ಉಪಯುಕ್ತವಾದ ಮಾಹಿತಿ ಮತ್ತು ಮೌಲ್ಯಯುತ ಸೇವೆಗಳನ್ನು ಉಚಿತವಾಗಿ ನೀಡುವ ಬಹುತೇಕ ಮೊಬೈಲ್ ಆ್ಯಪ್‌ಗಳು ಅದಕ್ಕೆ ಬದಲಾಗಿ ನಮ್ಮಿಂದ ಯಾವ ರೀತಿಯ ಲಾಭಗಳನ್ನು ಪಡೆಯುತ್ತವೆ ಎಂದು ಯಾವತ್ತಾದರೂ ಯೋಚಿಸಿದ್ದಿರಾ? ನಮಗೆ ಪುಕ್ಕಟೆ ಮಾಹಿತಿ ಮತ್ತು ಸೇವೆಗಳನ್ನು ನೀಡುವ ಸೇವಾ ಪೂರೈಕೆದಾರರು ಪರೋಕ್ಷವಾಗಿ ಬಳಕೆದಾರರಿಂದ ಅದರ ನೂರರಷ್ಟು ಲಾಭಗಳನ್ನು ಮಾಡಿಕೊಳ್ಳುತ್ತಾರೆ. ಇತ್ತ ಪ್ರತಿ ಹೆಜ್ಜೆಗೂ ಕಿರಿಕಿರಿ ಅನುಭವಿಸುವ ಸರದಿ ಬಳಕೆದಾರನದು...
ಕ್ಷಣಕ್ಷಣದ ಮಾಹಿತಿಗಾಗಿ ನ್ಯೂಸ್ ಆ್ಯಪ್‍ಗಳು, ಕಾಲರ್ ಐಡಿಗಾಗಿ ಇರುವ ಟ್ರೂ ಕಾಲರ್, ಮಾಹಿತಿ ಹಂಚಿಕೊಳ್ಳಲಿರುವ ಶೇರ್‌ಇಟ್‌ನಂಥವು ಪ್ರತಿಯೊಬ್ಬರ ಮೊಬೈಲ್‌ನಲ್ಲೂ ರಾರಾಜಿಸುತ್ತವೆ. ಇಂಥ ಆ್ಯಪ್‍ಗಳು ನಮ್ಮ ನಿತ್ಯದ ಚಟುವಟಿಕೆಗೆ ಪೂರಕವಾಗುತ್ತವೆ, ಉಪಯುಕ್ತವಾಗುತ್ತವೆ. ಇದರ ಜತೆಗೆ ಅವು ಉಚಿತವಾಗಿ ಸಿಗುತ್ತವೆ ಎಂಬ ಕಾರಣಕ್ಕೆ ಇಂದು ಪ್ರತಿಯೊಬ್ಬ ಮೊಬೈಲ್ ಬಳಕೆದಾರ ಇಂಥ ಆ್ಯಪ್‍ಗಳಿಗೆ ಆಪ್ತನಾಗುತ್ತಾನೆ. ಆದರೆ ಪರೋಕ್ಷವಾಗಿ, ಅಪರೋಕ್ಷವಾಗಿ ಇಂಥ ಆ್ಯಪ್‍ಗಳು ನಮ್ಮಿಂದ ಪಡೆಯುವ ಲಾಭವೇನೂ ಕಡಿಮೆ ಇಲ್ಲ. ಹಾಗೆಯೇ ಅವುಗಳನ್ನು ಇನ್‍ಸ್ಟಾಲ್ ಮಾಡಿಕೊಳ್ಳುವ ಮೂಲಕ ನಾವು ಜಾಹೀರಾತುಗಳ ಕಿರಿಕಿರಿಗೆ ಈಡಾಗುತ್ತೇವೆ.
ಇಂಥ ಪ್ರತಿ ಆ್ಯಪ್‍ಗಳಲ್ಲಿ ಜಾಹೀರಾತುಗಳು ಕಾಣಿಸಿಕೊಳ್ಳುತ್ತವೆ. ಕ್ಷಣ ಕ್ಷಣಕ್ಕೂ ಬದಲಾಗುತ್ತಾ ಹೋಗುವ ಈ ಜಾಹೀರಾತುಗಳ ಕಿರಿಕಿರಿಯಿಂದಾಗಿ ಅದೆಷ್ಟೊ ಬಾರಿ ಆ್ಯಪ್ ಉಪಯುಕ್ತವಾಗಿದ್ದರೂ ನಮ್ಮ ಕೆಲಸಕ್ಕೆ ಅಡ್ಡಿಯುಂಟಾಗುತ್ತದೆ. ಇದರಿಂದ ತಪ್ಪಿಸಿಕೊಳ್ಳುವ ಸುಲಭ ಮಾರ್ಗವೆಂದರೆ ಆ್ಯಪ್‍ಗಳನ್ನು ಇನ್‍ಸ್ಟಾಲ್ ಮಾಡುವಾಗ ಅಥವಾ ಅವುಗಳನ್ನು ಆಯ್ಕೆ ಮಾಡುವಾಗ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಒಂದು ಬಾರಿ ಕಣ್ಣಾಡಿಸುವುದು. ಆ್ಯಪ್ ಬಳಕೆದಾರರ ಅಭಿಪ್ರಾಯ ಮತ್ತು ಅದಕ್ಕೆ ಸಂಬಂಧಿಸಿದ ಇತರೆ ಮಾಹಿತಿಯನ್ನು ಓದಿಕೊಂಡು ಆ್ಯಪ್ ಬಳಕೆಗೆ ಕೈ ಹಾಕುವುದು ಒಳ್ಳೆಯದು. ಒಂದು ವೇಳೆ ಆ ಆ್ಯಪ್‍ಗಳು ಜಾಹೀರಾತುಗಳಿಂದ ಕೂಡಿದ್ದರೆ ಪ್ಲೇ ಸ್ಟೋರ್‌ನಲ್ಲಿ Add contains ಎಂದು ಇರುವುದನ್ನು ಗಮನಿಸಬಹುದು.
ಇದೇ ಅಲ್ಲದೆ, ಜಾಹೀರಾತುಗಳ ಇಂಥ ಕಿರಿಕಿರಿಯಿಂದ ಪಾರಾಗಲು ಇನ್ನೂ ಕೆಲವು ಮಾರ್ಗಗಳಿವೆ. ಆ್ಯಂಡ್ರಾಯಿಡ್‌ನಲ್ಲಿ ಜಾಹೀರಾತುಗಳನ್ನು ಸುಲಭವಾಗಿ ನಿರ್ಬಂಧಿಸಲು ಇರುವ ವಿಧಾನವೆಂದರೆ ಆ್ಯಡ್ ಬ್ಲಾಕಿಂಗ್ ಆ್ಯಪ್‍ಗಳು.
ಆ್ಯಡ್ ಬ್ಲಾಕ್ ಪ್ಲಸ್
ಉಚಿತವಾಗಿ ದೊರೆಯುವ ಈ ಆ್ಯಪ್ ಅತ್ಯಂತ ಕ್ಷಮತೆಯಿಂದ ಕಾರ್ಯ ನಿರ್ವಹಿಸುತ್ತದೆ. ಇನ್‍ಸ್ಟಾಲ್ ಮಾಡಿದ ನಂತರ ಮೊಬೈಲ್‌ನಲ್ಲಿ ಕೆಲವು ಸೆಟ್ಟಿಂಗ್‍ಗಳನ್ನು ಬದಲಾಯಿಸಬೇಕಾಗುತ್ತದೆ. ಮೊಬೈಲ್ ಸೆಟ್ಟಿಂಗ್ಸ್‌ನಿಂದ ಸೆಕ್ಯೂರಿಟಿಗೆ ತೆರಳಿ ಅಪರಿಚಿತ ಮೂಲಗಳು (unknown sources) ಆನ್ ಆಗಿರುವುದನ್ನು ಖಾತರಿ ಮಾಡಿಕೊಂಡರೆ ಸಾಕು. ಉಳಿದ ಎಲ್ಲವನ್ನು ಈ ಆ್ಯಪ್ ನಿರ್ವಹಿಸುತ್ತದೆ. ಕಾಲಕಾಲಕ್ಕೆ ಆ್ಯಪ್‌ನಿಂದ ನೀಡುವ ಅಪ್‍ಡೇಟ್‍ಗಳನ್ನು ಇನ್‍ಸ್ಟಾಲ್ ಮಾಡುವುದನ್ನು ಮಾತ್ರ ಮರೆಯಬಾರದು.
ಹೋಸ್ಟ್ ಫೈಲ್
ಇದರ ಬಳಕೆಯ ವಿಧಾನ ಸ್ವಲ್ಪ ಕ್ಲಿಷ್ಟಕರ. ಆ್ಯಂಡ್ರಾಯಿಡ್‌ನಲ್ಲಿ ಪರಿಣತಿ ಹೊಂದಿದವರಿಗೆ ಇದು ಸುಲಭದ ಕೆಲಸ. ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಆ್ಯಂಡ್ರಾಯಿಡ್‌ನಲ್ಲಿ ಹೋಸ್ಟ್ ಫೈಲ್‍ನ ಸ್ಥಳವನ್ನು ಕಂಡುಕೊಂಡು HOSTSFILE.MINE.NU ಸಹಾಯದಿಂದ ಒಂದು ಹೋಸ್ಟ್ ಎನ್ನುವ ಫೈಲ್ ನಿರ್ಮಿಸಿ. (ಇದನ್ನು ಕಂಪ್ಯೂಟರ್ ನಲ್ಲಿ ಮಾಡಿ) ನಂತರದಲ್ಲಿ ಈ ಫೈಲನ್ನು ಬ್ಲೂಟೂತ್ ಅಥವಾ ಯುಎಸ್‍ಬಿ ಸಹಾಯದಿಂದ ಆ್ಯಂಡ್ರಾಯಿಡ್ ಸಿಸ್ಟಮ್ ರೂಟ್ ಡೈರೆಕ್ಟರಿಯಲ್ಲಿ ಪೇಸ್ಟ್ ಮಾಡಿ ಜಾಹೀರಾತುಗಳಿಂದ ಮುಕ್ತಿ ಪಡೆಯಬಹುದು.
ಪಾಪಪ್ ಆ್ಯಡ್
ಆ್ಯಂಡ್ರಾಯಿಡ್ ಓಎಸ್‍ನಲ್ಲಿ ಬ್ರೌಸರ್ ಬಳಸುವಾಗ ಬರುವ ಪಾಪಪ್ ಆ್ಯಡ್‍ಗಳನ್ನು ಅತ್ಯಂತ ಸುಲಭವಾಗಿ ಯಾವುದೇ ಆ್ಯಪ್ ಇನ್‍ಸ್ಟಾಲ್ ಮಾಡದೆ ತಡೆಗಟ್ಟಬಹುದು. ಗೂಗಲ್ ಕ್ರೋಮ್ ಬಳಕೆದಾರರು ಸೆಟ್ಟಿಂಗ್ಸ್‌ಗೆ ತೆರೆಳಿ ಸೈಟ್ ಸೆಟ್ಟಿಂಗ್ಸ್ ಕ್ಲಿಕ್ ಮಾಡಬೇಕು ಮತ್ತು ಪಾಪಪ್‍ನ್ನು ಟರ್ನ್‌ಆಫ್ ಮಾಡಬೇಕು. ಧುತ್ತ್ ಎಂದು ಹಾಜರಾಗುವ ಜಾಹೀರಾತುಗಳಿಗೆ ಕಡಿವಾಣ ಬೀಳುತ್ತದೆ.
ಆದರೆ ಇಲ್ಲಿಯೂ ಬಳಕೆದಾರ ಎಚ್ಚರಿಕೆಯಿಂದ ವ್ಯವಹರಿಸಬೇಕಾಗುತ್ತದೆ. ಏಕೆಂದರೆ ಈ ಆ್ಯಪ್‌ಗಳಲ್ಲಿಯೂ ಎರಡು ಬಗೆಯ ಅಪಾಯಗಳಿರುತ್ತವೆ. ಕೆಲವು ಆ್ಯಪ್‍ಗಳಿಗೆ ವಾರ್ಷಿಕ ಶುಲ್ಕ ನೀಡಬೇಕಿರುತ್ತದೆ. ಅಲ್ಲದೆ ಈ ಸೇವೆ ನೀಡುವ ಕೆಲ ಆ್ಯಪ್‍ಗಳು ಸಹ ಜಾಹೀರಾತುಗಳನ್ನು ಹೊಂದಿರುತ್ತವೆ. ಗೂಗಲ್ ಪ್ಲೇ ಸ್ಟೋರಿನಲ್ಲಿ ಇನ್ನೂ ಇಂಥ ಅನೇಕ ಆ್ಯಪ್‍ಗಳು ಲಭ್ಯವಿದ್ದು, ಬಳಕೆದಾರ ಜವಾಬ್ದಾರಿಯುತವಾಗಿ ವ್ಯವಹರಿಸಬೇಕಾಗುತ್ತದೆ.
ಗಮನಹರಿಸಬೇಕಾದ ವಿಷಯಗಳು
ಗೂಗಲ್ ಪ್ಲೇ ಸ್ಟೋರ್‌ನಿಂದ ಆ್ಯಪ್‍ಗಳನ್ನು ಬಳಸಿಕೊಳ್ಳುವಾಗ ಆ್ಯಪ್‍ಗಳ ವಿಮರ್ಶೆಯನ್ನು ತಪ್ಪದೆ ನೋಡಿ. ಪ್ಲೇ ಸ್ಟೋರ್‌ನಲ್ಲಿ ಅದೆಷ್ಟೊ ಆ್ಯಪ್‍ಗಳು ಜಾಹೀರಾತುಗಳಿಗಾಗಿಯೇ ಮೀಸಲಿರುತ್ತವೆ. ಇಂಥ ಆ್ಯಪ್‍ಗಳು ಮೇಲ್ನೋಟಕ್ಕೆ ಮಾತ್ರ ಉಪಯುಕ್ತ ಮಾಹಿತಿ ನೀಡುವಂತಿರುತ್ತವೆ. ಆದರೆ ಮೂಲ ಉದ್ದೇಶ ಬಳಕೆದಾರರನ್ನು ಜಾಹೀರಾತುಗಳತ್ತ ಸೆಳೆಯುವುದೇ ಆಗಿರುತ್ತದೆ. ಉಪಯುಕ್ತವಾದ ಆ್ಯಪ್‍ಗಳನ್ನು ಇನ್‍ಸ್ಟಾಲ್ ಮಾಡುವಾಗ ಅನೇಕ ಅನುಮತಿಗಳ ಕೋರಿಕೆಯನ್ನು ಆ್ಯಪ್ ನಿಮ್ಮ ಮುಂದಿಡುತ್ತದೆ. ಜಾಗರೂಕತೆಯಿಂದ ಮಾಹಿತಿಯನ್ನು ಓದಿ ಮುಂದುವರೆಯುವುದು ಉತ್ತಮ.
***
ಮೊಬೈಲ್ ಜಾಹೀರಾತು ಮಾರುಕಟ್ಟೆ ಅತ್ಯಂತ ವೇಗವಾಗಿ ಬೆಳೆಯುತ್ತಿದೆ ಮತ್ತು ಅದ್ಭುತವಾದ ಭವಿಷ್ಯವನ್ನು ಸಹ ಹೊಂದಿದೆ. 2018ರ ಅಂಕಿ-ಅಂಶಗಳ ಪ್ರಕಾರ ಜಗತ್ತಿನಲ್ಲಿ 490 ಕೋಟಿಗೂ ಹೆಚ್ಚು ಜನರು ಮೊಬೈಲ್ ಬಳಕೆ ಮಾಡುತ್ತಿದ್ದಾರೆ. 2019 ರ ಕೊನೆಯಲ್ಲಿ ಇದಕ್ಕೆ ಹೆಚ್ಚುವರಿಯಾಗಿ 250 ಕೋಟಿ ಬಳಕೆದಾರರು ಸೇರುವ ನಿರೀಕ್ಷೆಯಿದೆ. ಚೀನಾ ಮತ್ತು ಭಾರತ 100 ಕೋಟಿಗೂ ಅಧಿಕ ಮೊಬೈಲ್ ಬಳಕೆದಾರರನ್ನು ಹೊಂದಿವೆ. ಈ ಪ್ರಮಾಣ 2020 ರ ವೇಳೆಗೆ ಶೇ 50 ರಷ್ಟು ಹೆಚ್ಚುವ ಸಾಧ್ಯತೆಯಿದೆ. ಭಾರತ ಮತ್ತು ಚೀನಾದಲ್ಲಿ ಹೆಚ್ಚುತ್ತಿರುವ ಮೊಬೈಲ್ ಬಳಕೆಗೆ ಕಾರಣೆವೆಂದರೆ ಸ್ಥಳಿಯವಾಗಿ ತಯಾರಾಗುತ್ತಿರುವ ಮೊಬೈಲ್‍ಗಳು ಮತ್ತು ಬೆಲೆ ಸಮರ.
ಭಾರತದಲ್ಲಿ ಮೊಬೈಲ್ ಜಾಹೀರಾತು ಮಾರುಕಟ್ಟೆ 2018ರ ಕೊನೆಯಲ್ಲಿ ರೂ 12,046 ಕೋಟಿಗೂ ಹೆಚ್ಚು ವಹಿವಾಟು ನಡೆಸಲಿದೆ ಎಂದು ಅಂದಾಜಿಸಲಾಗಿದೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಪ್ರಸ್ತುತ 330 ಕೋಟಿ ಆ್ಯಪ್‍ಗಳು ಲಭ್ಯ ಇವೆ. ಇದರಲ್ಲಿರುವ ಶೇ 80 ರಷ್ಟು ಆ್ಯಪ್‍ಗಳು ಗ್ರಾಹಕರಿಗೆ ಉಚಿತವಾಗಿ ದೊರೆಯುತ್ತವೆ. ಉಚಿತವಾಗಿ ದೊರೆಯುವ ಬಹುತೇಕ ಆ್ಯಪ್‍ಗಳು ಜಾಹಿರಾತುಗಳನ್ನು ಒಳಗೊಂಡಿರುತ್ತವೆ. ಆ್ಯಪ್ ಡೌನ್‌ಲೋಡ್ ಆಧಾರದ ಮೇಲೆ ಮತ್ತು ನಾವು ಆ್ಯಪ್‍ಗಳಲ್ಲಿನ ಜಾಹೀರಾತುಗಳನ್ನು ಕ್ಲಿಕ್ ಮಾಡುವುದರ ಮೇಲೆ ಆ್ಯಪ್ ಮಾಲಿಕನಿಗೆ ಹಣ ಸಂದಾಯವಾಗುತ್ತದೆ. ಕೆಲವು ಆ್ಯಪ್‍ಗಳು ಜಾಹೀರಾತು ವೀಕ್ಷಣೆಗೆ ಮತ್ತು ಮಾಹಿತಿ ವಿನಿಮಯ ಮತ್ತು ಹಂಚಿಕೆ ಮಾಡಿಕೊಳ್ಳುವವರಿಗೂ ರಿವಾರ್ಡ್ ಪಾಯಿಂಟ್ ಆಧಾರದ ಮೇಲೆ ಹಣ ನೀಡುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.