ADVERTISEMENT

ಆರೋಗ್ಯಕ್ಕೆ ಫಿಟ್ನೆಸ್ ಟ್ರ್ಯಾಕರ್‌ಗಳು

ಅವಿನಾಶ್ ಬಿ.
Published 5 ಮಾರ್ಚ್ 2024, 23:30 IST
Last Updated 5 ಮಾರ್ಚ್ 2024, 23:30 IST
   

ಇದು ಧಾವಂತದ ಯುಗ. ದೈಹಿಕ ಚಟುವಟಿಕೆ ಕಡಿಮೆ, ಕುಳಿತಲ್ಲೇ ಮಾಡುವ ಕೆಲಸಗಳೇ ಹೆಚ್ಚು. ಇದಕ್ಕೆ ಮಾನಸಿಕ ಕ್ಷಮತೆ, ಏಕಾಗ್ರತೆ ಬೇಕು. ಆದರೆ, ಮನೋದ್ವೇಗ, ಮಾನಸಿಕ ಒತ್ತಡಗಳಿಂದ ದೈಹಿಕ ಸ್ವಾಸ್ಥ್ಯವೂ ಕೆಡುತ್ತಿದೆ. ಹೃದಯಾಘಾತ, ಇಲ್ಲವೇ ಹೃದಯಸ್ತಂಭನವಾದ ಘಟನೆಗಳು ಸಾಮಾನ್ಯವಾಗುತ್ತಿರುವುದನ್ನು ನಾವಿಂದು ಮಾಧ್ಯಮಗಳಲ್ಲಿ ಓದುತ್ತಿದ್ದೇವೆ. ಈಗಿನ ಆಧುನಿಕ ಜೀವನಶೈಲಿಯಲ್ಲಿ ಮನುಷ್ಯರಿಗೆ ಸಮಯವಿಲ್ಲದಿರುವಾಗ, ಆರೋಗ್ಯರಕ್ಷಣೆಗೆ ಸಹಾಯ ಮಾಡಲೆಂದೇ ತಂತ್ರಜ್ಞಾನವೂ ಬೆಳೆದಿದೆ. ಇದರ ಫಲವೇ ‘ಫಿಟ್ನೆಸ್ ಟ್ರ್ಯಾಕರ್‌’ಗಳು.

ದೈಹಿಕ ಚಟುವಟಿಕೆಗಳ ಜಾಡು ಹಿಡಿಯಬಲ್ಲ ಈ ಫಿಟ್ನೆಸ್ ಟ್ರ್ಯಾಕರ್‌ಗಳು ಸ್ಮಾರ್ಟ್ ವಾಚ್‌ಗಳ ರೂಪದಲ್ಲಿ, ಕೈಯಲ್ಲಿರುವ ಸ್ಮಾರ್ಟ್ ಬ್ಯಾಂಡ್ ರೂಪದಲ್ಲಿ, ಸ್ಮಾರ್ಟ್ ಫೋನ್‌ನಲ್ಲಿ ಆ್ಯಪ್‌ಗಳ ರೂಪದಲ್ಲಿ ನಮಗಿಂದು ಲಭ್ಯ. ಇವುಗಳಲ್ಲಿರುವುದು ಸೆನ್ಸರ್‌ಗಳು ಅಥವಾ ಸಂವೇದಕಗಳು. ಈ ಸೆನ್ಸರ್‌ಗಳು ದೈಹಿಕ ಚಟುವಟಿಕೆಗಳ ಜಾಡು ಹಿಡಿದು ದಾಖಲಿಸಿಕೊಳ್ಳಬಲ್ಲವು. ನಡಿಗೆ, ಓಟ, ಬೆಟ್ಟ-ಮೆಟ್ಟಿಲು ಎಷ್ಟೆತ್ತರ ಏರಿದೆವು ಎಂಬುದನ್ನೂ, ಸೈಕ್ಲಿಂಗ್, ನಿದ್ರೆ, ಉಸಿರಾಟ, ಹೃದಯಬಡಿತ, ರಕ್ತದಲ್ಲಿನ ಆಮ್ಲಜನಕದ ಪ್ರಮಾಣ, ರಕ್ತದ ಒತ್ತಡ ಮುಂತಾದವುಗಳಷ್ಟೇ ಅಲ್ಲ, ಬೆವರಿನ ಪ್ರಮಾಣವನ್ನೂ ಅಳೆಯಬಲ್ಲವು, ವಿಶ್ಲೇಷಿಸಬಲ್ಲವು. ಹೆಚ್ಚು ಹೊತ್ತು ಮೊಬೈಲ್ ಫೋನ್‌ನಲ್ಲಿ ಅಥವಾ ಕಂಪ್ಯೂಟರ್ ಕೆಲಸದಲ್ಲಿ ಮಗ್ನವಾಗಿದ್ದರೆ ಗಂಟೆಗೊಮ್ಮೆ ಎದ್ದು ನಡೆಯುವಂತೆ ಸೂಚನೆ ನೀಡಬಲ್ಲವು. ಇದಕ್ಕೆ ಪೂರಕವಾದ ತಂತ್ರಾಂಶವು ನಿರ್ದಿಷ್ಟ ಚಟುವಟಿಕೆಯೇನಾದರೂ ಕಡಿಮೆಯಾದಲ್ಲಿ ನಮ್ಮನ್ನು ಎಚ್ಚರಿಸಬಲ್ಲದು, ನಾವು ಇರಿಸಿದ ಗುರಿ ತಲುಪಿದರೆ, ಶಹಬ್ಬಾಸ್ ಹೇಳಿ ಹುರಿದುಂಬಿಸಬಲ್ಲದು; ಮತ್ತು ಹೆಚ್ಚು ಚಟುವಟಿಕೆಯಿಂದಿರುವಂತೆ ಪ್ರೇರೇಪಿಸಬಲ್ಲದು. ಪರಿಣಾಮ, ನಮ್ಮ ದೈಹಿಕ ಚಟುವಟಿಕೆ ಹೆಚ್ಚಾಗಿ, ಕೊಂಚವಾದರೂ ದೇಹಕ್ಕೆ, ಮನಸ್ಸಿಗೆ ವ್ಯಾಯಾಮ ದೊರೆಯುವಂತಾಗುತ್ತದೆ.

ಕಳೆದ ತಿಂಗಳು ಬೆಂಗಳೂರಿನ ಕೋಡ್ ಡೆವಲಪರ್ ಶರತ್ ಶ್ರೀರಾಮ್ ಎಂಬವರು ಆ್ಯಪಲ್ ಸಿಇಒ ಟಿಮ್ ಕುಕ್‌ಗೆ ಪತ್ರ ಬರೆದು, ಆ್ಯಪಲ್ ವಾಚ್‌ನಲ್ಲಿದ್ದ ಹೃದಯಬಡಿತದ ವೇಗವನ್ನು ತಿಳಿಸುವ ವೈಶಿಷ್ಟ್ಯದಿಂದ ತನ್ನ ಆರೋಗ್ಯ ಸುಧಾರಣೆಯಾಗಿರುವ ಬಗ್ಗೆ ತಿಳಿಸಿ ಧನ್ಯವಾದ ಹೇಳಿದ ಸುದ್ದಿ ವರದಿಯಾಗಿತ್ತು. ಸಾಫ್ಟ್‌ವೇರ್ ಕ್ಷೇತ್ರದ ಉದ್ಯೋಗಿಯಾಗಿ, ನಿಗದಿತ ಸಮಯಕ್ಕಿಂತ ಹೆಚ್ಚು ಸಮಯ ಕೆಲಸ, ನಿರ್ದಿಷ್ಟ ಗಡುವಿನೊಳಗೆ ಕೆಲಸ ಮುಗಿಸಲೇಬೇಕಾದ ಅನಿವಾರ್ಯತೆ - ಹೀಗೆ ಕೆಲಸದ ಒತ್ತಡದಿಂದಾಗಿ ಅವರಿಗೆ ಹೃದಯ ಬಡಿತದ ವೇಗ ತೀರಾ ಹೆಚ್ಚಾಗಿದೆ ಎಂಬ ನೋಟಿಫಿಕೇಶನ್ ಬರುತ್ತಿತ್ತು. ಇದರ ಆಧಾರದಲ್ಲಿ ಇಸಿಜಿ ಮಾಡಿಸಿ ನೋಡಿದಾಗ, ದೈಹಿಕ ಆರೋಗ್ಯ ಚೆನ್ನಾಗಿಯೇ ಇತ್ತು. ವೈದ್ಯರಲ್ಲಿ ತಪಾಸಣೆ ಮಾಡಿದಾಗ, ಈ ರೀತಿಯ ಸ್ಟ್ರೆಸ್ ಮುಂದಕ್ಕೆ ಗಂಭೀರ ಅನಾರೋಗ್ಯಕ್ಕೆ ಕಾರಣವಾಗಬಹುದು ಎಂಬ ಎಚ್ಚರಿಕೆ ದೊರೆಯಿತು. ವೈದ್ಯರ ಸಲಹೆ ಪಡೆದ ಬಳಿಕ ಅವರು ಉದ್ಯೋಗದಲ್ಲಿ ಬದಲಾವಣೆ ಮಾಡಿಕೊಂಡು, ತಮ್ಮ ಹೃದಯಬಡಿತದ ವೇಗವನ್ನು ತಹಬಂದಿಗೆ ತಂದುಕೊಂಡಿದ್ದರು.

ADVERTISEMENT

ದೈಹಿಕ ಸ್ವಾಸ್ಥ್ಯದಷ್ಟೇ ಮಾನಸಿಕ ಕ್ಷಮತೆಯೂ ಮುಖ್ಯ. ಇದನ್ನೂ ನಾವು ನಿರ್ಲಕ್ಷಿಸದಂತೆ ಸಹಾಯ ಮಾಡುತ್ತವೆ, ಫಿಟ್ನೆಸ್ ಟ್ರ್ಯಾಕರ್‌ಗಳು. ಈ ತಂತ್ರಜ್ಞಾನ ಅಳವಡಿಸಿರುವ ಸಾಧನಗಳನ್ನು ‘ವೇರೆಬಲ್ಸ್’ (ಧರಿಸಬಹುದಾದ ಸಾಧನಗಳು) ಎಂದು ಕರೆಯುತ್ತಾರೆ. ಆಂಡ್ರಾಯ್ಡ್, ಆ್ಯಪಲ್‌ನ ಸಾಕಷ್ಟು ಸ್ಮಾರ್ಟ್ ಸಾಧನಗಳು (ವಾಚ್, ಬ್ಯಾಂಡ್) ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಇವುಗಳಿಂದ ಲಭ್ಯವಾಗುವ ದತ್ತಾಂಶವನ್ನು ಸ್ಮಾರ್ಟ್ ಫೋನ್‌ಗೆ ವರ್ಗಾಯಿಸಬಹುದು, ವಿಶ್ಲೇಷಿಸಬಹುದು ಮತ್ತು ವೈದ್ಯರಿಗೆ ತೋರಿಸಿ ಅವರಿಂದ ಸಲಹೆ ಪಡೆಯಬಹುದು.

ವೈದ್ಯಕೀಯ ಸಾಧನಗಳಲ್ಲ:


ಬಹುತೇಕ ಫಿಟ್ನೆಸ್ ಟ್ರ್ಯಾಕರ್ ತಂತ್ರಾಂಶಗಳು ವೈದ್ಯಕೀಯವಾಗಿ ಅಧಿಕೃತ ಪರೀಕ್ಷೆಗೊಳಪಟ್ಟಿಲ್ಲ. ಇದರಿಂದಾಗಿಯೇ ಅವುಗಳನ್ನು ವೈದ್ಯಕೀಯ ಸಾಧನಗಳೆಂದು ಪರಿಗಣಿಸುವಂತಿಲ್ಲ. ಎಂದರೆ, ಇದರಲ್ಲಿ ಲಭ್ಯವಾದ ಮಾಹಿತಿಯು ಶೇ.100 ನಿಖರ ಎನ್ನುವಂತಿಲ್ಲ. ಈ ಟ್ರ್ಯಾಕರ್‌ಗಳು ನಡಿಗೆಯ ಹೆಜ್ಜೆ, ವ್ಯಯಿಸಿದ ಸಮಯದ ಲೆಕ್ಕಾಚಾರವನ್ನು ನಿಖರವಾಗಿ ತೋರಿಸಬಹುದಾದರೂ, ಹೃದಯ ಬಡಿತ, ರಕ್ತದೊತ್ತಡ, ರಕ್ತದಲ್ಲಿರುವ ಆಮ್ಲಜನಕ ಪ್ರಮಾಣ ಮುಂತಾದವುಗಳ ಬಗ್ಗೆ ಸುಳಿವಷ್ಟೇ ನೀಡಬಲ್ಲವು; ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳುವಂತೆ ಪ್ರೇರಣೆ ನೀಡಬಲ್ಲವು. ಇವು ವೈದ್ಯಕೀಯ ಸಾಧನಗಳಲ್ಲದ ಕಾರಣ, ನಾವು ಪೂರ್ತಿಯಾಗಿ ನಂಬುವಂತಿಲ್ಲ.

ಆದರೆ, ಫಿಟ್ನೆಸ್ ಟ್ರ್ಯಾಕರ್ ಇರುವ ಸ್ಮಾರ್ಟ್‌ವಾಚ್ ಅಥವಾ ಆ್ಯಪ್ ಬಳಸಿ, ಹಲವರು ಆರೋಗ್ಯಕರ ಜೀವನ ಶೈಲಿಯನ್ನು ರೂಢಿಸಿಕೊಂಡಿರುವುದು, ದೈಹಿಕ ಚಟುವಟಿಕೆ ಹೆಚ್ಚಿಸಿ ಆರೋಗ್ಯದಲ್ಲಿ ಸುಧಾರಣೆ ಮಾಡಿಕೊಂಡಿರುವುದು ಸುಳ್ಳಲ್ಲ.

ಪ್ರಯೋಜನಗಳು:


ಫಿಟ್ನೆಸ್ ಟ್ರ್ಯಾಕರ್‌ಗಳ ಪರಿಣಾಮಕಾರಿತ್ವದ ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆದಿದ್ದು, ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳುವ ಬಗ್ಗೆ ಇವು ಪ್ರೇರಣೆ ನೀಡುತ್ತವೆ ಮತ್ತು ದೈಹಿಕ ಸ್ವಾಸ್ಥ್ಯ ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರವನ್ನಯ ವಹಿಸುತ್ತವೆ ಎಂಬುದು ದೃಢಪಟ್ಟಿದೆ.

ವಿಶೇಷವಾಗಿ ಈ ಕಾಲದ ಆತಂಕಗಳಲ್ಲಿ ಪ್ರಮುಖವಾಗಿರುವ ಹೃದಯದ ನಾಳ, ರಕ್ತದೊತ್ತಡಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಆರಂಭದಲ್ಲೇ ಪತ್ತೆ ಹಚ್ಚಿ ವೈದ್ಯಕೀಯ ಸಲಹೆ ಪಡೆಯಲು ಫಿಟ್ನೆಸ್ ಟ್ರ್ಯಾಕರ್‌ಗಳ ಕೊಡುಗೆ ಗಮನಾರ್ಹ.

ನಿಯಮಿತವಾಗಿ ವ್ಯಾಯಾಮ, ನಡಿಗೆ ಮುಂತಾದ ದೈಹಿಕ ಚಟುವಟಿಕೆಗಳನ್ನು ಉತ್ತೇಜಿಸುತ್ತವೆ. ತನ್ಮೂಲಕ ತೂಕ ಇಳಿಸಿಕೊಳ್ಳಲು, ಒತ್ತಡ ಕಡಿಮೆ ಮಾಡಿಕೊಳ್ಳಲು, ಹೃದಯ ಬಡಿತದ ಮಿತಿ ಕಾಯ್ದುಕೊಳ್ಳುವಲ್ಲಿ ನೆರವಾಗುತ್ತವೆ.

ಹಿಂದಿನ ದಿನಕ್ಕೆ ಅಥವಾ ಹಿಂದಿನ ವಾರ ಅಥವಾ ತಿಂಗಳಿನ ನಮ್ಮ ದೈಹಿಕ ಚಟುವಟಿಕೆಗಳನ್ನು ಹೋಲಿಸಿ, ಸುಧಾರಿಸಿಕೊಳ್ಳುವಲ್ಲಿಯೂ ಈ ಸಾಧನಗಳಲ್ಲಿ ಅಡಕವಾಗಿರುವ ತಂತ್ರಾಂಶಗಳು ನೆರವಾಗುತ್ತವೆ. ನಮ್ಮನ್ನು ಚಟುವಟಿಕೆಯಿಂದಿರುವಂತೆ ನೋಡಿಕೊಂಡು, ಆರೋಗ್ಯಕರ ಜೀವನಶೈಲಿಯನ್ನು ಹುರಿದುಂಬಿಸುತ್ತವೆ.

ಈ ಕಾರಣಕ್ಕಾಗಿ ಇ-ಯುಗದಲ್ಲಿ ‘ಫಿಟ್ನೆಸ್ ಬ್ಯಾಂಡ್’ ಅಥವಾ ‘ಸ್ಮಾರ್ಟ್ ವಾಚ್‌’ಗಳು ಅನಿವಾರ್ಯವಾಗಿವೆ. ತಂತ್ರಜ್ಞಾನದ ಪ್ರಗತಿಯ ಜೊತೆಗೆ ನಾವೂ ಹೆಜ್ಜೆ ಹಾಕುವಲ್ಲಿ ಸಹಕರಿಸುತ್ತವೆ. ಇಂದು ಮೊಬೈಲ್ ಫೋನ್‌ಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾದಂತೆಯೇ ಮುಂದಿನ ಸರದಿ, ಈ ಫಿಟ್ನೆಸ್ ಟ್ರ್ಯಾಕರ್‌ಗಳಿರುವ ಸ್ಮಾರ್ಟ್ ವಾಚ್‌ಗಳದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.