ಇ-ಕಾಮರ್ಸ್ ಬೆಳೆಯುತ್ತಿದ್ದಂತೆಯೇ ಅದಕ್ಕೆ ಸಂಬಂಧಿಸಿದ ಹಲವು ಭದ್ರತಾ ಸಮಸ್ಯೆಗಳೂ ತಲೆದೋರಿದವು. ಅದರಲ್ಲಿ ಎಲ್ಲಕ್ಕಿಂತ ಮುಖ್ಯವಾದದ್ದು ಕಾರ್ಡ್ ಡೇಟಾ ಕಳ್ಳತನ. ಇ-ಕಾಮರ್ಸ್ ಸೈಟ್‌ಗಳು ತಮ್ಮ ಗ್ರಾಹಕರಿಗೆ ಅನುಕೂಲವಾಗಲಿ ಎಂಬ ಉದ್ದೇಶಕ್ಕೆ ಮೊದಲ ಬಾರಿಗೆ ಖರೀದಿ ಮಾಡುವಾಗ ತಮ್ಮ ವೆಬ್‌ಸೈಟ್‌ನಲ್ಲಿ ನಮೂದಿಸಿದ ಗ್ರಾಹಕರ ಕಾರ್ಡ್ ವಿವರಗಳನ್ನು ಉಳಿಸಿಕೊಳ್ಳುವ ವಿಧಾನವನ್ನು ಅನುಸರಿಸಿದವು. ಇದರಿಂದ ಪ್ರತಿ ಬಾರಿ ಖರೀದಿ ಮಾಡುವಾಗಲೂ ಕಾರ್ಡ್‌ನ ಅಷ್ಟೂ ಸಂಖ್ಯೆಯನ್ನು ನಮೂದಿಸುವ ಕಿರಿಕಿರಿ ಗ್ರಾಹಕರಿಗೆ ತಪ್ಪಿತಾದರೂ, ಕಾರ್ಡ್‌ನ ಸಂಪೂರ್ಣ ಸಂಖ್ಯೆ ಯಾವುದೋ ದೇಶದಲ್ಲಿ ಕುಳಿತಿರುವ ಇ-ಕಾಮರ್ಸ್ ವೆಬ್‌ಸೈಟ್ ಕೈಗೆ ಸಿಗುವ ಅಪಾಯವೂ ಎದುರಾಯ್ತು.
ಹೀಗೆ ಕಾರ್ಡ್ ಸಂಖ್ಯೆ ಹಾಗೂ ಎಕ್ಸ್‌ಪೈರಿ ದಿನಾಂಕವನ್ನು ಉಳಿಸಿಕೊಳ್ಳುವುದರಿಂದ ಸೃಷ್ಟಿಯಾದ ಮೊದಲ ಸಮಸ್ಯೆಯೆಂದರೆ, ತದ್ರೂಪಿ ಕಾರ್ಡ್ ಸೃಷ್ಟಿ ಮಾಡಿಕೊಂಡು, ಬಳಕೆ ಮಾಡುವುದು. ಇಂಥ ಹಲವು ಪ್ರಕರಣಗಳು ದೇಶದ ಹಲವು ಕಡೆ ಬೆಳಕಿಗೆ ಬಂದಿವೆ.
ಇಂಥ ಸಮಸ್ಯೆಯನ್ನು ನಿಯಂತ್ರಿಸುವುದಕ್ಕೆಂದೇ ಆರ್‌ಬಿಐ ಹೊಸ ವ್ಯವಸ್ಥೆಯೊಂದನ್ನು ಪರಿಚಯಿಸಿದೆ. ಅದೇ ಟೋಕನೈಸೇಶನ್. ಕಾರ್ಡ್ ವಿವರಗಳನ್ನು ಟೋಕನ್ ಆಗಿ ಬದಲಾಯಿಸುವುದು! ಜುಲೈ 1ರಿಂದ ಈ ಹೊಸ ನಿಯಮ ಜಾರಿಗೆ ಬರುವುದಾಗಿ ಆರ್‌ಬಿಐ ಘೋಷಿಸಿತ್ತಾದರೂ, ಮೂಲಸೌಕರ್ಯವನ್ನು ಕಲ್ಪಿಸಿಕೊಳ್ಳುವುದಕ್ಕೆ ಇನ್ನಷ್ಟು ಅವಕಾಶ ಮಾಡಿಕೊಡುವ ದೃಷ್ಟಿಯಿಂದ ಸೆಪ್ಟೆಂಬರ್‌ವರೆಗೆ ಈ ನೀತಿಯನ್ನು ಆರ್‌ಬಿಐ ಮುಂದೂಡಿದೆ.
ಏನಿದು ಟೋಕನ್?
ಕಾರ್ಡ್ ವಿವರವನ್ನು ‘ಟೋಕನ್’ ಆಗಿ ಪರಿವರ್ತಿಸುವುದೇ ಈ ನಿಯಮದ ಮೂಲ ಉದ್ದೇಶ. ಗ್ರಾಹಕನೊಬ್ಬನ ಬಳಿ ಒಂದು ಕ್ರೆಡಿಟ್ ಕಾರ್ಡ್ ಇದೆ ಎಂದುಕೊಳ್ಳೋಣ. ಅದನ್ನು ಆತ ಒಂದು ಶಾಪಿಂಗ್ ಸೈಟ್‌ನಲ್ಲಿ ಹಾಕಿ ಏನನ್ನೋ ಆರ್ಡರ್ ಮಾಡುತ್ತಾನೆ. ಆಗ ಆ ಕಾರ್ಡ್ ವಿವರವನ್ನು ‘ಟೋಕನ್ ಮಾಡಬೇಕೆ’ ಎಂದು ಆ ಶಾಪಿಂಗ್ ಸೈಟ್ ಕೇಳುತ್ತದೆ. ಒಂದು ವೇಳೆ ಅದಕ್ಕೆ ಒಪ್ಪಿಗೆ ಎಂದರೆ ಆ ಸೈಟ್‌ನಲ್ಲಿ ಆ ಕಾರ್ಡ್ ವಿವರ ಟೋಕನ್ ಆಗಿ ಪರಿವರ್ತನೆಯಾಗಿರುತ್ತದೆ; ಕಾರ್ಡ್ ವಿವರ ಅಲ್ಲಿರುವುದಿಲ್ಲ. ಆದರೆ, ಅದಕ್ಕೊಂದು ಟೋಕನ್ ಕ್ರಿಯೇಟ್ ಆಗುತ್ತದೆ. ಮತ್ತೊಂದು ಬಾರಿ ಅದೇ ಸೈಟ್‌ನಲ್ಲಿ ಶಾಪಿಂಗ್ ಮಾಡುವಾಗ ಆ ಟೋಕನ್ ಬಳಸಿ ಶಾಪಿಂಗ್ ಮಾಡಬಹುದು. ಪ್ರತಿ ಇ-ಕಾಮರ್ಸ್ ಸೈಟ್‌ನಲ್ಲೂ ಹೀಗೆ ನಮ್ಮ ಕಾರ್ಡ್‌ಗಳನ್ನು ಟೋಕನ್ ಮಾಡಿಕೊಳ್ಳಬೇಕು. ಈಗಾಗಲೇ ನಾವು ಸೇವ್ ಮಾಡಿದ್ದ ಕಾರ್ಡ್ ವಿವರಗಳು ಸೆಪ್ಟೆಂಬರ್ 30ರ ನಂತರ (ಮೊದಲಿನ ನಿಯಮದ ಪ್ರಕಾರ ಜುಲೈ 1 ಆಗಿತ್ತು) ಅಳಿಸಿಹೋಗುತ್ತವೆ. ಈ ಟೋಕನ್‌ಗೂ ನಮ್ಮ ಕಾರ್ಡ್‌ಗೂ ಲಿಂಕ್ ಬ್ಯಾಂಕ್‌ನ ಸರ್ವರ್‌ಗಳಲ್ಲಿ ಆಗುತ್ತದೆ. ಒಂದು ಇ-ಕಾಮರ್ಸ್‌ಗೆ ಒಂದು ಕಾರ್ಡ್‌ಗೆ ಒಂದು ಟೋಕನ್ ಇರುತ್ತದೆ. ಅದೇ ಕಾರ್ಡ್ ಅನ್ನು ಬೇರೆ ಇ-ಕಾಮರ್ಸ್ ಸೈಟ್‌ನಲ್ಲಿ ಬಳಸಬೇಕು ಎಂದಾದರೆ ಬೇರೆ ಟೋಕನ್ ಸೃಷ್ಟಿಯಾಗುತ್ತದೆ. ಹೀಗಾಗಿ, ಕಾರ್ಡ್ ವಿವರ ಯಾವುದೇ ರೀತಿಯಲ್ಲೂ ಇ-ಕಾಮರ್ಸ್ ಸೈಟ್ ಬಳಿ ಇರುವುದಿಲ್ಲ. ಅಷ್ಟೇ ಅಲ್ಲ, ಟೋಕನ್‌ಗೂ ಕಾರ್ಡ್‌ಗೂ ಲಿಂಕ್ ಕೂಡ ಬ್ಯಾಂಕ್‌ನ ಸರ್ವರ್‌ನಲ್ಲೇ ಆಗುತ್ತದೆಯಾದ್ದರಿಂದ, ಗ್ರಾಹಕರು ಸಂಪೂರ್ಣ ಸುರಕ್ಷಿತ.
ಗ್ರಾಹಕರಿಗೆ ಏನು ಲಾಭ?
ಮೇಲ್ನೋಟಕ್ಕೆ ಇದರಿಂದ ಗ್ರಾಹಕರಿಗೆ ಯಾವ ಬದಲಾವಣೆಯೂ ಕಾಣುವುದಿಲ್ಲ. ಏಕೆಂದರೆ, ಈಗಾಗಲೇ ಕಾಣುತ್ತಿದ್ದ ಹಾಗೆ ನಮ್ಮ ಕಾರ್ಡ್‌ನ ಕೊನೆಯ ನಾಲ್ಕು ಅಂಕಿಗಳೇ ಇ-ಕಾಮರ್ಸ್ ವೆಬ್‌ಸೈಟ್‌ನ ಪೇಮೆಂಟ್ ಪೇಜ್‌ನಲ್ಲಿ ಕಾಣಿಸುತ್ತಿರುತ್ತವೆ. ಆದರೆ, ಅದರ ಹಿಂದಿನ ತಂತ್ರಜ್ಞಾನದಲ್ಲಿ ಬದಲಾವಣೆಯಾಗಿರುತ್ತದೆ. ಗ್ರಾಹಕರ ಡೆಬಿಟ್, ಕ್ರೆಡಿಟ್ ಕಾರ್ಡ್ ಡೇಟಾ ಕಳ್ಳತನವಾಗುವ ಸಾಧ್ಯತೆ ಕಡಿಮೆಯಾಗುತ್ತದೆ. ಈ ಟೋಕನ್‌ಗಳನ್ನು ಅಳಿಸಿಹಾಕುವ ವ್ಯವಸ್ಥೆಯನ್ನು ಕಾರ್ಡ್ ವಿತರಿಸಿದ ಬ್ಯಾಂಕ್‌ಗಳು ಗ್ರಾಹಕರಿಗೆ ಒದಗಿಸುತ್ತವೆ. ಅದರಿಂದ ಇ-ಕಾಮರ್ಸ್ ಸೈಟ್‌ನ ಹೊರಗೂ ನಾವು ಈ ಡೇಟಾ ಬಳಕೆಯನ್ನು ನಿಯಂತ್ರಿಸಬಹುದು. ಅದೆಲ್ಲಕ್ಕಿಂತ ಮುಖ್ಯವಾಗಿ, ಸುರಕ್ಷಿತವಲ್ಲದ ಇ-ಕಾಮರ್ಸ್ ಸೈಟ್‌ನಲ್ಲಿ ಶಾಪಿಂಗ್ ಮಾಡಿದಾಗ ಕಾರ್ಡ್ ವಿವರಗಳು ದುರ್ಬಳಕೆಯಾಗುವ ಅಪಾಯ ತಪ್ಪುತ್ತದೆ. ಜನಪ್ರಿಯ ಸೈಟ್‌ನಲ್ಲೇ ಆದರೂ, ಹ್ಯಾಕರ್‌ಗಳು ಮುಂದೊಂದು ದಿನ ಕಾರ್ಡ್ ವಿವರಗಳನ್ನು ಕದ್ದು ಅವನ್ನು ದುರ್ಬಳಕೆ ಮಾಡಿಕೊಳ್ಳುವ ಅಪಾಯವೂ ಇದರಲ್ಲಿ ತುಂಬಾ ಕಡಿಮೆ.
ಇದು ಗ್ರಾಹಕರ ಸುರಕ್ಷತೆ ದೃಷ್ಟಿಯಿಂದಲೇ ಮಾಡಿದ ಕ್ರಮವಾದ್ದರಿಂದ, ನಮ್ಮ ಕಾರ್ಡ್‌ಗಳನ್ನು ಆದಷ್ಟು ಬೇಗ ಇ-ಕಾಮರ್ಸ್ ಸೈಟ್‌ಗಳಲ್ಲಿ ಅಳಿಸಿಕೊಂಡು ಅದನ್ನು ಟೋಕನ್ ಆಗಿ ಪರಿವರ್ತಿಸಿಕೊಳ್ಳುವುದು ಅತ್ಯಂತ ಉತ್ತಮ ನಿರ್ಧಾರ.
ಕಾರ್ಡ್ ಸ್ವೈಪ್ ಮಾಡುವುದಕ್ಕೆ ಅಡ್ಡಿ ಇಲ್ಲ
ಈ ವ್ಯವಸ್ಥೆ ಪಿಒಎಸ್‌ಗಳಿಗೆ ಅನ್ವಯಿಸುವುದಿಲ್ಲ. ಅಂದರೆ, ಅಂಗಡಿಗಳಲ್ಲಿ ಖರೀದಿ ಮಾಡುವಾಗ ನಾವು ಕಾರ್ಡ್ ಸ್ವೈಪ್ ಮಾಡುವುದಕ್ಕೆ ಇದು ಅನ್ವಯಿಸುವುದಿಲ್ಲ. ಅಲ್ಲಿ ನಮ್ಮ ಕಾರ್ಡ್ ವಿವರಗಳು ಸಂಗ್ರಹವಾಗದೇ ಇರುವುದರಿಂದ ಈ ಸಮಸ್ಯೆ ಇಲ್ಲ.
ಅಷ್ಟೇ ಅಲ್ಲ, ಅಂತರರಾಷ್ಟ್ರೀಯ ವೆಬ್‌ಸೈಟ್‌ಗಳಲ್ಲಿ ವಹಿವಾಟು ಮಾಡುವುದಕ್ಕೂ ಈ ಟೋಕನೈಸೇಶನ್ ಅನ್ವಯಿಸುವುದಿಲ್ಲ. ಈ ಟೋಕನೈಸೇಶನ್ ಎಂಬುದು ಆರ್‌ಬಿಐ ಮಾಡಿದ ನಿಯಮವಾದ್ದರಿಂದ, ವಿದೇಶದ ವೆಬ್‌ಸೈಟ್‌ಗಳಿಗೆ ಇದು ಅನ್ವಯಿಸುವುದಿಲ್ಲ. ಹೀಗಾಗಿ, ಅಂತಹ ವೆಬ್‌ಸೈಟ್‌ಗಳಲ್ಲಿ ವಹಿವಾಟು ಮಾಡುವಾಗ ಕಾರ್ಡ್ ವಿವರಗಳನ್ನು ಸೇವ್ ಮಾಡದೇ, ಪ್ರತಿ ಬಾರಿ ವಹಿವಾಟು ಮಾಡುವಾಗಲೂ ಕಾರ್ಡ್ ವಿವರಗಳನ್ನು ನಮೂದಿಸುವುದೇ ಅತ್ಯುತ್ತಮ ವಿಧಾನ.
ಕಾರ್ಡ್ ಟೋಕನ್ ಕಡ್ಡಾಯವಲ್ಲ
ಯಾವುದೇ ಸೌಲಭ್ಯವನ್ನಾದರೂ ಕಡ್ಡಾಯವನ್ನಾಗಿಸಿದರೆ ನಾವು ಹುಬ್ಬೇರಿಸುವುದು ಸಹಜ! ಇಲ್ಲೂ ಹಾಗೆಯೇ. ಈ ಕಾರ್ಡ್ ಟೋಕನ್ ಮಾಡಿಕೊಳ್ಳುವುದು ಕಡ್ಡಾಯವಲ್ಲ. ಇದು ನಮ್ಮ ಆಯ್ಕೆ. ಆದರೆ, ನಮ್ಮ ಕಾರ್ಡ್ ವಿವರಗಳನ್ನು ಇ-ಕಾಮರ್ಸ್ ವೆಬ್‌ಸೈಟ್‌ಗಳು ಸೇವ್ ಮಾಡಿಟ್ಟುಕೊಳ್ಳುವ ಹಾಗಿಲ್ಲ. ಒಂದೋ ಟೋಕನ್ ಮಾಡಬೇಕು. ಇಲ್ಲವಾದರೆ, ಕಾರ್ಡ್ ವಿವರ ಉಳಿಸಬಾರದು. ಹೀಗಾಗಿ, ಗ್ರಾಹಕರು ಮತ್ತೊಮ್ಮೆ ಆ ವೆಬ್‌ಸೈಟ್‌ನಲ್ಲಿ ವಹಿವಾಟು ಮಾಡಬೇಕು ಎಂದಾದರೆ ಟೋಕನ್ ಮಾಡಿಕೊಳ್ಳುವುದೇ ಉತ್ತಮ ಆಯ್ಕೆಯಾಗಿರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.