ADVERTISEMENT

Disney Layoffs: ಡಿಸ್ನಿ ಕಂಪನಿಯಲ್ಲೂ 7,000 ಉದ್ಯೋಗ ಕಡಿತ

ಏಜೆನ್ಸೀಸ್
Published 9 ಫೆಬ್ರುವರಿ 2023, 2:54 IST
Last Updated 9 ಫೆಬ್ರುವರಿ 2023, 2:54 IST
   

ಸ್ಯಾನ್‌ ಫ್ರಾನ್ಸಿಸ್ಕೊ: ಮನರಂಜನೆ ವಲಯದ ದೈತ್ಯ ಕಂಪನಿ ಅಮೆರಿಕದ ಡಿಸ್ನಿ, 7,000 ಉದ್ಯೋಗ ಕಡಿತಗೊಳಿಸಲು ಯೋಜಿಸಿರುವುದಾಗಿ ಹೇಳಿದೆ.

ಸ್ಟ್ರೀಮಿಂಗ್ ಚಂದಾ ಸೇವೆಯಲ್ಲಿ ಇಳಿಕೆ, ವೆಚ್ಚ ಕಡಿತ ಹಾಗೂ ನಿರ್ವಹಣೆ ಮತ್ತು ಸಂಸ್ಥೆಯ ಪುನರಾಚನೆಯ ಭಾಗವಾಗಿ ಈ ಕಠಿಣ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಕಂಪನಿಯ ಸಿಇಒ ಬಾಬ್ ಇಗರ್ ಹೇಳಿದ್ದಾರೆ.

ವಾಲ್ಟ್ ಡಿಸ್ನಿ ಹೂಡಿಕೆಯ ಕಂಪನಿಯು ಬಿಡುಗಡೆ ಮಾಡಿದ ಕಳೆದ ತ್ರೈಮಾಸಿಕ ವರದಿಯಲ್ಲಿ ಚಂದಾದಾರಿಕೆಯಲ್ಲಿ ಇಳಿಕೆ ಉಂಟಾಗಿದೆ ಎಂದು ಹೇಳಿದೆ.

ನೆಟ್‌ಫ್ಲಿಕ್ಸ್‌ಗೆ ಪ್ರತಿಸ್ಪರ್ಧಿ ಆಗಿರುವ ಡಿಸ್ನಿ ಪ್ಲಸ್, ಮೂರು ತಿಂಗಳ ಹಿಂದಿನದಕ್ಕೆ ಹೋಲಿಸಿದರೆ ಶೇ 1ರಷ್ಟು ಇಳಿಕೆ ಕಂಡು ಡಿಸೆಂಬರ್ 31ಕ್ಕೆ 161.8 ದಶಲಕ್ಷ ಗ್ರಾಹಕರನ್ನು ಹೊಂದಿದೆ.

ಸ್ಟ್ರೀಮಿಂಗ್ ವೇದಿಕೆ ಲಾಭದಾಯಕವೆನಿಸಿಲ್ಲ. ವೆಚ್ಚ ನಿರ್ವಹಣೆ ಸವಾಲಾಗಿ ಪರಿಣಮಿಸಿದೆ ಎಂದು ಸಂಸ್ಥೆ ತಿಳಿಸಿದೆ.

2021ರ ವಾರ್ಷಿಕ ವರದಿ ಪ್ರಕಾರ, ಡಿಸ್ನಿ ಸಂಸ್ಥೆಯಲ್ಲಿ ಜಗತ್ತಿನಾದ್ಯಂತ 1,90,000 ಮಂದಿ ಕೆಲಸ ಮಾಡುತ್ತಿದ್ದಾರೆ. ಈ ಪೈಕಿ ಶೇ 80ರಷ್ಟು ಮಂದಿ ಖಾಯಂ ಆಗಿದ್ದಾರೆ.

ಒಟ್ಟಿನಲ್ಲಿ ಕೋವಿಡ್ ಸಾಂಕ್ರಾಮಿಕದ ಬಳಿಕ ಆರ್ಥಿಕ ಅನಿಶಿಶ್ಚತೆ ಎದುರಿಸುತ್ತಿರುವ ಬಹುತೇಕ ಕಂಪನಿಗಳು, ಉದ್ಯೋಗ ಕಡಿತ ನೀತಿಯನ್ನು ಅನುಸರಿಸುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.