ಒಬ್ಬೊಬ್ಬರಿಗೆ ಒಂದೊಂದರ ಖಯಾಲಿ; ಕೆಲವರಿಗೆ ಹೊಸ ಪುಸ್ತಕಗಳ ಹುಚ್ಚು, ಓದಲು ಸಮಯವಿದೆಯೋ ಇಲ್ಲವೋ ತಂದು ಮನೆಯಲ್ಲಿ ತುಂಬಿಸುವುದೇ ಕೆಲಸ. ಇದಾದರೂ ವಾಸಿ; ಇನ್ನೂ ಕೆಲವರಿಗೆ ಹೊಸ ಒಡವೆಯ, ಹೊಸ ಬಗೆಯ ದಿರಿಸುಗಳ ಹುಚ್ಚು; ಕಪಾಟು ತುಂಬಿ ತುಳುಕುತ್ತಿದ್ದರೂ ಹೊಸ ದಿರಿಸುಗಳ ಜೊತೆಗೆ ಮತ್ತೊಂದು ಹೊಸ ಕಪಾಟನ್ನೂ ಆರ್ಡರ್ ಮಾಡಿಬಿಡುತ್ತಾರೆ.
ಇತ್ತೀಚೆಗೆ ಇಂಥವರಿಗಿಂತಲೂ ಹೆಚ್ಚಿಗೆ ಕಾಣಸಿಗುವುದು ಮೊಬೈಲ್‌ಪ್ರಿಯರು; ಹೊಸ ಮೊಬೈಲ್ ಕೈಗೆ ಬಂದು ತಿಂಗಳೂ ಕಳೆದಿರುವುದಿಲ್ಲ, ಮತ್ತೊಂದು ಹೊಸ ಅಪ್ಡೇಟ್ ಇದೆ ಎಂದು ತಿಳಿದ ಕೂಡಲೇ ಎಕ್ಸ್ಚೇಂಜ್ ಮಾಡಿ ಸುಧಾರಿತ ಆವೃತ್ತಿಯ ಮೊಬೈಲ್ ಫೋನನ್ನು ಕೊಳ್ಳುತ್ತಾರೆ; ಎಲ್ಲರೂ ಇವರಷ್ಟು ಸ್ಥಿತಿವಂತರಿಲ್ಲದಿರಬಹುದು ಅಥವಾ ಅನವಶ್ಯಕವಾಗಿ ವೆಚ್ಚ ಮಾಡಬಾರದು ಎಂಬ ಪರಿಜ್ಞಾನವಿರುವ ವಿವೇಕಿಗಳಿರಬಹುದು.
ಆದರೆ ಸಾಮಾನ್ಯವಾಗಿ ಎಲ್ಲರೂ ತಮ್ಮ ಹಳೆಯ ಮೊಬೈಲನ್ನು ಕೊಟ್ಟು ಹೊಸದನ್ನು ಕೊಳ್ಳುವುದು ಅದರ ಪರದೆ ಅಥವಾ ಬ್ಯಾಟರಿಗೆ ಸಮಸ್ಯೆ ಬಂದಾಗ. ಫೋನಿನಲ್ಲಿ ಏನೂ ಕಾಣುತ್ತಿಲ್ಲ ಅಥವಾ ಬ್ಯಾಟರಿಯಲ್ಲಿ ಚಾರ್ಜ್ ನಿಲ್ಲುತ್ತಿಲ್ಲ ಎಂದಾಗ ಉಪಯೋಗಿಸಲು ಹೇಗೆ ಸಾಧ್ಯ ಅಲ್ಲವೇ? ಮೊಬೈಲ್ ಫೋನುಗಳಲ್ಲಿ ಸಾಮಾನ್ಯವಾಗಿ ಬಳಕೆಯಾಗುವ ಲಿಥಿಯಮ್ ಅಯಾನ್ ಬ್ಯಾಟರಿಗಳಲ್ಲಿ ಏಕೆ ಹೆಚ್ಚು ಸಮಯ ಚಾರ್ಜ್ ನಿಲ್ಲುವುದಿಲ್ಲ ಮತ್ತು ಅದನ್ನು ಮತ್ತಷ್ಟು ಸುಧಾರಿತ ರೂಪದಲ್ಲಿ ತಯಾರಿಸುವುದು ಹೇಗೆ ಎಂಬುದರ ಮೇಲೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಸಂಶೋಧನೆ ನಡೆಸಿದ್ದಾರೆ ಹಾಗೂ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ.
ಈ ಲಿಥಿಯಂ ಅಯಾನ್ ಬ್ಯಾಟರಿಗಳು ನೋಡಲು ‘ಇಷ್ಟೇ’ ಅಗಲವಿದ್ದರೂ ಅದರ ಒಳಗೆ ಎಷ್ಟೆಲ್ಲಾ ರಾಸಾಯನಿಕ ಕ್ರಿಯೆಗಳು ನಡೆಯುತ್ತವೆ ಗೊತ್ತೇ? ಮುಖ್ಯವಾಗಿ ಈ ಬ್ಯಾಟರಿಯಲ್ಲಿ ಒಂದು ದ್ರವರೂಪದ ‘ಎಲೆಕ್ಟ್ರೊಲೈಟ್’ ಇದ್ದು ಲಿಥಿಯಂ ಅಯಾನ್‌ಗಳು ಈ ದ್ರವದೊಳಗೆ ಉಪಸ್ಥಿತವಿರುತ್ತವೆ. ಅಯಾನ್‌ಗಳೆಂದರೆ ಧನಾತ್ಮಕ ಅಥವಾ ಋಣಾತ್ಮಕ ಚಾರ್ಜ್ ಹೊಂದಿರುವ ಪರಮಾಣು ಎಂದರ್ಥ. ಹೋಳಿಗೆಯಲ್ಲಿರುವ ಹೂರಣದಂತೆ ಈ ಎಲೆಕ್ಟ್ರೊಲೈಟ್ ದ್ರವವಿದ್ದರೆ, ಅದರ ಮೇಲೂ ಮತ್ತೂ ಕೆಳಗೂ ಹಿಟ್ಟಿನ ಪದರದಂತೆ ಎಲೆಕ್ಟ್ರೋಡ್‌ಗಳಿರುತ್ತವೆ; ಮೇಲಿನ ಪದರ ಕಬ್ಬಿಣದ ಅಥವಾ ಕೊಬಾಲ್ಟ್‌ನಂತಹ ಲೋಹಗಳ ಆಕ್ಸೈಡ್‌ನಿಂದ ಮಾಡಲಾಗಿದ್ದು, ಇದು ಬ್ಯಾಟರಿಯ ಋಣಾತ್ಮಕ (ನೆಗೆಟಿವ್) ಭಾಗ, ಅಂದರೆ ‘ಕ್ಯಾಥೋಡ್’ ಆಗಿ ವರ್ತಿಸುತ್ತದೆ; ಕೆಳಗಿನ ಪದರವು ಇಂಗಾಲದ ಒಂದು ರೂಪವಾದ ಗ್ರಾಫೈಟ್‌ನಿಂದ ಮಾಡಲಾಗಿದ್ದು, ಇದು ಬ್ಯಾಟರಿಯ ಧನಾತ್ಮಕ (ಪಾಸಿಟಿವ್) ಭಾಗ, ಅಂದರೆ ‘ಆನೋಡ್’ ಆಗಿ ವರ್ತಿಸುತ್ತದೆ.
ಬ್ಯಾಟರಿಯು, ಚಾರ್ಜ್ ಮತ್ತು ಡಿಸ್ಚಾರ್ಜ್ ಆಗುವಾಗ, ಈ ಪಾಸಿಟಿವ್-ನೆಗೆಟಿವ್ ಕೊನೆಗಳ ನಡುವೆ ನಮ್ಮ ಲಿಥಿಯಂ ಅಯಾನ್‌ಗಳದ್ದು ಅತ್ತಿಂದಿತ್ತ ಇತ್ತಿಂದತ್ತ ನಿಲ್ಲದ ನರ್ತನ; ಆದರೆ ಇಲ್ಲೇನೋ ಸಮಸ್ಯೆ ಇದೆ ಎಂದು ಎನಿಸಿದ್ದು ಮೇಲಿಂದ ಮೇಲೆ ಬ್ಯಾಟರಿಗಳು ಬೆಂಕಿಗಾಹುತಿಯಾದಾಗ, ಸ್ಫೋಟಗಳಿಗೆ ಕಾರಣವಾದಾಗ. ಉಷ್ಣವಲಯದ ನಮ್ಮಂತಹ ದೇಶಗಳಲ್ಲಂತೂ ಇದು ಮತ್ತೂ ಹೆಚ್ಚು. ಇದರ ಹಿಂದಿರುವ ಸಮಸ್ಯೆಯೇ ದ್ರವರೂಪದ ಎಲೆಕ್ಟ್ರೊಲೈಟ್; ಅದನ್ನು ಘನರೂಪಕ್ಕೆ ಮಾರ್ಪಡಿಸುವುದು ಸಾಧ್ಯವೇ ಎಂದು ಅಧ್ಯಯನ ನಡೆಸಿದ ಸಂಶೋಧಕರಿಗೆ ಹೊಳೆದದ್ದು ಪಿಂಗಾಣಿಯಂತಹ ಸಾಮಗ್ರಿ, ಅಂದರೆ ಸೆರಾಮಿಕ್‌ನ ಬಳಕೆ.
ಸೆರಾಮಿಕ್‌ನ ವಿವಿಧ ರೂಪಗಳು ನಮ್ಮ ಅಡುಗೆಕೋಣೆಯಿಂದಾ ಬಚ್ಚಲಿನ ಟೈಲ್ಸ್‌ನವರೆಗೂ ನಮ್ಮ ದಿನನಿತ್ಯದ ಬಳಕೆಯಲ್ಲಿ ಹಾಸುಹೊಕ್ಕಾಗಿದೆ ಎನ್ನಬಹುದು. ಪಿಂಗಾಣಿ ಕಪ್ಪುಬಸಿ, ಉದ್ಯಾನದಲ್ಲಿನ ಚೆಂದದ ಕಲಾಕೃತಿಗಳು, ಫಳಫಳ ಹೊಳೆಯುವ ವಾಶ್‌ಬೇಸಿನ್ – ಎಲ್ಲೆಲ್ಲೂ ಪಿಂಗಾಣಿಯೇ; ಅದರ ಸುಧಾರಿತ ರೂಪವು ಇನ್ನು ನಮ್ಮ ಮೊಬೈಲ್ ಒಳಗೂ ಬರಬಹುದು. ಇದಕ್ಕೆ ಕಾರಣ, ಇದು ದ್ರವರೂಪೀ ಎಲೆಕ್ಟ್ರೋಲೈಟ್‌ನಂತೆ ಬೆಂಕಿಗಾಹುತಿಯಾಗದು, ಸುರಕ್ಷಿತ ಎಂಬುದೇ; ಇದಕ್ಕೆ ಒಂದು ಚೂರು ಗ್ರಾಫೈಟ್ ಆನೋಡ್‌ನ ಬದಲು ಲಿಥಿಯಂ ಲೋಹದ ಆನೋಡ್ ಸೇರಿಸಿದರೆ, ಕೆಲಸ ಮುಗೀತು ಎಂದು ಯೋಚಿಸಿ, ತಯಾರಿಸಿದ್ದೂ ಆಯಿತು. ಗ್ರಾಫೈಟ್‌ನ ಬದಲಿಗೆ ಲಿಥಿಯಂ ಲೋಹವನ್ನು ಬಳಸಿದಾಗ ಬ್ಯಾಟರಿಯ ಭಾರ ಕಡಿಮೆಯಾಗುತ್ತದೆ ಮತ್ತು ಚಾರ್ಜ್ ಹೆಚ್ಚು ಹೊತ್ತು ಉಳಿಯುತ್ತದೆ ಕೂಡ. ಆದರೆ, ಇಷ್ಟು ಅನುಕೂಲಕರ ಅಂಶಗಳಿರುವ ಘನರೂಪೀ ಬ್ಯಾಟರಿಗಳ ಬಳಕೆಯ ಆರಂಭಕ್ಕೆ ಹಸಿರುನಿಶಾನೆ ದೊರೆಯುವ ಮುನ್ನ, ಮತ್ತೊಂದು ಸಮಸ್ಯೆ ಎದುರಾಯಿತು. ಅದೇ ಲಿಥಿಯಂನ ಹೊರಚಾಚುವಿಕೆಗಳು.
ಈ ಘನಸ್ಥಿತಿಯ ಎಲೆಕ್ಟ್ರೋಲೈಟ್ ಇರುವ ಬ್ಯಾಟರಿಯನ್ನು ಚಾರ್ಜ್ ಮಾಡುವಾಗ, ಲಿಥಿಯಂನ ಹೊರಚಾಚುವಿಕೆಗಳು ಉತ್ಪತ್ತಿಯಾಗಿ, ಅದು ಪಿಂಗಾಣಿಯ ಪದರದೊಳಗೆ ಚಾಚಿಕೊಂಡು, ಆನೋಡ್ ಮತ್ತು ಕ್ಯಾಥೋಡ್‌ಗಳ ನಡುವೆ ಹಸ್ತಕ್ಷೇಪ ಮಾಡುತ್ತವೆ. ಇದರಿಂದ ಶಾರ್ಟ್‌ಸರ್ಕೀಟ್ ಆಗಿ, ಬ್ಯಾಟರಿಯು ಬಳಕೆಗೆ ಅನರ್ಹವಾಗುತ್ತದೆ. ಈ ಸಮಸ್ಯೆಯ ಮೂಲ ಕಂಡುಹಿಡಿಯಲು ಸೂಕ್ಷ್ಮದರ್ಶಕಗಳನ್ನು ಬಳಸಿ, ಈ ಲಿಥಿಯಂ ಹೊರಚಾಚುವಿಕೆಗಳನ್ನು ಕೂಲಂಕಷವಾಗಿ ಅಭ್ಯಸಿಸಿದಾಗ, ಇಲ್ಲಿ ನಡೆದಿರುವ ಮತ್ತೊಂದು ವಿದ್ಯಮಾನವು ಕಣ್ಣಿಗೆ ಬಿತ್ತು. ಅದೇನು ಗೊತ್ತೇ? ಹೀಗೆ ಲಿಥಿಯಂ ಪದರದಿಂದ ಉದ್ದುದ್ದ ಗೋಪುರಗಳಂತೆ ಹೊರಚಾಚುವಿಕೆಗಳು ಉತ್ಪತ್ತಿಯಾಗುವ ಮುನ್ನ, ಪುಟಾಣಿ ಗುಹೆಗಳಂತಹ ಕಂದರಗಳು ಉತ್ಪತ್ತಿಯಾಗಿವೆ; ಅದಕ್ಕೆ ಉತ್ತರವಾಗಿ ಈ ಹೊರಚಾಚುವಿಕೆಗಳು ಉತ್ಪಾದನೆಯಾಗಿವೆ. ಬ್ಯಾಟರಿಯು ಡಿಸ್ಚಾರ್ಜ್ ಆಗುವಾಗ ಪುಟ್ಟ ರಂಧ್ರಗಳು, ಸೂಕ್ಷ್ಮ ಕಂದರಗಳು ಉಂಟಾಗಿ, ಮತ್ತೆ ಬ್ಯಾಟರಿಯು ಚಾರ್ಜ್ ಆಗುವಾಗ ಈ ಹಿಂದೆ ನಡೆದ ಕ್ರಿಯೆಗೆ ಪ್ರತಿಕ್ರಿಯೆಯಾಗಿ ಹೊರಚಾಚುವಿಕೆಗಳು ಉಂಟಾಗಿವೆ. ಹಾಗಾಗಿ, ಆ ಕಂದರಗಳು ಮತ್ತು ಹೊರಚಾಚುವಿಕೆಗಳು ಉಂಟಾಗದಂತೆ ತಡೆದರೆ ಸಮಸ್ಯೆ ಪರಿಹಾರವಾದಂತೆಯೇ.
ಇದಕ್ಕಾಗಿ ಜಗತ್ತಿನ ಅನೇಕ ತಜ್ಞರೊಂದಿಗೆ ಸಮಾಲೋಚಿಸಿ, ಆಗ ದೊರೆತ ಪರಿಹಾರಗಳ ಮೇಲೆ ಮತ್ತಷ್ಟು ಅಧ್ಯಯನ ನಡೆಸಿದಾಗ ದೊರೆತ ಉತ್ತರ ಹೀಗಿದೆ. ಲಿಥಿಯಂ ಲೋಹದ ಪದರ ಮತ್ತು ಸೆರಾಮಿಕ್‌ನ ಪದರದ ನಡುವೆ, ಶಕ್ತಲೋಹದ ಅತ್ಯಂತ ತೆಳುವಾದ ತಡೆಗೋಡೆಯನ್ನು ನಿರ್ಮಿಸಬೇಕು; ಆಗ, ಸೆರಾಮಿಕ್‌ನ ಪದರವನ್ನು ಲಿಥಿಯಂನ ಹೊರಚಾಚುವಿಕೆಗಳಿಂದ, ಕಂದರಗಳಿಂದ ಕಾಪಾಡಿ, ಬ್ಯಾಟರಿಯ ಸ್ಥಿರತೆ ಮತ್ತು ಸಾಮರ್ಥ್ಯ ಕಾಪಾಡಬಹುದು. ಇದನ್ನು ಮತ್ತಷ್ಟು ಆಳವಾದ ಅಧ್ಯಯನಕ್ಕೆ ಒಳಪಡಿಸಿದಾಗ, ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಕಂಡುಕೊಂಡಿದ್ದೆಂದರೆ, ಲಿಥಿಯಂನೊಂದಿಗೆ ಸುಲಭವಾಗಿ ಮಿಶ್ರಲೋಹ ಅಥವಾ ‘ತವರ’ವಾಗದ ಟಂಗ್ಸ್ಟನ್ ಅಥವಾ ಮಾಲಿಬ್ಡೆನಮ್‌ನಂತಹ ಲೋಹಗಳನ್ನು ಬಳಸಿದರೆ, ಮುಂದೆ ಉಂಟಾಗಬಹುದಾದ ಇತರ ಸಮಸ್ಯೆಗಳನ್ನೂ ತಡೆಯಬಹುದು.
ಇಂತಹ ಸಂಶೋಧನೆಗಳ ಹಿಂದಿರುವ ಸಮರ್ಥ ವಿಜ್ಞಾನಿಗಳು ಹಾಗೂ ಅವರ ಎಲ್ಲೆಯಿಲ್ಲದ ಪರಿಶ್ರಮದ ಫಲವನ್ನು ಅನುಭವಿಸುವ ಪುಣ್ಯ ನಮ್ಮಂತಹ ಜನಸಾಮಾನ್ಯರದ್ದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.