ನವದೆಹಲಿ: ಗೂಗಲ್ ಪ್ಲೇ ಸ್ಟೋರ್‌ನಲ್ಲಿರುವ ಎಲ್ಲ ಆ್ಯಪ್‌ಗಳು ಸುರಕ್ಷಿತವಲ್ಲ ಎಂಬುದಕ್ಕೆ ಮತ್ತೊಂದು ನಿದರ್ಶನ ದೊರೆತಿದ್ದು, ನಮ್ಮ ಮೊಬೈಲ್ ಫೋನ್‌ಗಳಿಗೆ ಆ್ಯಪ್ ಅಳವಡಿಸಿಕೊಳ್ಳುವಾಗ ಕಟ್ಟೆಚ್ಚರ ವಹಿಸಬೇಕು ಎಂಬುದನ್ನು ಮತ್ತೆ ನೆನಪಿಸಿದೆ.
ಈಗ ಇರುವವುಗಳಲ್ಲಿ ಕನಿಷ್ಠ 15 ಆ್ಯಪ್‌ಗಳು ಪದೇ ಪದೇ ಪಾಪ್-ಅಪ್ ಆಗುತ್ತಾ, ಬಳಕೆದಾರರಿಗೆ ತಿಳಿಯದಂತಾಗಲು, ಲಾಂಚರ್‌ನಲ್ಲಿ ತಮ್ಮ ಐಕಾನ್‌ಗಳನ್ನು ಮರೆ ಮಾಚಿ ದೊಡ್ಡ ಪ್ರಮಾಣದಲ್ಲಿ ಮಾಹಿತಿ ಸಂಗ್ರಹಣೆಯಲ್ಲಿ ತೊಡಗಿವೆ ಎಂದು ಸೋಫೋಸ್ ಎಂಬ ಜಾಗತಿಕ ಸೈಬರ್ ಭದ್ರತಾ ಏಜೆನ್ಸಿಯ ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ.
ಅವುಗಳಲ್ಲಿ ಕೆಲವು ಆ್ಯಪ್‌ಗಳಂತೂ ಫೋನ್‌ನ ಆ್ಯಪ್ ಸೆಟ್ಟಿಂಗ್ಸ್ ಪೇಜ್‌ನಲ್ಲಿ ಗುರುತು ಮರೆ ಮಾಚಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಿವೆ ಎಂದೂ ಏಜೆನ್ಸಿ ಎಚ್ಚರಿಸಿದೆ.
ಗೂಗಲ್ ಪ್ಲೇ ಮಾರ್ಕೆಟ್‌ನಲ್ಲಿರುವ ಪುಟಗಳಲ್ಲಿರುವ ಮಾಹಿತಿಯಂತೆ, ವಿಶ್ವಾದ್ಯಂತ ಸುಮಾರು 13 ಲಕ್ಷ ಸ್ಮಾರ್ಟ್ ಸಾಧನಗಳಲ್ಲಿ ಕನಿಷ್ಠ ಒಂದಾದರೂ ಇಂಥಹಾ ಆ್ಯಪ್‌ಗಳು ಇನ್‌ಸ್ಟಾಲ್ ಆಗಿವೆ.
ಈ ಆ್ಯಪ್ ಅನ್ನು ಮೊದಲು ಪ್ರಾರಂಭ ಮಾಡಿದಾಗ, 'ನಿಮ್ಮ ಸಾಧನಕ್ಕೆ ಈ ಆ್ಯಪ್ ಹೊಂದಾಣಿಕೆಯಾಗುವುದಿಲ್ಲ' ಎಂಬ ಮಾಹಿತಿ ಕಾಣಿಸುತ್ತದೆ. ಈ ಆ್ಯಪ್‌ನಲ್ಲಿ ಏನೋ ದೋಷವಿರಬೇಕು, ಇದರಿಂದಾಗಿ ಕ್ರ್ಯಾಶ್ ಆಗಿರಬಹುದು ಅಂತ ನೀವಂದುಕೊಳ್ಳುತ್ತೀರಿ. ಈ ಸಂದೇಶ ಕಾಣಿಸಿಕೊಂಡ ತಕ್ಷಣ ಈ ಆ್ಯಪ್, ಗೂಗಲ್ ಪ್ಲೇಸ್ಟೋರ್‌ಗೆ ನಿಮ್ಮನ್ನು ಕರೆದೊಯ್ದು, ಆ ಪುಟವು ಗೂಗಲ್ ಮ್ಯಾಪ್ಸ್ ಆ್ಯಪ್‌ನ ಪುಟಕ್ಕೆ ನ್ಯಾವಿಗೇಟ್ ಆಗುತ್ತದೆ. ಗೂಗಲ್ ಮ್ಯಾಪ್ಸ್‌ನಲ್ಲೇ ಏನೋ ಸಮಸ್ಯೆಯಿರಬಹುದು ಅಂತ ನೀವಂದುಕೊಳ್ಳುವಂತೆ ಮಾಡುವುದು ಇದರ ಉದ್ದೇಶ.
ಆ ಬಳಿಕ ಆ್ಯಪ್‌ಗಳು ತಮ್ಮ ಐಕಾನ್ ಅನ್ನು ಮರೆ ಮಾಚಿ, ಆ್ಯಪ್ ಲಾಂಚರ್‌ನ ಆ್ಯಪ್ ಟ್ರೇಯಲ್ಲಿ ಕಾಣಿಸಿಕೊಳ್ಳುವುದೂ ಇಲ್ಲ. ಅಂದರೆ, ಮರೆಯಾಗಿಯೇ ಕೆಲಸ ಮಾಡುತ್ತಿರುತ್ತವೆ ಎಂದು ಸೋಫೋಲ್ಯಾಬ್ಸ್ ಪ್ರಧಾನ ಸಂಶೋಧಕರಾದ ಆಂಡ್ರ್ಯೂ ಬ್ರ್ಯಾಂಟ್ ಹೇಳಿದ್ದಾರೆ.
ಈ 15ರಲ್ಲಿ 9 ಆ್ಯಪ್‌ಗಳು ನಕಲಿ ಹೆಸರು ಮತ್ತು ಐಕಾನ್‌ಗಳ ಮೂಲಕ ಬಳಕೆದಾರರ ದಾರಿತಪ್ಪಿಸಿ, ಇನ್‌ಸ್ಟಾಲ್ ಮಾಡಿಕೊಳ್ಳಲು ಪ್ರೇರೇಪಿಸುತ್ತವೆ. ಹೀಗಾಗಿ, ಗೂಗಲ್ ಪ್ಲೇ ಸ್ಟೋರ್‌ನಿಂದ ಯಾವುದೇ ಆ್ಯಪ್ ಇನ್‌ಸ್ಟಾಲ್ ಮಾಡಿಕೊಳ್ಳುವ ಮೊದಲು ಅದರ ಪೂರ್ವಾಪರ ವಿವರಣೆಯನ್ನು ನೋಡಿಯೇ ಮುಂದುವರಿಯುವುದು ಸೂಕ್ತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.