ADVERTISEMENT

ಎಲ್ಲ ಆ್ಯಂಡ್ರಾಯ್ಡ್ ಕಾಲ್‌ ರೆಕಾರ್ಡಿಂಗ್ ಆ್ಯಪ್‌ಗಳಿಗೆ ಗೂಗಲ್ ನಿರ್ಬಂಧ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಏಪ್ರಿಲ್ 2022, 9:41 IST
Last Updated 22 ಏಪ್ರಿಲ್ 2022, 9:41 IST
ಗೂಗಲ್‌ ಪ್ಲೇ ಸ್ಟೋರ್‌ನಲ್ಲಿರುವ ಆ್ಯಂಡ್ರಾಯ್ಡ್‌ ಕಾಲ್‌ ರೆಕಾರ್ಡಿಂಗ್‌ ಆ್ಯಪ್‌ಗಳು
ಗೂಗಲ್‌ ಪ್ಲೇ ಸ್ಟೋರ್‌ನಲ್ಲಿರುವ ಆ್ಯಂಡ್ರಾಯ್ಡ್‌ ಕಾಲ್‌ ರೆಕಾರ್ಡಿಂಗ್‌ ಆ್ಯಪ್‌ಗಳು   

ನವದೆಹಲಿ: ಇನ್ನು ಮುಂದೆ ಆ್ಯಂಡ್ರಾಯ್ಡ್‌ ಫೋನ್‌ ಬಳಕೆದಾರರು ಆ್ಯಪ್‌ ಬಳಸಿ ಕರೆ ರೆಕಾರ್ಡ್‌ ಮಾಡುವುದು ಸಾಧ್ಯವಾಗುವುದಿಲ್ಲ. ಆ್ಯಂಡ್ರಾಯ್ಡ್‌ನಲ್ಲಿ ಸುರಕ್ಷತೆ ಮತ್ತು ಗೋಪ್ಯತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಗೂಗಲ್‌ ಹಲವು ಕ್ರಮಗಳಿಗೆ ಮುಂದಾಗಿದ್ದು, ಕಾಲ್‌ ರೆಕಾರ್ಡಿಂಗ್‌ ಅವಕಾಶ ನೀಡುವ ಅಪ್ಲಿಕೇಷನ್‌ಗಳನ್ನು ನಿರ್ಬಂಧಿಸಲಿದೆ.

ಡೆವಲಪರ್‌ಗಳಿಗೆ ಸಂಬಂಧಿಸಿದ ನೀತಿಗಳನ್ನು ಗೂಗಲ್‌ ಪರಿಷ್ಕರಿಸಿದ್ದು, ಅದರಲ್ಲಿ ಹಲವು ಬದಲಾವಣೆಗಳು ಕಂಡು ಬಂದಿವೆ. ಆ್ಯಂಡ್ರಾಯ್ಡ್‌ ಬಳಕೆದಾರರಲ್ಲಿ ಜನಪ್ರಿಯವಾಗಿರುವ ಕಾಲ್‌ ರೆಕಾರ್ಡಿಂಗ್‌ ಕಾರ್ಯಾಚರಣೆ ಮೇಲೆ ನಿರ್ಬಂಧ ವಿಧಿಸಿರುವುದೂ ಪರಿಷ್ಕೃತ ನೀತಿಯಲ್ಲಿದೆ. ಅದರಿಂದಾಗಿ ಪ್ಲೇ ಸ್ಟೋರ್‌ನಲ್ಲಿ ಡೌನ್‌ಲೋಡ್‌ಗೆ ಸಿಗುವ ಆ್ಯಪ್‌ಗಳಿಗೆ ಕರೆ ರೆಕಾರ್ಡ್‌ ಮಾಡುವ ಕಾರ್ಯಾಚರಣೆ ನಡೆಸಲು ಅನುಮತಿ ಇರುವುದಿಲ್ಲ.

ಆ್ಯಂಡ್ರಾಯ್ಡ್‌ 6ರಲ್ಲಿ ರಿಯಲ್‌ ಟೈಮ್‌ ಕಾಲ್‌ ರೆಕಾರ್ಡ್‌ ಆಗುವುದನ್ನು ಗೂಗಲ್‌ ನಿರ್ಬಂಧಿಸಿದೆ. ಮೈಕ್ರೊಫೋನ್‌ ಮೂಲಕ ಕರೆಯ ಆಡಿಯೊ ರೆಕಾರ್ಡ್‌ ಆಗುವುದನ್ನು ಆ್ಯಂಡ್ರಾಯ್ಡ್ 10ರ ಆವೃತ್ತಿಯಲ್ಲಿ ತೆಗೆದು ಹಾಕಿದೆ. ಆದರೆ, ಕೆಲವು ಆ್ಯಪ್‌ಗಳು ಆ್ಯಂಡ್ರಾಯ್ಡ್‌ 10 ಮತ್ತು ನಂತರದ ಆವೃತ್ತಿಯಲ್ಲಿ ಕಾಲ್‌ ರೆಕಾರ್ಡಿಂಗ್‌ ಕಾರ್ಯಾಚರಣೆ ಮುಂದುವರಿಸಿರುವುದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.

ADVERTISEMENT

'ರೆಕಾರ್ಡಿಂಗ್‌ಗೆ ಸಂಬಂಧಿಸಿದ ಅಪ್ಲಿಕೇಷನ್‌ ಪ್ರೋಗ್ರಾಮ್‌ ಇಂಟರ್‌ಫೇಸ್‌ (ಎಪಿಐ) ವಿನ್ಯಾಸಗೊಳಿಸದ ಕಾರಣ, ಆ್ಯಪ್‌ಗಳು ಆಡಿಯೊ ರೆಕಾರ್ಡಿಂಗ್‌ ಮಾಡಲು ಅನುಮತಿ ಕೋರುವಂತಿಲ್ಲ,...' ಎಂದು ಪ್ಲೇಸ್ಟೋರ್‌ನ ಪರಿಷ್ಕೃತ ನೀತಿಯಲ್ಲಿ ಸೇರಿಸಲಾಗಿದೆ. ಮೇ 11ರಿಂದ ಈ ನಿಯಮಗಳು ಜಾರಿಗೆ ಬರುವುದಾಗಿ ಗೂಗಲ್‌ ಪ್ರಕಟಿಸಿದೆ.

ರೆಕಾರ್ಡಿಂಗ್‌ ಎಪಿಐಗೆ ಅನುಮತಿ ಸಿಗದೆ ಆ್ಯಪ್‌ಗಳು ಕರೆ ರೆಕಾರ್ಡ್‌ ಮಾಡುವ ಕಾರ್ಯಾಚರಣೆ ನಡೆಸಲು ಸಾಧ್ಯವಾಗುವುದಿಲ್ಲ. ಐಫೋನ್‌ ತನ್ನ ಬಳಕೆದಾರರಿಗೆ ಕರೆ ರೆಕಾರ್ಡ್‌ ಮಾಡುವ ಕಾರ್ಯಾಚರಣೆಗೆ ಈವರೆಗೂ ಅನುಮತಿ ನೀಡಿಲ್ಲ. ಬಳಕೆದಾರರ ಗೋಪ್ಯತೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಹಾಗೂ ಕರೆ ರೆಕಾರ್ಡಿಂಗ್‌ ಕುರಿತು ಹಲವು ರಾಷ್ಟ್ರಗಳಲ್ಲಿರುವ ಕಾನೂನುಗಳ ಕಾರಣಗಳಿಂದಲೂ ಗೂಗಲ್‌ ಈ ನಿರ್ಧಾರಕ್ಕೆ ಬಂದಿರುವು ಸಾಧ್ಯತೆ ಇರುವುದಾಗಿ ವಿಶ್ಲೇಷಿಸಲಾಗಿದೆ.

ಆ್ಯಂಡ್ರಾಯ್ಡ್‌ನ ಹೊಸ ಆವೃತ್ತಿ 12ರಲ್ಲಿ ಮಾತ್ರವೇ ಈ ನಿಯಮಗಳು ಅನ್ವಯವಾಗಲಿವೆಯೇ ಅಥವಾ ಆ್ಯಂಡ್ರಾಯ್ಡ್ 10 ಮತ್ತು 11 ಆವೃತ್ತಿ ಕಾರ್ಯಾಚರಣೆ ವ್ಯವಸ್ಥೆ ಒಳಗೊಂಡಿರುವ ಸಾಧನಗಳಲ್ಲೂ ಇದು ಅನ್ವಯವಾಗುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.