ADVERTISEMENT

ಇ– ವಾಹನ ಚಾರ್ಜಿಂಗ್‌ನಲ್ಲೂ ವೇಗ

ಶರತ್‌ ಹೆಗ್ಡೆ
Published 9 ಆಗಸ್ಟ್ 2022, 19:30 IST
Last Updated 9 ಆಗಸ್ಟ್ 2022, 19:30 IST
ವಿದ್ಯುತ್‌ ವಾಹನ ಚಾರ್ಜ್‌ ಮಾಡುವ ಮ್ಯಾಗ್ನಿಝಾನ್‌ ಕಂಪನಿಯ ಫಾಸ್ಟ್‌ ಚಾರ್ಜರ್‌
ವಿದ್ಯುತ್‌ ವಾಹನ ಚಾರ್ಜ್‌ ಮಾಡುವ ಮ್ಯಾಗ್ನಿಝಾನ್‌ ಕಂಪನಿಯ ಫಾಸ್ಟ್‌ ಚಾರ್ಜರ್‌   

ಮೊಬೈಲ್‌ಗೆ ಫಾಸ್ಟ್‌ ಚಾರ್ಜರ್‌ಗಳು ಬಂದಿವೆಯಲ್ಲಾ... ಅದೇ ವೇಗದಲ್ಲಿ ವಾಹನಗಳ ಬ್ಯಾಟರಿಯೂ ಚಾರ್ಜ್‌ ಆದರೆ...? ವಾವ್‌! ಅಂತಹ ಸೌಲಭ್ಯವೂ ಬಂದಿದೆ.

ವಿದ್ಯುತ್‌ ವಾಹನಗಳೇನೋ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಆದರೆ ಖರೀದಿಗೆ ಬರುವವರಲ್ಲಿ ಕಂಡು ಬರುವ ತಕ್ಷಣದ ಆತಂಕವೆಂದರೆ ಬ್ಯಾಟರಿ ಚಾರ್ಜಿಂಗ್‌ ಅವಧಿ. ಸ್ಕೂಟರ್‌ನಿಂದ ಹಿಡಿದು ಕಾರು, ಬಸ್‌ವರೆಗೂ ಇ–ವಾಹನಗಳು ಒಮ್ಮೆ ತಮ್ಮ ವಿದ್ಯುತ್‌ ಕೋಶಗಳ ಭರ್ತಿಗೆ ತೆಗೆದುಕೊಳ್ಳುವ ಸರಾಸರಿ ಸಮಯ 6ರಿಂದ 8 ಗಂಟೆ. ವಾಹನಗಳ ಜೊತೆ ಕೊಡುವ ಚಾರ್ಜರ್‌ಗಳೂ ಇದೇ ಇತಿಮಿತಿಯನ್ನು ಹೊಂದಿವೆ.

ಬೆಸ್ಕಾಂನ ಚಾರ್ಜಿಂಗ್‌ ಕೇಂದ್ರಗಳಲ್ಲೂ ಫಾಸ್ಟ್‌ ಚಾರ್ಜಿಂಗ್‌ ವ್ಯವಸ್ಥೆ ಇದೆಯಾದರೂ ವಾಹನವನ್ನು ಚಾರ್ಜಿಂಗ್‌ ಕೇಂದ್ರಗಳಲ್ಲೇ ನಿಲ್ಲಿಸಬೇಕು. ಹಾಗಿದ್ದೂ ಪೂರ್ಣ ಭರ್ತಿಗೆ ಸ್ವಲ್ಪ ಹೆಚ್ಚೇ ಅನ್ನುವಷ್ಟು ಸಮಯ ತೆಗೆದುಕೊಳ್ಳುತ್ತದೆ.

ADVERTISEMENT

ಒಂದೆಡೆ ವಾಹನ ಉತ್ಪಾದನೆಯಲ್ಲಿ (ಅದರಲ್ಲೂ ದ್ವಿಚಕ್ರ ವಾಹನಗಳು) ತೀವ್ರ ಸ್ಪರ್ಧೆ ಇದೆ. ಇದುವರೆಗೆ ಹೆಸರೇ ಕೇಳಿರದ ಹೊಸ ಕಂಪನಿಗಳು ಸ್ಟಾರ್ಟ್‌ ಅಪ್‌ ಹೆಸರಿನಲ್ಲಿ ತಲೆಯೆತ್ತಿ, ತಮ್ಮ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿವೆ. ಆದರೆ, ಈ ಎಲ್ಲ ವಾಹನಗಳ ಚಾರ್ಜಿಂಗ್‌ಗೆ ತಗಲುವ ದೀರ್ಘ ಅವಧಿಯ ಸಮಸ್ಯೆಯನ್ನೇ ಮುಂದಿಟ್ಟುಕೊಂಡು ಬಂದಿರುವುದೇ ಫಾಸ್ಟ್‌ ಚಾರ್ಜರ್‌ಗಳು.

ಇತ್ತೀಚೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಇ–ವಾಹನ ಪ್ರದರ್ಶನದಲ್ಲಿ ಕುತೂಹಲದ ಕಣ್ಣು ನೆಟ್ಟಿದ್ದು ಫಾಸ್ಟ್‌ ಚಾರ್ಜರ್‌ಗಳತ್ತ.

ಲಂಡನ್‌ನ ಮ್ಯಾಗ್ನಿಝಾನ್‌ ಗ್ರೀನ್‌ ಎನರ್ಜಿ ಕಂಪನಿಯು ಅರ್ಧಗಂಟೆಯಲ್ಲಿ ವಿದ್ಯುತ್‌ ಚಾಲಿತ ದ್ವಿಚಕ್ರ ವಾಹನಗಳ ಬ್ಯಾಟರಿ ಚಾರ್ಜ್‌ ಮಾಡುವ, ಒಂದು ಗಂಟೆಯ ಒಳಗೆ ಕಾರು ಬ್ಯಾಟರಿ ಭರ್ತಿ ಮಾಡುವ, 70ರಿಂದ 75 ನಿಮಿಷಗಳ ಒಳಗೆ ಟ್ರಕ್‌ ಅಥವಾ ಬಸ್‌ ಬ್ಯಾಟರಿ ಭರ್ತಿ ಮಾಡುವ ಚಾರ್ಜರ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಬೆಂಗಳೂರಿನಲ್ಲಿಯೂ ಈ ಚಾರ್ಜರ್‌ಗಳು
ಲಭ್ಯ ಇವೆ.

9 ಮಾದರಿಯ ಚಾರ್ಜರ್‌ಗಳನ್ನು ಈ ಕಂಪನಿ ಸಿದ್ಧಪಡಿಸಿದೆ. 20 ಕಿಲೋವ್ಯಾಟ್‌ನಿಂದ 180 ಕಿಲೋವ್ಯಾಟ್‌ವರೆಗಿನ ಸಾಮರ್ಥ್ಯದ, ಎಸಿ ಹಾಗೂ ಡಿಸಿ ಚಾರ್ಜರ್‌ಗಳು ಇಲ್ಲಿವೆ. ಮನೆ, ಅಪಾರ್ಟ್‌ಮೆಂಟ್‌, ಪಾರ್ಕಿಂಗ್‌ ಪ್ರದೇಶ, ಪೆಟ್ರೋಲ್‌ ಬಂಕ್‌, ಹೊಟೇಲ್‌, ಡಾಬಾಗಳಲ್ಲಿ ಅಳವಡಿಸಿ ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯ ಕೊಡುವ ಮೂಲಕ ವಾಹನಮಾಲೀಕರ ಸಮಯ ಉಳಿಸಬಹುದು. ಸ್ವಂತ ಉದ್ಯೋಗವಾಗಿಯೂ ಮಾಡಿಕೊಳ್ಳಬಹುದು ಎನ್ನುತ್ತಾರೆ, ಕಂಪನಿಯ ತಾಂತ್ರಿಕ– ವಾಣಿಜ್ಯ ವ್ಯವಸ್ಥಾಪಕ ಜಾಕೋಬ್‌ ಲಿಯೋನ್ಸ್‌.

ಇನ್ನು ಭಾರತೀಯ ಕಂಪನಿಗಳೂ ಫಾಸ್ಟ್‌ ಚಾರ್ಜರ್‌ಗಳತ್ತ ಕಣ್ಣಿಟ್ಟಿವೆ. ಹರಿಯಾಣದ ಇ–ಫಿಲ್‌ ಎಲೆಕ್ಟ್ರಿಕ್‌ ಕಂಪನಿಯು ಸಿಂಗಲ್‌ ಫೇಸ್‌ನಲ್ಲಿ ಸಾಮಾನ್ಯ, ವೇಗ ಮತ್ತು ಅತಿವೇಗವಾಗಿ ಚಾರ್ಜ್‌ ಮಾಡುವ ಚಾರ್ಜರ್‌ಗಳನ್ನು ಹೊರತಂದಿದೆ. 3.5 ಕಿಲೋವ್ಯಾಟ್‌ನಿಂದ 7 ಕಿಲೋವ್ಯಾಟ್‌ವರೆಗಿನ ಸಾಮರ್ಥ್ಯದ ಚಾರ್ಜರ್‌ಗಳು ಈ ವಿಭಾಗದಲ್ಲಿವೆ. ಇನ್ನು ತ್ರಿಫೇಸ್‌ಗಳಲ್ಲಿ ಕೆಲಸ ಮಾಡುವ ಸಾಮಾನ್ಯ ಚಾರ್ಜರ್‌ ಮತ್ತು ಅತಿವೇಗದ ಚಾರ್ಜರ್‌ಗಳನ್ನು ಹೊರತಂದಿದೆ. ಇವುಗಳ ಸಾಮರ್ಥ್ಯ 15 ಕಿಲೋ ವ್ಯಾಟ್‌ನಿಂದ 30 ಕಿಲೋವ್ಯಾಟ್‌ವರೆಗಿದೆ. ಚಾರ್ಜರ್‌ಗಳ ಭಾರವೂ ಕಡಿಮೆಯಿದೆ.

ಎಲೆಕ್ಟ್ರಿವಾ ಕಂಪನಿಯು ಇದೇ ಕ್ಷೇತ್ರದಲ್ಲಿದ್ದು, ಚಾರ್ಜರ್‌ ಕೇಂದ್ರಗಳ ಫ್ರಾಂಚೈಸಿ ನೀಡುತ್ತಿದೆ. ಚಾರ್ಜಿಂಗ್‌ ಕೇಂದ್ರಗಳಿಗೆ ಸೌರ ಫಲಕ ಅಳವಡಿಸಿ ಸೌರಶಕ್ತಿಯ ಮೂಲಕ ಚಾರ್ಜರ್‌ಗಳು ಕೆಲಸ ಮಾಡುವಂತೆ ನೆರವಾಗುತ್ತಿದೆ.

ಇವು ಕೇವಲ ಬೆರಳೆಣಿಕೆಯ ನೋಟಗಳು. ಹತ್ತಾರು ಕಂಪನಿಗಳು, ವಾಹನ ತಯಾರಕರು, ಸಂಶೋಧಕರೂ ಈ ಕ್ಷೇತ್ರದಲ್ಲಿ ತೊಡಗಿ ಹೊಸ ಚಾರ್ಜರ್‌ಗಳನ್ನು ಬಿಡುಗಡೆ ಮಾಡುತ್ತಲೇ ಇದ್ದಾರೆ. ಬ್ಯಾಟರಿ ವಿನಿಮಯ ಕೇಂದ್ರಗಳೂ (ಸ್ವಾಪಿಂಗ್‌ ಸೆಂಟರ್‌) ತಲೆ ಎತ್ತಿವೆ. ಚಾರ್ಜರ್‌ಗಳ ಬೆಲೆ ಸ್ವಲ್ಪ ಇಳಿದರೆ ಮನೆ ಮನೆಯಲ್ಲೂ ಅಳವಡಿಕೆಗೆ ಬೇಡಿಕೆ ಬರಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.