜಿಸುತ್ತಿದ್ದವು.
ಆದರೆ, ಇಂದು ಹಳ್ಳಿಗಳಲ್ಲೂ ರೇಡಿಯೊ ಸದ್ದು ಕೇಳುವುದು ವಿರಳ. ಟಿವಿ ಮತ್ತು ಮೊಬೈಲ್ ಬಳಕೆ ಹೆಚ್ಚಾಗುತ್ತಿದ್ದಂತೆಯೇ ರೇಡಿಯೊ ತಯಾರಿಕೆ ಮತ್ತು ಬಳಕೆ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಿದೆ. ಹೊಸ ನೀರು ಬಂದಂತೆ ಹಳೆ ನೀರು ಹೋಗಲೇಬೇಕು ಎನ್ನಿ. ಆದರೆ, ಈಗ ಇಲ್ಲಿ ಹೇಳಲು ಹೊರಟಿರುವುದು, ಮೊಬೈಲ್‌ನಲ್ಲಿಯೇ ನಿಮ್ಮೂರ ಆಕಾಶವಾಣಿ ಕೇಳಬಹುದು ಎನ್ನುವ ವಿಷಯದ ಬಗ್ಗೆ.
ಗ್ರಾಮೀಣ ಭಾಗದಿಂದ ಕೆಲಸಕ್ಕಾಗಿ ನಗರಕ್ಕೆ ಬಂದಿರುವವರು ಈಗಲೂ ಆಕಾಶವಾಣಿಯ ಕಾರ್ಯಕ್ರಮಗಳನ್ನು ನೆನಪಿಸಿಕೊಳ್ಳದೇ ಇರುವುದಿಲ್ಲ. ಈ ರೀತಿ ಆಕಾಶವಾಣಿ ಕೇಳ ಬಯಸುವವರಿಗಾಗಿ ಪ್ರಸಾರ ಭಾರತಿಯ newsonair ಎನ್ನುವ ಆ್ಯಪ್ ಇದೆ. ಇದರಲ್ಲಿ ಕಲಬುರ್ಗಿ, ಧಾರವಾಡ, ಮಂಗಳೂರು, ಹಾಸನ, ಮೈಸೂರು. ವಿವಿಧಭಾರತಿ ಸೇರಿದಂತೆ ಪ್ರಾದೇಶಿಕ ಭಾಷೆಗಳ ಪ್ರತಿಯೊಂದು ಸ್ಟೇಷನ್‌ಗಳೂ ಲಭ್ಯವಿವೆ. 230ಕ್ಕೂ ಅಧಿಕ ರೇಡಿಯೊ ಚಾನಲ್‌ಗಳು, ಲೈವ್ ಟಿವಿ, ನ್ಯೂಸ್ ಜತೆಗೆ ಆಕಾಶವಾಣಿ, ಆಲ್ ಇಂಡಿಯಾ ರೇಡಿಯೊ ಮತ್ತು ದೂರದರ್ಶನದಿಂದ ಪ್ರಸ್ತುತ ವಿಷಯಗಳು ಮತ್ತು ಮನರಂಜನಾ ಕಾರ್ಯಕ್ರಮಗಳು ಇದರಲ್ಲಿ ಸಿಗುತ್ತವೆ.
ಈಗಾಗಲೇ 10 ಲಕ್ಷಕ್ಕೂ ಅಧಿಕ ಮಂದಿ ಇದನ್ನು ಡೌನ್‌ಲೋಡ್ ಮಾಡಿಕೊಂಡು ಬಳಸುತ್ತಿದ್ದಾರೆ. ಹಾಗಾದರೆ ಇನ್ನೇಕೆ ತಡ? ನೀವೂ ಸಹ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ನಿಮ್ಮಿಷ್ಟದ ಸ್ಟೇಷನ್ ಕೇಳಿ, ಆನಂದಿಸಿ.
https://play.google.com/store/apps/details?id=com.parsarbharti.airnews
ಟೆಕ್ನೊ ಸ್ಪಾರ್ಕ್ ಗೊ ಪ್ಲಸ್
ಟೆಕ್ನೊ ಕಂಪನಿಯು ಪ್ರೀಮಿಯಂ ಜತೆಗೆ ಕೈಗೆಟುಕುವ ಬೆಲೆಗೆ ಉತ್ತಮ ವೈಶಿಷ್ಟ್ಯಗಳಿರುವ ಸ್ಮಾರ್ಟ್‌ಫೋನ್‌ಗಳನ್ನೂ ಬಿಡುಗಡೆ ಮಾಡುತ್ತಿದೆ. ಭಾರತದ ಮಾರುಕಟ್ಟೆಗೆ ಹೊಸ ವರ್ಷದ ಮೊದಲ ಫೋನ್ ಸ್ಪಾರ್ಕ್ ಗೊ ಪ್ಲಸ್ ಬಿಡುಗಡೆ ಮಾಡಿದೆ. ₹ 5 ಸಾವಿರದಿಂದ ₹ 7 ಸಾವಿರ ಬೆಲೆಯಲ್ಲಿ 6.52 ಇಂಚಿನ ಎಚ್‌ಡಿ ಪ್ಲಸ್ ಸ್ಕ್ರೀನ್ ನೀಡುತ್ತಿರುವ ಮೊದಲ ಕಂಪನಿ ಎಂದು ಹೇಳಿಕೊಂಡಿದೆ. ಇದರ ಬೆಲೆ ₹ 6,299.
ಡಾಟ್ ನಾಚ್ ವಿನ್ಯಾಸ, 20:9 ಆಸ್ಪೆಕ್ಟ್ ರೇಶಿಯೊ, 4 ಸಾವಿರ ಎಂಎಎಚ್ ಬ್ಯಾಟರಿ, ಕೃತಕ ಬುದ್ಧಿಮತ್ತೆಯ 8ಎಂಪಿ ರಿಯರ್ ಕ್ಯಾಮೆರಾ ಡ್ಯುಯಲ್ ಫ್ಲಾಷ್‌ಲೈಟ್ ಹೊಂದಿದೆ. ಸೆಲ್ಫಿ ಕ್ಯಾಮೆರಾ 8ಎಂಪಿ ಇದ್ದು ಫ್ಲ್ಯಾಷ್ ಇದೆ. ಆಂಡ್ರಾಯ್ಡ್ 9.0 ಗೋ ಒಎಸ್ ಹೊಂದಿದ್ದು, ಕ್ವಾಡ್ ಕೋರ್ 2.0 ಜಿಗಾಹರ್ಟ್ಸ್ ಸಿಪಿಯು ಪ್ರೊಸೆಸರ್, ಫೇಸ್ ಅನ್‌ಲಾಕ್ ಮತ್ತು ಸ್ಮಾರ್ಟ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್, 2ಜಿಬಿ ರ್‍ಯಾಮ್ ಮತ್ತು 32 ಜಿಬಿ ರೋಮ್ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.