ನವದೆಹಲಿ: ಡಾರ್ಕ್‌ನೆಟ್‌ನ ಹ್ಯಾಕರ್ ಫೋರಂನಲ್ಲಿ 10 ಕೋಟಿಗೂ ಹೆಚ್ಚು ಮೊಬಿಕ್ವಿಕ್ ಬಳಕೆದಾರರ ಡೇಟಾ ಮಾರಾಟಕ್ಕಿದೆ ಎಂದು ಸ್ವತಂತ್ರ ಭದ್ರತಾ ಸಂಶೋಧಕ ರಾಜಶೇಖರ್ ರಾಜಹರಿಯಾ ಆರೋಪಿಸಿದ್ದಾರೆ.
ಆದರೆ ಈ ಆರೋಪಗಳನ್ನು ಮೊಬಿಕ್ವಿಕ್ ನಿರಾಕರಿಸಿದೆ. 'ಕೆಲವು ಭದ್ರತಾ ಸಂಶೋಧಕರು ಪದೇ ಪದೇ ಸಂಯೋಜಿತ ಫೈಲ್‌ಗಳನ್ನು ಪ್ರಸ್ತುತಪಡಿಸುವ ಮೂಲಕ ನಮ್ಮ ಸಂಸ್ಥೆಯ ಅಮೂಲ್ಯ ಸಮಯವನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ. ನಾವು ಕೂಲಂಕಷವಾಗಿ ತನಿಖೆ ನಡೆಸಿದ್ದು, ಯಾವುದೇ ಸುರಕ್ಷಾ ಲೋಪದೋಷಗಳು ಕಂಡುಬಂದಿಲ್ಲ. ನಮ್ಮ ಬಳಕೆದಾರರ ಮತ್ತು ಕಂಪನಿ ಡೇಟಾವು ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಮೊಬಿಕ್ವಿಕ್ ಸರ್ವರ್‌ಗಳಲ್ಲಿ ಯಾವುದೇ ಡೇಟಾ ಸೋರಿಕೆಯಾಗಿಲ್ಲ' ಎಂದು ಕಂಪನಿ ವಕ್ತಾರರು ತಿಳಿಸಿದ್ದಾರೆ.
ಫ್ರಾನ್ಸ್‌ನ ಖ್ಯಾತ ಸೈಬರ್ ಸೆಕ್ಯೂರಿಟಿ ತಜ್ಞ ಎಲಿಯಟ್ ಆ್ಯಂಡರ್ಸನ್ಅಲಿಯಾಸ್ ರಾಬರ್ಟ್ ಬಾಪ್ಟಿಸ್ಟ್ ಅವರು ಡಿಜಿಟಲ್ ವ್ಯಾಲೆಟ್ ಕಂಪನಿಯ ಸರ್ವರ್ ಉಲ್ಲಂಘನೆ ಬಗ್ಗೆ ರಾಜಹರಿಯಾ ಮಾಡಿರುವ ಆರೋಪವನ್ನು ನಿಜವೆಂದು ಹೇಳಿದ್ದಾರೆ. ಅಲ್ಲದೆ ಇಲ್ಲಿಯ ವರೆಗೆ ನಡೆದ ಅತಿದೊಡ್ಡ ಕೆವೈಸಿ ಡೇಟಾ ಸೋರಿಕೆ ಇದಾಗಿದೆ ಎಂದು ತಿಳಿಸಿದ್ದಾರೆ.
ಕೆವೈಸಿ ಕಾರ್ಯವಿಧಾನದ ಸಂದರ್ಭದಲ್ಲಿ ಮೊಬಿಕ್ವಿಕ್ ಬಳಕೆದಾರರು ಸಾಮಾನ್ಯವಾಗಿ ಹಂಚಿಕೊಳ್ಳುವ ಪ್ಯಾನ್ ಕಾರ್ಡ್ ನಂಬರ್, ಆಧಾರ್ ಕಾರ್ಡ್, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಮೊಬೈಲ್ ನಂಬರ್ ಮತ್ತು ಇತರೆ ವೈಯಕ್ತಿಕ ವಿವರಗಳನ್ನು ಹ್ಯಾಕರ್‌ಗಳು ಮಾರಾಟ ಮಾಡುತ್ತಿದ್ದಾರೆ ಎಂದು ರಾಜಹರಿಯಾ ಫೆಬ್ರುವರಿ ತಿಂಗಳಲ್ಲಿ ಆರೋಪಿಸಿದ್ದರು.
ಭಾರತೀಯ ಟೆಕ್ ಕಂಪನಿ ಸಂಸ್ಥಾಪಕರು ಸೇರಿದಂತೆ ಉನ್ನತ ವ್ಯಕ್ತಿಗಳ ಡೇಟಾಗಳು ಕಂಪ್ರೆಸ್ಡ್ ಡೇಟಾ ಡಂಪ್‌ನಲ್ಲಿ ಪತ್ತೆಯಾಗಿದೆ. ಡಾರ್ಕ್‌ನೆಟ್ ಡೇಟಾ ಡಂಪ್ ಸುಮಾರು 350 ಜಿಬಿ ಗಾತ್ರದಲ್ಲಿದೆ ಎಂದು ವರದಿಯಾಗಿದೆ.
ಡೇಟಾ ಸೋರಿಕೆಯ ಸತ್ಯಾಸತ್ಯತೆಯನ್ನು ಸಾಬೀತುಪಡಿಸುವ ಪ್ರಯತ್ನದಲ್ಲಿ, ಡಾರ್ಕ್ ವೆಬ್‌ನಲ್ಲಿ ಸರ್ಚ್ ಬಾರ್ ತೆರೆದು ಬಳಕೆದಾರರು ಇಮೇಲ್ ಐಡಿ ಹಾಕಿ ಪರೀಕ್ಷಿಸಬಹುದಾಗಿದೆ ಎಂದು ರಾಜಹರಿಯಾ ತಿಳಿಸುತ್ತಾರೆ.
ಮೊಬಿಕ್ವಿಕ್ ಬಳಕೆದಾರರ ಡೇಟಾ ಜೊತೆಗೆ, 30 ಲಕ್ಷ ವ್ಯಾಪಾರಿಗಳ ಪಾರ್ಸ್‌ಪೋರ್ಟ್, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಸೇರಿದಂತೆ ಸ್ಟೋರ್ ಚಿತ್ರಗಳ ಪ್ರೂಫ್ ಕೂಡಾ ಮಾರಾಟದಲ್ಲಿದೆ ಎಂದು ಆರೋಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.