ADVERTISEMENT

ವರ್ಲ್ಡ್‌ ವೈಡ್‌ ವೆಬ್‌ @30; ಇತಿಹಾಸ ನೆನಪಿಸಿದ ಗೂಗಲ್‌ ಡೂಡಲ್‌

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2019, 2:16 IST
Last Updated 12 ಮಾರ್ಚ್ 2019, 2:16 IST
   

ಇಂದು ಜಗತ್ತಿನಾದ್ಯಂತ ಕೋಟ್ಯಂತರ ಜನರು ಇಂಟರ್ನೆಟ್‌ ಬಳಸಲು, ಮಾಹಿತಿ ಕೆದಕಲು, ಮಾಹಿತಿ ಪ್ರಕಟಿಸಲು, ನಿರ್ದಿಷ್ಟವಾಗಿ ಗುರುತಿಸಲು ಮೂಲವಾದ ವರ್ಲ್ಡ್‌ ವೈಡ್‌ ವೆಬ್‌(WWW) 30 ವಸಂತಗಳನ್ನು ಪೂರೈಸಿದೆ. ಗೂಗಲ್ ಈ ದಿನವನ್ನು ಡೂಡಲ್‌ ಪ್ರಕಟಿಸುವ ಮೂಲಕ ಅಂತರ್ಜಾಲ ಬಳಕೆದಾರರಿಗೆ ಇತಿಹಾಸ ನೆನಪಿಸಿದೆ.

1989ರ ಮಾರ್ಚ್‌ 12ರಂದು ಬ್ರಿಟಿಷ್‌ ವಿಜ್ಞಾನಿ ಟಿಮ್‌ ಬರ್ನರ್ಸ್‌–ಲೀ ವರ್ಲ್ಡ್‌ ವೈಡ್‌ ವೆಬ್‌(WWW)ಅನ್ವೇಷಿಸಿದರು. ಈ ಕಾರ್ಯ ಎಂದೆಂದಿಗೂ ಇಡೀ ಜಗತ್ತನ್ನೇ ಬದಲಿಸಿತು. ಮಾಹಿತಿ ಪಡೆಯುವುದರಿಂದ ಕೊಡುವುದರ ವರೆಗೂ, ಸಂಗ್ರಹದಿಂದ ರವಾನೆಯ ವರೆಗೂ ಈ ಮೂವತ್ತು ವರ್ಷಗಳಲ್ಲಿ ಅತ್ಯಂತ ವೇಗವಾಗಿ ಬದಲಾವಣೆ ಕಂಡಿದೆ. ಸ್ವಿಡ್ಜರ್ಲೆಂಡ್‌ನ ಜಿನಿವಾ ಸಮೀಪದ ಸಿಇಆರ್‌ಎನ್‌(ಸರ್ನ್‌)ನಲ್ಲಿ ಉದ್ಯೋಗಿಯಾಗಿದ್ದ ಟಿಮ್‌ ಬರ್ನರ್ಸ್‌, 1990ರಲ್ಲಿ ಮೊದಲ ವೆಬ್‌ ಬ್ರೌಸರ್‌ ರೂಪಿಸಿದರು.

ಕೆಲ ವರದಿಗಳ ಪ್ರಕಾರ, ಅಭಿವೃದ್ಧಿ ಪಡಿಸಲಾದ ಬ್ರೌಸರ್‌ ಸರ್ನ್‌ ಸಂಸ್ಥೆಯಿಂದ ಹೊರ ಬಂದದ್ದು 1991ರಲ್ಲಿ. ಪ್ರಾಥಮಿಕವಾಗಿ ಸಂಶೋಧನಾ ಸಂಸ್ಥೆಗಳಿಗೆ ಹಾಗೂ ನಂತರದಲ್ಲಿ 1991ರ ಆಗಸ್ಟ್‌ ಹೊತ್ತಿಗೆ ಜನ ಸಾಮಾನ್ಯರ ಬಳಿ ವೆಬ್‌ ಬ್ರೌಸರ್‌ ಎಂಬ ‘ಭವಿಷ್ಯದ ಬ್ರಹ್ಮಾಂಡ ದ್ವಾರ’ ತೆರೆದುಕೊಂಡಿತ್ತು.

ADVERTISEMENT

ಜಗತ್ತಿನಾದ್ಯಂತ ಇಂಟರ್‌ನೆಟ್‌ ಬಳಕೆಗೆ WWWಅತ್ಯಗತ್ಯವಾದ ಸಾಧನವಾಗಿ ರೂಪುಗೊಂಡಿತು. ಜನರ ನಡುವಿನ ಸಂಪರ್ಕ–ಸಂಭಾಷಣೆಗೆ ಮೂಲ ವೇದಿಕೆಯಾಯಿತು. ಸಂಪನ್ಮೂಲ ಸೂಚಿ ಅಥವಾ ಯೂನಿಫಾರ್ಮ್‌ ರಿಸೋರ್ಸ್‌ ಲೊಕೇಟರ್‌(ಯುಆರ್‌ಎಲ್‌)ಗಳ ಸೃಷ್ಟಿಗೆWWWಆಧಾರವಾಯಿತು. ಯಾವುದೇ ದಾಖಲೆಗಳು, ಮಾಹಿತಿಗಳನ್ನು ಅಂತರ್ಜಾಲ ಸಂಪರ್ಕ ಬಳಸಿ ಹುಡುಕಲುWWWಬೆನ್ನೆಲುಬಿನಂತಾಯಿತು. ವೆಬ್‌ ಬ್ರೌಸರ್‌ಗಳಲ್ಲಿWWW ಎಂದು ಟೈಪಿಸಿ, ನಿರ್ದಿಷ್ಟ ಸಂಪನ್ಮೂಲ ಹುಡುಕುವುದು ಪ್ರಾರಂಭವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.