ADVERTISEMENT

ಬ್ಯಾಂಕ್ ವಿಲೀನ ಹೆಸರಲ್ಲಿ ಒಟಿಪಿ ಕೇಳಿ ವಂಚಿಸುತ್ತಾರೆ, ಎಚ್ಚರ!

ಟೆಕ್ ಟಾಕ್: ವಂಚನೆಯಿಂದ ಪಾರಾಗಲು ಸಪ್ತ ಸೂತ್ರ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2020, 19:31 IST
Last Updated 18 ಸೆಪ್ಟೆಂಬರ್ 2020, 19:31 IST
ಫೋನ್‌ನಲ್ಲಿ ಯಾರಾದರೂ ಎಟಿಎಂ ಕಾರ್ಡ್ ವಿವರ ಕೇಳಿದರೆ ಕೊಡಬೇಡಿ
ಫೋನ್‌ನಲ್ಲಿ ಯಾರಾದರೂ ಎಟಿಎಂ ಕಾರ್ಡ್ ವಿವರ ಕೇಳಿದರೆ ಕೊಡಬೇಡಿ   

‘ನಿಮ್ಮ ಬ್ಯಾಂಕ್ ಹಾಗೂ ಇನ್ನೊಂದು ಬ್ಯಾಂಕ್ ವಿಲೀನವಾಗಿರುವುದು ನಿಮಗೆ ಗೊತ್ತೇ ಇದೆ. ನಿಮ್ಮ ಖಾತೆ ಹಾಗೂ ಎಟಿಎಂ ಕಾರ್ಡನ್ನು ಆ ಬ್ಯಾಂಕ್ ಖಾತೆ ಜೊತೆ ವಿಲೀನ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಎಟಿಎಂ ಕಾರ್ಡ್ ನಂಬರ್ ಹೇಳಿ’ಅಂತ ಬ್ಯಾಂಕ್ ಅಧಿಕಾರಿಯೆಂದು ಪರಿಚಯಿಸಿಕೊಳ್ಳುವ ವ್ಯಕ್ತಿ ಫೋನ್‌ನಲ್ಲಿ ಮಾತು ಆರಂಭಿಸುತ್ತಾನೆ.

ನಂತರ ಎಟಿಎಂ ಕಾರ್ಡ್ ವಾಯಿದೆಯ ತಿಂಗಳು ಮತ್ತು ವರ್ಷ ಕೇಳುತ್ತಾನೆ. ಬಳಿಕ "ನಿಮಗೊಂದು ಒಟಿಪಿ (ಒನ್ ಟೈಮ್ ಪಾಸ್‌ವರ್ಡ್- ಒಂದೇ ಬಾರಿ ಬಳಸಬಹುದಾದ ನಂಬರ್) ಬಂದಿದೆ, ತಕ್ಷಣ ಹೇಳಿ" ಅಂತ ಒತ್ತಾಯಪೂರ್ವಕ ಧ್ವನಿ. ಗಡಿಬಿಡಿಯಲ್ಲಿ ಕೊಟ್ಟುಬಿಡುತ್ತಿದ್ದೀರಿ ಅಂತ ಗೊತ್ತಾದರೆ, ಸ್ವಲ್ಪ ಹೊತ್ತಿನ ಬಳಿಕ 'ಅದು ಸರಿಯಿಲ್ಲ, ಇನ್ನೊಂದು ಒಟಿಪಿ ಬಂದಿದೆ ನೋಡಿ' ಅಂತ ಕೇಳುತ್ತಾರೆ, ನಾವು ಕೊಡುತ್ತೇವೆ. ಬ್ಯಾಂಕಿಗೆ ಹೋಗುವುದು, ಖಾತೆ ಬದಲಿಸುವುದು ಇದೆಲ್ಲ ರಗಳೆ ಯಾರಿಗೆ ಬೇಕು ಅಂದುಕೊಳ್ಳುವ ನಾವು, ಸಮಯ ಉಳಿತಾಯವಾದುದರ ಖುಷಿಯಲ್ಲಿ ಎಲ್ಲವನ್ನೂ ಹೇಳಿಬಿಡುತ್ತೇವೆ.

ಕೆಲವೇ ಕ್ಷಣಗಳಲ್ಲಿ ನಮ್ಮ ಬ್ಯಾಂಕ್ ಖಾತೆಯಿಂದ ಭಾರಿ ಮೊತ್ತದ ಹಣ ಖಾಲಿಯಾಗಿರುವುದು ತಿಳಿಯುತ್ತದೆ. ಒಂದು ಬಾರಿಯಾದರೆ ಸಮಸ್ಯೆಯಿಲ್ಲ ಎಂದುಕೊಂಡಿರೋ, ಎರಡನೇ ಬಾರಿಯೂ ಹಣ ವರ್ಗಾವಣೆ ಆಗಿದೆ! ನೆನಪಿಸಿಕೊಳ್ಳಿ, ಎರಡನೇ ಬಾರಿ ಒಟಿಪಿ ಹಂಚಿಕೊಂಡಿದ್ದೇವೆ!

ADVERTISEMENT

ಇದು ಕಳೆದ ವಾರ ನಮ್ಮ ಪರಿಚಿತರಿಗೆ ಆದ ವಂಚನೆ. ಎರಡು ಬಾರಿ ಅವರು ತಲಾ 20 ಸಾವಿರ ರೂ. ಕಳೆದುಕೊಂಡಿದ್ದಾರೆ. ಇತ್ತೀಚೆಗೆ ಹಲವು ಬ್ಯಾಂಕುಗಳು ವಿಲೀನವಾಗಿದ್ದು, ಅವುಗಳ ಖಾತೆಗಳ ಸಂಯೋಜನೆ ಪ್ರಕ್ರಿಯೆ ನಡೆಯುತ್ತಿದೆ. ಅಷ್ಟರಲ್ಲಿ ಈ ವಂಚಕರ ಕಾಟ.

ಇದೇ ರೀತಿಯಲ್ಲಿ, ಆದಾಯ ತೆರಿಗೆ ರಿಟರ್ನ್ಸ್ ಫೈಲಿಂಗ್ ಮಾಡಿದ್ದು ಸರಿಯಾಗಿಲ್ಲ, ಹೆಚ್ಚುವರಿಯಾಗಿ ಕಟ್ಟಿದ ತೆರಿಗೆ ವಾಪಸ್ ಮಾಡುತ್ತೇವೆ, ನಿಮ್ಮ ಪೇಟಿಎಂ, ಫೋನ್‌ಪೇ, ಗೂಗಲ್‌ಪೇಗೆ ಹಣ ಹಾಕುತ್ತೇವೆ - ಹೀಗೆಲ್ಲ ಹಲವು ವಿಧಾನಗಳ ಮೂಲಕ, ಆಮಿಷ ಒಡ್ಡಿ ಆನ್‌ಲೈನ್ ಬ್ಯಾಂಕಿಂಗ್ ಖಾತೆಗಳ ಮಾಹಿತಿ ಪಡೆದು ಒಟಿಪಿಯನ್ನೂ ಅಕ್ಷರಶಃ 'ಕಸಿದು'ಕೊಂಡು, ವಂಚನೆ ಮಾಡುತ್ತಿರುವ ಪ್ರಸಂಗಗಳೂ ಹೆಚ್ಚುತ್ತಿವೆ. ವಂಚಕರು ಬ್ಯಾಂಕ್ ಅಧಿಕಾರಿಯೆಂದೋ, ಆದಾಯ ತೆರಿಗೆ ಅಧಿಕಾರಿಯೆಂದೋ ತಮ್ಮನ್ನು ಪರಿಚಯಿಸಿಕೊಳ್ಳುತ್ತಾರೆ. ನಾವು ನಂಬುತ್ತೇವೆ.

ವಂಚಕರಿಂದ ಸುರಕ್ಷಿತವಾಗಿರಲು ಸಪ್ತ ಸೂತ್ರಗಳು ಇಲ್ಲಿವೆ:

* ಯಾವುದೇ ಕಾರಣಕ್ಕೂ ಯಾರೊಂದಿಗೂ ಒಟಿಪಿ ಹಂಚಿಕೊಳ್ಳಬೇಡಿ
* ಅಪರಿಚಿತರಿಗೆ ನಿಮ್ಮ ಮೊಬೈಲ್ ಫೋನ್ ಕೊಡಬೇಡಿ
* ಆಮಿಷದೊಂದಿಗೆ ಬರುವ ಮೊಬೈಲ್ ಕರೆಗಳನ್ನು ನಿರ್ಲಕ್ಷಿಸಿಬಿಡಿ
* ಅಪರಿಚಿತರಿಗೆ ಆಧಾರ್, PAN ಕಾರ್ಡ್ ಮಾಹಿತಿ ಕೊಡಬೇಡಿ
* ಅಪರಿಚಿತರಿಂದ ಬಂದ ಎಸ್ಸೆಮ್ಮೆಸ್, ಇಮೇಲ್‌ನಲ್ಲಿರುವ ಲಿಂಕ್ ಕ್ಲಿಕ್ ಮಾಡಬೇಡಿ
* ನಿಮ್ಮ ಬ್ಯಾಂಕಿನಿಂದಲೇ ಬಂದಂತಿರುವ ಇಮೇಲ್ ಲಿಂಕ್ ಕ್ಲಿಕ್ ಮಾಡುವ ಮುನ್ನ ಅಸಲಿಯೇ ಎಂದು ಪರೀಕ್ಷಿಸಿಕೊಳ್ಳಿ
* ಫೋನ್ ಮೂಲಕ ನಿಮ್ಮ ಖಾಸಗಿ ಮಾಹಿತಿ (ವಿಶೇಷವಾಗಿ ಒಟಿಪಿ, ಜನ್ಮ ದಿನಾಂಕ, ಪೂರ್ಣ ಹೆಸರು, ಆಧಾರ್ ಸಂಖ್ಯೆ, PAN ಸಂಖ್ಯೆ) ಯಾರೇ ಕೇಳಿದರೆ ಕೊಡಬೇಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.