ADVERTISEMENT

ಆಳ-ಅಗಲ: ಸೈಬರ್ ವಂಚಕರ ವಿರುದ್ಧ ಶಸ್ತ್ರಾಸ್ತ್ರವಿಲ್ಲದ ಸಮರ

ಸಂತೋಷ ಜಿಗಳಿಕೊಪ್ಪ
Published 20 ಅಕ್ಟೋಬರ್ 2020, 5:56 IST
Last Updated 20 ಅಕ್ಟೋಬರ್ 2020, 5:56 IST
ಸೈಬರ್ ವಂಚಕರ ವಿರುದ್ಧ ಶಸ್ತ್ರಾಸ್ತ್ರವಿಲ್ಲದ ಸಮರ
ಸೈಬರ್ ವಂಚಕರ ವಿರುದ್ಧ ಶಸ್ತ್ರಾಸ್ತ್ರವಿಲ್ಲದ ಸಮರ   

ಕಡಿಮೆ ಬೆಲೆಗೆ ಕಾರು ಮಾರಾಟ ಮಾಡುವುದಾಗಿ ಹೇಳಿ ಸೈನಿಕನ ಸೋಗಿನಲ್ಲಿ ಒಎಲ್ಎಕ್ಸ್‌ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಸೈಬರ್ ವಂಚಕ, ಬೆಂಗಳೂರಿನ ನಿವಾಸಿಯೊಬ್ಬರಿಂದ ₹ 2 ಲಕ್ಷ ಪಡೆದು ನಾಪತ್ತೆಯಾದ.

ವೈವಾಹಿಕ ಜಾಲತಾಣದಲ್ಲಿ ನಕಲಿ ಖಾತೆ ತೆರೆದಿದ್ದ ಸೈಬರ್ ವಂಚಕ, ಮದುವೆ ಆಮಿಷವೊಡ್ಡಿ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್‌ ಆಗಿದ್ದ ಯುವತಿಯಿಂದ ₹ 7.65 ಲಕ್ಷ ಪಡೆದು ಪರಾರಿಯಾದ.

ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆ ತೆರೆದು ಬಹುಮಾನ ಹಾಗೂ ಉಡುಗೊರೆ ಆಮಿಷವೊಡ್ಡಿದ ವಂಚಕರು, ಸಾರ್ವಜನಿಕರನ್ನು ನಂಬಿಸಿ ಹಣ ಪಡೆದು ತಲೆಮರೆಸಿಕೊಂಡರು.

ADVERTISEMENT

ಹೀಗೆ... ನಾನಾ ರೀತಿಯ ಸೈಬರ್ ಕೃತ್ಯ ಎಸಗಿದ್ದ ನೂರಾರು ಆರೋಪಿಗಳು ಇದುವರೆಗೂ ಪೊಲೀಸರಿಗೆ ಸಿಕ್ಕಿಬಿದ್ದಿಲ್ಲ. ಕೆಲ ಪ್ರಕರಣಗಳಲ್ಲಿ ದೂರುದಾರರು ಕೊಟ್ಟ ಸುಳಿವಿನಿಂದಲೇ ಆರೋಪಿಗಳನ್ನು ಬಂಧಿಸಿದ್ದು ಬಿಟ್ಟರೆ, ಖುದ್ದು ತನಿಖೆ ಮಾಡಿ ಆರೋಪಿಗಳನ್ನು ಪತ್ತೆ ಮಾಡಿದ ಪ್ರಕರಣಗಳು ತುಂಬಾ ವಿರಳ (ಸಿಐಡಿ ಸೈಬರ್ ವಿಭಾಗ ಕೆಲ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಿದೆ).

ಆನ್‌ಲೈನ್‌ನಲ್ಲಿ ಬ್ಯಾಂಕಿಂಗ್‌ ಸೇವೆಗಳು ಸಹ ಲಭ್ಯವಾದ ದಿನದಿಂದಲೇ ಸೈಬರ್ ಅಪರಾಧಗಳು ವರದಿಯಾಗುತ್ತಿದೆ. ಎರಡು–ಮೂರು ವರ್ಷಗಳಿಂದೀಚೆಗೆ ಸೈಬರ್ ಅಪರಾಧ ಪ್ರಮಾಣ ಹೆಚ್ಚಾಗಿದ್ದರಿಂದ, ಇಂಥ ಪ್ರಕರಣಗಳ ತನಿಖೆಗಾಗಿ ಜಿಲ್ಲೆಗೊಂದು ಸೆನ್ (ಸೈಬರ್ ಅಪರಾಧ, ಆರ್ಥಿಕ ಹಾಗೂ ಮಾದಕ ದ್ರವ್ಯ) ಹಾಗೂ ಕಮಿಷನರೇಟ್ ವ್ಯಾಪ್ತಿಯಲ್ಲಿ ಸೈಬರ್ ಕ್ರೈಂ ಠಾಣೆಗಳನ್ನು ಸ್ಥಾಪಿಸಲಾಗಿದೆ.

2018ರಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾದ ಸೆನ್ ಠಾಣೆಯಲ್ಲಿ, ಆರಂಭದಲ್ಲಿ ಪಿಎಸ್‌ಐ ಹಾಗೂ ಇಬ್ಬರು ಕಾನ್‌ಸ್ಟೆಬಲ್ ಮಾತ್ರ ಇದ್ದರು. ಕಚೇರಿಯಂತೂ ಇರಲೇ ಇಲ್ಲ. ಇದೀಗ ಇನ್‌ಸ್ಪೆಕ್ಟರ್‌, ಒಬ್ಬ ಪಿಎಸ್‌ಐ ಹಾಗೂ ಸುಮಾರು ನಾಲ್ಕು ಸಿಬ್ಬಂದಿ ಇದ್ದಾರೆ. ಹಲವೆಡೆ ಪ್ರತ್ಯೇಕ ಕಟ್ಟಡಗಳಲ್ಲಿ ಠಾಣೆ ಇದೆ. ಪ್ರಕರಣ ಭೇದಿಸಲು ಬೇಕಾದ ತರಬೇತಿಯನ್ನೂ ಸಿಬ್ಬಂದಿಗೆ ನೀಡಲಾಗುತ್ತಿದೆ. ಎರಡು ಲ್ಯಾಪ್‌ಟಾಪ್, ಮೊಬೈಲ್ ಕರೆ ಮತ್ತು ವಿಡಿಯೊ ಮೂಲ ಪರಿಶೀಲಿಸುವ ಉಪಕರಣವೊಂದನ್ನು ನೀಡಲಾಗಿದೆ. ಆದರೆ, ಇವಿಷ್ಟೇ ಸೌಲಭ್ಯಗಳನ್ನು ಇಟ್ಟುಕೊಂಡು ಅಪರಾಧ ಭೇದಿಸುವುದು ತುಂಬಾ ಕಷ್ಟವೆಂದು ಪೊಲೀಸರೇ ಹೇಳುತ್ತಾರೆ.

ನಿತ್ಯವೂ ಅಪ್‌ಡೇಟ್ ಆಗುತ್ತಿರುವ ಸೈಬರ್ ವಂಚಕರನ್ನು ಹೆಡೆಮುರಿ ಕಟ್ಟಲು ಸೈಬರ್ ಕ್ರೈಂ ಹಾಗೂ ಸೆನ್‌ ಠಾಣೆ ಪೊಲೀಸರು ಸಾರಿರುವ ಸಮರ, ಸುಸಜ್ಜಿತ ಶಸ್ತ್ರಾಸ್ತ್ರವಿಲ್ಲದ ಹೋರಾಟದಂತಾಗಿದೆ. ‘ತಂತ್ರಜ್ಞಾನ ಬದಲಾದಂತೆ ಸೈಬರ್ ಕ್ರೈಂ ಸ್ವರೂಪಗಳು ಬದಲಾಗುತ್ತಿವೆ. ಸಾಫ್ಟ್‌ವೇರ್‌ಗಳು ಅಪ್‌ಡೇಟ್ ಆಗುತ್ತಿವೆ. ಆದರೆ, ತನಿಖಾ ಕ್ರಮ ಹಾಗೂ ಕಾನೂನು ಬದಲಾಗುತ್ತಿಲ್ಲ’ ಎಂದು ಅಧಿಕಾರಿಯೊಬ್ಬರು ವಾಸ್ತವ ಸ್ಥಿತಿ ತೆರೆದಿಡುತ್ತಾರೆ.

‘ಪ್ರತಿಯೊಂದು ಸೈಬರ್‌ ಅಪರಾಧದ ತನಿಖೆಯನ್ನು ಇನ್‌ಸ್ಪೆಕ್ಟರ್‌ ಅವರೇ ಮಾಡಬೇಕು. ಐಪಿಸಿ ಸೆಕ್ಷನ್‌ ಅಡಿಯಲ್ಲಿರುವ ತನಿಖಾ ಕ್ರಮ, ಮಾಹಿತಿ ತಂತ್ರಜ್ಞಾನ ಕಾಯ್ದೆಯಲ್ಲಿ ಇಲ್ಲ. ದಿನಕ್ಕೆ 10ಕ್ಕೂ ಹೆಚ್ಚು ಪ್ರಕರಣ ದಾಖಲಾಗುತ್ತಿದ್ದು, ತನಿಖೆಗೆ ಸಮಯವೇ ಇಲ್ಲದಂತಾಗಿದೆ’ ಎಂದೂ ಹೇಳುತ್ತಾರೆ. ಸಿಐಡಿ ಸೈಬರ್ ವಿಭಾಗದ ಅಧಿಕಾರಿಯೊಬ್ಬರು, ‘ಸೈಬರ್ ಹಾಗೂ ಸೆನ್ ಠಾಣೆ ಸಿಬ್ಬಂದಿಗೆ ಅಗತ್ಯ ಸೌಲಭ್ಯವಿಲ್ಲ. ಪ್ರಕರಣದ ತನಿಖೆಗೆ ಏನಾದರೂ ಸೌಲಭ್ಯ ಬೇಕಾದರೆ ಅವರೆಲ್ಲ, ನಮ್ಮ ವಿಭಾಗದಲ್ಲಿರುವ ಸುಸಜ್ಜಿತ ಲ್ಯಾಬ್‌ಗೆ ಬಂದು ಹೋಗುತ್ತಾರೆ’ ಎಂದೂ ತಿಳಿಸುತ್ತಾರೆ.

ಕರ್ನಾಟಕ ಮಾತ್ರವಲ್ಲ, ದೇಶದ ಎಲ್ಲ ರಾಜ್ಯಗಳಲ್ಲೂ ಸೈಬರ್ ಅಪರಾಧದ ಬಗ್ಗೆ ನಿರ್ಲಕ್ಷ್ಯ ಇದೆ. ಪ್ರಕರಣ ದಾಖಲಿಸಿಕೊಳ್ಳುವುದು ಬಿಟ್ಟರೆ ಬೇರೆ ಯಾವುದೇ ಪ್ರಯೋಜನವಾಗುತ್ತಿಲ್ಲ. ‘ರಾಶಿ ರಾಶಿ ದೂರುಗಳು ಬರುತ್ತವೆ. ಯಾವುದರ ತನಿಖೆ ಮಾಡಬೇಕು, ಯಾವುದು ಬಿಡಬೇಕು ಎಂಬ ಗೊಂದಲ. ಕಡಿಮೆ ಹಣದ ವಂಚನೆ ಬಗೆಗಿನ ದೂರುಗಳನ್ನು ಗಂಭೀರವಲ್ಲದ ಅಪರಾಧ (ಎನ್‌ಸಿಆರ್) ಎಂದು ಪರಿಗಣಿಸಿ ದೂರುದಾರರಿಗೆ ಬ್ಯಾಂಕ್‌ನಿಂದಲೇ ಸಾಧ್ಯವಾದಷ್ಟು ಹಣ ವಾಪಸು ಕೊಡಿಸಿ ಕಳುಹಿಸುತ್ತಿದ್ದೇವೆ’ ಎಂದು ಸೆನ್ ಠಾಣೆಯ ಅಧಿಕಾರಿಯೊಬ್ಬರು ಹೇಳುತ್ತಾರೆ.

‘ಸೈಬರ್ ವಂಚಕರ ವಿರುದ್ಧ ನಮ್ಮ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಾರೆ’ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಆದರೆ, ಸೆನ್ ಠಾಣೆಗಳಲ್ಲಿ ವಾಸ್ತವ ಬೇರೆ ಇದೆ. ತರಬೇತಿ ಹಾಗೂ ನಿರ್ದಿಷ್ಟ ಉಪಕರಣ ನೀಡಿದರಷ್ಟೇ ಸಾಲದು, ಅದಕ್ಕೆ ತಕ್ಕಂತೆ ಕಾನೂನು ತಿದ್ದುಪಡಿ ಮಾಡಬೇಕು. ಪ್ರತಿಯೊಬ್ಬರಿಗೂ ಕೆಲಸ ಹಂಚಿಕೆ ಮಾಡಬೇಕು’ ಎಂದೂ ಅವರು ತಿಳಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.