ನವದೆಹಲಿ: ಆ್ಯಪಲ್ ಮತ್ತು ಸ್ಯಾಮ್ಸಂಗ್ ಕಂಪನಿಗಳು ತಮ್ಮ 5ಜಿ ಸ್ಮಾರ್ಟ್‌ಫೋನ್‌ಗಳ ತಂತ್ರಾಂಶವನ್ನು ಡಿಸೆಂಬರ್ ವೇಳೆಗೆ ಮೇಲ್ದರ್ಜೆಗೇರಿಸುವುದಾಗಿ ತಿಳಿಸಿವೆ.
ಐಫೋನ್ 12, 13, 14 ಮತ್ತು ಐಫೋನ್ ಎಸ್‌ಇ ಒಳಗೊಂಡು ಈಚಿನ ಹ್ಯಾಂಡ್‌ಸೆಟ್‌ಗಳ ತಂತ್ರಾಂಶವನ್ನು ಮೇಲ್ದರ್ಜೆಗೆ ಏರಿಸಲಾಗುತ್ತದೆ ಎಂದು ಉದ್ಯಮದ ಮೂಲಗಳು ಹೇಳಿವೆ.
‘ನಮ್ಮ ಪೂರೈಕೆ ಪಾಲುದಾರರೊಂದಿಗೆ ಕೆಲಸ ಮಾಡುತ್ತಿದ್ದೇವೆ. ನೆಟ್‌ವರ್ಕ್ ಗುಣಮಟ್ಟದ ಪರೀಕ್ಷೆ ಪೂರ್ಣಗೊಂಡ ನಂತರ ಐಫೋನ್ ಬಳಕೆದಾರರಿಗೆ 5ಜಿ ಸೇವೆಗಳ ಉತ್ತಮ ಅನುಭವ ಸಿಗುವಂತೆ ಮಾಡಲಾಗುವುದು’ ಎಂದು ಆ್ಯಪಲ್ ಕಂಪನಿಯ ಪ್ರಕಟಣೆ ತಿಳಿಸಿದೆ.
ತಂತ್ರಾಂಶ ಮೇಲ್ದರ್ಜೆಗೇರಿಸುವ ಮೂಲಕ 5ಜಿ ಲಭ್ಯತೆಯನ್ನು ಸಕ್ರಿಯಗೊಳಿಸಲಾಗುವುದು. ಡಿಸೆಂಬರ್‌ನಲ್ಲಿ ಐಫೋನ್ ಬಳಕೆದಾರರಿಗೆ ಸೇವೆಯು ಸಿಗುವುದು ಶುರುವಾಗಲಿದೆ ಎಂದು ಕಂಪನಿ ಹೇಳಿದೆ.
ನವೆಂಬರ್ ತಿಂಗಳ ಮಧ್ಯಭಾಗದ ವೇಳೆಗೆ ಕಂಪನಿಯ ಎಲ್ಲ 5ಜಿ ಸಾಧನಗಳ ತಂತ್ರಾಂಶ ಮೇಲ್ದರ್ಜೆಗೇರಿಸಲಾಗುವುದು ಎಂದು ಸ್ಯಾಮ್ಸಂಗ್ ಇಂಡಿಯಾ ವಕ್ತಾರರೊಬ್ಬರು ತಿಳಿಸಿದ್ದಾರೆ.
5ಜಿ ಅಳವಡಿಕೆಯು ಕುರಿತು ಎಲೆಕ್ಟ್ರಾನಿಕ್ಸ್ ಮತ್ತು ಐ.ಟಿ. ಅಧಿಕಾರಿಗಳು ಬುಧವಾರ ಸಭೆ ನಡೆಸಿದರು. ಆ್ಯಪಲ್, ಸ್ಯಾಮ್ಸಂಗ್, ವಿವೊ, ಶಓಮಿ ಕಂಪನಿಯ ಅಧಿಕಾರಿಗಳು ಮತ್ತು ದೂರಸಂಪರ್ಕ ಸೇವೆಗಳನ್ನು ನೀಡುವ ರಿಲಯನ್ಸ್, ಏರ್‌ಟೆಲ್, ವೊಡಾಫೋನ್ ಐಡಿಯಾ ಕಂಪನಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಪಿಕ್ಸಲ್ 7, 7 ಪ್ರೊ ಮತ್ತು ಪಿಕ್ಸಲ್ 6ಎ ಹ್ಯಾಂಡ್‌ಸೆಟ್‌ಗಳು 5ಜಿ ಸಾಮರ್ಥ್ಯದ್ದಾಗಿವೆ. ಆದಷ್ಟು ಬೇಗ 5ಜಿ ಸೇವೆಗಳು ಲಭ್ಯವಾಗುವಂತೆ ಮಾಡಲಾಗುವುದು ಎಂದು ಗೂಗಲ್ ವಕ್ತಾರರೊಬ್ಬರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.