ADVERTISEMENT

ಬರಲಿವೆ ಡ್ರೈವಿಂಗ್ ಗೊತ್ತಿರುವ ಕಾರ್‌ಗಳು!

ಪೃಥ್ವಿರಾಜ್ ಎಂ ಎಚ್
Published 17 ಜುಲೈ 2018, 19:30 IST
Last Updated 17 ಜುಲೈ 2018, 19:30 IST
ಸ್ವಯಂಚಾಲಿತ ಕಾರು
ಸ್ವಯಂಚಾಲಿತ ಕಾರು   

ಮಲ್ಟಿ ಟಾಸ್ಕಿಂಗ್ ಮಾಯಾಜಾಲದಲ್ಲಿ ಸಿಲುಕಿರುವ ಮನುಷ್ಯನಿಗೆ 24 ಗಂಟೆ ಸಾಲುತ್ತಿಲ್ಲ. ಹೀಗಾಗಿಯೇ ನಿತ್ಯ ಹಲವು ಪ್ರಯೋಗಗಳನ್ನು ಮಾಡುತ್ತಿದ್ದಾನೆ. ವಾಷಿಂಗ್ ಮಷಿನ್, ಡಿಷ್‌ವಾಷರ್‌ನಂತಹ ಗೃಹೋಪಕರಣಗಳಿಂದ ಹಿಡಿದು, ರೋಬೊಗಳ ವರೆಗೆ ಹಲವು ವಸ್ತುಗಳನ್ನು ಬಳಕೆಗೆ ತಂದಿದ್ದಾನೆ. ಸಮಯ ನಿಗದಿಪಡಿಸಿದರೆ ಸಾಕು, ಇವು ಸ್ವಯಂಚಾಲಿತವಾಗಿ ಕೆಲಸ ಮಾಡುತ್ತವೆ. ಹೀಗಿರುವಾಗ, ಕಾರ್ ಯಾಕೆ ಚಲಾಯಿಸಬೇಕು? ಗಂಟೆಗಟ್ಟಲೇ ಸಮಯವನ್ನೇಕೆ ವ್ಯರ್ಥ ಮಾಡಬೇಕು?

ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು, ಕಾರ್‌ಗಳ ತಯಾರಿಗೆ ಸಂಬಂಧಿಸಿದಂತೆ ನಿತ್ಯ ಹಲವು ಪ್ರಯೋಗಗಳು ನಡೆಯುತ್ತಿವೆ. ಸಾರಥಿ ಅಗತ್ಯವಿಲ್ಲದ ಕಾರ್‌ಗಳ ತಯಾರಿ ಕಡೆಗೆ ಹಲವು ಸಂಸ್ಥೆಗಳು ದೃಷ್ಟಿ ನೆಟ್ಟಿವೆ.ಗೂಗಲ್, ಆ್ಯಪಲ್ ನಂತಹ ತಂತ್ರಜ್ಞಾನ ದಿಗ್ಗಜ ಸಂಸ್ಥೆಗಳು ಇದಕ್ಕೆ ಅಗತ್ಯವಾದ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಕೋಟಿಗಟ್ಟಲೇ ಹಣ ವ್ಯಯಿಸುತ್ತಿವೆ.

2025ರ ಹೊತ್ತಿಗೆ ಹಲವು ದೇಶಗಳಲ್ಲಿ ಎರಡು ಕೋಟಿ ವರೆಗೆ ಚಾಲಕರಹಿತ ಕಾರ್‌ಗಳು ಬಳಕೆಗೆ ಬರಲಿವೆ, ಎಂದು ಇನ್ಫರ್ಮೇಷನ್ ಹ್ಯಾಡ್ಲಿಂಗ್ ಸರ್ವೀಸಸ್ (ಐಎಚ್‌ಎಸ್) ಅಭಿಪ್ರಾಯಪಟ್ಟಿದೆ.

ADVERTISEMENT

ಜನರಲ್ ಮೋಟರ್ಸ್ ಪ್ರಯೋಗ ಯಶಸ್ವಿ

ವಾಹನ ಉದ್ಯಮದಲ್ಲಿ 100 ವರ್ಷ ಅನುಭವ ಹೊಂದಿರುವ ಸಂಸ್ಥೆ ಜನರಲ್ ಮೋಟರ್ಸ್. ಈ ಸಂಸ್ಥೆ 2015ರಲ್ಲೇ, ಚಾಲಕ ರಹಿತ ಷೆವೀ ಬೋಲ್ಟ್ ಕಾರು, 20 ನಿಮಿಷ ಸಂಚರಿಸಿದ ವಿಡಿಯೊ ಬಿಡುಗಡೆ ಮಾಡಿತ್ತು. ಕ್ರೂಜ್‌ ತಂತ್ರಾಂಶದ ಮೂಲಕ ಸೇರಬೇಕಾದ ಗಮ್ಯವನ್ನು ಗೊತ್ತುಪಡಿಸಿದರೆ ಸಾಕು, ಈ ಕಾರ್ ಗುರಿಮುಟ್ಟಿಸುತ್ತದೆ ಎಂದು ತಿಳಿಸಿತ್ತು.ಇಂತಹ ಕಾರ್‌ಗಳ ತಯಾರಿ ಗುಟ್ಟು ಬಿಟ್ಟುಕೊಡದ ಈ ಸಂಸ್ಥೆ, 2021ರ ಹೊತ್ತಿಗೆ ಗಣನೀಯ ಪ್ರಮಾಣದಲ್ಲಿ ರಸ್ತೆಗಿಳಿಸಲು ಯೋಚಿಸುತ್ತಿದೆ.

ನಾವೇ ಮೊದಲು

ಸ್ವಯಂಚಾಲಿತ ಕಾರ್‌ಗಳನ್ನು ಎಲ್ಲರಿಗಿಂತ ಮುಂಚೆ ನಾವೇ ಬಳಕೆಗೆ ತರುತ್ತೇವೆ, ಎಂದು ವಾಹನ ತಯಾರಿಕಾ ಸಂಸ್ಥೆ ಫೋರ್ಡ್ ಹೇಳಿದೆ. 2021ರ ಹೊತ್ತಿಗೆ ಪೂರ್ಣ ಪ್ರಮಾಣದ ಚಾಲಕ ರಹಿತ ಕಾರ್‌ಗಳನ್ನು ರಸ್ತೆಗಿಳಿಸುತ್ತೇವೆ ಎಂದು ಪ್ರಕಟಿಸಿದೆ.ಇದಕ್ಕಾಗಿ ಸುಮಾರು ₹44 ಸಾವಿರಕೋಟಿ ಹೂಡಿಕೆ ಮಾಡಲು ನಿರ್ಧರಿಸಿದೆ.ಈ ಕಾರ್‌ಗಳಲ್ಲಿ ಸ್ಟೀರಿಂಗ್ ಚಕ್ರ, ಬ್ರೇಕ್ ಮತ್ತು ಆ್ಯಕ್ಸಿಲೇಟರ್ ಪೆಡಲ್ಸ್ ಇರುವುದಿಲ್ಲ ಎಂದು ಹೇಳಿದೆ. ಈ ನಿಟ್ಟಿನಲ್ಲಿ ಲೆವೆಲ್ -4 ತಂತ್ರಜ್ಞಾನವನ್ನು ಒಳಗೊಂಡ ಕಾರ್‌ಗಳ ತಯಾರಿ ಕಡೆಗೆ ಗಮನ ಹರಿಸುತ್ತಿರುವುದಾಗಿ ಹೇಳಿದೆ.

ವಿಲಾಸಿ ಕಾರ್‌ಗಳನ್ನು ತಯಾರಿಸುವ ಮೆರ್ಸಿಡಿಸ್ ಬೆಂಜ್‌ನ ಮಾತೃಸಂಸ್ಥೆ ಡೈಮ್ಲರ್ ಕೂಡ, ಸ್ವಯಂಚಾಲಿತ ಕಾರ್‌ಗಳ ತಯಾರಿಗಾಗಿ ಜರ್ಮನಿಯ ಬಾಷ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.2021ರ ಹೊತ್ತಿಗೆ ಪೂರ್ಣ ಪ್ರಮಾಣದ ಚಾಲಕರಹಿತ ಕಾರ್ ಬಳಕೆಗೆ ತರಬೇಕೆಂಬುದು ಈ ಸಂಸ್ಥೆಗಳು ಯೋಜನೆ ರೂಪಿಸಿವೆ.

ಪ್ರಮುಖ ಕಾರ್ ತಯಾರಿಕಾ ಸಂಸ್ಥೆಗಳಲ್ಲಿ ಒಂದಾದ ನಿಸಾನ್ ಸಹ ಈ ನಿಟ್ಟಿನಲ್ಲಿ ಪ್ರಯೋಗ ನಡೆಸುತ್ತಿದ್ದು,ನಾಸಾ ಸೇರಿದಂತೆ ಹಲವು ಸಂಶೋಧನಾ ಸಂಸ್ಥೆಗಳ ಸಹಕಾರ ಪಡೆದುಕೊಳ್ಳುತ್ತಿದೆ.

ಗೂಗಲ್ ಪ್ರಯೋಗ

2009ರಲ್ಲೇ ಚಾಲಕರಹಿತ ಕಾರ್‌ಗಳ ತಯಾರಿ ಕಡೆಗೆ ದೃಷ್ಟಿ ನೆಟ್ಟಿರುವ ಗೂಗಲ್, ‘ವೆಮೊ’ ಎಂಬ ಯೋಜನೆ ರೂಪಿಸಿದೆ. ಇದಕ್ಕಾಗಿ 500 ಕಾರ್‌ಗಳನ್ನು ಪ್ರಯೋಗಕ್ಕೆ ಬಳಸಿಕೊಳ್ಳುತ್ತಿದೆ. ‘ಉತ್ತಮ ಕಾರ್ ತಯಾರಿಸಬೇಕೆಂಬುದಷ್ಟೇ ನಮ್ಮ ಗುರಿಯಲ್ಲ, ಉತ್ತಮ ಚಾಲಕನನ್ನೂ ತಯಾರಿಸಲು ಪ್ರಯತ್ನಿಸುತ್ತಿದ್ದೇವೆ’ ಎಂದು ಈ ಯೋಜನೆಯ ನೇತೃತ್ವ ವಹಿಸಿರುವ ಜಾನ್ ಕ್ರಾಫಿಕ್ಸ್ ತಿಳಿಸಿದ್ದಾರೆ.

ಇಂಟೆಲ್ ಕೂಡ ಹಿಂದೆ ಬಿದ್ದಿಲ್ಲ

ಸ್ವಯಂಚಾಲಿತ ಕಾರ್ ಎಂದರೆ ಸಾಫ್ಟ್‌ವೇರ್‌ಗಳ ಮೇಲೆ ಆಧರಿಸಿರುತ್ತದೆ. ಇಂತಹ ಕಾರ್‌ಗಳಿಗಾಗಿ, ಹಾರ್ಡ್‌ವೇರ್ ಮತ್ತುಸಾಫ್ಟ್‌ವೇರ್ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಿ ಮಾರುಕಟ್ಟೆ ವಿಸ್ತರಿಸಿಕೊಳ್ಳುವ ಯೋಚನೆಯಲ್ಲಿದೆ ಇಂಟೆಲ್. ಇದಕ್ಕಾಗಿ ಇಸ್ರೇಲ್‌ನ ಮೊಬೈಲ್‌ಐ ಸಂಸ್ಥೆಯೊಂದಿಗೆ ಕೈ ಜೋಡಿಸಿದೆ.

**

ಭಲೇ ಜೋಡಿ

ಪ್ರಮುಖ ವಾಹನ ತಯಾರಿಕಾ ಸಂಸ್ಥೆಗಳು ಮತ್ತು ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು ಚಾಲಕ ರಹಿತ ವಾಹನಗಳ ತಯಾರಿಗಾಗಿ ಕೈ ಜೋಡಿಸಿವೆ. ಗೂಗಲ್ -ಫಿಯಟ್ ಜತೆಗೆ ಕೈ ಜೋಡಿಸಿದರೆ, ವೋಲ್ವೊ-ಉಬರ್ ಜತೆಗೆ, ಡೈಮ್ಲರ್ ಬಾಷ್ ಜತೆಗೆ, ಮೈಕ್ರೊಸಾಫ್ಟ್-ಟೊಯೊಟಾ ಜತೆಗೆ ಕೈ ಜೋಡಿಸಿದೆ.

ಈ ಸಹಭಾಗಿತ್ವದ ಉದ್ದೇಶ, ಚಾಲಕ ರಹಿತ ಕಾರ್ ಗಳನ್ನು ತಯಾರಿಸುವುದಷ್ಟೇ ಅಲ್ಲ, ನಗರಗಳಲ್ಲಿ ಉಲ್ಬಣಿಸುತ್ತಿರುವ ಸಂಚಾರ ದಟ್ಟಣೆ ಸಮಸ್ಯೆ ಕಡಿಮೆ ಮಾಡುವುದು.ಅಪಘಾತಗಳ ಸಂಖ್ಯೆ ಕಡಿಮೆ ಮಾಡುವುದು.

**

ಚಾಲಕ ರಹಿತ ತಂತ್ರಜ್ಞಾನ ಹಂತಗಳು

ವಾಹನ ನಿಯಂತ್ರಣದ ಮಟ್ಟವನ್ನು ಆಧರಿಸಿ, ಸೊಸೈಟಿ ಆಫ್ ಆಟೊಮೊಟಿವ್ ಎಂಜಿನಿಯರ್ಸ್ (ಎಸ್ ಎಇ) ವಾಹನಗಳ ತಂತ್ರಜ್ಞಾನದ ಹಂತವನ್ನು ನಿರ್ದೇಶಿಸಿದೆ.

ಲೆವೆಲ್ ಜೀರೊ: ನಾವು ಚಲಾಯಿಸುತ್ತಿರುವ ಸಾಮಾನ್ಯ ವಾಹನಗಳು

ಲೆವೆಲ್ 1:ಈ ಹಂತವನ್ನು ಅಡಪ್ಟಿವ್ ಕ್ರುಯಿಜ್ ಕಂಟ್ರೋಲ್ ಎನ್ನುತ್ತಾರೆ.ಪಾರ್ಕಿಂಗ್ ನಲ್ಲಿ ವಾಹನ ನಿಲ್ಲಿಸಬೇಕೆಂದರೂ, ಪಥ ಬದಲಾಯಿಸಬೇಕೆಂದರೂ ಚಾಲಕನ ಸಹಾಯ ಇರಬೇಕು. ವಾಹನ ನಿಯಂತ್ರಿಸಲು ಚಾಲಕ ಇರಲೇಬೇಕು.

ಲೆವೆಲ್ 2: ಕಾರ್ ಸ್ವಯಂಚಾಲಿತವಾಗಿ ವೇಗೆ ಹೆಚ್ಚಿಸಿಕೊಳ್ಳುತ್ತಿದೆ. ಬ್ರೇಕ್ ಹಾಕುತ್ತದೆ. ಸ್ಟೀರಿಂಗ್ ತಿರಿಗಿಸುತ್ತದೆ. ಆದರೆ ಸ್ವಯಂಚಾಲಿತ ವ್ಯವಸ್ಥೆ ಯಾವ ಕ್ಷಣದಲ್ಲಾದರೂ ವಿಫಲವಾಗುವ ಸಾಧ್ಯತೆಗಳು ಇರುವುದರಿಂದ ಸದಾ ಚಾಲಕ ಇರಬೇಕು.ಸುತ್ತಮುತ್ತಲಿನ ಪರಿಸ್ಥಿತಿಗಳನ್ನೂ ಪರಿಶೀಲಿಸುತ್ತಿರಬೇಕು.

ಲೆವೆಲ್ 3: ಈ ಹಂತದ ತಂತ್ರಜ್ಞಾನವನ್ನು ಒಳಗೊಂಡಿರುವ ಕಾರ್ ಸುತ್ತ-ಮತ್ತಲಿನ ಪರಿಸ್ಥಿತಿಗಳನ್ನು ಪರಿಶೀಲಿಸುತ್ತಾ ಸಾಮಾನ್ಯ ರಸ್ತೆಗಳಲ್ಲಿ ಸ್ವಯಂಚಾಲಿತವಾಗಿ ಸಂಚರಿಸಬಲ್ಲದು.ಆದರೆ ಇದು ಕೆಲವು ಸಂದರ್ಭಗಳಲ್ಲಿ ಮಾತ್ರ. ಹೀಗಾಗಿ ಚಾಲಕ ಇರಬೇಕಾಗುತ್ತದೆ.

ಲೆವೆಲ್ 4: ಈ ಹಂತದ ತಂತ್ರಜ್ಞಾನವನ್ನು ಒಳಗೊಂಡಿರುವ ಕಾರ್, ಸಂಚಾರ ದಟ್ಟಣೆ ಹೆಚ್ಚಾಗಿರುವ ರಸ್ತೆಗಳನ್ನು ಹೊರತುಪಡಿಸಿ, ಉಳಿದ ರಸ್ತೆಗಳಲ್ಲಿ ಸ್ವಯಂಚಾಲಿತವಾಗಿ ಸಂಚರಿಸುತ್ತದೆ. ಒಮ್ಮೆ ಸ್ವಯಂಚಾಲಿತ ವ್ಯವಸ್ಥೆಯನ್ನು ಚಾಲು ಮಾಡಿದರೆ, ಚಾಲಕ ಅದರ ಮೇಲೆ ದೃಷ್ಟಿ ನೆಡುವ ಅಗತ್ಯ ಇರುವುದಿಲ್ಲ.ಪ್ರಸ್ತುತ ಹಲವು ಸಂಸ್ಥೆಗಳು ಈ ಹಂತದ ತಂತ್ರಜ್ಞಾನದ ಮೇಲೆ ದೃಷ್ಟಿ ನೆಟ್ಟಿವೆ.

ಲೆವೆಲ್ 5: ಈ ಹಂತದ ತಂತ್ರಜ್ಞಾನವನ್ನು ಒಳಗೊಂಡಿರುವ ಕಾರು ಗಮ್ಯವನ್ನ ನಿರ್ದೇಶಿಸಿದರೆ ಸಾಕು, ಸುರಕ್ಷಿತವಾಗಿ ಗುರಿ ತಲುಪಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.