ಮನುಷ್ಯನ ಸೃಷ್ಟಿಕ್ರಿಯೆಯ ಅನನ್ಯತೆ ಇರುವುದು ಕಲಾಸೃಷ್ಟಿಯ ಹದದಲ್ಲಿ. ಕೃತಕ ಬುದ್ಧಿಮತ್ತೆಗೆ ಇರುವ ಕೊರತೆಯೂ ಅದೊಂದೇ..
**
ಜನಾಂಗೀಯ ತಾರತಮ್ಯ, ವರ್ಣಭೇದ, ಅಶ್ಲೀಲ ಮನೋಭಾವ, ಸೈಬರ್ ವಂಚನೆ, ತಪ್ಪು ಮಾಹಿತಿ - ಹೀಗೆ ಸಾಲುಸಾಲು ಕೆಟ್ಟ ಕಾರಣಗಳಿಗೆ ಸುದ್ದಿಯಾಗಿರುವ ಕೃತಕ ಬುದ್ಧಿಮತ್ತೆ (Artificial Intelligence - AI) Chat GPT ಈಗ ಟ್ರೆಂಡ್‌ನಲ್ಲಿದೆ. ಈ AI ತಾಣ, ಚಾಟ್ ಮೂಲಕ ನೀವು ಕೊಡುವ ಇನ್‌ಪುಟ್ ಕಮಾಂಡ್‌ಗೆ ಕೆಲವೇ ಸೆಕೆಂಡ್‌ಗಳಲ್ಲಿ ನಿಮಗೆ ಏನು ಬೇಕೋ ಯಾವ ಸ್ವರೂಪದಲ್ಲಿ ಬೇಕೋ ಅದನ್ನು (ಹೇಗೆ ಬೇಕೋ ಹಾಗೆ ಎನ್ನುವ ಒಂದನ್ನು ಬಿಟ್ಟು) ಬರೆದುಕೊಡುತ್ತದೆ. ನಾಲ್ಕು ಪ್ಯಾರಾ ಪದ್ಯದಿಂದ ಹಿಡಿದು ನೂರಾರು ಪದಗಳ ಲೇಖನ, ಸಣ್ಣಕತೆಗಳನ್ನೂ ಈ AI ಫಟಾಫಟ್ ಬರೆದು ಬಿಸಾಕುತ್ತದೆ. ‘ಇದೇ ಕವಿತೆ, ಕತೆ, ಲೇಖನ ಬರೆಯಲು ಶುರು ಮಾಡಿದರೆ ನಮ್ಮ ಕತೆ ಏನು’ ಎಂದು ಕವಿಕುಲ ಕಳವಳಿಸುವ ಕಾಲ ಈಗ ಶುರುವಾಗಿದೆ!
ಬರೆಯಲು ಕೂರುವ ಜಾಗ, ಬೆಳಕು, ಕರ್ಟನ್‌ನ ಬಣ್ಣ, ಹವಾಮಾನ, ಮೂಡ್, ಸಿಗರೇಟ್; ಇವೆಲ್ಲಾ ಸಿಕ್ಕರೂ ಕೊನೆಗೆ ಕಾಡುವ ರೈಟರ್ಸ್ ಬ್ಲಾಕ್ - ಇದ್ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದೆ, ಟಾಸ್ಕ್ ಕೇಳಿಸಿಕೊಂಡ ಹೊಸ ಇಂಟರ್ನ್‌ನ ಹಾಗೆ ಹೇಳಿದ ಅಸೈನ್‌ಮೆಂಟ್ ಬರೆದು ಮುಗಿಸುತ್ತದೆ ಈ AI. ಕರ್ಸರ್ ಬ್ಲಿಂಕ್ ಆಗುವ ಕೆಲವು ಮೈಕ್ರೊ ಸೆಕೆಂಡ್‌ಗಳನ್ನು ಬಿಟ್ಟರೆ ಯೋಚಿಸಲೂ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಕಮಾಂಡ್‌ಗೆ ತಕ್ಕ ಹಾಗೆ ಒಂದು ಕಂಟೆಂಟ್ ಬರೆದುಕೊಟ್ಟು ನಿಮ್ಮ ಮುಂದಿನ ಅಪ್ಪಣೆಗಾಗಿ ಕಾದು ನಿಲ್ಲುತ್ತದೆ.
ಸ್ಮಾರ್ಟ್‌ಫೋನ್‌ಗಳು ಹೆಚ್ಚಾಗಿರುವ ಈ ಕಾಲದಲ್ಲಿ AI ಬಳಕೆ ಹೊಸದೇನಲ್ಲ. ಮನೆಯ ಬಹುತೇಕ ಕೆಲಸವನ್ನು ಅದೇ ಮಾಡುವಂತೆ ಮನೆಯನ್ನು ಸ್ಮಾರ್ಟ್‌ಹೋಮ್ ಮಾಡಿಕೊಂಡಿರುವ ಸ್ಮಾರ್ಟ್ ಮಂದಿಯಿಂದ ಹಿಡಿದು, AI ಎಂದರೆ ಏನು ಎಂದು ಗೊತ್ತಿಲ್ಲದೆಯೂ ಗೂಗಲ್ ಮ್ಯಾಪ್ ಬಳಸುವ ಜನರವರೆಗೂ ಇದೀಗ ಸರ್ವಾಂತರ್ಯಾಮಿ. ರೋಬೊಟಿಕ್ ಎಂದು ಕರೆಯುವ ಯಾವೆಲ್ಲಾ ಉಪಕರಣ, ಸೇವೆಗಳನ್ನು ನಾವಿಂದು ಬಳಸುತ್ತಿದ್ದೇವೆಯೋ ಅಲ್ಲೆಲ್ಲಾ ಈಗಾಗಲೇ AI ನಮಗರಿವಿಲ್ಲದೆಯೇ ಕೆಲಸ ಮಾಡುತ್ತಿದೆ. ನಿಮ್ಮ ಕೈಯಲ್ಲೊಂದು ಸ್ಮಾರ್ಟ್‌ಫೋನ್ ಇದೆ ಎಂದಾದರೆ ನೀವೂ ಅದರ ಫಲಾನುಭವಿಗಳೇ.
ಈ ತಂತ್ರಜ್ಞಾನಕ್ಕೆ ಅರ್ಧ ಶತಮಾನಕ್ಕೂ ಹೆಚ್ಚಿನ ಇತಿಹಾಸವಿದೆ. ಕಂಪ್ಯೂಟರ್ ಎಂಬ ಮಾಂತ್ರಿಕ ಉಪಕರಣ ಆವಿಷ್ಕಾರಗೊಂಡಾಗಲೇ AI ಅದರ ಗರ್ಭದಲ್ಲಿ ಮೂಡಿಯಾಗಿತ್ತು. ಮನುಷ್ಯ ತನ್ನ ಬುದ್ಧಿಯನ್ನು ತಂತ್ರಜ್ಞಾನಕ್ಕೆ ಅಳವಡಿಸುವ ಈ ಕೆಲಸಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಅಬಾಕಸ್‌ನಿಂದ ಟಾಬ್ಯುಲೇಟಿಂಗ್ ಮಷೀನ್‌ಗಳವರೆಗೆ ಈ ತಂತ್ರಜ್ಞಾನ ಸಾಗಿಬರಲು ಇದು ಸವೆಸಿರುವ ದಾರಿ ಅಂದಾಜು 4000 ವರ್ಷ! ಅದರ ಮುಂದಿನ ಶತಮಾನಗಳಲ್ಲಿ ನಡೆದಿರುವ ತಾಂತ್ರಿಕ ಆವಿಷ್ಕಾರ AIನ ಮಿದುಳನ್ನು ಸೂಕ್ಷ್ಮವಾಗಿಸುತ್ತಲೇ ಬಂದಿದೆ.
ಗೂಗಲ್ ಅಸಿಸ್ಟಂಟ್ ಬಳಸಿ ಅದರ ಅತಿ-ಮಿತಿಗಳನ್ನು ಅರಿತಿರುವವರಿಗೆ ಈ Chat GPTಯ ಬರಹದ ಕೆಲಸ ಹೆಚ್ಚೇನೂ ಅಚ್ಚರಿ ತರದಿರಬಹುದು. ಟೆಕ್‌ಸ್ಯಾವಿಗಳಿಗಂತೂ ಇದೊಂದು ಹೊಸ ವಿಷಯವೇ ಅಲ್ಲ. ಆದರೆ, ಹೇಳಿದಂತೆ ಕೇಳಿ ರಿಸಲ್ಟ್ ಕೊಡುವ ಅಸಿಸ್ಟಂಟ್ ಕೆಲಸದ ಬದಲಿಗೆ, ವಿಷಯ ಹೇಳಿದರೆ ಅದರ ಬಗ್ಗೆ ಬರೆದುಕೊಡುವ ಈ ತಾಣವು, ಬರಹ ಹಾಗೂ ಬರಹದ ಸುತ್ತ ಕೆಲಸ ಮಾಡುವ ವಲಯದಲ್ಲಿರುವವರಿಗೆ ಕೊಂಚಮಟ್ಟಿಗೆ ಅಭದ್ರತೆಯನ್ನು ಹುಟ್ಟುಹಾಕುವ ದಾರಿಯಲ್ಲಿದೆ. ಇತ್ತೀಚೆಗೆ ಮಾರುಕಟ್ಟೆ ಸೃಷ್ಟಿಸಿಕೊಳ್ಳುತ್ತಿರುವ ಕಂಟೆಂಟ್ ರೈಟಿಂಗ್ ವಲಯದಲ್ಲಿನ ಉದ್ಯೋಗಗಳಿಗಂತೂ ಇದು ಕೆಲದಿನಗಳಲ್ಲೇ ಕಲ್ಲು ಹಾಕುವುದಂತೂ ನಿಜ.
ಬರವಣಿಗೆಯ ವಿಷಯದಲ್ಲಿ ಸದ್ಯಕ್ಕೆ ಪರೀಕ್ಷೆಯಲ್ಲಿ ಅಚ್ಚುಕಟ್ಟಾಗಿ ಪುಟ ತುಂಬಿಸುವ ಚಾಲಾಕಿಗಳ ಹಂತದಲ್ಲಿದೆ ಈ Chat GPT. ಆದರೆ, ಪುಟ ತುಂಬಿಸಿರುವುದರಲ್ಲಿ ಸತ್ವವೇನಾದರೂ ಇದೆಯೇ ಎಂದು ಹುಡುಕಿದರೆ ನಿಜಬಣ್ಣ ಬಯಲಾಗುತ್ತದೆ. ಈ AIಗೆ ಸದ್ಯ ಇರುವ ಮಿತಿಯೂ ಇದೇ.
ಇದು ನೂರಾರು ಪದಗಳನ್ನು ಚಕಚಕನೆ ಬರೆದುಕೊಡಬಹುದು. ಆದರೆ, ಸತ್ವದ ವಿಚಾರದಲ್ಲಿ Chat GPT ವಿಶ್ವಾಸ ಗಳಿಸಿಕೊಳ್ಳುವುದು ಅಷ್ಟು ಸುಲಭವಿಲ್ಲ. ಅಲ್ಲದೆ, ಈ ಲೇಖನದ ಮೊದಲಿಗೆ ಪಟ್ಟಿ ಮಾಡಿರುವ ಕಳಂಕವೂ ಈಗಾಗಲೇ ಇದಕ್ಕೆ ಮೆತ್ತಿಕೊಂಡಿರುವುದರಿಂದ ಇದರ ಕಂಟೆಂಟ್ ಅನ್ನು ಕಣ್ಣು ಮುಚ್ಚಿಕೊಂಡು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ನ್ಯಾಚುರಲ್ ಲ್ಯಾಂಗ್ವೇಜ್ ಪ್ರೊಸೆಸಿಂಗ್ (NLP) ಇನ್ನೂ ಆ ಹಂತ ತಲುಪಿಲ್ಲ.
ಏನಿದು NLP?: ಮನುಷ್ಯ ಭಾಷೆಯನ್ನು ಯಂತ್ರಗಳಿಗೆ ಸಹಜವಾಗಿ ಅರ್ಥ ಮಾಡಿಸುವ ಪ್ರಕ್ರಿಯೆ ಈ NLP. ಧ್ವನಿ ಅಥವಾ ಬರಹದ ಮೂಲಕ ನೀಡುವ ಕಮಾಂಡ್ ಅನ್ನು ಯಂತ್ರಗಳು ಮನುಷ್ಯರಂತೆಯೇ ಅರ್ಥ ಮಾಡಿಕೊಳ್ಳಲು ಈ ಪ್ರಕ್ರಿಯೆ ನೆರವಾಗುತ್ತದೆ. Chat GPTಯಲ್ಲಿ ಇದರ ಮುಂದುವರಿದ ತಂತ್ರಜ್ಞಾನ ಬಳಕೆಯಾಗುತ್ತಿದೆ. ಇದೇ ಕಾರಣಕ್ಕೆ ನಾವು ಕೊಡುವ ಕಮಾಂಡ್ ಅನ್ನು ಅದು ಕ್ಷಣಮಾತ್ರದಲ್ಲೇ ಬರೆದು ಮುಗಿಸುತ್ತದೆ. ಯಾವುದೇ ಭಾಷೆಯಿಂದ ಇನ್ಯಾವುದೇ ಭಾಷೆಗೆ ಬರಹವನ್ನು ಭಾಷಾಂತರಿಸುವ, ಧ್ವನಿಯ ಮೂಲಕ ನೀಡುವ ಕಮಾಂಡ್‌ಗಳಿಗೆ ಪ್ರತಿಕ್ರಿಯಿಸುವ ಹಾಗೂ ಬರಹವನ್ನು ಸಂಸ್ಕರಿಸಿ ಸಂಕ್ಷಿಪ್ತಗೊಳಿಸುವ AIನ ಕೆಲಸವನ್ನು NLP ಸುಲಭವಾಗಿಸುತ್ತದೆ. ಮಾಹಿತಿ ಸಂಗ್ರಹ ಮತ್ತು ಬರಹದ ಸಂಸ್ಕರಣೆ ಎರಡೂ ಕೆಲಸಗಳು Chat GPTಯ ಮೂಲಕ ಆಗುತ್ತಿರುವುದರಿಂದ ಇದರ ಕೆಲಸ ಅಚ್ಚರಿಯ ಹಾಗೆ ಕಾಣುತ್ತಿದೆಯಷ್ಟೆ.
ನೀವು ಗೂಗಲ್‌ಗೆ ಕೊಡುವ ವಾಯ್ಸ್ ಕಮಾಂಡ್ ಅದರ ಸರ್ಚ್ ಎಂಜಿನ್, ಫೋಟೊ, ವಿಡಿಯೊ, ನ್ಯೂಸ್, ಮ್ಯಾಪ್, ಟ್ರಾನ್ಸ್‌ಲೇಷನ್ ಸೇರಿದಂತೆ ಗೂಗಲ್‌ನ ಎಲ್ಲಾ ಸೇವೆಗಳಲ್ಲೂ ಹುಡುಕುವಂತೆ ಮಾಡಲು ನೆರವಿಗೆ ಬರುವುದು ಇದೇ NLP. ಮನುಷ್ಯಜೀವಿಯ ಉಗಮ, ವಿಕಾಸದ ಜತೆಗೆ ಭಾಷೆಗಳಲ್ಲಿ ಏನೆಲ್ಲಾ ಬೆಳವಣಿಗೆಗಳಾಗಿವೆಯೋ ಅವನ್ನೆಲ್ಲಾ ಜೀರ್ಣಿಸಿಕೊಂಡು ಈ ತಂತ್ರಜ್ಞಾನ ಸುಧಾರಿಸುತ್ತಿದೆ. ವ್ಯಾಕರಣ, ರೂಪಕ, ವಾಕ್ಯ ರಚನೆ, ಸಂಧಿ, ಸಮಾಸ, ನುಡಿಗಟ್ಟು, ಧ್ವನಿ, ಅರ್ಥ, ಅಲಂಕಾರ - ಇವುಗಳನ್ನೆಲ್ಲಾ NLP ವ್ಯವಸ್ಥೆಯು ಯಂತ್ರಗಳಿಗೆ ಮನುಷ್ಯನಷ್ಟೇ ಸಹಜವಾಗಿ ಅರ್ಥ ಮಾಡಿಸಲು ಪ್ರಯತ್ನಿಸುತ್ತದೆ.
‘ಸೆಂಟಿಮೆಂಟ್ ಅನಾಲಿಸಿಸ್’ ಎಂಬ ಟಾಸ್ಕ್ ಅಂತೂ ನೀವು ಕಮಾಂಡ್ ಕೊಡುವಾಗ ನಿಮ್ಮ ಭಾವನೆ ಹೇಗಿದೆ ಎನ್ನುವುದನ್ನು ಗ್ರಹಿಸಿ AI ನಿಮಗೆ ಸ್ಪಂದಿಸಲು ನೆರವಾಗುತ್ತದೆ. ಇದರ ಜತೆಜತೆಗೆ RLHF (ರಿಇನ್‌ಫೋರ್ಸ್‌ಮೆಂಟ್ ಲರ್ನಿಂಗ್ ಫ್ರಮ್ ಹ್ಯುಮನ್ ಫೀಡ್‌ಬ್ಯಾಕ್) ವ್ಯವಸ್ಥೆಯೂ ಮನುಷ್ಯನನ್ನು ಅರ್ಥ ಮಾಡಿಕೊಳ್ಳಲು AIಗೆ ಸಹಕಾರಿಯಾಗುತ್ತಿದೆ.
ಕಲೆಯೂ, ತಲೆಯೂ, ವಿವೇಚನೆಯೂ…: ಮನುಷ್ಯಜೀವಿಯ ಸೃಜನಶೀಲತೆಗೆ ಮುಂದಿನ ದಿನಗಳಲ್ಲಿ ಕೆಲಸವೇ ಇಲ್ಲದಂತೆ ಮಾಡುವ ದಾಪುಗಾಲನ್ನು AI ಮಾಡುತ್ತಿದೆ ಎಂಬುದು ಸದ್ಯದ ಆತಂಕ. ಇದು ಉತ್ಪ್ರೇಕ್ಷೆ ಏನಲ್ಲ. ಸಾವಿರಾರು ವರ್ಷಗಳಿಂದ ಬೆಳೆದು ಬಂದಿರುವ ತಂತ್ರಜ್ಞಾನದ ಎಲ್ಲಾ ಆಯಾಮಗಳೊಂದಿಗೆ ಮನುಷ್ಯ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ದಾರಿಯಲ್ಲಿದೆ AI. ಕಮಾಂಡ್ ಕೊಡುವವರು ಶೇ 10ರಷ್ಟು ಮಿದುಳು ಉಪಯೋಗಿಸಿದರೆ ಉಳಿದ ಶೇ 90ರಷ್ಟು ಮಿದುಳಿನ ಕೆಲಸವನ್ನು AI ಮಾಡಿಕೊಡುತ್ತದೆ.
ಪೇಂಟ್ ಮಾಡುವ, ಹಾಡು ಹೇಳುವ, ಪಿಟೀಲು ನುಡಿಸುವ ರೋಬೊಗಳನ್ನು ತಮಾಷೆಯಾಗಿ ನೋಡುವ ಕಾಲ ಮುಗಿದಾಗಿದೆ. ಸಂಗೀತ ಕ್ಷೇತ್ರದಲ್ಲಿ ಈಗಾಗಲೇ ಬಳಕೆಯಲ್ಲಿರುವ AI ಸೌಂಡ್‌ಟ್ರ್ಯಾಕ್, ಸೌಂಡ್‌ಸ್ಕೇಪ್ ಎಡಿಟಿಂಗ್‌ನ ಬಹುಪಾಲು ಕೆಲಸವನ್ನು ತಾನೇ ಮಾಡುತ್ತಿದೆ. ಸಂಗೀತ ಸಂಯೋಜನೆ ಮಾತ್ರವಲ್ಲದೆ, ರಾಗ, ತಾಳ, ಪ್ರಾಕಾರಗಳ ಜತೆಗೆ ಯಾವ ಹಾಡುಗಾರರ ಧಾಟಿಯಲ್ಲಿ ಬೇಕೋ ಹಾಗೆ ಹಾಡನ್ನೂ AIನಿಂದ ಹಾಡಿಸಬಹುದು. ಆದರೆ, ಸೃಷ್ಟಿಕ್ರಿಯೆಯ ವಿಚಾರದಲ್ಲಿ ಈ ತಂತ್ರಜ್ಞಾನಕ್ಕಿರುವ ದೊಡ್ಡ ಮಿತಿ ಮನುಷ್ಯನಿಗಿರುವ ವಿವೇಚನೆ.
ತಂತ್ರಜ್ಞಾನದ ಭಾರೀ ಬದಲಾವಣೆಯ ಬಗ್ಗೆ ಭವಿಷ್ಯ ನುಡಿಯುವಂಥ ಸಾಕಷ್ಟು ವೈಜ್ಞಾನಿಕ ಕಾದಂಬರಿಗಳು ಶತಮಾನಗಳ ಹಿಂದೆಯೇ ಬಂದಿವೆ. 1872ರಲ್ಲಿ ಬಂದ ಸಾಮ್ಯುಲ್ ಬಟ್ಲರ್‌ನ ‘ಏರವನ್’ ಕಾದಂಬರಿಯಲ್ಲೇ AIನ ಸಾಧ್ಯತೆಗಳನ್ನು ಚಿತ್ರಿಸಲಾಗಿದೆ. ಈ ಕಾದಂಬರಿಗೆ ಪ್ರೇರಣೆಯಾಗಿದ್ದು ಚಾರ್ಲ್ಸ್ ಡಾರ್ವಿನ್‌ನ ‘ಆನ್ ದಿ ಆರಿಜನ್ ಆಫ್ ಸ್ಪೀಶೀಸ್’ ಮತ್ತು 18ನೇ ಶತಮಾನದ ಕೈಗಾರಿಕಾ ಕ್ರಾಂತಿ ಎಂಬ ಮಾತೂ ಇದೆ. ರೋಬೊಗಳ ಬಗ್ಗೆಯಂತೂ ದಂಡಿದಂಡಿ ಸಿನಿಮಾಗಳು ಬಂದಿವೆ. 1897ರ ‘Gusse etl’Automate’ ಎಂಬ ಫ್ರೆಂಚ್ ಶಾರ್ಟ್‌ನಿಂದ ಹಿಡಿದು ತಮಿಳಿನ ‘ಎಂದಿರನ್’, ಮಲಯಾಳದ ‘ಆಂಡ್ರಾಯ್ಡ್ ಕುಂಜಪ್ಪನ್’ವರೆಗೆ ಮನುಷ್ಯ - ರೋಬೊ ಸಂಬಂಧದ ವಿಷಯವಾಗಿ ಸಾಕಷ್ಟು ಸಿನಿಮಾಗಳು ಈ ತಂತ್ರಜ್ಞಾನದ ಭವಿಷ್ಯದ ಬಗ್ಗೆ ತಿಳಿಸಿವೆ.
ಹೀಗೆ ಸೃಜನಶೀಲತೆಗೆ ವಸ್ತುವಾಗುತ್ತಿದ್ದ AI ಈಗ ತಾನೇ ಹಾಡು ಹಾಡುವ, ಕವಿತೆ ಬರೆಯುವ, ಪೇಂಟ್ ಮಾಡುವ ಸೃಜನಶೀಲ ಸೃಷ್ಟಿಯ ಕೆಲಸ ಮಾಡುವ ಹಂತ ತಲುಪಿದೆ. ಕೆಲ ವರ್ಷಗಳ ಹಿಂದೆ ಡೀಪ್‌ಮೈಂಡ್ AI ಚೆಸ್‌ಗಿಂತಲೂ ಸಂಕೀರ್ಣವಾದ ‘ಗೋ’ ಆಟದಲ್ಲಿ ವಿಶ್ವ ಚಾಂಪಿಯನ್ ಅನ್ನೇ ಸೋಲಿಸಿತ್ತು. ಹೀಗೆ AI ತಂತ್ರಜ್ಞಾನ ಮತ್ತು ಅದರ ಕವಲುಗಳು ಬೆಳೆಯುತ್ತಿರುವ ಅತಿವೇಗವನ್ನು ನೋಡಿದರೆ ನಿಜಕ್ಕೂ ದಿಗಿಲಾಗುತ್ತದೆ.
AIನಿಂದ ಮನುಷ್ಯನಿಗೆ ಸಾಕಷ್ಟು ಪ್ರಯೋಜನ ಇದ್ದರೂ ಇದು ಮನುಷ್ಯನ ಬುದ್ಧಿಯನ್ನೂ ಮೀರಿ ಬೆಳೆಯುವ ಮೂಲಕ ಜಗತ್ತಿಗೆ ಅಪಾಯ ತಂದೊಡ್ಡುವ ಆತಂಕವೂ ಇದೆ. ‘AI ಮೇಲೆ ನಿಯಂತ್ರಣ ಇಡಬೇಕಾದ್ದು ಇಂದಿನ ಜಾಗತಿಕ ಜರೂರು’ ಎಂದು ಡೀಪ್‌ಮೈಂಡ್ ಕಂಪೆನಿಯ ಸಿಇಒ ಡೆಮಿಸ್ ಹಸಬೀಸ್ ಕಳೆದ ವಾರ ಸಂದರ್ಶನವೊಂದರಲ್ಲಿ ಎಚ್ಚರಿಸಿದ್ದಾರೆ. AI ಬೆಳವಣಿಗೆಯಿಂದ ಸೇವಾವಲಯದಲ್ಲಿ ದೊಡ್ಡ ಉದ್ಯೋಗ ನಷ್ಟವಾಗುವ ಸಾಧ್ಯತೆಯೂ ಇದೆ.
AI ತಂತ್ರಜ್ಞಾನ ಹೆಚ್ಚೆಚ್ಚು ಅಭಿವೃದ್ಧಿಯಾದಂತೆ ಅದು ಮನುಷ್ಯನ ಕಮಾಂಡ್‌ಗೆ ಕಾಯದೆ ತಾನೇ ನಿರ್ಧಾರ ತೆಗೆದುಕೊಳ್ಳುವ ಹಂತಕ್ಕೆ ಬೆಳೆಯುತ್ತದೆ ಎಂಬುದು ಸದ್ಯದ ದೊಡ್ಡ ಕಳವಳ. ಸೇನೆ, ಶಸ್ತ್ರಾಸ್ತ್ರ ಅಭಿವೃದ್ಧಿ, ಹಣಕಾಸು, ಷೇರು ಮಾರುಕಟ್ಟೆ ಸೇರಿದಂತೆ ಹಲವು ಕ್ಷೇತ್ರಗಳ ಮೇಲೂ AI ಬೆಳವಣಿಗೆ ಕಂಟಕಪ್ರಾಯವಾಗಬಲ್ಲದು. ಹೀಗಾಗಿಯೇ ಇದನ್ನು ಹೆಚ್ಚು ಬೆಳೆಯಲು ಬಿಡಬೇಡಿ ಎಂಬ ಕೂಗೂ ಹೆಚ್ಚಾಗುತ್ತಿರುವುದು.
ತಂತ್ರಜ್ಞಾನ ಇಷ್ಟೆಲ್ಲಾ ಮುಂದುವರೆದಿದ್ದರೂ ಮನುಷ್ಯನ ಸೃಷ್ಟಿಕ್ರಿಯೆಯ ಅನನ್ಯತೆ ಇರುವುದು ಕಲಾಸೃಷ್ಟಿಯ ಹದದಲ್ಲಿ. ಯಾವ ಬಣ್ಣ, ಯಾವ ರಾಗ, ಯಾವ ಪದ, ಯಾವ ಹದದಲ್ಲಿ ಬರಬೇಕೆನ್ನುವ ವಿವೇಚನೆಯೇ ಕೊನೆಗೂ ಕಲೆಗಾರರನ್ನು ಕೈಹಿಡಿಯುವುದು. ತಂತ್ರಜ್ಞಾನದ ಪ್ರವಾಹದಲ್ಲಿ ಕಲಾವಿದರನ್ನು ಉಳಿಸುವುದೂ ಈ ವಿವೇಚನೆಯೇ. ಹೀಗಾಗಿ ಅರಿವಿನ ಜತೆಗೆ, ಆತ್ಮದ ಅನುಭೂತಿ ಇಲ್ಲದ ತಂತ್ರಜ್ಞಾನದ ಸೃಷ್ಟಿಕ್ರಿಯೆ ಸಹಜ ಎನಿಸಲು ಇನ್ನೂ ಸಾಕಷ್ಟು ವರ್ಷ ಅದು ಸವೆಯಬೇಕೇನೋ. ಆದರೆ, ಮನುಷ್ಯನ ಹಾಗೆಯೇ AI ವರ್ತಿಸುವ ದಿನಗಳು ಬಂದರೂ ಅಚ್ಚರಿಯೇನಲ್ಲ.
ಕೊನೆ ಮಾತು: ಅಂದಹಾಗೆ, ಪ್ರಯೋಗದ ಕಾರಣಕ್ಕೆ ಈ ಲೇಖನದ ಕೆಲ ಭಾಗವನ್ನು ಇದೇ AIನಿಂದ ಕನ್ನಡದಲ್ಲಿ ಬರೆಸಲು ಪ್ರಯತ್ನಿಸಿದೆ. ಆದರೆ, ಇದರ ಕನ್ನಡ ಭಾಷಾಜ್ಞಾನ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಆದರೆ, ತಂತ್ರಜ್ಞಾನದ ನಾಗಾಲೋಟದ ವೇಗ ನೋಡಿದರೆ, ಇದೇ AI ಕನ್ನಡದಲ್ಲಿ ಇಂಥದ್ದೇ ಒಂದಿಡೀ ಲೇಖನ ಬರೆದುಕೊಡುವ ಕಾಲವೂ ದೂರ ಇಲ್ಲ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.