ನವದೆಹಲಿ: ಡಿಜಿಟಲ್ ರೂಪದಲ್ಲಿ ದಾಖಲೆಗಳನ್ನು ಸಂಗ್ರಹಿಸಿಕೊಳ್ಳುವ ಡಿಜಿಲಾಕರ್ ಸೇವೆಗಳನ್ನು ವಾಟ್ಸ್‌ಆ್ಯಪ್‌ನಲ್ಲೇ ಪಡೆಯುವ ವ್ಯವಸ್ಥೆಯನ್ನು ಕಲ್ಪಿಸಿರುವುದಾಗಿ ಮೈಗೌ (MyGov) ಸೋಮವಾರ ಪ್ರಕಟಿಸಿದೆ. ಇದರೊಂದಿಗೆ 'ಕೋವಿನ್' ಸೇವೆಗಳನ್ನೂ ಪಡೆಯಬಹುದಾಗಿದೆ.
ಸುಲಭವಾಗಿ ಅಂಕಪಟ್ಟಿ, ಶೈಕ್ಷಣಿಕ ಪ್ರಮಾಣಪತ್ರಗಳು, ವಾಹನ ಪರವಾನಗಿ ಸೇರಿದಂತೆ ಅಧಿಕೃತ ವೈಯಕ್ತಿಕ ದಾಖಲೆಗಳನ್ನು ಡಿಜಿಲಾಕರ್ ಕಾಪಿಟ್ಟುಕೊಳ್ಳುವ ವ್ಯವಸ್ಥೆ ಹೊಂದಿದೆ. ಆ ಮೂಲಕ ಯಾವುದೇ ಸ್ಥಳದಲ್ಲಿ ಸುಲಭವಾಗಿ ತೆರೆಯಲು, ಡೌನ್‌ಲೋಡ್ ಮಾಡಲು ಅನುಕೂಲವಾಗಿದೆ. ಡಿಜಿಲಾಕರ್‌ನಲ್ಲಿ ಸಂಗ್ರಹಿಸಿರುವ ಎಲ್ಲ ದಾಖಲೆಗಳನ್ನು ಇದೀಗ ವಾಟ್ಸ್‌ಆ್ಯಪ್‌ನಲ್ಲೇ ಪಡೆಯುವ ವ್ಯವಸ್ಥೆ ರೂಪಿಸಲಾಗಿದೆ.
ವಾಟ್ಸ್‌ಆ್ಯಪ್‌ನಲ್ಲಿ 'ಮೈಗೌ ಹೆಲ್ಪ್‌ಡೆಸ್ಕ್' ಸಂಖ್ಯೆಯನ್ನು ಉಳಿಸಿಕೊಳ್ಳುವ ಮೂಲಕ ಈ ಸೇವೆಗಳನ್ನು ಪಡೆಯಬಹುದು.
ಪಾನ್ ಕಾರ್ಡ್, ವಾಹನಗಳ ದಾಖಲೆಗಳು ಸೇರಿದಂತೆ ಡಿಜಿಲಾಕರ್ ಖಾತೆಯಲ್ಲಿ ಸಂಗ್ರಹಿಸಿರುವ ದಾಖಲೆಗಳನ್ನು ವಾಟ್ಸ್‌ಆ್ಯಪ್‌ನಲ್ಲೇ ಮನವಿ ಸಲ್ಲಿಸಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
ವಾಟ್ಸ್‌ಆ್ಯಪ್ ಬಳಕೆದಾರರು ಮೈಗೌ ಚಾಟ್‌ಬಾಟ್ ಸಂಖ್ಯೆಗೆ ( +919013151515) ನಮಸ್ತೆ (Namaste) ಅಥವಾ ಹಾಯ್ (Hi) ಅಥವಾ ಡಿಜಿಲಾಕರ್ (Digilocker) ಎಂದು ಸಂದೇಶ ಕಳುಹಿಸಬೇಕು. ಅನಂತರ, ವಾಟ್ಸ್ಆ್ಯಪ್‌ಗೆ 'ಕೋವಿನ್, ಡಿಜಿಲಾಕರ್'- ಅಗತ್ಯವಿರುವ ಸೇವೆಯನ್ನು ಆಯ್ಕೆ ಮಾಡುವಂತೆ ಸಂದೇಶ ಬರುತ್ತದೆ. ಆಯ್ಕೆಗೆ ತಕ್ಕಂತೆ ಚಾಟ್‌ಬಾಟ್ ಸಂದೇಶ ಪ್ರತಿಕ್ರಿಯೆಗಳನ್ನು ನೀಡುತ್ತದೆ.
ಡಿಜಿಲಾಕರ್‌ನ ಬಳಕೆಗೆ ವಾಟ್ಸ್‌ಆ್ಯಪ್‌ನಲ್ಲಿ ಆಧಾರ್ ಸಂಖ್ಯೆ ಕೇಳುತ್ತದೆ ಹಾಗೂ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ರವಾನೆಯಾಗುತ್ತದೆ. ಕೋವಿಡ್ ಲಸಿಕೆ, ಚಿಕಿತ್ಸೆ, ಲಸಿಕೆ ಪ್ರಮಾಣಪತ್ರ ಸೇರಿದಂತೆ 'ಕೋವಿನ್' ಸಂಬಂಧಿತ ಸೇವೆಗಳನ್ನು ಪಡೆಯಲೂ ಮೊಬೈಲ್ ಸಂಖ್ಯೆಗೆ ತಲುಪುವ ಒಟಿಪಿ ನಮೂದಿಸಬೇಕಾಗುತ್ತದೆ.
ಈಗಾಗಲೇ 10 ಕೋಟಿಗೂ ಹೆಚ್ಚು ಜನರು ಡಿಜಿಲಾಕರ್ ಸೇವೆಗಳಿಗೆ ನೋಂದಾಯಿಸಿಕೊಂಡಿದ್ದಾರೆ ಹಾಗೂ 500 ಕೋಟಿಗೂ ಅಧಿಕ ದಾಖಲೆಗಳನ್ನು ಸಂಗ್ರಹಿಸಿಡಲಾಗಿದೆ ಎಂದು ಮೈಗೌ ಕಾರ್ಯನಿರ್ವಹಣಾಧಿಕಾರಿ ಅಭಿಷೇಕ್ ಸಿಂಗ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.