ADVERTISEMENT

ರಕ್ತವೇ ಬ್ಯಾಟರಿಗೆ ಶಕ್ತಿಮೂಲ!

ನೇಸರ ಕಾಡನಕುಪ್ಪೆ
Published 4 ಏಪ್ರಿಲ್ 2023, 23:45 IST
Last Updated 4 ಏಪ್ರಿಲ್ 2023, 23:45 IST
o
o   

ಹೃದಯಕ್ಕೆ ಅಳವಡಿಸುವ ಪೇಸ್ ಮೇಕರ್‌ಗಳ ಬಗ್ಗೆ ನೀವು ಕೇಳಿರಬಹುದು. ಮಧುಮೇಹ ಇರುವ ವ್ಯಕ್ತಿಗಳಲ್ಲಿ ಇನ್ಸುಲಿನ್ ಉತ್ಪಾದನೆಗೆ ಇನ್ಸುಲಿನ್ ಪಂಪ್‌ಗಳನ್ನು ದೇಹದಲ್ಲಿ ಅಳವಡಿಸುವುದೂ ಇದೆ. ಈ ರೀತಿಯ ಸಾಧನಗಳು ಕಾರ್ಯನಿರ್ವಹಿಸಲು ಅವುಗಳಿಗೆ ವಿದ್ಯುತ್‌ ಅಗತ್ಯ. ಈಗ ಈ ಸಾಧನಗಳಲ್ಲಿ ಒಮ್ಮೆ ಬಳಸಬಹುದಾದ ಅಥವಾ ಮರುಬಳಸಬಹುದಾದ ಬ್ಯಾಟರಿಗಳನ್ನು ಇರಿಸಲಾಗಿರುತ್ತದೆ. ಈ ಸಾಧನಗಳ ಕಾಲ ಮಿತಿ ಕಡಿಮೆ. ಇದೀಗ ದೇಹದ ರಕ್ತವನ್ನೇ ಮೂಲವಾಗಿರಿಸಿಕೊಂಡು ತನಗೆ ತಾನೇ ವಿದ್ಯುತ್‌ ಉತ್ಪಾದಿಸಿಕೊಳ್ಳಬಲ್ಲ, ದೇಹದೊಳಗೆ ಇರಿಸಬಹುದಾದ ವೈದ್ಯಕೀಯ ಸಾಧನಗಳ ಅನ್ವೇಷಣೆಯಾಗಿದೆ.

ಸಾಮಾನ್ಯವಾಗಿ ಪೇಸ್‌ ಮೇಕರ್‌ಗಳಲ್ಲಿ ಲಿಥಿಯಂ ಅಯೋಡಿನ್ ಸೆಲ್‌ಗಳನ್ನು ಶಕ್ತಿಮೂಲವಾಗಿ ಅಳವಡಿಸಿರುತ್ತಾರೆ. ಇನ್ಸುಲಿನ್‌ ಪಂಪ್‌ಗಳಲ್ಲೂ ಇದೇ ಮಾದರಿಯ ಬ್ಯಾಟರಿ ಇರಿಸಲಾಗಿರುತ್ತದೆ. ಈ ಬಗೆಯ ಸಾಧನಗಳಿಗೆ ಎರಡು ಬಗೆಯ ಮಿತಿಗಳಿರುತ್ತವೆ. ಬ್ಯಾಟರಿ ಗರಿಷ್ಠ ಏಳು ವರ್ಷಗಳ ಕಾಲ ಬಾಳಿಕೆ ಬರಬಹುದು. ಬಳಿಕ ಆ ಬ್ಯಾಟರಿಯನ್ನು ಬದಲಿಸಬೇಕು. ಅಥವಾ ಆ ಬಗೆಯ ವೈದ್ಯಕೀಯ ಸಾಧನಗಳನ್ನೇ ಹೊಸತಾಗಿ ಅಳವಡಿಸಬೇಕು. ಇದರ ಪ್ರಮುಖ ಅನನುಕೂಲವೆಂದರೆ ಪುನಃ ಪುನಃಶಸ್ತ್ರಚಿಕಿತ್ಸೆಗೆ ಒಳಗಾಗಬೇಕು. ಈಗ ವೈದ್ಯಕೀಯ ವಿಧಾನಗಳು ಸುಧಾರಿಸಿದ್ದು, ಬಹು ಬೇಗನೇ ಶಸ್ತ್ರಚಿಕಿತ್ಸೆ ಮುಗಿಯುವ, ಗುಣವಾಗುವ ಅನುಕೂಲವಿದೆಯಾದರೂ, ಆಸ್ಪತ್ರೆಗೆ ದಾಖಲಾಗುವುದು ಹಾಗೂ ಅದಕ್ಕೆ ತಗುಲುವ ವೆಚ್ಚವನ್ನಂತೂ ತಪ್ಪಿಸಲಾಗದು.

ಈ ಸಮಸ್ಯೆಗೆ ಈಗ ಅನ್ವೇಷಣೆಗೊಂಡಿರುವ ಹೊಸ ತಂತ್ರಜ್ಞಾನ ಪೂರ್ಣ ವಿರಾಮ ಹಾಕಲಿದೆ. ಒಮ್ಮೆ ಈ ಸಾಧನಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ದೇಹಕ್ಕೆ ಅಳವಡಿಸಿಕೊಂಡರೆ ಪೂರ್ಣ ಜೀವಿತಾಧಿಯವರೆಗೂ ಅದರೊಳಗಿನ ವಿದ್ಯುತ್‌ ಮುಗಿಯುವುದೇ ಇಲ್ಲ. ವಾಸ್ತವದಲ್ಲಿ ಈ ಹೊಸ ತಂತ್ರಜ್ಞಾನದಲ್ಲಿ ಈ ಸಾಧನಗಳ ಒಳಗೆ ಬ್ಯಾಟರಿಯನ್ನೇ ಇರಿಸುವುದಿಲ್ಲ!

ADVERTISEMENT

ಹೌದು, ಈ ಹೊಸ ತಂತ್ರಜ್ಞಾನದಲ್ಲಿ ಬ್ಯಾಟರಿಯ ಅಗತ್ಯವೇ ಬರುವುದಿಲ್ಲ. ಸ್ವಿಟ್ಸರ್‌ಲ್ಯಾಂಡಿನ ಜ್ಯೂರಿಚ್‌ನ ಬೇಸಲ್‌ ನಗರದಲ್ಲಿರುವ ‘ಸ್ವಿಸ್ ಫೆಡರಲ್ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ’ (ಇಟಿಎಚ್‌) ಸಂಸ್ಥೆಯ ಜೀವವ್ಯವಸ್ಥೆ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದ ಮಾರ್ಟಿನ್ ಫಸನೆಗರ್‌ ಅವರ ತಂಡವು ಈ ಸಂಶೋಧನೆಯನ್ನು ನಡೆಸಿದೆ. ಈ ತಂತ್ರಜ್ಞಾನ ತೀರಾ ಸಂಕೀರ್ಣವೂ ಆಗಿಲ್ಲ. ಹೊಸತಾಗಿ ಸಂಶೋಧನೆಯೊಂದನ್ನು ಮಾಡದೇ ಹಾಲಿ ಇರುವ ವೈಜ್ಞಾನಿಕ ತತ್ವಗಳು ಹಾಗೂ ಸಿದ್ಧಾಂತಗಳನ್ನು ಬಳಸಿಕೊಂಡು ಈ ಆವಿಷ್ಕಾರವನ್ನು ಮಾಡಿದ್ದಾರೆ.

ಮಾನವದೇಹವು ಕಾರ್ಯನಿರ್ವಹಿಸುವ ವಿಧಾನವನ್ನು ಈ ವಿಜ್ಞಾನಿಗಳು ಅನುಸರಿಸಿದ್ದಾರೆ. ದೇಹವು ಆಮ್ಲಜನಕವನ್ನು ಬಳಸಿಕೊಂಡು ಪ್ರತಿ ಜೀವಕೋಶಗಳಿಗೂ ಶಕ್ತಿ ಒದಗಿಸುತ್ತದೆ. ಅಂತೆಯೇ ನಾವು ಸೇವಿಸುವ ಆಹಾರದಲ್ಲಿನ ಕಾರ್ಬೋಹೈಡ್ರೇಟ್‌ ಅನ್ನು ಗ್ಲೂಕೋಸ್‌ ಆಗಿ ಪರಿವರ್ತಿಸಿ ಶಕ್ತಿ ಉತ್ಪಾದಿಸುತ್ತದೆ. ಈ ಗ್ಲೂಕೋಸ್‌ ರಕ್ತದಲ್ಲಿ ಸಂಚರಿಸುತ್ತಿರುತ್ತದೆ. ಅಂದರೆ ಕಾರ್ಬೋಹೈಡ್ರೇಟ್‌ ನಮ್ಮ ಆಹಾರದಲ್ಲಿನ ಶಕ್ತಿಯ ಮೂಲ. ಇದೇ ಸರಳ ತತ್ವವನ್ನು ಬಳಸಿಕೊಂಡು ಕೃತಕವಾಗಿ ನ್ಯಾನೋ ಶಕ್ತಿಕೇಂದ್ರವೊಂದನ್ನು ವಿಜ್ಞಾನಿಗಳು ತಯಾರಿಸಿದ್ದಾರೆ.

ಈ ಶಕ್ತಿಕೇಂದ್ರವನ್ನು ಪೇಸ್‌ ಮೇಕರ್‌ ಅಥವಾ ಇನ್ಸುಲಿನ್‌ ಪಂಪ್ ಒಳಗೆ ಇರಿಸುತ್ತಾರೆ. ಈ ಸಾಧನವು ದೇಹದಲ್ಲಿನ ರಕ್ತದಲ್ಲಿನ ಹೆಚ್ಚುವರಿ ಗ್ಲೂಕೋಸ್ ಅನ್ನು ಮೊದಲು ಗುರುತಿಸುತ್ತದೆ. ಬಳಿಕ, ಅದನ್ನು ತನ್ನೊಳಗೆ ಆಪೋಷಿಸಿಕೊಂಡು ವಿದ್ಯುತ್‌ ಜನರೇಟರ್‌ನಂತೆ ವಿದ್ಯುತ್‌ ಉತ್ಪಾದಿಸುತ್ತದೆ. ಆ ವಿದ್ಯುತ್‌ ಅನ್ನು ಪೇಸ್‌ ಮೇಕರ್‌ ಕಾರ್ಯಾಚರಣೆಗೆ ಅಥವಾ ಇನ್ಸುಲಿನ್‌ ಉತ್ಪಾದನೆಗೆ ಬಳಸಿಕೊಳ್ಳುತ್ತದೆ. ಈ ಎಲ್ಲ ಪ್ರಕ್ರಿಯೆಗೆ ಬೇಕಾಗುವ ವಿದ್ಯುತ್‌ ಅತ್ಯಲ್ಪ. ಜೊತೆಗೆ, ಇಲ್ಲಿ ವಿದ್ಯುತ್‌ ಉತ್ಪಾದನೆ ನಿರಂತರ. ಹಾಗಾಗಿ, ಈ ಸಾಧನಗಳ ಒಳಗೆ ಬ್ಯಾಟರಿಯನ್ನು ಅಳವಡಿಸುವ ಅಗತ್ಯವೇ ಬರುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.