ಬ್ಯಾಂಕ್ ಖಾತೆಯಲ್ಲಿದ್ದ ಲಕ್ಷಾಂತರ ರೂಪಾಯಿ ಹಣವನ್ನು ವಿದ್ಯಾವಂತರು, ಹಿರಿಯ ನಾಗರಿಕರು ಕಳೆದುಕೊಂಡ ಘಟನೆಗಳು ಇತ್ತೀಚೆಗೆ ಹೆಚ್ಚೇ ವರದಿಯಾಗುತ್ತಿವೆ. ಇದಕ್ಕೆಲ್ಲ ಕಾರಣ, ತಂತ್ರಜ್ಞಾನದ ಬಗೆಗೆ ನಮಗಿರುವ ಅರಿವಿನ ಕೊರತೆ. ಮೊಬೈಲ್ ಎಂಬ ಅನುಗಾಲದ ಸಂಗಾತಿಯನ್ನು ಸ್ವಲ್ಪವೂ ಎಚ್ಚರಿಕೆಯಿಲ್ಲದೆ ಬಳಸಿದ ಪರಿಣಾಮ.
ಮಾರ್ಚ್ ತಿಂಗಳಲ್ಲಿ ಕೋಲ್ಕತ್ತದಿಂದ ವರದಿಯಾದ ಒಂದು ಘಟನೆ. ಆತ ಐಟಿ ಎಂಜಿನಿಯರ್. ಸ್ನೇಹಿತನಿಂದಲೋ ಅಥವಾ ಯಾವುದೋ ಗ್ರೂಪಿನಲ್ಲೋ ಬಂದ 'ಎಪಿಕೆ' ಫೈಲ್ ಒಂದನ್ನು ಆಂಡ್ರಾಯ್ಡ್ ಮೊಬೈಲ್ ಫೋನ್‌ನಲ್ಲಿ ಅಳವಡಿಸಿಕೊಂಡಿದ್ದಾನೆ. ಕೆಲವೇ ಕ್ಷಣಗಳಲ್ಲಿ ಹಂತ ಹಂತವಾಗಿ ಆತನ ಖಾತೆಯಿಂದ ₹16.5 ಲಕ್ಷ ಹೋಗಿಯೇ ಬಿಟ್ಟಿತು. ಅಷ್ಟೇ ಅಲ್ಲ! ತಿಂಗಳ ಬಳಿಕ "ನೀವು ತೆಗೆದುಕೊಂಡ ₹14 ಲಕ್ಷ ಸಾಲದ ಕಂತು ಇನ್ನೂ ಕಟ್ಟಿಲ್ಲವೇಕೆ" ಎಂಬ ನೋಟಿಸ್ ಕೂಡ ಆತನಿಗೆ ಬಂದಿತ್ತು. ಅಂದರೆ, ಆತನ ಹೆಸರಲ್ಲಿ ಸೈಬರ್ ವಂಚಕರು ಬ್ಯಾಂಕ್ ಸಾಲವನ್ನೂ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ!
ಮತ್ತೊಂದು ಪ್ರಕರಣ, ಕಳೆದ ನವೆಂಬರ್ ತಿಂಗಳಲ್ಲಿ ಪುಣೆಯಿಂದ ವರದಿಯಾಗಿತ್ತು. 72ರ ವೃದ್ಧರೊಬ್ಬರು, ಪಿಂಚಣಿ ಬರಬೇಕಿದ್ದರೆ ಪ್ಯಾನ್ ಕಾರ್ಡ್ ಅಪ್‌ಡೇಟ್ ಮಾಡಿಕೊಳ್ಳಿ ಎಂಬ ಸೂಚನೆಯೊಂದಿಗೆ ಬಂದ ಎಪಿಕೆ ಫೈಲ್ ಒಂದನ್ನು ಅಳವಡಿಸಿಕೊಂಡು, ಖಾತೆಯಿಂದ ₹13.86 ಲಕ್ಷ ಕಳೆದುಕೊಂಡಿದ್ದರು.
ಬ್ಯಾಂಕ್ ಖಾತೆಯಲ್ಲಿದ್ದ ಲಕ್ಷಾಂತರ ರೂಪಾಯಿ ಹಣವನ್ನು ವಿದ್ಯಾವಂತರು, ಹಿರಿಯ ನಾಗರಿಕರು ಕಳೆದುಕೊಂಡ ಅದೆಷ್ಟೋ ಘಟನೆಗಳು ಇತ್ತೀಚೆಗೆ ಹೆಚ್ಚೇ ವರದಿಯಾಗುತ್ತಿವೆ. ಇದಕ್ಕೆಲ್ಲ ಕಾರಣ, ತಂತ್ರಜ್ಞಾನದ ಬಗೆಗೆ ನಮಗಿರುವ ಅವಜ್ಞೆ ಮತ್ತು ಅರಿವಿನ ಕೊರತೆ. ಮೊಬೈಲ್ ಎಂಬ ಅನುಗಾಲದ ಸಂಗಾತಿಯನ್ನು ಸ್ವಲ್ಪವೂ ಎಚ್ಚರಿಕೆಯಿಲ್ಲದೆ ಬಳಸಿದ ಪರಿಣಾಮ. ಹೊಸ ಹೊಸ ವಿಧಾನಗಳ ಮೂಲಕ ಇಂಥವರನ್ನೇ ಬಲೆಗೆ ಹಾಕಿಕೊಳ್ಳಲು ಕಾದು ಕುಳಿತಿರುತ್ತಾರೆ ಸೈಬರ್ ವಂಚಕರು. ಈ ತಂತ್ರಜ್ಞಾನದ ಯುಗದಲ್ಲಿ ಹಣ ಸಂಪಾದನೆ ಕಷ್ಟ, ಆದರೆ ಕಳೆದುಕೊಳ್ಳುವುದು ತೀರಾ ಸುಲಭ. ಕೂಡಿಟ್ಟಿದ್ದ ಅಷ್ಟೂ ಹಣ ಹೋಗಿದ್ದು ಹೇಗೆಂದರೆ, ಅವರು ತಮಗೆ ವಾಟ್ಸ್ಆ್ಯಪ್, ಟೆಲಿಗ್ರಾಂ ಅಥವಾ ಬೇರಾವುದೇ ಮೆಸೆಂಜರ್ ಆ್ಯಪ್‌ಗಳಲ್ಲಿ ಬಂದಿದ್ದ ಒಂದು ಆ್ಯಪ್ ಅನ್ನು ಇನ್‌ಸ್ಟಾಲ್ ಮಾಡಿಕೊಂಡಿದ್ದರು.
ಸೈಬರ್ ವಂಚಕರ ಹೊಸ ಅಸ್ತ್ರವಿದು. ಬ್ಯಾಂಕಿಂಗ್ ಅಥವಾ ಬೇರಾವುದೇ ಯೋಜನೆಗಳ ಹೆಸರಿನ ಕುತಂತ್ರಾಂಶವನ್ನು (ಮಾಲ್‌ವೇರ್) ಬಳಸಿ ಜನರನ್ನು ಸುಲಿಯುವ ಪ್ರಕ್ರಿಯೆಯಿದು. ಪ್ಯಾನ್-ಆಧಾರ್ ಲಿಂಕ್ ಮಾಡಬೇಕು, ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಬೇಕು, ಸರಕಾರೀ ಯೋಜನೆಯ ಹಣ ಪಡೆಯಬೇಕು, ಪೆನ್ಷನ್ ಪಡೆಯಬೇಕು ಎಂದೆಲ್ಲ ಕಾಳಜಿ ಹೊಂದಿರುವವರಿಗಾಗಿಯೇ ಇಂಥ ಕುತಂತ್ರಾಂಶಗಳು ಸಿದ್ಧವಾಗಿರುತ್ತವೆ ಎಂಬುದೂ ನೆನಪಿರಲಿ.
ನಿಮ್ಮಲ್ಲೂ ಅನೇಕರಿಗೆ ವಾಟ್ಸ್ಆ್ಯಪ್ ಸಂದೇಶದ ಮೂಲಕ ".apk" ಎಂದು ಕೊನೆಗೊಳ್ಳುವ ಫೈಲ್ ನೇಮ್ ಇರುವ ಫೈಲ್ ಬಂದಿದ್ದಿರಬಹುದು. ಆಂಡ್ರಾಯ್ಡ್ ಅಪ್ಲಿಕೇಶನ್ ಪ್ಯಾಕೇಜ್ ಅಥವಾ ಆಂಡ್ರಾಯ್ಡ್ ಪ್ಯಾಕೇಜ್ ಕಿಟ್ ಎಂಬುದರ ಸಂಕ್ಷಿಪ್ತ ರೂಪ ಎಪಿಕೆ. ಈ ಫೈಲ್ ಅಪರಿಚಿತ ಸಂಖ್ಯೆಯಿಂದ ಮಾತ್ರವೇ ಅಲ್ಲ, ಅಸಲಿಯೆಂದು ನಂಬಿ ಗ್ರೂಪಲ್ಲೋ ಅಥವಾ ವೈಯಕ್ತಿಕವಾಗಿ ಫಾರ್ವರ್ಡ್ ಮಾಡುವ ನಿಮ್ಮ ಸ್ನೇಹಿತ ವರ್ಗದಿಂದಲೇ ಬಂದಿರಬಹುದು! (ಇದು ಎಚ್ಚರಿಕೆ ವಹಿಸಬೇಕಾದ ವಿಚಾರ, ಯಾಕೆಂದರೆ ಪರಿಚಿತರನ್ನು ನಾವು ಬೇಗನೇ ನಂಬುತ್ತೇವೆ ಎಂಬುದು ಸೈಬರ್ ವಂಚಕರಿಗೆ ಗೊತ್ತಿದೆ. ಹೀಗಾಗಿ ಇಂಥವನ್ನು ಫಾರ್ವರ್ಡ್ ಮಾಡಲೇಬಾರದು ಎಂಬ ಅರಿವು ನಮಗಿರಬೇಕು.) ಈ ಫೈಲ್‌ನ ಹೆಸರು ಹೇಗಿರುತ್ತದೆಯೆಂದರೆ, ಕೆವೈಸಿ (Know Your Customer ಎಂಬ ಪ್ರಕ್ರಿಯೆ), ಆಧಾರ್-ಪಾನ್ ಲಿಂಕ್, ಎಸ್‌ಬಿಐ ಅಕೌಂಟ್ ಅಪ್‌ಡೇಟ್, ಪ್ರಧಾನಮಂತ್ರಿ ಆವಾಸ್ ಯೋಜನೆ, ರಿವಾರ್ಡ್ ಪಾಯಿಂಟ್ಸ್, ಬ್ಯಾಂಕಿನ ಹೆಸರು ಅಥವಾ ಬೇರಾವುದೇ ಸರಕಾರಿ ಯೋಜನೆಯನ್ನು ಹೋಲುತ್ತದೆ, ಸಂಬಂಧಿಸಿದ ಚಿತ್ರವೂ ಇರಬಹುದು. ಅಷ್ಟೇ ಅಲ್ಲ, ಕೆವೈಸಿ ಮಾಡಿಸದಿದ್ದರೆ, ನಿಮ್ಮ ಖಾತೆಯೇ ಬ್ಲಾಕ್ ಆಗುತ್ತದೆ ಎಂಬ ಎಚ್ಚರಿಕೆ ಕೊಡುವವರೂ ಇದ್ದಾರೆ. ಒಟ್ಟಿನಲ್ಲಿ, ಇದ್ದರೂ ಇರಬಹುದೆಂಬ ದ್ವಂದ್ವದಲ್ಲಿ ಸಿಲುಕುವ ನಾವು ಅದನ್ನು ಕ್ಲಿಕ್ ಮಾಡಿದರೆ ಈ ಎಪಿಕೆ ಫೈಲ್ ನಮ್ಮ ಮೊಬೈಲ್ ಫೋನ್‌ನಲ್ಲಿ ಇನ್‌ಸ್ಟಾಲ್ ಆಗುತ್ತದೆ.
ಇದೊಂದು ಆ್ಯಪ್. ಆದರೆ ಇದನ್ನು ಅಳವಡಿಸಿಕೊಳ್ಳುವುದು ಅಷ್ಟೇನೂ ಸುಲಭವಿಲ್ಲ. ಇಂಥವನ್ನು ಅಳವಡಿಸಿಕೊಳ್ಳದಂತೆ ಆಂಡ್ರಾಯ್ಡ್ ಮೊಬೈಲ್ ಫೋನ್‌ನಲ್ಲೇ ಒಂದು ರಕ್ಷಾ ಕವಚವಿದೆ. ಅದನ್ನು ಭೇದಿಸುವುದು ಹೇಗೆ ಅಂತ ವಂಚಕರೇ ನಿಮಗೆ ಫೋನ್ ಅಥವಾ ಪಠ್ಯ ಮೂಲಕ ಸೂಚನೆ ನೀಡಿ, ನಮ್ಮಿಂದಲೇ ಕೆಲಸ ಮಾಡಿಸಿಕೊಳ್ಳುತ್ತಾರೆ.
ಅದು ಹೇಗೆಂದರೆ, ಫೋನ್‌ನ ಸೆಟ್ಟಿಂಗ್‌ನಲ್ಲಿ, 'ಆ್ಯಪ್ ಮ್ಯಾನೇಜ್‌ಮೆಂಟ್' ಎಂಬಲ್ಲಿ 'ಆ್ಯಪ್ ಆ್ಯಕ್ಸೆಸ್' ವಿಭಾಗ ಇರುತ್ತದೆ (ಬೇರೆ ಬೇರೆ ಮೊಬೈಲ್ ಬ್ರ್ಯಾಂಡ್‌ಗಳಲ್ಲಿ ವಿಭಿನ್ನ ಹೆಸರು ಇರಬಹುದು). ಆದರೆ Install Unknown App ಎಂಬುದು ಬಹುತೇಕ ಎಲ್ಲದರಲ್ಲಿಯೂ ಏಕರೂಪದಲ್ಲಿರುತ್ತದೆ. ಇದರಲ್ಲಿ ಗೂಗಲ್ ಪ್ಲೇ ಸ್ಟೋರ್ ಹೊರತಾಗಿ ಬೇರಾವುದೇ ಕಡೆಯಿಂದಲೂ ಆ್ಯಪ್ ಇನ್‌ಸ್ಟಾಲ್ ಮಾಡಲು ಮೂಲತಃ (ಡೀಫಾಲ್ಟ್ ಆಗಿ) ಅನುಮತಿ ಇರುವುದಿಲ್ಲ. ಆದರೆ, ಇಲ್ಲಿ ಹೋಗಿ ಎನೇಬಲ್ ಮಾಡಿಕೊಂಡರೆ, ಬೇರೆ ಕಡೆಯಿಂದಲೂ (ಉದಾಹರಣೆಗೆ, ವೆಬ್ ಸೈಟಿನಿಂದ, ವಾಟ್ಸ್ಆ್ಯಪ್‌ನಿಂದ, ಇಮೇಲ್‌ನಿಂದ ಇತ್ಯಾದಿ) ಆ್ಯಪ್ ಇನ್‌ಸ್ಟಾಲ್ ಮಾಡಿಕೊಳ್ಳಬಹುದಾಗಿದೆ.
ನಾವೇ ಈ ರಕ್ಷಾ ಕವಚವನ್ನು ಭೇದಿಸಿ, ಕುತಂತ್ರಿ ಆ್ಯಪ್ ಇನ್‌ಸ್ಟಾಲ್ ಮಾಡಲು ಅನುವು ಮಾಡಿಕೊಡುತ್ತೇವೆ. ತಡ ಮಾಡಿದರೆ, ಮರುದಿನ ನಮಗೆ ಕರೆಯೊಂದು ಬರಬಹುದು, ಇನ್ನೂ ಯಾಕೆ ಕೆವೈಸಿ ಅಪ್‌ಡೇಟ್ ಮಾಡಿಲ್ಲ? ಮಾಡದಿದ್ದರೆ ನಿಮ್ಮ ಖಾತೆಗೆ ಪೆನ್ಷನ್ ಹಣ ಬರುವುದಿಲ್ಲ ಅಂತಲೋ, ಖಾತೆಯೇ ಸ್ಥಗಿತವಾಗುತ್ತದೆ ಎಂದೋ ಎಚ್ಚರಿಕೆಯನ್ನೂ ನೀಡಲಾಗುತ್ತದೆ. ಮತ್ತೊಮ್ಮೆ, ಇದ್ದರೂ ಇರಬಹುದೆಂದುಕೊಳ್ಳುವ ನಾವದನ್ನು ಇನ್‌ಸ್ಟಾಲ್ ಮಾಡಿಕೊಳ್ಳುತ್ತೇವೆ. ಅಂತೆಯೇ ಅದು ಕೇಳುವ, ಕ್ಯಾಮೆರಾ, ಮೈಕ್ರೋಫೋನ್, ಜಿಪಿಎಸ್, ಎಸ್‌ಎಂಎಸ್, ಕಾಂಟ್ಯಾಕ್ಟ್ಸ್... ಹೀಗೆ ಎಲ್ಲದಕ್ಕೂ ಅನುಮತಿಯನ್ನು (ಓದದೆಯೇ ಒಕೆ ಎಂದು ಕ್ಲಿಕ್ ಮಾಡುತ್ತಾ) ನೀಡಿರುತ್ತೇವೆ.
ಈಗ ನಮ್ಮ ಫೋನ್‌ನಲ್ಲಿರುವ ಬ್ಯಾಂಕಿಂಗ್ ಅಥವಾ ಕ್ರೆಡಿಟ್ ಕಾರ್ಡ್ ಮಾಹಿತಿಯನ್ನೆಲ್ಲವನ್ನೂ ಹುಡುಕಾಡಿ ಸಂಗ್ರಹಿಸಿಕೊಳ್ಳುವ ಈ ಆ್ಯಪ್, ಅದನ್ನು ತನ್ನ ಒಡೆಯನಿಗೆ (ಆ್ಯಪ್ ರೂಪಿಸಿದ ವಂಚಕರಿಗೆ) ರವಾನಿಸುತ್ತದೆ. ಅಥವಾ ನಮ್ಮ ಮೊಬೈಲ್ ಫೋನೇ ಈ ವಂಚಕರ ಹಿಡಿತಕ್ಕೆ ಸಿಲುಕುತ್ತದೆ. ಹೀಗಾಗಿ, ಅದಕ್ಕೆ ಬರುವ ಒಟಿಪಿ (ಏಕ ಬಳಕೆಯ ಪಾಸ್‌ವರ್ಡ್ - ಎಂದರೆ ಒಂದು ಬಾರಿಯಷ್ಟೇ ಬಳಸಬಹುದಾದ ಪಿನ್ ಅಥವಾ ಪಾಸ್‌ವರ್ಡ್) ಅವರಿಗೆ ನಾವೇ ಹೇಳಬೇಕಾಗುವುದಿಲ್ಲ. ತಮ್ಮಲ್ಲಿರುವ ಕಂಪ್ಯೂಟರ್ ಅಥವಾ ಫೋನ್ ಮೂಲಕವೇ ಅವರು ನಮ್ಮ ಮೊಬೈಲ್ ಮೇಲೆ ಹಿಡಿತ ಸಾಧಿಸಬಲ್ಲರು. ಹೀಗೆ ಈ ಸೈಬರ್ ವಂಚಕನೊಬ್ಬ ಕುಳಿತಲ್ಲಿಂದಲೇ ನಮ್ಮ ಬ್ಯಾಂಕ್ ಖಾತೆಯನ್ನು ಬರಿದಾಗಿಸುವುದು ಸುಲಭವಾಗುತ್ತದೆ. ಕೆಲವೇ ಕ್ಷಣಗಳಲ್ಲಿ ಠಣ್ ಅಂತ 'ನಿಮ್ಮ ಖಾತೆಯಿಂದ 10 ಲಕ್ಷ ರೂ. ಡೆಬಿಟ್ ಆಗಿದೆ' ಮುಂತಾದ ಸಂದೇಶ ಬರಲೂಬಹುದು, ಬಾರದೆಯೂ ಇರಬಹುದು. ಖಾತೆಯಿಂದ ಹಣ ಹೋಗಿರುತ್ತದೆ.
ಎಲ್ಲ ಬ್ಯಾಂಕ್‌ಗಳೂ ತಮ್ಮ ಗ್ರಾಹಕರಿಗೆ ಈ ರೀತಿಯ ಎಪಿಕೆ ವಂಚನೆಯ ಬಗೆಗೆ ಇಮೇಲ್ ಮೂಲಕ ಎಚ್ಚರಿಕೆ ಸಂದೇಶಗಳನ್ನು ನೀಡುತ್ತಲೇ ಇವೆ. ಅವನ್ನು ಓದಿಕೊಳ್ಳಿ. ಅಂತೆಯೇ, ಈ ವಂಚಕರ ಗಾಳಕ್ಕೆ ಸಿಲುಕದಿರಲು, ಅಧಿಕೃತ ಪ್ಲೇ ಸ್ಟೋರ್‌ನಿಂದ ಮಾತ್ರವೇ ಆ್ಯಪ್ ಇನ್‌ಸ್ಟಾಲ್ ಮಾಡಿಕೊಳ್ಳಿ. Install Unknown Apps ಎಂಬುದನ್ನು ಯಾವತ್ತೂ ಎನೇಬಲ್ ಮಾಡಬೇಡಿ. ಗೊತ್ತಿಲ್ಲದ ಆ್ಯಪ್ ಇನ್‌ಸ್ಟಾಲ್ ಮಾಡಿಕೊಳ್ಳಲೇಬೇಡಿ ಮತ್ತು ಯಾವುದನ್ನೂ ಓದದೆ 'OK' ಕ್ಲಿಕ್ ಮಾಡಲು ಹೋಗಬೇಡಿ. ಈಗಾಗಲೇ ಇನ್‌ಸ್ಟಾಲ್ ಮಾಡಿದ್ದಿದ್ದರೆ, ತಕ್ಷಣ ಅನ್‌ಇನ್‌ಸ್ಟಾಲ್ ಮಾಡಿಬಿಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.