ಐಎಎಸ್, ಕೆಎಸ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ ಪ್ರಚಲಿತ ವಿದ್ಯಮಾನ ‘ಭಾಷಿಣಿ’– ಕೃತಕ ಬುದ್ಧಿಮತ್ತೆ ಆಧಾರಿತ ಭಾಷಾಂತರ ವೇದಿಕೆ ಕುರಿತ ಮಾಹಿತಿ ಇಲ್ಲಿದೆ.
ಗುಜರಾತಿನ ಗಾಂಧಿನಗರದಲ್ಲಿ ಕಳೆದ ವರ್ಷ ನಡೆದ ‘ಡಿಜಿಟಲ್ ಇಂಡಿಯಾ ಸಪ್ತಾಹ 2022’ ರ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಡಿಜಿಟಲ್ ಇಂಡಿಯಾ ಭಾಷಿಣಿ’ ಯನ್ನು ಉದ್ಘಾಟಿಸಿದರು.
ಡಿಜಿಟಲ್ ಇಂಡಿಯಾ ಭಾಷಿಣಿ
ಇದು ಭಾರತೀಯ ಭಾಷೆಗಳಲ್ಲಿ ಜ್ಞಾನ ಹಂಚುವಿಕೆಯ ಡಿಜಿಟಲ್ ಭಾಷಾಂತರ ವೇದಿಕೆ. ಇದು ಇಂಟರ್ನೆಟ್ ಮತ್ತು ಡಿಜಿಟಲ್ ಸೇವೆಗಳಿಗೆ ಎಲ್ಲಾ ಭಾರತೀಯ ಭಾಷೆಗಳಲ್ಲಿ ಸುಲಭ ಪ್ರವೇಶಾವಕಾಶ ನೀಡುತ್ತದೆ. ಅಲ್ಲದೇ, ಧ್ವನಿ ಆಧಾರದಲ್ಲಿಯೂ ಮಾಹಿತಿಯನ್ನು ಗ್ರಹಿಸುತ್ತದೆ. ಈ ಮೂಲಕ ಬಹುತೇಕ ಎಲ್ಲಾ ಭಾರತೀಯ ಭಾಷೆಗಳಲ್ಲಿ ಮಾಹಿತಿ ಹಂಚಿಕೆ ಮತ್ತು ಬರಹ ಕಾರ್ಯಗಳನ್ನು ಸುಲಭವಾಗಿಸಲು ಪ್ರಯತ್ನಿಸುತ್ತದೆ.
ಭಾಷಿಣಿ (ಭಾಷಾ ಇಂಟರ್ಫೇಸ್ ಫಾರ್ ಇಂಡಿಯಾ)
* ಡಿಜಿಟಲ್ ಇಂಡಿಯಾ ಭಾಷಿಣಿ, ಭಾರತದ ಕೃತಕ ಬುದ್ಧಿಮತ್ತೆ ಆಧಾರಿತ ಭಾಷಾಂತರ ವೇದಿಕೆ. ಇದು ‘ಭಾಷಾದಾನ್’ ಎಂಬ (ಜನರಿಂದಲೇ ಜ್ಞಾನವನ್ನು ಕ್ರೋಡೀಕರಿಸುವ ಮೂಲಕ ಅದನ್ನು ಬೆಳೆಸುವುದು) ಉಪಕ್ರಮದ ಮೂಲಕ ಬಹುಭಾಷೆಗಳ ಡೇಟಾಗಳ ಸೆಟ್‌ಗಳನ್ನು ನಿರ್ಮಿಸಲು ಭಾರತದ ನಾಗರಿಕರ ತೊಡಗಿಸಿಕೊಳ್ಳುವಿಕೆಯನ್ನು ಸಕ್ರಿಯಗೊಳಿಸುತ್ತದೆ.
* ಇದು ರಾಷ್ಟ್ರೀಯ ಭಾಷಾ ಅನುವಾದ ಮಿಷನ್‌ನ ಒಂದು ಭಾಗವಾಗಿದ್ದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ರೂಪಿಸಿದ ಉಪಕ್ರಮವಾಗಿದೆ.
ಡಿಜಿಟಲ್ ಇಂಡಿಯಾ ಭಾಷಿಣಿಯ ಗುರಿ: ಈ ಯೋಜನೆಯು ಭಾರತೀಯ ನಾಗರಿಕರನ್ನು ಅವರ ಮಾತೃಭಾಷೆ ಅಥವಾ ಆಡುಭಾಷೆಗಳಲ್ಲಿ ದೇಶದ ಡಿಜಿಟಲ್ ಜಗತ್ತಿಗೆ ಸಂಪರ್ಕಿಸುವುದು. ಈ ಮೂಲಕ ಅವರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ. ಇದು ಜನಸಾಮಾನ್ಯರು ಸುಲಭವಾಗಿ ಡಿಜಿಟಲ್ ಲೋಕ ಪ್ರವೇಶಿಸಲು ಕಾರಣವಾಗುತ್ತದೆ.
ಭಾಷಿಣಿ ವೇದಿಕೆ ಒಂದು ಸಂಪೂರ್ಣ ಡಿಜಿಟಲ್ ಪರಿಸರ ವ್ಯವಸ್ಥೆಯಾಗಿ ರೂಪುಗೊಂಡು, ಸರ್ಕಾರವನ್ನು ಡಿಜಿಟಲೀಕರಣಗೊಳಿಸುವತ್ತಲೂ ಒಂದು ಬೃಹತ್ ಹೆಜ್ಜೆಯಾಗಿದೆ.
ಕೃತಕ ಬುದ್ಧಿಮತ್ತೆ ಮತ್ತು ಇತರ ಉದಯೋನ್ಮುಖ ತಂತ್ರಜ್ಞಾನಗಳ ಶಕ್ತಿ ಸಾಮರ್ಥ್ಯಗಳನ್ನು ಬಳಸಿಕೊಳ್ಳುವ ಮೂಲಕ ಈ ವೇದಿಕೆಯು ನಾಗರಿಕರಿಗೆ ಎಲ್ಲಾ ರೀತಿಯ ಸೇವೆಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದೆ. ಮಾತ್ರವಲ್ಲ, ಭಾರತದ ಎಲ್ಲಾ ಭಾಷೆಗಳಿಗೆ ಅನ್ವಯವಾಗುವಂತೆ ರಾಷ್ಟ್ರೀಯ ಸಾರ್ವಜನಿಕ ಡಿಜಿಟಲ್ ವೇದಿಕೆ ನಿರ್ಮಿಸುವ ಗುರಿಯನ್ನೂ ಭಾಷಿಣಿ ಹೊಂದಿದೆ.
ಭಾಷಿಣಿಯು ಸಾರ್ವಜನಿಕರ ಆಸಕ್ತಿಗೆ ಪೂರಕವಾಗಿ, ಆಡಳಿತ ಮತ್ತು ನೀತಿ, ವಿಜ್ಞಾನ ಮತ್ತು ತಂತ್ರಜ್ಞಾನ ಮುಂತಾದ ನಿರ್ದಿಷ್ಟ ವಿಷಯಗಳ ಬಗೆಗಿನ ಸಾಕಷ್ಟು ಮಾಹಿತಿಗಳನ್ನು, ಎಲ್ಲಾ ಭಾರತೀಯ ಭಾಷೆಗಳಲ್ಲಿ ಅಂತರ್ಜಾಲದಲ್ಲಿ ಲಭ್ಯವಾಗಿಸುವ ಗುರಿ ಹೊಂದಿದೆ. ಈ ಮೂಲಕ ನಾಗರಿಕರು ತಮ್ಮ ಮಾತೃಭಾಷೆಯಲ್ಲಿ ಇಂಟರ್ನೆಟ್ ಬಳಸಲು ಭಾಷಿಣಿ ಉತ್ತೇಜಿಸುತ್ತದೆ.
ಪ್ರಮುಖ ಅಂಶಗಳು:
* ಉದ್ಯಮವಲಯ, ಶೈಕ್ಷಣಿಕ ಕಾರ್ಯಕ್ರಮಗಳು ಮತ್ತು ಸ್ಟಾರ್ಟ್ ಅಪ್ ಗಳಿಗೆ ತಮ್ಮ ಎಲ್ಲಾ ಕೊಡುಗೆಗಳನ್ನು ‘ಭಾಷಿಣಿ ವೇದಿಕೆ’ಯೊಳಗೆ ತರುವಂತೆ ದೊಡ್ಡ ನೆಟ್‌ವರ್ಕ್ ಅನ್ನು ರೂಪಿಸಲು ಭಾಷಿಣಿಯು ಸರ್ಕಾರವನ್ನು ಪ್ರೇರೇಪಿಸುತ್ತದೆ.
* ಯಾವುದೇ ಜ್ಞಾನಾಧಾರಿತ ವಿಷಯಗಳಿಗೆ ಸಾರ್ವತ್ರಿಕ ಪ್ರವೇಶ ಒದಗಿಸಲು ಭಾಷಿಣಿ ರಾಷ್ಟ್ರೀಯ ಡಿಜಿಟಲ್ ಸಾರ್ವಜನಿಕ ವೇದಿಕೆಯನ್ನು ಅಭಿವೃದ್ಧಿಪಡಿಸುತ್ತದೆ. ಈ ಮೂಲಕ ಜ್ಞಾನ ಆಧಾರಿತ ಸಮಾಜದ ಸೃಷ್ಟಿಗೆ ಕಾರಣವಾಗುತ್ತದೆ. ಇಲ್ಲಿ ಮಾಹಿತಿಯು ಮುಕ್ತ ಮತ್ತು ಸುಲಭವಾಗಿ ಲಭ್ಯವಿರುತ್ತದೆ.
* ನಾಗರಿಕರಿಗೆ ಬಳಸಲು ಸುಲಭವಾಗುವ ರೀತಿಯಲ್ಲಿ ಈ ವೇದಿಕೆ ರೂಪಿಸಲಾಗಿದೆ. ಜನ ಸಮೂಹಕ್ಕೆ ಈ ವೇದಿಕೆಯ ಮೂಲಕ ಅವರ ಇಷ್ಟದ ಭಾಷೆಗಳಿಗೆ ಕೊಡುಗೆ ನೀಡಲು ಭಾಷಿಣಿಯು ಪ್ರೇರೇಪಿಸುತ್ತದೆ. ಸಾಮಾನ್ಯ ನಾಗರಿಕರು ಈ ಉಪಕ್ರಮದ ಪ್ರಧಾನ ಫಲಾನುಭವಿಗಳಾಗುತ್ತಾರೆ.
* ಭಾಷಣಿಯು ಸಂಪನ್ಮೂಲಗಳನ್ನು ಬಳಸುವ ಹೊಸ ಅಪ್ಲಿಕೇಶನ್‌ಗಳನ್ನು ರಚಿಸಲು ಸ್ಟಾರ್ಟ್ ಅಪ್ ಗಳನ್ನು ಪ್ರೋತ್ಸಾಹಿಸುತ್ತದೆ.
ಭಾಷಾದಾನ್:
* ಭಾಷಾದಾನ್ ಎನ್ನುವುದು ಭಾಷಿಣಿ ಯೋಜನೆಯ ಭಾಗವಾಗಿ ಭಾರತದ ಜನಸಮೂಹ ನಿರ್ಮಿತ ಭಾಷೆಗಳ ಬೆಳವಣಿಗೆಯ ನಿಟ್ಟಿನಲ್ಲಿ ಹೊರತಂದ ಉಪಕ್ರಮ. ವ್ಯಕ್ತಿಯು ತನ್ನ ಸ್ವಂತ ಭಾಷೆಯನ್ನು ಡಿಜಿಟಲ್ ರೂಪದಲ್ಲಿ ಉತ್ಕೃಷ್ಟಗೊಳಿಸಲು, ದತ್ತಾಂಶದ ಮುಕ್ತ ಭಂಡಾರ ನಿರ್ಮಾಣಕ್ಕೆ ಸಹಾಯ ಮಾಡಲು ನಾಗರಿಕರನ್ನು ಆಹ್ವಾನಿಸುತ್ತದೆ.
* ಭಾರತೀಯ ಭಾಷೆಗಳಲ್ಲಿ ದೊಡ್ಡ ಡೇಟಾ ಸೆಟ್(ಸಮಗ್ರ ಮಾಹಿತಿ ಭಂಡಾರ)ಗಳನ್ನು ರಚಿಸುವುದು ಇದರ ಗುರಿಯಾಗಿದೆ. ಈ ಮೂಲಕ ಸಮಾಜವನ್ನು ಇನ್ನಷ್ಟು ಉತ್ತಮಗೊಳಿಸುವ ಸಲುವಾಗಿ ಉತ್ಪನ್ನಗಳು ಅಥವಾ ಸೇವೆಗಳನ್ನು ರಚಿಸಲು ಕೃತಕ ಬುದ್ಧಿಮತ್ತೆಯ ಮಾದರಿಗಳಿಗೆ (AI Mode*s) ತರಬೇತಿ ನೀಡಲು ಈ ಮಾಹಿತಿಗಳನ್ನು ಬಳಸಬಹುದು. ಈ ವೇದಿಕೆಗೆ ಯಾವುದೇ ಸಾಮಾನ್ಯ ವ್ಯಕ್ತಿಗಳೂ ಕೊಡುಗೆ ನೀಡಬಹುದು.
ಭಾಷಾದಾನ್ ವರ್ಗಗಳು:
ಸುನೊ ಇಂಡಿಯಾ: ಯಾವುದೇ ವ್ಯಕ್ತಿ ತಾನು ಆಲಿಸಿದ ಆಡಿಯೊಗಳನ್ನು ಬರಹರೂಪಕ್ಕಿಳಿಸುವ ಮೂಲಕ ಅಥವಾ ಇತರರು ಬರೆದಿರುವ ಪಠ್ಯವನ್ನು ಮೌಲ್ಯೀಕರಿಸುವ ಮೂಲಕ ತಮ್ಮ ಭಾಷೆಯನ್ನು ಮತ್ತಷ್ಟು ಶ್ರೀಮಂತ ಗೊಳಿಸಬಹುದು.
ಬೋಲೊ ಇಂಡಿಯಾ: ಬರೆದಿರುವ ವಾಕ್ಯಗಳನ್ನು ಧ್ವನಿರೂಪದಲ್ಲಿ ಮುದ್ರಿಸುವ ಮೂಲಕ ಆ ಭಾಷೆಯನ್ನು ತನ್ನದೇ ಆದ ಉಚ್ಛಾರಣಾ ರೀತಿಯೊಂದಿಗೆ (Accent)ಬಳಸುವುದು ಹೇಗೆಂದು ತಿಳಿಸಿ ತನ್ನ ಭಾಷೆಯನ್ನು ಶ್ರೀಮಂತ ಗೊಳಿಸಬಹುದು. ಅದಾಗಲೇ ರೆಕಾರ್ಡ್ ಮಾಡಿದ ಆಡಿಯೊಗಳನ್ನೂ ಮತ್ತಷ್ಟು ಮೌಲ್ಯೀಕರಿಸಬಹುದು.
ಲಿಖೊ ಇಂಡಿಯಾ: ಇರುವ ಪಠ್ಯವನ್ನು ತಮ್ಮ ಭಾಷೆಗಳಿಗೆ ಅನುವಾದಿಸುವ ಮೂಲಕ ತಮ್ಮ ಕೊಡುಗೆಗಳನ್ನು ನೀಡಬಹುದು ಮತ್ತು ಬೇರೆಯವರ ಭಾಷಾಂತರಗಳನ್ನು ಕೂಡಾ ಮೌಲ್ಯೀಕರಿಸಬಹುದು.
ದೇಖೊ ಇಂಡಿಯಾ: ನೋಡಿದ ಪಠ್ಯವನ್ನು ಟೈಪ್ ಮಾಡುವ ಮೂಲಕ ಅಥವಾ ಅದಕ್ಕೆ ಸಂಬಂಧಿಸಿದ ಚಿತ್ರಗಳನ್ನು ಅಂಟಿಸುವ ಮೂಲಕ ಭಾಷೆಯನ್ನು ಶ್ರೀಮಂತ ಗೊಳಿಸಬಹುದು ಅಥವಾ ಚಿತ್ರವಿದ್ದರೆ ಅದಕ್ಕೆ ಹೆಸರು ನೀಡಬಹುದು. ಇತರರು ಕೊಡುಗೆ ನೀಡಿದ ಚಿತ್ರಗಳನ್ನು ಸಹ ಮೌಲ್ಯೀಕರಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.