ಇ-ಕಾಮರ್ಸ್ ಮತ್ತು ಯುಪಿಐ ಯುಗದಲ್ಲಿ ಅತ್ಯಂತ ದುರ್ಬಳಕೆಗೆ ಒಳಾಗುಗುವ ಎರಡು ಸಂಗತಿಗಳೆಂದರೆ ನಮ್ಮ ಇಮೇಲ್ ಮತ್ತು ಫೋನ್ ನಂಬರ್. ಒಂದು ಯುಪಿಐ ವಹಿವಾಟು ನಡೆಸಿದರೆ, ಇನ್ನೊಂದು ಮೆಸೇಜ್ ಮೊಬೈಲ್‌ಗೆ ಹಾಗೂ ಒಂದು ಮೇಲ್ ಇಮೇಲ್‌ಗೆ ಬಂದಿಳಿದಿರುತ್ತದೆ. ಒಂದು ಟೀ ಕುಡಿದರೂ ನಾವು ₹15 ಅನ್ನು ಯುಪಿಐ ಮೂಲಕ ಕಳುಹಿಸಿರುತ್ತೇವೆ. ಅದಾದ ಮೇಲೆ, ಒಂದು ಇಮೇಲ್ ಮತ್ತು ಒಂದು ಮೆಸೇಜ್ ಬಂದು ಕುಳಿತಿರುತ್ತದೆ. ಅಂಥ ಹತ್ತು ಟೀ ಕುಡಿದಾಗ ಬಂದು ಬಿದ್ದ ಮೆಸೇಜ್ ಡಿಲೀಟ್ ಮಾಡುವುದಕ್ಕೆ ಒಂದು ಟೀ ಕುಡಿದಷ್ಟು ಸಮಯ ಬೇಕೇನೋ!
ಇನ್ನು ಕಾರಿದ್ದರಂತೂ ಮತ್ತಷ್ಟು ಇಮೇಲ್, ಮೆಸೇಜಿನ ಹೊಳೆಯೇ ಹರಿಯುತ್ತಿರುತ್ತದೆ. ಒಂದು ಲಾಂಗ್ ಟ್ರಿಪ್ ಹೊರಟಿದ್ದೀರಿ ಎಂದುಕೊಳ್ಳಿ. ಹೈವೆಗಳಲ್ಲಿ ಹೊರಟರೆ ಕನಿಷ್ಠ 60 ಕಿ.ಮೀ.ಗೊಂದು ಟೋಲ್ ಸಿಗುತ್ತದೆ. ಪ್ರತಿ ಟೋಲ್ ದಾಟಿ ಹೋದಾಗಲೂ, ಫಾಸ್ಟ್ಯಾಗ್‌ನಿಂದ ಕಡಿತವಾದ ಮೊತ್ತದ ವಿವರ ಇರುವ ಮೆಸೇಜ್ ಮತ್ತು ಇಮೇಲ್ ಬಂದು ಬೀಳುತ್ತದೆ. ಸರಾಸರಿ ಗಂಟೆಗೊಂದು ಇಮೇಲ್ ಮತ್ತು ಮೆಸೇಜ್ ಬಂದಿರುತ್ತದೆ.
ಈಗಂತೂ ಯಾವ ವೆಬ್‌ಸೈಟ್‌ಗೆ ಹೋದರೂ ಮೊದಲು ವೆಬ್‌ಸೈಟ್‌ಗಳು ನಮ್ಮ ಫೋನ್ ನಂಬರ್ ಮತ್ತು ಇಮೇಲ್ ಐಡಿ ಕೇಳುತ್ತವೆ. ಅದನ್ನು ಕೊಟ್ಟ ಹೊರತು ನಾವು ಅಲ್ಲಿಂದ ಮುಂದೆ ಹೋಗಲು ಸಾಧ್ಯವೇ ಇಲ್ಲ. ನಮಗೆ ಇದು ಬಹಳ ಬಾರಿ ಕಿರಿಕಿರಿ ಎನಿಸಿದರೂ, ಇದರಲ್ಲಿ ಅಗತ್ಯ ಮಾಹಿತಿ ಇರುತ್ತದೆ. ಇನ್ನು ಕೆಲವು ಬಾರಿ ಅನಿವಾರ್ಯವಾಗಿ ನಾವು ನಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಕೊಟ್ಟಿರುತ್ತೇವೆ.
ಯುಪಿಐ ಮತ್ತು ಫಾಸ್ಟ್ಯಾಗ್‌ನಂತಹ ಪ್ರಕರಣಗಳಲ್ಲಿ ಮೇಲ್ ಮತ್ತು ಮೆಸೇಜ್‌ಗಳ ಪ್ರವಾಹವೇ ಆಗುತ್ತದೆ. ಆದರೆ, ಅದನ್ನು ನಾವು ಒಂದೆರಡು ಕ್ಲಿಕ್‌ನಲ್ಲಿ ಅಳಿಸಿ ಹಾಕಬಹುದು. ಆದರೆ, ಬೇರೆ ವೆಬ್‌ಸೈಟ್‌ಗಳಿಗೆ ನಾವು ಕೊಡುವ ನಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ನಂಬರ್‌ಗಳು ಯಾವ ಯಾವ ರೂಪದಲ್ಲಿ ಎಲ್ಲೆಲ್ಲಿಗೆ ಹೋಗುತ್ತವೆ ಎಂದು ಹೇಳಲಾಗದು. ಮೊಬೈಲ್ ನಂಬರ್‌ಗಾದರೆ ಒಂದು ಹಂತಕ್ಕೆ ಡಿಎನ್‌ಡಿ ಅಂದರೆ ‘ಡು ನಾಟ್ ಡಿಸ್ಟರ್ಬ್ ರಿಜಿಸ್ಟ್ರಿ’ ಇದೆ. ಅದರಲ್ಲಿ ನೋಂದಣಿ ಮಾಡಿಕೊಂಡರೆ ‘ಸ್ಪ್ಯಾಮ್ ಕಾಲ್’ಗಳಿಗೆ ತಡೆ ಒಡ್ಡಬಹುದು. ಆದರೆ ಅವು ಅಷ್ಟೇನೂ ಪರಿಣಾಮಕಾರಿಯಲ್ಲ ಎಂಬುದು ನಮಗೆಲ್ಲರಿಗೂ ಅನುಭವಕ್ಕೆ ಬಂದಿದೆ. ಇನ್ನು, ಇಮೇಲ್‌ನಲ್ಲಂತೂ ಇದು ಇಷ್ಟೂ ಪರಿಣಾಮಕಾರಿಯಾಗಿಲ್ಲ. ಪೋನ್‌ನಲ್ಲಿ ನಮಗೆ ಕರೆ ಬಂದಾಗ ಅದನ್ನು ರಿಸೀವ್ ಮಾಡದೇ ಇರುವ ಆಯ್ಕೆಯಾದರೂ ಇದೆ. ಆದರೆ, ಇಮೇಲ್‌ನಲ್ಲಿ ಹಾಗಲ್ಲ. ಮೇಲ್ ಬಂದು ಕುಳಿತ ಮೇಲೆ ಅದನ್ನು ಅಳಿಸುವ ಕೆಲಸವನ್ನೂ ನಾವೇ ಮಾಡಬೇಕು! ಎಲ್ಲ ಇಮೇಲ್ ಪ್ರೊವೈಡರ್‌ಗಳೂ ತಮ್ಮದೇ ಆದ ಸ್ಪ್ಯಾಮ್ ಫಿಲ್ಟರ್‌ಗಳನ್ನು ಹೊಂದಿವೆ. ಅದು ಪರಿಣಾಮಕಾರಿತ್ವದ ಬಗ್ಗೆ ತುಂಬಾ ಕಡಿಮೆ. ಮೇಲ್‌ಗಳು ಸ್ಪ್ಯಾಮ್‌ಗೆ ಹೋಗಿ ಕುಳಿತುಕೊಳ್ಳುವುದೇನೋ ಸರಿ. ಅಲ್ಲಿ ಕುಳಿತೂ ನಮ್ಮ ಇಮೇಲ್ ಐಡಿಯಲ್ಲಿ ಇಮೇಲ್ ಪ್ರೊವೈಡರ್ ನಮಗೆ ಕೊಟ್ಟಿರುವ ಸ್ಥಳವನ್ನು ತಿಂದುಹಾಕುತ್ತಿರುತ್ತವೆ. ನಾಲ್ಕಾರು ವರ್ಷ ಈ ಸ್ಪ್ಯಾಮ್ ಮೇಲ್‌ಗಳನ್ನು ಅಳಿಸದೇ ಬಿಟ್ಟರೆ, ಇಮೇಲ್ ಪ್ರೊವೈಡರ್ ಒದಗಿಸಿದ ಸ್ಪೇಸ್ ಅನ್ನೇ ನುಂಗಿ ಹಾಕಿ, ಹೊಸ ಇಮೇಲ್‌ಗಳನ್ನು ಬರದಂತೆ ತಡೆದಿರುತ್ತವೆ.
ಇಮೇಲ್‌ನಲ್ಲಿ ಈ ಸಮಸ್ಯೆಯನ್ನು ನಿವಾರಿಸುವುದಕ್ಕೆ ಅಂತಲೇ ಕೆಲವು ಇಮೇಲ್ ಪ್ರೊವೈಡರ್‌ಗಳು ಈಗ ‘ಶೀಲ್ಡೆಡ್ ಇಮೇಲ್’ ಸೌಲಭ್ಯವನ್ನು ತಂದಿವೆ. ಇದರಲ್ಲಿ ನಮ್ಮ ಮೂಲ ಇಮೇಲ್ ಐಡಿಯನ್ನು ನಾವು ನಮಗೆ ಬೇಕಾದವರಿಗೆ ಮಾತ್ರ ಕೊಡಬಹುದು.
ಸ್ಪ್ಯಾಮ್ ಮಾಡುತ್ತಾರೆ ಎಂಬ ಅನುಮಾನ ಇದ್ದವರಿಗೆ ಈ ಅಲಿಯಾಸ್ ಇಮೇಲ್ ಐಡಿಯನ್ನು ನೀಡಿದರಾಯಿತು. ನಮ್ಮ ಬಳಿ ಈಗಿರುವ ಕಾರನ್ನು ಮಾರಿದರೆ ಎಷ್ಟು ರೇಟ್ ಬರಬಹುದು ಎಂದು ನಾವು ತಿಳಿದುಕೊಳ್ಳಬೇಕು ಎಂದಿದ್ದರೆ, ಯಾವುದಾದರೂ ಕಾರು ಮಾರಾಟದ ವೆಬ್‌ಸೈಟ್‌ಗೆ ಹೋದರೆ, ಅಲ್ಲಿ ಲಾಗಿನ್ ಮಾಡುವುದಕ್ಕೆ ನಮ್ಮ ಮೂಲ ಇಮೇಲ್ ಐಡಿ ಬದಲಿಗೆ ಈ ಅಲಿಯಾಸ್ ಐಡಿಯನ್ನು ಕೊಡಬಹುದು. ಆಗ ಆ ವೆಬ್‌ಸೈಟ್ ಸ್ಪ್ಯಾಮ್ ಮಾಡುವುದಕ್ಕೆ ಶುರು ಮಾಡಿದರೆ, ಅದರ ಅಷ್ಟೂ ಇಮೇಲ್‌ಗಳು ನಮ್ಮ ಅಲಿಯಾಸ್ ಐಡಿಗೆ ಬಂದು ಕೂತಿರುತ್ತವೆ. ನಮ್ಮ ಮೂಲ ಇಮೇಲ್ ಐಡಿಗೆ ಬರುವುದಿಲ್ಲ. ಇದರ ಇನ್ನೂ ಒಂದು ಅನುಕೂಲವೆಂದರೆ, ಈ ಅಲಿಯಾಸ್ ಐಡಿಯನ್ನು ನಮಗೆ ಬೇಡ ಎಂದಾಗ ಅಳಿಸಿಹಾಕಬಹುದು. ಒಂದು ನಾಲ್ಕಾರು ವೆಬ್‌ಸೈಟ್‌ಗಳಿಗೆ ಒಂದೇ ಅಲಿಯಾಸ್ ಇಮೇಲ್ ಐಡಿಯನ್ನು ಕೊಟ್ಟಿದ್ದರೆ, ಆ ಇಮೇಲ್ ಐಡಿಯನ್ನೇ ಅಳಿಸಿಹಾಕಿದರೆ, ಸ್ಪ್ಯಾಮ್‌ನ ಸಮಸ್ಯೆ ನಿವಾರಣೆಯಾದ ಹಾಗೆ! ಇಲ್ಲಿ ನಮ್ಮ ಮೂಲ ಇಮೇಲ್ ಐಡಿಗೆ ಯಾವ ಧಕ್ಕೆಯೂ ಆಗುವುದಿಲ್ಲ.
ಈ ಸೌಲಭ್ಯ ಈಗ ದಿನದಿಂದ ದಿನಕ್ಕೆ ಜನಪ್ರಿಯವಾಗುತ್ತಿದೆ. ಬಹುತೇಕ ಇಮೇಲ್ ಪ್ರೊವೈಡರ್‌ಗಳು ಪ್ರೀಮಿಯಂ ಬಳಕೆದಾರರಿಗೆ ಈ ಸೌಲಭ್ಯವನ್ನು ಒದಗಿಸುತ್ತಿವೆ. ಆದರೆ, ಉಚಿತ ಬಳಕೆದಾರರಿಗೆ ಇನ್ನೂ ಇದರ ಅನುಕೂಲವಿಲ್ಲ. ಹೀಗಾಗಿ, ಜಿಮೇಲ್ ಈಗ ಇದನ್ನು ಉಚಿತವಾಗಿ ಇಮೇಲ್ ಬಳಸುತ್ತಿರುವವರಿಗೂ ಪರಿಚಯಿಸುವುದಕ್ಕೆ ಹೊರಟಿದೆಯಂತೆ! ಇದರ ಮುಖ್ಯ ಅನುಕೂಲವೆಂದರೆ, ಇದನ್ನು ನಾವು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ, ನಮ್ಮ ಇಡೀ ಇಮೇಲ್ ಇನ್‌ಬಾಕ್ಸ್‌ನಲ್ಲಿ ನಮಗೆ ಬೇಕಾದ ಮೆಸೇಜ್‌ಗಳು ಮಾತ್ರ ಇರುತ್ತವೆ. ಈ ಅಲಿಯಾಸ್‌ನಲ್ಲಿ ಬೇಡದ, ಪ್ರಚಾರಕ್ಕೆ ಸಂಬಂಧಿಸಿದ ಇಮೇಲ್‌ಗಳು, ಸ್ಪ್ಯಾಮ್ ಮೇಲ್‌ಗಳು ಸೇರಿಕೊಳ್ಳುತ್ತವೆ. ಅದನ್ನು ಬೇಡವಾದಾಗ ಅಳಿಸಿ, ಸ್ಪ್ಯಾಮ್‌ನಿಂದ ನಾವು ಬಚಾವಾಗಬಹುದು!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.