ADVERTISEMENT

ಸ್ಪರ್ಧಾ ಆಯೋಗದ ಆದೇಶದಿಂದ ಆ್ಯಂಡ್ರಾಯ್ಡ್‌ ಬೆಳವಣಿಗೆ ಸ್ಥಗಿತ: ಗೂಗಲ್‌ ಆತಂಕ

ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ

ರಾಯಿಟರ್ಸ್
Published 10 ಜನವರಿ 2023, 19:31 IST
Last Updated 10 ಜನವರಿ 2023, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಆ್ಯಂಡ್ರಾಯ್ಡ್‌ ಕಾರ್ಯಾಚರಣೆ ವ್ಯವಸ್ಥೆಯನ್ನು ಮಾರಾಟ ಮಾಡುತ್ತಿರುವ ರೀತಿಯನ್ನು ಬದಲಾಯಿಸಿಕೊಳ್ಳಬೇಕು ಎಂದು ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ನೀಡಿರುವ ಆದೇಶದ ಕಾರಣದಿಂದಾಗಿ ಭಾರತದಲ್ಲಿ ಈ ಕಾರ್ಯಾಚರಣೆ ವ್ಯವಸ್ಥೆಯ ಬೆಳವಣಿಗೆಯು ಸ್ಥಗಿತಗೊಳ್ಳುವ ಸ್ಥಿತಿ ಎದುರಾಗಿದೆ ಎಂದು ಗೂಗಲ್‌ ಹೇಳಿದೆ. ಈ ಮಾತನ್ನು ಗೂಗಲ್ ಕಂಪನಿಯು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಹೇಳಿದೆ.

ಸಿಸಿಐ 2022ರ ಅಕ್ಟೋಬರ್‌ನಲ್ಲಿ ಗೂಗಲ್ ಕಂಪನಿಗೆ ₹ 1,314 ಕೋಟಿ ದಂಡ ಪಾವತಿಸುವಂತೆ ಆದೇಶಿಸಿದೆ. ಆ್ಯಂಡ್ರಾಯ್ಡ್‌ ಮೂಲಕ ತಾನು ಹೊಂದಿರುವ ಪ್ರಭಾವಿ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡಿದ್ದಕ್ಕೆ ಕಂಪನಿ ಈ ದಂಡ ಪಾವತಿಸಬೇಕು ಎಂದು ಸಿಸಿಐ ಹೇಳಿದೆ. ಸ್ಮಾರ್ಟ್‌ಫೋನ್‌ ತಯಾರಕರು ಯಾವ ಆ್ಯಪ್‌ಗಳನ್ನು ಫೋನ್‌ನಲ್ಲಿ ಮೊದಲೇ ಅಳವಡಿಸಬಹುದು ಎಂಬ ವಿಚಾರವಾಗಿ ಇರುವ ನಿರ್ಬಂಧಗಳನ್ನು ಬದಲಾಯಿಸುವಂತೆಯೂ ಸೂಚಿಸಿದೆ.

ಸೂಚನೆಗಳನ್ನು ಜಾರಿಗೆ ತರಬೇಕು ಎಂದಾದರೆ ಈಗಾಗಲೇ ಜಾರಿಯಲ್ಲಿರುವ ಪರವಾನಗಿ ಒಪ್ಪಂದಗಳನ್ನು ಬದಲಾಯಿಸಬೇಕಾಗುತ್ತದೆ, 1,100ಕ್ಕೂ ಹೆಚ್ಚಿನ ತಯಾರಕರ ಜೊತೆ ಇರುವ ಒಪ್ಪಂದವನ್ನು ಬದಲಾಯಿಸಬೇಕಾಗುತ್ತದೆ, ಆ್ಯಪ್‌ ಅಭಿವೃದ್ಧಿಪಡಿಸುವವರ ಜೊತೆಗಿನ ಒಪ್ಪಂದಗಳಲ್ಲಿಯೂ ಬದಲಾವಣೆ ತರಬೇಕಾಗುತ್ತದೆ ಎಂದು ಗೂಗಲ್ ವಿವರಿಸಿದೆ. ಸಿಸಿಐ ಆದೇಶವನ್ನು ಗೂಗಲ್‌ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದೆ.

ADVERTISEMENT

‘ಕಳೆದ 14–15 ವರ್ಷಗಳಿಂದ ಚಾಲ್ತಿಯಲ್ಲಿ ಇರುವ ಆ್ಯಂಡ್ರಾಯ್ಡ್‌ ವೇದಿಕೆಯಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ’ ಎಂದು ಗೂಗಲ್ ಹೇಳಿದೆ.

ಸ್ಮಾರ್ಟ್‌ಫೋನ್‌ ತಯಾರಕರು ತನ್ನ ಆ್ಯಂಡ್ರಾಯ್ಡ್‌ ಕಾರ್ಯಾಚರಣೆ ವ್ಯವಸ್ಥೆಯನ್ನು ಬಳಸಲು ಗೂಗಲ್ ಅನುಮತಿ ನೀಡುತ್ತದೆ. ಆದರೆ, ತಾನು ಅಭಿವೃದ್ಧಿಪಡಿಸಿದ ಆ್ಯಪ್‌ಗಳನ್ನು ತಯಾರಕರು ಸ್ಮಾರ್ಟ್‌ಫೋನ್‌ಗಳಲ್ಲಿ ಕಡ್ಡಾಯವಾಗಿ ಅಳವಡಿಸಬೇಕು ಎಂಬ ನಿರ್ಬಂಧಗಳನ್ನು ಗೂಗಲ್ ವಿಧಿಸುವುದು ಸ್ಪರ್ಧಾತ್ಮಕತೆಯ ವಿರೋಧಿ ಧೋರಣೆ ಎಂಬ ಟೀಕೆ ಇದೆ. ಆದರೆ, ಈ ನಿರ್ಬಂಧಗಳ ಕಾರಣದಿಂದಾಗಿ ಆ್ಯಂಡ್ರಾಯ್ಡ್‌ ಮುಕ್ತವಾಗಿ ಲಭ್ಯವಾಗುವಂತೆ ಆಗಿದೆ ಎಂದು ಗೂಗಲ್ ವಾದಿಸುತ್ತಿದೆ.

ಈಗಿರುವ ನಿಯಮಗಳ ಪ್ರಕಾರ ಗೂಗಲ್‌ನ ಆ್ಯಪ್‌ಗಳಾದ ಯೂಟ್ಯೂಬ್‌, ಮ್ಯಾಪ್ಸ್‌ಅನ್ನು ಫೋನ್‌ನಿಂದ ತೆಗೆದು
ಹಾಕಲು ಬಳಕೆದಾರರಿಗೆ ಅವಕಾಶವಿಲ್ಲ. ಆದರೆ, ಈ ಬಗೆಯ ನಿರ್ಬಂಧ ಹೇರಬಾರದು ಎಂದು ಸಿಸಿಐ ಗೂಗಲ್‌ಗೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.