2022ರ ನವೆಂಬರ್ ಮಾಸ ಭವಿಷ್ಯದ ತಂತ್ರಜ್ಞಾನ ವಲಯದಲ್ಲೊಂದು ಬಿರುಗಾಳಿ ಎಬ್ಬಿಸುವುದಕ್ಕೆ ಕಾರಣವಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲವೇನೋ! ಸದ್ದು ಗದ್ದಲವಿಲ್ಲದೇ ‘ಓಪನ್ ಎಐ’ ತನ್ನ ವೆಬ್‌ಸೈಟ್‌ನ ಒಂದು ಮೂಲೆಯಲ್ಲಿ ‘ಟ್ರೈ ಇಟ್’ ಎಂಬ ಬಟನ್ ಅಡಿಯಲ್ಲಿ ಬಿಡುಗಡೆ ಮಾಡಿದ ‘ಚಾಟ್ ಜಿಪಿಟಿ’ ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಗೂಗಲ್ ಎಂಬ ಬೃಹತ್ ಸಂಸ್ಥೆಯ ಭವಿಷ್ಯಕ್ಕೆ ಕೊಳ್ಳಿ ಇಟ್ಟೀತು ಎಂದು ಯಾರೂ ಊಹಿಸಿರಲಿಲ್ಲ.
ತಂತ್ರಜ್ಞಾನ ವಲಯದಲ್ಲಿ ಓಪನ್ ಎಐ ಅಭಿವೃದ್ಧಿಪಡಿಸುತ್ತಿರುವ ಜಿಪಿಟಿ-3 ಬಗ್ಗೆ ಅಪಾರ ಕುತೂಹಲವೇನೋ ಇತ್ತು. ಆದರೆ, ಇದು ಹೊರತಂದ ಉತ್ಪನ್ನ ಚಾಟ್ ಜಿಪಿಟಿ ಈ ಮಟ್ಟಕ್ಕೆ ನಿಖರ ಮತ್ತು ಕರಾರುವಾಕ್ಕಾಗಿರುತ್ತದೆ ಮತ್ತು ಇದರ ಅಳವಡಿಕೆಯ ವ್ಯಾಪ್ತಿ ಅಪಾರವಾಗಬಹುದು ಎಂಬ ಅಂದಾಜು ಇರಲಿಲ್ಲ.
ಇದು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಜನಪ್ರಿಯವಾಗತೊಡಗಿತು. ಇದು ಸಮಸ್ಯೆಗಳಿಗೆ ನೀಡಿದ ಪರಿಹಾರ, ಕೇಳಿದ ಪ್ರಶ್ನೆಗಳಿಗೆ ನೀಡಿದ ಉತ್ತರದ ನಿಖರತೆ ತಂತ್ರಜ್ಞಾನ ವಲಯದಲ್ಲಿ ಬೆಕ್ಕಸು ಬೆರಗು ಉಂಟುಮಾಡಿತು.
ಮೊದಲು ಇದಕ್ಕೆ ಪ್ರತಿಸ್ಫರ್ಧಿಯನ್ನು ಹುಟ್ಟುಹಾಕುವುದು ಅಗತ್ಯವಿಲ್ಲ – ಎಂಬರ್ಥದಲ್ಲಿ ಗೂಗಲ್ ತಂತ್ರಜ್ಞರು ಮಾತನಾಡಿದರಾದರೂ, ಮೈಕ್ರೋಸಾಫ್ಟ್ ತನ್ನ ‘ಬಿಂಗ್’ ಎಂಬ ಸರ್ಚ್ ಇಂಜಿನ್‌ಗೆ ಈ ಚಾಟ್ ಜಿಪಿಟಿಯನ್ನು ಅಳವಡಿಸುವುದಾಗಿ ಘೋಷಿಸಿದ ದಿನವೇ, ಅಂದರೆ ಫೆಬ್ರುವರಿ 7ರಂದೇ ತಮ್ಮದೇ ಜನರೇಟಿವ್ ಎಐ ಅನ್ನು ಹೊರತಂದರು. ಸಹಜವಾಗಿಯೇ ಎರಡೂ ಜನರೇಟಿವ್ ಎಐ ಕಾರ್ಯಕ್ಷಮತೆಯನ್ನು ಹೋಲಿಸಿ ನೋಡಿದಾಗ, ಗೂಗಲ್‌ನ ಜನರೇಟಿವ್ ಎಐ ಬಾರ್ಡ್‌ನ ಕಾರ್ಯಕ್ಷಮತೆ, ನಿಖರತೆ ಜನರಿಗೆ ಮನರಿಕೆಯಾಗಲಿಲ್ಲ. ಈ ರೇಸ್‌ನಲ್ಲಿ ಗೂಗಲ್ ಹಿಂದೆ ಬೀಳುವುದು ಹೂಡಿಕೆದಾರರಿಗೆ ಖಚಿತವಾಗುತ್ತಿದ್ದಂತೆಯೇ, ಗೂಗಲ್‌ನಲ್ಲಿ ತಮ್ಮ ಹೂಡಿಕೆಯನ್ನು ಹಿಂಪಡೆಯಲು ಮುಗಿಬಿದ್ದರು. ಹೀಗಾಗಿ ಮಾರುಕಟ್ಟೆಯಲ್ಲಿ ಗೂಗಲ್‌ನ ಷೇರು ಅಪಾರವಾಗಿ ಇಳಿಕೆ ಕಾಣುವಂತಾಯಿತು.
ಏನಿದು ಚಾಟ್‌ಜಿಪಿಟಿ?
‘ಚಾಟ್‌ಜಿಪಿಟಿ’ ಎಂಬುದು ಒಂದು ಜನರೇಟಿವ್ ಎಐ. ಅಂದರೆ ಕೇಳಿದ ಪ್ರಶ್ನೆಗಳಿಗೆ ಅಂತರ್ಜಾಲದಲ್ಲಿ ಹುಡುಕಾಡಿ ನಿಖರವಾದ ಉತ್ತರವನ್ನು ಒದಗಿಸುವ ಒಂದು ಅಪ್ಲಿಕೇಶನ್. ಇದಕ್ಕಾಗಿ ಅಪಾರ ಸಂಖ್ಯೆಯಲ್ಲಿ ಮುಕ್ತವಾಗಿರುವ ದತ್ತಾಂಶವನ್ನು ಇದು ಬಳಸಿಕೊಂಡಿದೆ. ಸರಳ ಇಂಗ್ಲಿಷ್‌ನಲ್ಲಿ ಕೇಳಿದ ಪ್ರಶ್ನೆಗಳಿಗೆ ನಿಖರವಾಗಿ ಉತ್ತರಿಸುವ ಸಾಮರ್ಥ್ಯವೇ ಇದರ ಹೆಗ್ಗಳಿಕೆ. ಇದನ್ನು ಹುಟ್ಟುಹಾಕಿದ್ದು, ಇಂಥದ್ದೊಂದು ಕನಸು ಕಂಡಿದ್ದು ಉದ್ಯಮಿ ಎಲಾನ್ ಮಸ್ಕ್. ಈಗ ಈ ಓಪನ್‌ಎಐ ಸಂಸ್ಥೆಯ ಮಾಲೀಕತ್ವದಲ್ಲಿ ಹೆಚ್ಚಿನ ಪಾಲನ್ನು ಮೈಕ್ರೋಸಾಫ್ಟ್ ಹೊಂದಿದೆ.
ಉದಾಹರಣೆಗೆ, ವ್ಯಕ್ತಿಯೊಬ್ಬನಿಗೆ ಚಳಿಗಾಲದಲ್ಲಿ ಒಂದು ಪ್ರವಾಸ ಹೋಗಬೇಕಿದೆ. ಆತ ಸಾಮಾನ್ಯವಾಗಿ ಗೂಗಲ್‌ನಲ್ಲಿ ಹುಡುಕಾಟ ನಡೆಸುತ್ತಾನೆ. ಅವನಿಗೆ ವಿವಿಧ ವೆಬ್‌ಸೈಟ್‌ಗಳಲ್ಲಿ ಮಾಡಿದ ಪಟ್ಟಿಗಳು ಕಾಣಿಸುತ್ತವೆ. ಅವೆಲ್ಲವನ್ನೂ ಓದಿ ತನಗೆ ಹೊಂದುವುದನ್ನು ಹುಡುಕುವ ಕೆಲಸ ಅವನದ್ದೇ. ಆದರೆ, ಇದೇ ಪ್ರಶ್ನೆಯನ್ನು ಆತ ಚಾಟ್ ಜಿಪಿಟಿಗೆ ಕೇಳುತ್ತಾನೆ. ಅದು ಎಲ್ಲ ವೆಬ್‌ಸೈಟ್‌ಗಳನ್ನೂ ಹುಡುಕಿ ತಂದು ಒಂದು ಪಟ್ಟಿಯನ್ನು ಅವನಿಗೆ ನೀಡುತ್ತದೆ. ಪ್ರತಿ ಪ್ರದೇಶದ ಅನುಕೂಲ, ಅನಾನುಕೂಲವನ್ನೂ ಅವನಿಗೆ ತಿಳಿಸುತ್ತದೆ. ಆಗ ಅವನಿಗೆ ಒಂದೇ ಕಡೆ ಎಲ್ಲ ಮಾಹಿತಿಯೂ ಸಿಕ್ಕಂತಾಯಿತು. ಬೇರೆ ಬೇರೆ ವೆಬ್‌ಸೈಟ್‌ಗಳನ್ನು ಕ್ಲಿಕ್ ಮಾಡಿ, ಅವುಗಳ ನಿಖರತೆಯನ್ನು ಪರಿಶೀಲಿಸಿಕೊಂಡು, ಅದರಲ್ಲಿರುವ ಮಾಹಿತಿಯನ್ನು ಓದಿ ತನಗೆ ಬೇಕಾದ್ದನ್ನು ಮಾತ್ರ ಸೋಸಿಕೊಳ್ಳುವ ತೊಂದರೆ ಇಲ್ಲವೇ ಇಲ್ಲ. ಇಲ್ಲಿ ಎಲ್ಲವೂ ಸಿದ್ಧ ಮಾಹಿತಿ ಅವನಿಗೆ ಲಭ್ಯವಾಗುತ್ತದೆ.
ಯಾವ ಉದ್ಯಮಕ್ಕೆ ಪರಿಣಾಮ?
ಗೂಗಲ್‌ನಂತಹ ಜಗತ್ತಿನ ಬೃಹತ್ ಸಂಸ್ಥೆಯ ಬುಡವನ್ನೇ ಚಾಟ್‌ಜಿಪಿಟಿ ಅಲ್ಲಾಡಿಸಿದೆ ಎಂದ ಮೇಲೆ ಯಾವ ಉದ್ಯಮದ ದಿಕ್ಕು ದೆಸೆಯನ್ನು ಬೇಕಾದರೂ ಬದಲಿಸಬಹುದು! ಮುಂದಿನ ಕೆಲವು ವರ್ಷಗಳಲ್ಲಿ ಇದು ಬಾಧಿಸದ ಉದ್ಯಮವೇ ಇಲ್ಲ. ಮೊದಲು ಇದು ಬಾಧಿಸುವುದು ಸಹಜವಾಗಿಯೇ ಸರ್ಚ್ ಇಂಜಿನ್‌ಗಳನ್ನು. ಈಗಾಗಲೇ ಇದು ಸರ್ಚ್ ಇಂಜಿನ್‌ಗಳ ಮೇಲೆ ಪರಿಣಾಮ ಬೀರಲು ಶುರು ಮಾಡಿದೆ. ಇದನ್ನು ಹೊರತುಪಡಿಸಿ, ಮಾರ್ಕೆಟಿಂಗ್, ಕಾಪಿರೈಟಿಂಗ್, ಇಲ್ಲಸ್ಟ್ರೇಶನ್ ಮತ್ತು ವಿನ್ಯಾಸ, 3ಡಿ ಮಾಡೆಲಿಂಗ್, ಗ್ರಾಹಕಸೇವೆ, ಸಾಫ್ಟ್‌ವೇರ್ ಕೋಡಿಂಗ್, ವೀಡಿಯೋ ಎಡಿಟಿಂಗ್, ಸಿನಿಮಾ ನಿರ್ಮಾಣ, ಗೇಮಿಂಗ್, ಕಾನೂನು ವಿಷಯಗಳು, ವೈಜ್ಞಾನಿಕ ಸಂಶೋಧನೆ ಸೇರಿದಂತೆ ಬಹುತೇಕ ಎಲ್ಲ ವಲಯಗಳಲ್ಲೂ ಜನರೇಟಿವ್ ಎಐ ಬಳಕೆಯಾಗಲಿದೆ.
ಮುನ್ನೆಚ್ಚರಿಕೆ ಬೇಕೆ?
ಜನರೇಟಿವ್ ಎಐನಿಂದ ಎಷ್ಟು ಅನುಕೂಲವಿದೆಯೋ ಅಷ್ಟೇ ಅನಾನುಕೂಲಗಳೂ ಇವೆ. ಇದನ್ನು ಬಳಸಿ ಅಸಲಿಯಂತೆಯೇ ನಕಲಿಯನ್ನು ಸೃಷ್ಟಿಸುವುದೂ ತುಂಬ ಸುಲಭ! ಚಾಟ್‌ಜಿಪಿಟಿ ಬಳಸಿಕೊಂಡು ಅಸಲಿಯಂತೆಯೇ ಕಾಣುವ ನಕಲಿ ವೆಬ್‌ಸೈಟ್‌ಗಳನ್ನು ಹುಟ್ಟುಹಾಕುವುದು ಎಷ್ಟು ಹೊತ್ತಿನ ಕೆಲಸವೂ ಅಲ್ಲ! ಹೀಗಾಗಿ, ನಕಲಿಯನ್ನು ಪತ್ತೆ ಹಚ್ಚುವುದು ಮೊದಲಿಗಿಂತ ಕಷ್ಟಕರವಾದೀತು.
ಅದೇ ರೀತಿ, ಹಲವು ಉದ್ಯಮಗಳು ಈ ಚಾಟ್‌ಜಿಪಿಟಿ ಇಂದ ಬುಡಮೇಲಾಗಬಹುದು, ಉದ್ಯಮಗಳು ವಹಿವಾಟು ನಡೆಸುವ ಸ್ವರೂಪ ಬದಲಾಗಬಹುದು. ಪುನರಾವರ್ತಿತ ಕೆಲಸಗಳನ್ನು ಮಾಡುವವರಿಗೆ ಕೆಲಸ ಕಡಿಮೆಯಾಗಬಹುದು. ಹಾಗೆಂದ ಮಾತ್ರಕ್ಕೆ ಮನುಷ್ಯನಿಗೆ ಕೆಲಸವೇ ಕಡಿಮೆಯಾಗುತ್ತದೆ ಎಂದೇನಿಲ್ಲ! ಕಂಪ್ಯೂಟರ್ ಬಂದ ಹೊಸತರಲ್ಲಿ ಕೂಡ ಉದ್ಯಮದಲ್ಲಿ ದೊಡ್ಡದೊಂದು ಆತಂಕ ಮನೆ ಮಾಡಿತ್ತು. ಮುಂದಿನ ದಿನಗಳಲ್ಲಿ ಇಬ್ಬರು ಮಾಡುವ ಕೆಲಸವನ್ನು ಒಂದು ಕಂಪ್ಯೂಟರ್ ಮಾಡುವುದರಿಂದ ಕೋಟ್ಯಂತರ ಜನರು ಕೆಲಸ ಕಳೆದುಕೊಳ್ಳುತ್ತಾರೆ ಎಂಬ ಆತಂಕ ಕಾಡಿತ್ತು. ಆದರೆ, ಹಾಗಾಗಲಿಲ್ಲ. ಬದಲಿಗೆ ಮಾನವನ ಕೆಲಸದ ವಿಧಾನ ಬದಲಾಯಿತು.
ಈಗಲೂ ಹಾಗೆಯೇ, ಮನುಷ್ಯ ತನ್ನ ಕೆಲಸದಲ್ಲಿ ಯಾಂತ್ರಿಕತೆಯನ್ನು ಕಡಿಮೆ ಮಾಡಿ 'ಮನುಷ್ಯತ್ವ"ವನ್ನು ಸೇರಿಸುವ ಪ್ರಮಾಣ ಹೆಚ್ಚುತ್ತದೆ. ಅಂದರೆ, ಈ ಯಂತ್ರಗಳು ಮನುಷ್ಯನಿಗೆ ಮನುಷ್ಯತ್ವವನ್ನು ಕಲಿಸುತ್ತವೆ ಮತ್ತು ಯಾಂತ್ರಿಕವಾದ ಎಲ್ಲ ಕೆಲಸವನ್ನೂ ತಾನು ಮಾಡುತ್ತದೆ. ಅದರಲ್ಲೂ, ಜನರೇಟಿವ್ ಆರ್ಟಿಫಿಶಿಯಲ್ ಇಂಟಲಿಜೆನ್ಸ್‌ನಲ್ಲಿ ಮನುಷ್ಯನ ಬುದ್ಧಿಮತ್ತೆಯ ಅಂಶವೂ ಇರುವುದರಿಂದ ಮನುಷ್ಯ ಒಂದೋ ಅದಕ್ಕಿಂತ ಇನ್ನಷ್ಟು ಬುದ್ಧಿವಂತನಾಗಬೇಕು ಅಥವಾ ಎಐಗಿಂತ ದಡ್ಡನಾಗಿ ಎಐಗೆ ಕೆಲಸ ಮಾಡಲು ಬಿಟ್ಟು ತಾನು ಸುಮ್ಮನೆ ಕುಳಿತುಕೊಳ್ಳಬೇಕು!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.