‘ಪ ರೋಪಕಾರಾರ್ಥಂ ಇದಂ ಶರೀರಂ’ ಎಂಬ ಉಕ್ತಿಯನ್ನು ಮರಣಾನಂತರವೂ ಪಾಲಿಸುವ ಅವಕಾಶವನ್ನು ಕೊಡುವುದು ದೇಹದಾನದ ಕ್ರಿಯೆ. ಅಂಗದಾನ ಮಾಡಿದರೆ ನಿಧನಾನಂತರವೂ ಅಂಗಗಳು ಅಗತ್ಯವಿದ್ದವರಿಗೆ ಉಪಕಾರ ಮಾಡುತ್ತವೆ. ಕಲಿಕೆಗೆ ಪ್ರಯೋಜನವಾಗುವ ಹಾಗೆ ಕೊಡುವುದು ಇನ್ನೊಂದು ತರಹದ ದಾನ.
‘ವೈದ್ಯನಾಗುವವನಿಗೆ ಮಾನವನ ದೇಹದ ಒಳಗೆ ಏನಿದೆ, ಅಂಗರಚನೆ ಹೇಗಿದೆ ಎಂಬುದೇ ಗೊತ್ತಿಲ್ಲದಿದ್ದರೆ ಅವನು ಮುಂದೆ ಹೋಗುವ ಹಾಗೇ ಇಲ್ಲ’ ಎಂದು ಯಾವ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಯಾದರೂ ಹೇಳಿಯಾನು. ‘ಈ ವಿಚಾರದಲ್ಲಿ ಪ್ರಾಯೋಗಿಕವಾಗಿ ಏನನ್ನೂ ಮಾಡಿನೋಡದೆ ಅದೆಷ್ಟು ಪುಟಗಳ ಸಿದ್ಧಾಂತವನ್ನು ಉರು ಹೊಡೆದರೂ ಪ್ರಯೋಜನವಿಲ್ಲ; ಅಂಥವರು ಹಾರುವ ಸಾಮರ್ಥ್ಯವಿಲ್ಲದ, ಒಂದೇ ರೆಕ್ಕೆಯ ಹಕ್ಕಿಯಿದ್ದಂತೆ’ ಎಂಬರ್ಥ ಬರುವಂಥ ಮಾತನ್ನು ಎರಡೂವರೆಯೋ ಮೂರೋ ಸಾವಿರ ವರ್ಷಗಳಷ್ಟು ಹಿಂದೆಯೇ ಹೇಳಿದ್ದು ‘ಸುಶ್ರುತಸಂಹಿತೆ’ ಎನ್ನುವ ಗ್ರಂಥವನ್ನು ನೀಡಿ ಜ್ಞಾನದಾನವನ್ನು ಮಾಡಿದ ಆಚಾರ್ಯ ಸುಶ್ರುತ. ಇದು ಆ ಕಾಲಕ್ಕೂ ಈ ಕಾಲಕ್ಕೂ ಸತ್ಯವೇ. ಹಾಗಾಗಿಯೇ ಎಲ್ಲ ಕಾಲೇಜುಗಳಲ್ಲಿಯೂ ಅಂಗವಿಚ್ಛೇದನ ಮಾಡಿ ಅಂಗರಚನಾಶಾಸ್ತ್ರವನ್ನು, ಶರೀರವಿಜ್ಞಾನವನ್ನು ಹೇಳಿಕೊಡುವ ಶಿಕ್ಷಕರು ಬೇಕೇ ಬೇಕು. ‘ಅನಾಟಮಿ ಪ್ರೊಫೆಸರ್’ ಎಂದರೆ ಬಲುಬೇಡಿಕೆಯುಳ್ಳ ವ್ಯಕ್ತಿ. ವೈದ್ಯವಿದ್ಯೆಯನ್ನು ಕಲಿಯುವವರಿಗಾಗಿ ಬಹಳಷ್ಟು ಮೃತಶರೀರಗಳು ಬೇಕಾಗುತ್ತವೆ. ಬದುಕಿದ್ದವರ ಚರ್ಮ ಸುಲಿದು ಒಳಗೇನಿದೆ ಎಂದು ನೋಡುವಂತಿಲ್ಲವಲ್ಲ; ಈ ಕೆಲಸಕ್ಕೆ ವಿಧಿವಶರಾದವರ ದೇಹವೇ ಬೇಕು.
ಹೀಗೆ ಕೊಡಲ್ಪಟ್ಟ ಮೃತದೇಹದ ಸಂರಕ್ಷಣೆಯ ವಿಧಿವಿಧಾನಗಳು ಯಾವುವು ಎಂಬುದು ಸಹಜವಾದ ಪ್ರಶ್ನೆ. ವೈದ್ಯರು ಮೊದಲಿಗೆ ನೋಡುವುದು ದೇಹದ ಸುಸ್ಥಿತಿಯನ್ನು - ವಿಷಪ್ರಾಶನವಾಗಿದೆಯೇ, ದೀರ್ಘಕಾಲ ಪೀಡಿಸಿದ ರೋಗಗಳಿರಬಾರದು, ಹೀಗೆ. ದೇಹವನ್ನು ಸ್ವೀಕರಿಸಿದ ಮೇಲೆ, ‘ಈ ದೇಹವನ್ನು ನಾನು ಗೌರವಿಸುತ್ತೇನೆ, ಇದರ ಸದ್ಬಳಕೆ ಮಾಡುತ್ತೇನೆ’ ಎಂದು ವೈದ್ಯರು ಪ್ರತಿಜ್ಞಾಸ್ವೀಕಾರ ಮಾಡಬೇಕು. ಅದಾದ ಮೇಲೆ ದೇಹವನ್ನು ಸ್ವಚ್ಛಗೊಳಿಸಲಾಗುತ್ತದೆ. ಇಷ್ಟಾದ ಮೇಲೆ ಹೆಣವನ್ನು ಕೆಡದಂತೆ ಇಡುವ embalming ಎಂಬ ಪ್ರಕ್ರಿಯೆಯನ್ನು ಆರಂಭಿಸುತ್ತಾರೆ. Balm ಎಂದರೆ ಮುಲಾಮು (ಜಂಡೂಬಾಮ್ ಎಂಬಲ್ಲಿ ಇರುವಂತೆ). ಹಳೆಯ ಕಾಲದಲ್ಲಿ ಮೃತದೇಹವು ಕೊಳೆಯದಂತೆ ಅದಕ್ಕೆ ಮುಲಾಮುಗಳನ್ನು, ಸುಗಂಧದ್ರವ್ಯಗಳನ್ನು, ಲೇಪನದ್ರವ್ಯಗಳನ್ನು ಎಲ್ಲ ಹಚ್ಚುವ ಅಭ್ಯಾಸ ಇದ್ದದ್ದರಿಂದ, Balm ಅನ್ನು ಲೇಪಿಸುವುದು ಎಂಬರ್ಥದಲ್ಲಿ embalming ಎಂಬ ಪ್ರಯೋಗ ಬಂದಿರಬೇಕು, ಈಗ ಇಂಥ ಮುಲಾಮುಗಳನ್ನು ಬಳಿಯುವ ಕ್ರಮ ಇಲ್ಲವಾದರೂ ಆ ಹೆಸರು ಹಾಗೇ ಉಳಿದುಕೊಂಡು ಬಿಟ್ಟಿದೆ.
ನಮ್ಮಲ್ಲಿ ಸುಶ್ರುತನೂ ದೇಹಸಂರಕ್ಷಣೆಯ ವಿವರಗಳನ್ನು ದಾಖಲಿಸಿದ್ದಾನೆ. ಅವನು ಕೊಟ್ಟಿರುವ ವಿಧಾನ ಹೀಗೆ: ದೇಹವನ್ನು ಮುಂಜ ಎಂಬ ಹುಲ್ಲಿನಿಂದ, ಅಥವಾ ದರ್ಭೆಯಿಂದ ಅಥವಾ ನಾರಿನಿಂದ ಮುಚ್ಚಿ ಕಟ್ಟಿ ಅದನ್ನು ಒಂದು ಪಂಜರದಲ್ಲಿಟ್ಟು, ಆ ಪಂಜರವನ್ನು ನದಿಯಂಥ ಹರಿಯುವ ನೀರಿನಲ್ಲಿ ಏಳು ದಿನಗಳ ಕಾಲ ಇಡಬೇಕು. ಪ್ರಯೋಗಕ್ಕೆ ತುಂಬಾ ಪ್ರಾಮುಖ್ಯವನ್ನು ಕೊಟ್ಟಿದ್ದ ಸುಶ್ರುತ ಇದನ್ನು ಮಾಡಿನೋಡದೇ, ಇದು ಕೆಲಸ ಮಾಡುತ್ತದೆಯೇ ಎಂದು ಪರೀಕ್ಷೆ ಮಾಡದೆ ಹೇಳಿರಲಾರ.
ಈಗಿನವರು ಮಾಡುವ ‘ಎಂಬಾಮಿಂಗ್’ ಬೇರೆಯೇ ತರಹದ್ದು. ಮೊದಲಿಗೆ ಒಂದಷ್ಟು ನೀರಿಗೆ ಫಾರ್ಮಲಿನ್ ದ್ರಾವಣವನ್ನು ಬೆರೆಸಿ, ಅದಕ್ಕೆ ಸ್ವಲ್ಪ ಗ್ಲಿಸರಿನ್ ಅನ್ನು ಸೇರಿಸಿ ಒಂದು ದ್ರಾವಣವನ್ನು ತಯಾರು ಮಾಡುತ್ತಾರೆ. ಹತ್ತು ಲೀಟರ್ ನೀರಿಗೆ ಎರಡು ಲೀಟರ್ ಫಾರ್ಮಲಿನ್, ಒಂದರ್ಧ ಲೀಟರ್ ಗ್ಲಿಸರಿನ್ – ಹೀಗೆ ಅನುಪಾತ ಇರುವಂಥ ಮಿಶ್ರಣ ಇದಾಗಿರಬೇಕು (ಈ ಮಿಶ್ರಣ ಹೆಚ್ಚುಕಡಿಮೆಯಾದರೆ ಅಂಗಗಳು ಕರಗಿ ಮುದ್ದೆಯಾಗಿ ಹೋಗಿಬಿಡುತ್ತವೆ; ಹಾಗಾದರೆ ಅವು ನಿರುಪಯುಕ್ತವಾಗುತ್ತವೆ ಅಂತ ಬೇರೆ ಹೇಳಬೇಕಾದ್ದಿಲ್ಲವಲ್ಲ). ಈ ದ್ರಾವಣವನ್ನು ಶವದ ಒಳಗೆ ತುಂಬಿಸುವುದು ಮುಂದಿನ ಕೆಲಸ. ಹೃದಯದಿಂದ ದೇಹದ ಬೇರೆ ಬೇರೆ ಭಾಗಗಳಿಗೆ ರಕ್ತ ಸರಬರಾಜು ಮಾಡುವ ರಕ್ತನಾಳಗಳಿಗೆ ಅಪಧಮನಿಗಳು ಎಂದು ಹೆಸರು. ಕುತ್ತಿಗೆಯಲ್ಲಿ ಇರುವ ರಕ್ತನಾಳವಾದ Carotid ಎಂಬುದು ಇಂಥದ್ದೇ ಒಂದು ಅಪಧಮನಿ. ಈ ಕರೋಟಿಡ್ ಅಪಧಮನಿಗೆ ಮೇಲೆ ಹೇಳಿದ ದ್ರಾವಣವನ್ನು ಕೊಳವೆಯೊಂದರ ಮೂಲಕ ಒತ್ತಿ ನೂಕಿದರೆ ಅದು ದ್ರಾವಣವನ್ನು ದೇಹದ ಎಲ್ಲ ಭಾಗಗಳಿಗೆ ಸಾಗಿಸುತ್ತದೆ (ಕರೋಟಿಡ್ಡಿನ ಬದಲಿಗೆ ತೊಡೆಯ ಬಳಿ ಇರುವ Femoral ಅಪಧಮನಿಯನ್ನೂ ಬಳಸಬಹುದು; ಈ ವಿಧಾನಕ್ಕೆ ಸ್ವಲ್ಪ ಹೆಚ್ಚು ಹೊತ್ತು ಹಿಡಿಯುತ್ತದೆ.) ಈ ದ್ರಾವಣವು ದೇಹವನ್ನು ಸೇರಿದಾಗ ಎಲ್ಲ ಭಾಗಗಳು ಸೆಟೆದುಕೊಂಡು, ಗಡಸು ಗಡಸಾಗುತ್ತವೆ. ಒಂದು ಭಾಗ ಮೃದುವಾಗಿದ್ದರೆ ಅಲ್ಲಿಗೆ ದ್ರಾವಣ ತಲುಪಿಲ್ಲವೆಂದರ್ಥ. ಅಂಥಲ್ಲಿಗೆ ಚುಚ್ಚುಗೊಳವೆಯನ್ನು ಬಳಸಿ ದ್ರಾವಣವನ್ನು ತುಂಬಬೇಕು.
‘ಫಾರ್ಮಲ್ ಡಿಹೈಡ್’ ಎಂಬ ಅನಿಲವು ನೀರಿನಲ್ಲಿ ಬೆರೆತರೆ ಅದುವೇ ಫಾರ್ಮಲಿನ್. ಈ ಫಾರ್ಮಲ್ ಡಿಹೈಡ್ ಎಂಬುದು ಕೀಟನಾಶಕಗಳಲ್ಲಿ, ಸೌಂದರ್ಯವರ್ಧಕಗಳಲ್ಲಿ, ಶಾಂಪೂವಿನಲ್ಲಿ ಎಲ್ಲ ಬಳಸಲ್ಪಡುವ ರಾಸಾಯನಿಕವೇ. ಫಂಗಸ್, ಏಕಾಣುಜೀವಿಗಳು (ಬ್ಯಾಕ್ಟೀರಿಯಾ) – ಇವೆಲ್ಲ ಹೆಣವನ್ನು ಕೊಳೆತು ನಾರುವಂತೆ ಮಾಡುತ್ತವೆ. ಇಂಥ ಸೂಕ್ಷ್ಮಕ್ರಿಮಿಗಳಿಗೆ ಇರಲಾಗದಂತೆ ಮಾಡುವುದು ಫಾರ್ಮಲಿನ್ನಿನ ಕೆಲಸ. ಇದೊಂದು ರೀತಿ ಉಪ್ಪಿನಕಾಯಿ ಹಾಕಿದಂತೆ ಎನ್ನಬಹುದೇನೋ. ಸುಶ್ರುತ ಹೇಳಿದ ಹುಲ್ಲು, ದರ್ಭೆಗಳ ಪ್ರಯೋಜವೂ ಇದೇ ಇರಬೇಕೆಂದು ತೋರುತ್ತದೆ. ಮೇಲೆ ಹೇಳಿದ ಫಾರ್ಮಲಿನ್, ಗ್ಲಿಸರಿನ್ನುಗಳ ಬದಲಿಗೆ ಅದೇ ಕೆಲಸ ಮಾಡುವ ಬೇರೆ ರಾಸಾಯನಿಕಗಳ ಬಳಕೆ ಮಾಡುವವರೂ ಹಲವರಿದ್ದಾರೆ. ಇಷ್ಟಾದ ಮೇಲೆ ಶವವನ್ನು ಟ್ಯಾಂಕ್ ಒಂದರಲ್ಲಿ ಸಂಸ್ಕರಿಸಿ ಇಡಲಾಗುತ್ತದೆ, ಈ ಟ್ಯಾಂಕಿನಲ್ಲಿಯೂ ನೀರು ಮತ್ತು ಫಾರ್ಮಲಿನ್ನಿನ ಮಿಶ್ರಣ ಇರುತ್ತದೆ. ನೀರಿನ ಪ್ರಮಾಣವೇ ಹೆಚ್ಚು, ಇಲ್ಲದಿದ್ದರೆ ಈ ಫಾರ್ಮಲಿನ್ನಿನ ಉರಿ, ಘಾಟುಗಳನ್ನು ತಡೆದುಕೊಳ್ಳುವುದು ಕಷ್ಟ. ಹೀಗೆ ಆರು ತಿಂಗಳು ಇಟ್ಟ ಮೇಲೆ, ವೈದ್ಯರು ಈ ದೇಹವನ್ನು ವಿದ್ಯಾರ್ಥಿಗಳಿಗೆ ದೇಹದ ಒಳಗನ್ನು, ಅಂಗಾಂಗಳ ವಿನ್ಯಾಸವನ್ನು ತೋರಿಸಿಕೊಡುವುದಕ್ಕೆ ಉಪಯೋಗಿಸುತ್ತಾರೆ. ಹೀಗೆ ದಾನವಾಗಿ ಕೊಡಲ್ಪಟ್ಟ ದೇಹವು ವಿದ್ಯೆಗೆ ಸಹಕಾರಿಯಾಗಿ ಸಾರ್ಥಕ್ಯವನ್ನು ಪಡೆಯುತ್ತದೆ.
v
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.