ಅಮೆರಿಕದ ರಾಷ್ಟ್ರೀಯ ಭದ್ರತೆಗೆ ಚೀನಾ ಮೂಲದ ಟೆಲಿಕಾಂ ಸಂಸ್ಥೆ ಹುವೈನಿಂದ ಅಪಾಯವಿದೆ ಎಂದು ಅಮೆರಿಕದ ಭದ್ರತಾ ಮಂಡಳಿ ಅಭಿಪ್ರಾಯಪಟ್ಟಿದೆ. ಇದರೊಂದಿಗೆ ಚೀನಾ ಮತ್ತು ಅಮೆರಿಕ ನಡುವಣ ಮೈತ್ರಿ ಉತ್ತಮಗೊಳ್ಳುವ ಸಾಧ್ಯತೆಯಿಲ್ಲ ಎಂಬ ಸುಳಿವು ನೀಡಿದೆ.
ಹುವೈ ಮಾತ್ರವಲ್ಲದೆ, ಝೆಟಿಇ, ಹೈಟೆರಾ ಕಮ್ಯುನೀಕೇಷನ್ಸ್, ಹಾಂಗೋ ಹೈಕ್‌ವಿಶನ್ ಡಿಜಿಟಲ್ ಟೆಕ್ನಾಲಜಿ ಮತ್ತು ದವಾ ಟೆಕ್ನಾಲಜಿ ಎಂಬ ಸಂಸ್ಥೆಗಳು ಅಮೆರಿಕದ ರಾಷ್ಟ್ರೀಯ ಭದ್ರತೆಗೆ ಅಪಾಯ ತರಲಿದೆ ಎಂದು ಸಮಿತಿ ವರದಿ ಹೇಳಿದೆ.
ಫೆಡರಲ್ ಕಮ್ಯುನಿಕೇಷನ್ಸ್ ಆಯೋಗದ ಪ್ರಭಾರ ಚೇರ್ಮನ್ ಆಗಿರುವ ಜೆಸ್ಸಿಕಾ ರೋನ್‌ವರ್ಸೆಲ್ ಪ್ರಕಾರ, ಈ ಪಟ್ಟಿಯಿಂದ ನಮ್ಮ ಸಂವಹನ ನೆಟ್‌ವರ್ಕ್ ಕುರಿತ ಜನರ ನಂಬಿಕೆಯನ್ನು ಮರಳಿ ಪಡೆಯುವಲ್ಲಿ ಮಹತ್ವದ ಹೆಜ್ಜೆಯಾಗಿದೆ.
ಈ ಪಟ್ಟಿಯು, ಮುಂದಿನ ದಿನಗಳಲ್ಲಿ ದೇಶದಲ್ಲಿ ಕೈಗೊಳ್ಳಬೇಕಾದ ಟೆಲಿಕಾಂ ಸಂಬಂಧಿತ ಕೆಲಸಗಳಿಗೆ ಮಾದರಿಯಾಗಲಿದೆ. ಅಲ್ಲದೆ, ಈ ಹಿಂದೆ ಮಾಡಿರುವ ತಪ್ಪುಗಳು ಮರುಕಳಿಸದಂತೆ ಮತ್ತು ನಿರ್ಬಂಧಿತ ಉಪಕರಣಗಳ ಅಳವಡಿಕೆ ಮಾಡದಂತೆ ತಡೆ ನೀಡಲಿದೆ. ಇದು ರಾಷ್ಟ್ರೀಯ ಭದ್ರತೆ ಮತ್ತು ಅಮೆರಿಕನ್ನರ ಸುರಕ್ಷತೆಯ ವಿಚಾರವಾಗಿದೆ ಎಂದು ಜೆಸ್ಸಿಕಾ ಹೇಳಿದ್ದಾರೆ.
ಡೊನಾಲ್ಡ್ ಟ್ರಂಪ್ ಅವಧಿಯಲ್ಲಿ ಹೇರಲಾದ ನಿಷೇಧ ಹಿಂಪಡೆಯುವಂತೆ ಹುವೈ ಮುಖ್ಯಸ್ಥ ಮತ್ತು ಸ್ಥಾಪಕ ರೆನ್ ಝೆಂಗೈ ಕಳೆದ ತಿಂಗಳು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರನ್ನು ಕೇಳಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.