ADVERTISEMENT

ಗೂಗಲ್‌ಗೆ ಮತ್ತೆ ದಂಡ ವಿಧಿಸಿದ ಸಿಸಿಐ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2022, 20:45 IST
Last Updated 25 ಅಕ್ಟೋಬರ್ 2022, 20:45 IST
ಗೂಗಲ್
ಗೂಗಲ್   

ನವದೆಹಲಿ: ಕೇಂದ್ರ ಸ್ಪರ್ಧಾ ಆಯೋಗವು (ಸಿಸಿಐ) ಗೂಗಲ್‌ ಕಂಪನಿಗೆ ಮಂಗಳವಾರ ₹ 936 ಕೋಟಿ ದಂಡ ವಿಧಿಸಿದೆ. ಪ್ಲೇಸ್ಟೋರ್‌ಗೆ ಸಂಬಂಧಿಸಿದ ನೀತಿಗಳಲ್ಲಿ ತನ್ನ ಪ್ರಬಲ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡ ಕಾರಣಕ್ಕೆ ಸಿಸಿಐ ಈ ಕ್ರಮ ಕೈಗೊಂಡಿದೆ.

ನ್ಯಾಯಸಮ್ಮತವಲ್ಲದ ವಾಣಿಜ್ಯ ನಡೆಗಳನ್ನು ನಿಲ್ಲಿಸುವಂತೆಯೂ ಸಿಸಿಐ, ಗೂಗಲ್‌ಗೆ ಸೂಚಿಸಿದೆ. ಸಿಸಿಐ ಅಕ್ಟೋಬರ್ 20ರಂದು ಗೂಗಲ್‌ಗೆ ಇನ್ನೊಂದು ಪ್ರಕರಣದಲ್ಲಿ ₹ 1337 ಕೋಟಿ ದಂಡ ವಿಧಿಸಿದೆ.

ಆ್ಯಪ್‌ ಅಭಿವೃದ್ಧಿಪಡಿಸುವವರು ಆ್ಯಂಡ್ರಾಯ್ಡ್‌ ಕಾರ್ಯಾಚರಣೆ ವ್ಯವಸ್ಥೆಯ ಸ್ಮಾರ್ಟ್‌ಫೋನ್‌ ಬಳಸುವವರಿಗೆ ತಮ್ಮ ಆ್ಯಪ್‌ ತಲುಪಿಸಲು ಇರುವ ಪ್ರಮುಖ ವ್ಯವಸ್ಥೆ ಗೂಗಲ್‌ನ ಪ್ಲೇಸ್ಟೋರ್. ಡೆವಲಪರ್‌ಗಳು ಸಿದ್ಧಪಡಿಸಿದ ಆ್ಯಪ್‌ಗಳನ್ನು ಮಾರಾಟ ಮಾಡಿ ಹಣ ಸಂಪಾದಿಸಲು ಕೂಡ ಇರುವ ಮಾರ್ಗ ಇದು.

ADVERTISEMENT

ಆದರೆ, ಹಣ ಕೊಟ್ಟು ಖರೀದಿಸಬೇಕಿರುವ ಆ್ಯಪ್‌ಗಳನ್ನು ಆ್ಯಪ್‌ ಸ್ಟೋರ್‌ನಲ್ಲಿ ಲಭ್ಯವಾಗಿಸಬೇಕು ಎಂದಾದರೆ ಆ್ಯಪ್‌ ಡೆವಲರ್‌ಗಳು ಗೂಗಲ್‌ ಪ್ಲೇ ಬಿಲ್ಲಿಂಗ್ ವ್ಯವಸ್ಥೆಯ ಭಾಗವಾಗಿರಲೇಬೇಕು ಎಂಬ ನಿಯಮವು ನ್ಯಾಯಸಮ್ಮತವಲ್ಲದ್ದು ಎಂದು ಸಿಸಿಐ ಹೇಳಿದೆ.

ಆ್ಯಪ್‌ ಡೆವಲಪರ್‌ಗಳಿಗೆ, ಆ್ಯಪ್ ಖರೀದಿ ಪ್ರಕ್ರಿಯೆಗೆ ಬೇರೆ ಬಿಲ್ಲಿಂಗ್ ಸೇವೆಗಳನ್ನು ಬಳಸುವುದಕ್ಕೆ ಕೂಡ ಅವಕಾಶ ನೀಡಬೇಕು ಎಂದು ಸಿಸಿಐ, ಗೂಗಲ್‌ಗೆ ತಾಕೀತು ಮಾಡಿದೆ.ಸಿಸಿಐ ಆದೇಶದ ವಿಚಾರವಾಗಿ ಗೂಗಲ್‌ನಿಂದ ತಕ್ಷಣಕ್ಕೆ ಪ್ರತಿಕ್ರಿಯೆ ಲಭ್ಯವಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.