ರಸ್ತೆಯಲ್ಲಿ ವೇಗವಾಗಿ ಓಡುತ್ತಾ ಇದ್ದ ಕಾರು ಒಮ್ಮೆಗೇ ಹಕ್ಕಿಯಂತೆ ಆಕಾಶಕ್ಕೆ ಹಾರುವ ದೃಶ್ಯವನ್ನು ಹಾಲಿವುಡ್‌ನ ಜೇಮ್ಸ್‌ಬಾಂಡ್ ಸಿನಿಮಾಗಳಲ್ಲಿ ನೀವು ನೋಡಿರಬಹುದು. ಕಥೆಗಾರ ಇಯಾನ್ ಫ್ಲೆಮಿಂಗ್ ತನ್ನ ಕಾದಂಬರಿಗಳಲ್ಲಿ ಹಾರುವ ಕಾರುಗಳನ್ನು ಬಳಸಿರುವುದು ಹಳೆಯ ಸುದ್ದಿ. ವಿಶ್ವದಲ್ಲೇ ಮೊದಲ ಬಾರಿಗೆ ಕಾರು ಹಾರಲು ಬೇಕಾದ ತಂತ್ರಜ್ಞಾನವನ್ನು 1934ರಲ್ಲಿ ಕಂಡು ಹಿಡಿದಾತ, ವಾಯುಯಾನ ಪ್ರವರ್ತಕ ವಾಲ್ಡೊ ವಾಟರ್‌ಮ್ಯಾನ್.
ಕಾರಿನಂತೆ ನೆಲದಲ್ಲಿ ಓಡುವ ಜೊತೆಗೆ ವಿಮಾನದಂತೆ ಗಾಳಿಯಲ್ಲಿ ಹಾರುವ ಎರಡೂ ಕಾರ್ಯಸಾಧನೆ ಆಗಬೇಕಿದ್ದುದರಿಂದ ಹಾರುವ ಕಾರಿನಲ್ಲಿ ಅತ್ಯಂತ ಸಂಕೀರ್ಣ ತಂತ್ರಜ್ಞಾನವನ್ನು ಬಳಸಬೇಕಿತ್ತು. ಅದರಲ್ಲಿ ವಾಲ್ಡೊ ವಾಟರ್‌ಮ್ಯಾನ್ ಯಶಸ್ವಿಯೂ ಆದ.
ಹಾರುವ ಕಾರಿನ ಈ ತಂತ್ರಜ್ಞಾನವನ್ನು ಇತ್ತೀಚೆಗೆ ಬಳಕೆ ಮಾಡಿದ್ದು ವಿದ್ಯುತ್ ಚಾಲಿತ ಕಾರಿನಲ್ಲಿ. ವಿಮಾನಗಳಲ್ಲಿ ಬಳಸುವ ವರ್ಟಿಕಲ್ ಟೇಕಾಫ್ ಮತ್ತು ಲ್ಯಾಂಡಿಂಗ್ (ವಿಟೋಲ್) ತಂತ್ರಜ್ಞಾನವನ್ನು ಭೌತಶಾಸ್ತ್ರದ ನಿಯಮಗಳಂತೆ ಈ ಕಾರಿಗೆ ಅಳವಡಿಸಲಾಗಿದೆ.
ಈಗ ಇರುವ ಜೆಟ್-ಇಂಧನ ವಿಮಾನದ ಎರಡು ಎಂಜಿನ್‌ಗಳು, ನೆಲಕ್ಕೆ ಒತ್ತಡ ಹಾಕಿ ವಿಮಾನವನ್ನು ಲಂಬವಾಗಿ ಅಥವಾ ನೇರವಾಗಿ ಹಾರುವಂತೆ ಮಾಡುತ್ತವೆ. ಆದರೆ, ಹಾರುವ ಕಾರುಗಳು ಜೆಟ್ ವಿಮಾನಕ್ಕಿಂತ ಚಿಕ್ಕದೂ, ಹಗುರವೂ ಆಗಿರುವುದರಿಂದ ಇಲ್ಲಿಯ ಎಂಜಿನ್ ಕಾರ್ಯ ನಿರ್ವಹಣೆ ವಿಭಿನ್ನ. ಈ ಕಾರಿನಸಣ್ಣ ವಿದ್ಯುತ್ ಬ್ಲೇಡ್‌ಗಳು ವಿವಿಧ ಕಡೆಗಳಿಂದ ಗಾಳಿಯನ್ನು ಬೀಸಿ ಚಿಮ್ಮುವ ಒತ್ತಡವನ್ನು ಉಂಟು ಮಾಡುತ್ತವೆ.ಡಿಸ್ಟರಿಬ್ಯುಟೆಡ್ ಎಲೆಕ್ಟ್ರಿಕ್ ಪ್ರೊಪಲ್ಷನ್ (ಡಿಇಪಿ) ಎಂಬ ತಂತ್ರಜ್ಞಾನವಿದು. ಮುಖ್ಯವಾಗಿ ಡ್ರೋನ್‌ಗಳ ತ್ವರಿತ ಅಭಿವೃದ್ಧಿಯಿಂದಾಗಿ ಈ ತಂತ್ರಜ್ಞಾನ ಈಗ ಸಾಕಷ್ಟು ಮುಂದುವರಿದಿದೆ.
ಈ ಕಾರುಗಳ ವಿಂಗ್ ಮತ್ತು ಪ್ರೊಫೆಲ್ಲರ್ ವಿನ್ಯಾಸವು ಉದ್ದ ಮತ್ತು ತೆಳ್ಳಗೆ ಚಲಿಸುವ ಮೇಲ್ಮೈ ಹೊಂದಿದೆ. ಕನಿಷ್ಠ ಎಳೆತದಲ್ಲಿ ಗರಿಷ್ಠ ಮೇಲೆತ್ತುವಿಕೆ ಸಾಧಿಸುವುದು ಈ ಎಲ್ಲ ತಂತ್ರಜ್ಞಾನಗಳ ಗುರಿ.ಉತ್ತಮ ಲಿಫ್ಟ್-ಟು-ಡ್ರ್ಯಾಗ್ ಅನುಪಾತ ಎಂದರೆ ಕಡಿಮೆ ವಿದ್ಯುತ್ ಬಳಕೆ ಮತ್ತು ಎಮಿಶನ್.ಆದರೆ, ಈ ಇಂಧನ ಉಳಿತಾಯ ಆವಿಷ್ಕಾರಗಳು ಹಾರುವ ಸಮಯದಲ್ಲಿ ನೆರವಾಗುತ್ತಿದೆಯೇ ಹೊರತು, ಗಾಳಿಯಲ್ಲಿ ತೇಲಾಡುವಾಗ, ಟೇಕಾಫ್ ಮತ್ತು ಇಳಿಯುವಾಗ ಹೆಚ್ಚು ನೆರವಾಗುವುದಿಲ್ಲ. ಅಂದರೆ ಟೇಕಾಫ್ ಮತ್ತು ಇಳಿಯಲು ಹೆಚ್ಚು ವಿದ್ಯುತ್ ವೆಚ್ಚವಾಗುತ್ತದೆ. ಹಾಗಾಗಿ ಈ ವಿಟೋಲ್ ಹಾರುವ ಕಾರುಗಳು ಸಮೀಪವೇ ಇರುವ ಎರಡು ನಗರಗಳ ನಡುವಣ ಪ್ರಯಾಣಕ್ಕೆ ಅಥವಾ ಆಹಾರ ವಿತರಣೆಗಳಿಗೆ ಮಾತ್ರ ಬಳಸುವಂತಿವೆ.ಹೆಚ್ಚೆಂದರೆ 100 ಕಿ.ಮೀ. ಅಂತರದ ಪ್ರಯಾಣ ಸಾಧ್ಯ.
ಬೆಂಗಳೂರಿನಿಂದ ಮೈಸೂರಿಗೆ ಹೋಗಲು ಸಾಧ್ಯವಾಗುವುದಿಲ್ಲ. ಈ ಹಾರುವ ಕಾರುಗಳು ಪೂರ್ವ ನಿರ್ಧಾರಿತ ಏರ್ ಕಾರಿಡಾರ್‌ಗಳಲ್ಲಿ ಟ್ಯಾಕ್ಸಿಗಳಾಗಿ ಬಳಕೆಯಾಗಬಹುದು. ಕಾರು ಹಾರಿದ ಬಳಿಕ ಸೂಕ್ತ ಲ್ಯಾಂಡಿಂಗ್ ಸ್ಥಳವನ್ನು ನಿರ್ಧರಿಸುವುದಕ್ಕೂ ಮುನ್ನ ಬ್ಯಾಟರಿಯ ಚಾರ್ಜ್ ಮುಗಿಯುವ ಸಾಧ್ಯತೆಯಿದೆ. ಇದನ್ನು ತಪ್ಪಿಸಲು ಭಾರೀ ಹೆಚ್ಚುವರಿ ಬ್ಯಾಟರಿಗಳನ್ನು ಒಯ್ಯಬೇಕಾಗುತ್ತದೆ. ಇದು ವಿದ್ಯುತ್ ಚಾಲಿತ ಹಾರುವ ಕಾರಿನ ಅತಿದೊಡ್ಡ ತೊಂದರೆ.
ಪೆಟ್ರೋಲ್ ಕಾರು
ಹಾರುವ ಕಾರಿನ ಇನ್ನೊಂದು ಮಾದರಿ ಎವಿಯೇಷನ್ ಇಂಧನ ಬಳಸುವ ಕಾರು. ವೈವಿಧ್ಯಮಯ ಹಾರಾಟ ತಂತ್ರಜ್ಞಾನಗಳನ್ನು ಬಳಸಿಕೊಂಡು ಇದರ ಅನೇಕ ಮೂಲ ಮಾದರಿಗಳನ್ನು ನಿರ್ಮಿಸಲಾಗಿದೆ. ಸ್ವಿಡ್ಜರ್ಲೆಂಡ್‌ನಲ್ಲಿ ನಡೆದ ಜಿನೇವಾ ಮೋಟಾರ್ ಷೋನಲ್ಲಿ ಇದರ ಮಾದರಿಯನ್ನು ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿತ್ತು. ಡಚ್ ಕಂಪನಿ ಪಿಎಎಲ್–ವಿ ಇಂಟರ್‌ನ್ಯಾಷನಲ್ ವಿನ್ಯಾಸಗೊಳಿಸಿ ಉತ್ಪಾದಿಸಿದ ವಿಶ್ವದ ಮೊದಲ ಹಾರುವ ಕಾರಿನ ಮಾದರಿಯನ್ನು 2019ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಫಾರ್ನ್‌ಬರೋ ಏರ್ ಷೋನಲ್ಲಿ ಪ್ರದರ್ಶಿಸಲಾಗಿದೆ.
ಪಿಎಎಲ್-ವಿ ಕಾರಿನ ವಿಶೇಷ
ಭಾರತದಲ್ಲಿ ತಯಾರಾಗಲಿರುವಈ ಹಾರುವ ಕಾರಿನಲ್ಲಿ ಇಬ್ಬರು ಮಾತ್ರ ಪ್ರಯಾಣಿಸಬಹುದು. ಡ್ರೈವಿಂಗ್ ಮೋಡ್‌ನಿಂದ ಹಾರುವ ಮೋಡ್‌ಗೆ ಚಲಿಸಲು ಮತ್ತು ಟೇಕಾಫ್ ಮಾಡಲು ಸುಮಾರು 330 ಮೀಟರ್ ಉದ್ದದ ನೇರ ರಸ್ತೆ ಸಾಕು. ಗರಿಷ್ಠ 264 ಕೆ.ಜಿ. ಭಾರ ಹೊರಲಿರುವ ಇದು ಅತ್ಯುತ್ತಮ ಇಂಧನ ಬಳಕೆಯಲ್ಲಿ ಗಂಟೆಗೆ 140 ಕಿ.ಮೀ. ವೇಗ ಸಾಧಿಸಬಲ್ಲದು. ದೆಹಲಿಯಿಂದ ಉದಯಪುರಕ್ಕೆ ಕೇವಲ ನಾಲ್ಕು ಗಂಟೆಗಳಲ್ಲಿ ಪ್ರಯಾಣಿಸಬಹುದು. ಅಥವಾ ಮುಂಬೈನಿಂದ ಬೆಂಗಳೂರಿಗೆ ಆರೂವರೆ ಗಂಟೆಗಳ ಪ್ರಯಾಣ. ರಸ್ತೆಯ ಮೇಲೆ ಪಿಎಎಲ್-ವಿ ಲಿಬರ್ಟಿ ಕಾರು ಗಂಟೆಗೆ 160 ಕಿ.ಮೀ. ವೇಗ ಸಾಧಿಸುತ್ತದೆ.
ಎಷ್ಟು ಸುರಕ್ಷಿತ?
ಎಲ್ಲಾ ಆರಂಭಿಕ ಹಂತದ ತಂತ್ರಜ್ಞಾನಗಳಂತೆ ಇದು ಸಹ ಸುರಕ್ಷಿತವಲ್ಲ ಎನ್ನಲಾಗುತ್ತಿದೆ. ಆದರೆ, ಮಾನವನ ಜೀವಕ್ಕೆ ಅಪಾಯವಿಲ್ಲವೆಂದು ನಿಯಂತ್ರಕರು ಮತ್ತು ಸರ್ಕಾರಗಳ ಮನವರಿಕೆ ಮಾಡಲು ಕಾರು ಕಂಪನಿಗಳು ಭಗೀರಥ ಯತ್ನ ನಡೆಸಿವೆ. ಪ್ರಾಯೋಗಿಕವಾಗಿ ಬರುವ ಅಪಾಯಗಳನ್ನು ಈಗಲೇ ಊಹಿಸಲಾಗದು.
ಚೀನಾದ ಕಂಪನಿ ಇಹಾಂಗ್ ತನ್ನ ಹಾರುವ ಕಾರು ಸೇವೆಯನ್ನು ದುಬೈನಲ್ಲಿ ಪ್ಯಾರಾಚೂಟ್‌ನೊಂದಿಗೆ ಪ್ರಾರಂಭಿಸಲು ಸಜ್ಜಾಗಿದೆ. ಈಗಿನ ವಾಯುಯಾನದಲ್ಲಿ ಹೆಚ್ಚಿನೆಲ್ಲ ತಂತ್ರಜ್ಞಾನವೂ ಸ್ವಯಂಚಾಲಿತವಾಗಿದೆ. ಮಾನವ ಪೈಲಟ್ ಅಗತ್ಯವಿಲ್ಲದಂತೆ ಹಾರುವ ಕಾರುಗಳೂ ಸ್ವಯಂಚಾಲಿತವಾಗುವ ಸಾಧ್ಯತೆಯಿದೆ.ತುರ್ತು ಸಂದರ್ಭ, ವೈದ್ಯಕೀಯ ನೆರವು ಮುಂತಾದ ಅಗತ್ಯಗಳಿಗೆ ವಿಮಾನ ನಿಲ್ದಾಣಕ್ಕೆ ಹೋಗದೆ ಮನೆಯಿಂದಲೇ ಹಾರುವ ಕನಸಿಗೆ ಈ ಕಾರು ನೆರವಾಗುವುದಂತೂ ಖಂಡಿತ. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ವರ್ಷ ಭಾರತದಲ್ಲೇ ತಯಾರಾಗುವ ಕಾರು ಹಾರಲು ಸಿದ್ಧ.
ಭಾರತದಲ್ಲಿ ಹಾರುವ ಕಾರು
ಭಾರತದಲ್ಲಿ ಈಗ ಹಾರುವ ಕಾರನ್ನು ಉತ್ಪಾದಿಸುವ ಪ್ರಯತ್ನವೊಂದು ಆರಂಭವಾಗಿದೆ. ಆದರೆ, ಇದು ವಿದ್ಯುತ್‌ಚಾಲಿತ ಅಲ್ಲ. ಬದಲಾಗಿ ಪೆಟ್ರೋಲ್ (ಏವಿಯೇಷನ್ ಆಯಿಲ್) ಬಳಸುವ ಜೆಟ್ ಎಂಜಿನ್ ಕಾರು. ನೆದರ್ಲೆಂಡ್ ಮೂಲದ ಹಾರುವ ಕಾರು ತಯಾರಕ ಪಿಎಎಲ್-ವಿ (ಪರ್ಸನಲ್ ಏರ್ ಲ್ಯಾಂಡ್ ವೆಹಿಕಲ್) ಗುಜರಾತ್‌ನಲ್ಲಿ ಎರಡು ತಿಂಗಳ ಹಿಂದೆ ತನ್ನ ಉತ್ಪಾದನಾ ಘಟಕದ ಶಂಕುಸ್ಥಾಪನೆ ಮಾಡಿದೆ. ಕಂಪನಿಯು 2021ರ ವೇಳೆಗೆ ಉತ್ಪಾದನೆ ಪ್ರಾರಂಭಿಸುವುದಾಗಿ ಹೇಳಿದೆ.
ಈ ಹಾರುವ ಕಾರಿನಲ್ಲಿ ವೈಮಾನಿಕ ಇಂಧನದ ಎರಡು ಎಂಜಿನ್‌ಗಳಿರುತ್ತವೆ. ರಸ್ತೆಯಲ್ಲಿ 160 ಕಿ.ಮೀ. ವೇಗದಲ್ಲಿ ಇದು ಚಲಿಸಲಿದೆ. ಹಾಗೆಯೇ ಗಾಳಿಯಲ್ಲಿ 180 ಕಿ.ಮೀ. ವೇಗದಲ್ಲಿ ಹಾರಬಲ್ಲದು. ಭರ್ತಿ ಟ್ಯಾಂಕ್ ಇಂಧನ ತುಂಬಿಸಿದರೆ ಈ ಹಾರುವ ಕಾರು 500 ಕಿ.ಮೀ. ದೂರ ಕ್ರಮಿಸಬಲ್ಲದು. ಪ್ರಯಾಣ ಆರಂಭಿಸಿದ ಮೂರು ನಿಮಿಷಗಳಲ್ಲಿಯೇ ಹಾರುವ ವಾಹನವಾಗಿ ರೂಪಾಂತರಗೊಳ್ಳುತ್ತದೆ. ಕಾರು ಗರಿಷ್ಠ 11,500 ಅಡಿ ಎತ್ತರದಲ್ಲಿ ಹಾರಬಲ್ಲದು.
ಈ ಹಾರುವ ಕಾರಿನ ಚಾಲಕನಿಗೆ ಇರಬೇಕಾದ ಅರ್ಹತೆಗಳೇನು? ಇದಕ್ಕೆ ಪ್ರತ್ಯೇಕ ಪೈಲಟ್ ಲೈಸೆನ್ಸ್ ಬೇಕೆ? ಸದ್ಯದ ನಿಯಮಗಳ ಪ್ರಕಾರ ಈ ಕಾರನ್ನು ಚಲಾಯಿಸಲು ಡ್ರೈವಿಂಗ್ ಲೈಸೆನ್ಸ್ ಮತ್ತು ಗೈರೋ ಪ್ಲೇನ್ ಲೈಸೆನ್ಸ್ ಅಗತ್ಯವಿದೆ. ಹಾರುವ ಕಾರುಗಳ ಸುರಕ್ಷಾ ಮಾನದಂಡಗಳನ್ನು ಇನ್ನಷ್ಟೇ ಅಂತಿಮಗೊಳಿಸಬೇಕಿದೆ. ಡ್ರೈವಿಂಗ್ ಲೈಸೆನ್ಸ್, ವಿಮೆ, ಇಳಿಯುವ ನಿಲ್ದಾಣಗಳು, ಹಾರುವಾಗಿನ ಎತ್ತರದ ಮಿತಿ, ವಾಯುಸಂಚಾರ ಕೇಂದ್ರ, ಹಾರಾಟ ನಿರ್ಬಂಧ ಕ್ಷೇತ್ರ, ಹವಾಮಾನ ವೈಪರೀತ್ಯ ಮತ್ತು ತುರ್ತು ಇಳಿಯುವಿಕೆ ಮುಂತಾದ ವಿಷಯಗಳ ಬಗ್ಗೆ ಇನ್ನಷ್ಟೇ ನಿಯಮಗಳನ್ನು ರೂಪಿಸಬೇಕಿದೆ.
ಕಾರಿನ ಬೆಲೆ ಎಷ್ಟು?
ಪಿಎಎಲ್-ವಿ ಹಾರುವ ಕಾರ್‌ನ ಆರಂಭಿಕ ಬೆಲೆ ಸಾಮಾನ್ಯ ‘ಲಿಬರ್ಟಿ ಸ್ಪೋರ್ಟ್’ ಆವೃತ್ತಿಗೆ ₹ 2.6 ಕೋಟಿ ಎನ್ನಲಾಗುತ್ತಿದೆ. ಪ್ರೀಮಿಯಂ ‘ಲಿಬರ್ಟಿ ಪಯೋನೀರ್ ಆವೃತ್ತಿ’ ಸುಮಾರು ₹ 3.9 ಕೋಟಿ ಆಗಬಹುದು. ರಸ್ತೆಯ ಮೇಲೆ ಚಲಿಸುವ ಕಾರಿಗೆ ಕೋಟಿ ರೂಪಾಯಿ ಕೊಡುವ ಧನಿಕರಿಗೆ ಈ ಬೆಲೆ ಹೆಚ್ಚಿನದೇನೂ ಅಲ್ಲ. ಹಾಗೆಂದೇ ಈವರೆಗೆ 110 ಕಾರುಗಳ ಬುಕಿಂಗ್ ಆಗಿದೆ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.