ಬೆಂಗಳೂರು: ವರನಟ ಡಾ.ರಾಜ್‌ಕುಮಾರ್ ಅವರ ಹೆಸರಿನಲ್ಲಿ ಕಲಿಕಾ ಅವಕಾಶಗಳನ್ನು ಒಳಗೊಂಡಿರುವ ಅಪ್ಲಿಕೇಷನ್ ಬಿಡುಗಡೆಯಾಗಿದೆ. 'ಗುಣಮಟ್ಟದ ಶಿಕ್ಷಣ ಎಲ್ಲರಿಗಾಗಿ. ಬನ್ನಿ ಮುಂದೆ ಸಾಗೋಣ' ಎಂಬ ಸಾಲಿನ ಜೊತೆಗೆ ನಟ ಪುನೀತ್ ರಾಜ್‌ಕುಮಾರ್ ಈ ಆ್ಯಪ್ ಕುರಿತು ವಿವರಿಸುವ ವಿಡಿಯೊ ಹಂಚಿಕೊಂಡಿದ್ದಾರೆ.
ರಾಜ್‌ಕುಮಾರ್ ಅಕಾಡೆಮಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 'ಡಾ.ರಾಜ್‌ಕುಮಾರ್ ಕಲಿಕಾ ಆ್ಯಪ್' ( Dr.Rajkumar’s Learning App) ಬಿಡುಗಡೆ ಮಾಡಿದರು.
ಕೋವಿಡ್ ಸಾಂಕ್ರಾಮಿಕದ ನಂತರ ಶಿಕ್ಷಣ ಮತ್ತು ಕಲಿಕಾ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳು ಆಗಿವೆ. ವರ್ಷದಿಂದ ಬಹುತೇಕ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕವೇ ಕಲಿಕೆ ಮುಂದುವರಿಸಿದ್ದಾರೆ. ಇತರೆ ಕೋರ್ಸ್‌ಗಳು, ಪರೀಕ್ಷೆಗಳೂ ಸಹ ಆನ್‌ಲೈನ್‌ನಲ್ಲೇ ನಡೆಯುತ್ತಿವೆ. ಆರ್ಥಿಕ ಪರಿಸ್ಥಿತಿಯ ಕಾರಣಗಳಿಂದ ಕೆಲವು ವಿದ್ಯಾರ್ಥಿಗಳು ವ್ಯಾಸಂಗದಿಂದ ದೂರ ಉಳಿದಿದ್ದಾರೆ, ದುಡಿಮೆ ಶುರು ಮಾಡಿದ್ದಾರೆ. ಈ ಎಲ್ಲರ ಓದಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ರಾಜ್‌ಕುಮಾರ್ ಕಲಿಕಾ ಆ್ಯಪ್ ಸಹಕಾರಿಯಾಗಬಹುದಾಗಿದೆ.
ಕನ್ನಡ ಕಲಿಕೆ, ಸ್ಪರ್ಧಾತ್ಮಕಪರೀಕ್ಷೆಗಳಿಗೆ ಸಿದ್ಧತೆ, ಪಿಯುಸಿ ಶಿಕ್ಷಣ ಸೇರಿದಂತೆ ಹಲವು ಹಂತದ ಕಲಿಕೆಗಳಿಗೆ ಆ್ಯಪ್ ವೇದಿಕೆಯಾಗಿದೆ. ನಿಗದಿತ ಶುಲ್ಕ ಪಾವತಿಸಿ ಆ್ಯಪ್‌ನಲ್ಲಿ ಕಲಿಕೆಗೆ ನೋಂದಾಯಿಸಿಕೊಳ್ಳಬಹುದು.
ಆ್ಯಪ್ ಕುರಿತ ವಿಡಿಯೊದಲ್ಲಿ ಕಾಣಿಸಿಕೊಂಡಿರುವ ಪುನೀತ್, ಹಲವು ಸನ್ನಿವೇಶನಗಳ ಜೊತೆಗೆ ಆ್ಯಪ್ ಬಗ್ಗೆ ಪರಿಚಯ ಕೊಟ್ಟಿದ್ದಾರೆ. '' ಬಡತನ ಓದಿಸೋರಿಗೆ ಇರುತ್ತೆ, ಓದುವವರಿಗೆ ಅಲ್ಲ, 'ಕೆಲವು ಊರುಗಳಲ್ಲಿ ವಿದ್ಯಾರ್ಥಿಗಳು ಇರ್ತಾರೆ, ವಿದ್ಯಾ ಸಂಸ್ಥೆಗಳು ಇರೋದಿಲ್ಲ', 'ನಿಮ್ಮ ಕನಸಿನ ಜೊತೆಗೆ ನಿಮ್ಮ ಅಪ್ಪ–ಅಮ್ಮನ ಕನಸೂ ಈಡೇರಿಸಬಹುದು', 'ಓದಿದ ಮೇಲೆ ಕೆಲಸ ಮಾಡ್ತಾರೆ, ಕೆಲವರು ಕೆಲಸ ಮಾಡಿಕೊಂಡೂ ಓದುತ್ತಾರೆ...' ಇರೋ ಜಾಗದಲ್ಲೇ, ನಿಮ್ಮ ದುಡಿಮೆಯಲ್ಲೇ ಕನಸನ್ನು ಸಾಕಾರಗೊಳಿಸಬಹುದು'' ಎಂದಿದ್ದಾರೆ.
'ಯಾಕೆ, ಏನು, ಎಲ್ಲಿ, ಎಂತು, ಎಷ್ಟು? ಈ ಐದು ಮಂತ್ರಗಳನ್ನು ಇಟ್ಟುಕೊಂಡು ಮಕ್ಕಳಿಗೆ ಬೋಧನೆ ಮಾಡಬೇಕು. ಮಕ್ಕಳಲ್ಲಿ ತರ್ಕಬದ್ಧ ಚಿಂತನೆಯನ್ನು ಬೆಳೆಸಲು ಪ್ರಯತ್ನಿಸಬೇಕು. ಈ ಆ್ಯಪ್ ಮೂಲಕ ಇಡಿ ಭಾರತಕ್ಕೆ ಜ್ಞಾನ ಪಸರಿಸುವ ಕೆಲಸ ಆಗಲಿ' ಎಂದು ಸಿಂಎ ಬಸವರಾಜ ಬೊಮ್ಮಾಯಿ ಹಾರೈಸಿದ್ದಾರೆ.
'ವಿದ್ಯೆಯೆಂಬುದು ಒಂದು ತೇರಾಗಿ ಬೆಳೆದಿದೆ. ಅದರ ಮೇಲೆ ಈ ಆ್ಯಪ್ ಕುಳಿತಿದೆ. ಈ ತೇರನ್ನು ಎಳೆದುಕೊಂಡು ವಿದ್ಯಾರ್ಥಿಗಳಿಗೆ ಮುಟ್ಟಿಸಬೇಕು. ಅದು ನಮ್ಮಿಂದಷ್ಟೆ ಸಾಧ್ಯವಿಲ್ಲ. ಇದಕ್ಕೆ ಎಲ್ಲರೂ ಕೈಜೋಡಿಸಬೇಕು. ಈ ತೇರಿಗೆ ಎಲ್ಲರೂ ಹೆಗಲು ನೀಡಬೇಕು' ಎಂದು ರಾಘವೇಂದ್ರ ರಾಜ್‌ಕುಮಾರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.